ಬೆಂಗಳೂರು: ಸಂವಿಧಾನ ವಿರೋಧಿ, ಸಮಾಜ ವಿಘಟಕ ಹಾಗೂ ಯುವ ಮನಸ್ಸುಗಳನ್ನು ವಿಕೃತಗೊಳಿಸುವ ಅಂಶಗಳು ಕರ್ನಾಟಕ ವಿಶ್ವ ವಿದ್ಯಾಲಯದ ಬಿ ಎ ಮೊದಲ ಸೆಮಿಸ್ಟರ್ ಪಠ್ಯದಲ್ಲಿದ್ದು, ತಕ್ಷಣವೇ ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರುಣ ಶಹಪುರ ಹಾಗೂ ಗಣೇಶ್ ಕಾರ್ಣಿಕ್ ಆಗ್ರಹಿಸಿದರು.
ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಎಲ್ಲ ವಿಶ್ವ ವಿದ್ಯಾಲಯಗಳ ಪಠ್ಯಕ್ರಮಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಬೇಕು. ರಾಜ್ಯಪಾಲರು ಈ ಕುರಿತು ಕ್ರಮಕೈಗೊಂಡ ವರದಿ ತರಿಸಿಕೊಳ್ಳಬೇಕು ಎಂದು ಕೋರಿದರು.
ವಿ.ವಿ.ಯ 2000ರ ಕಾಯ್ದೆ ಪ್ರಕಾರ ವಿ.ವಿ.ಗಳ ಅವಲೋಕನ ಆಯೋಗವನ್ನು ಪ್ರತಿ ಐದು ವರ್ಷಗಳಿಗೊಮ್ಮೆ ರಚಿಸಿ ಅವಲೋಕನ ಮಾಡಬೇಕೆಂದಿದೆ. ಇಂತಹ ಆಯೋಗಗಳು ಸಲ್ಲಿಸಿದ ವರದಿಯನ್ನು ಬಹಿರಂಗಪಡಿಸಬೇಕು ಅಥವಾ ಅವಲೋಕನ ಆಯೋಗಗಳನ್ನು ರಚಿಸಬೇಕು ಎಂದು ಸರ್ಕಾರದ ಮುಂದೆ ಅರುಣ ಶಹಪುರ ಬೇಡಿಕೆಯಿಟ್ಟರು.
ಮೌನ ಕಳವಳ
ಪಾಠ ಪೂರ್ತಿ ವಿವಾದಿತ ಅಂಶಗಳು, ದೇಶದ ಏಕತೆ, ಸಮಗ್ರತೆಯ ಅಸ್ತಿತ್ವ ಅಲುವಾಡಿಸುವ ಅಂಶಗಳು ಈ ಪಾಠದಲ್ಲಿವೆ. ಆದರೆ ಬಿಎ ಮೊದಲ ಸೆಮಿಸ್ಟರ್ ಬೆಳಗು ಕನ್ನಡ ವಿಷಯದ ಪಠ್ಯದಲ್ಲಿ ಈ ಪಾಠ ಸೇರಿಕೊಂಡಿದ್ದು, ವಿವಿಗಳ ಅಧ್ಯಯನ ಮಂಡಳಿ ಪರಿಶೀಲಿಸಿಲ್ಲ ಎನ್ನುವುದು ದೃಢಪಡುತ್ತದೆ.
ಪಠ್ಯದಲ್ಲಿ ಸೇರಿಸಲಾದ ‘ರಾಷ್ಟ್ರೀಯ ವಾದದ ಸುತ್ತಮುತ್ತ’ ಪಾಠದ ಲೇಖಕರು ರಾಮಲಿಂಗಪ್ಪ ಟಿ.ಬೇಗೂರು ಅವರಾಗಿದ್ದು, ಸಂವಿಧಾನಕ್ಕೆ ವಿರುದ್ಧವಾದ ಅಂಶಗಳಿರುವ ಕಾರಣ ಅವರ ವಿರುದ್ಧ ಕ್ರಿಮಿನಲ್ ದಾವೆ ಹೂಡಬೇಕಾಗುತ್ತದೆ.
ಅತ್ಯಂತ ವಿವಾದಪೂರಿತ ಪಾಠದ ಬಗ್ಗೆ ಆಕ್ಷೇಪಣೆಗಳು ವ್ಯಕ್ತವಾಗುತ್ತಿದ್ದರೂ ರಾಜ್ಯದ ಉನ್ನತ ಶಿಕ್ಷಣ ಪರಿಷತ್ ಮೌನಕ್ಕೆ ಶರಣಾಗಿರುವುದು ಮತ್ತಷ್ಟು ಕಳವಳ ಹೆಚ್ಚಿಸಿದೆ. ದೇಶದ ಏಕತೆ, ಬಹುತ್ವ, ಹಿಂದುತ್ವ, ಭಾರತ ಮಾತೆ ಮತ್ತು ಕನ್ನಡಾಂಬೆಡೆಗೆ ಅಪಮಾನಿಸಲಾಗಿದೆ.
ಬಹುಸಂಖ್ಯಾತರ ಹಿಂಸಾವಾದಿಗಳು, ಅಸಹಿಷ್ಣುಗಳು, ಭಾರತ ಮಾತಾ ಕೀ ಜೈ ಎನ್ನುವುದು ಸೋಲು ಒಪ್ಪಿಕೊಂಡಂತೆ, ವಿವಿಧತೆಯಲ್ಲಿ ಏಕತೆಯು ಅನಿವಾರ್ಯದ ಹೊಂದಾಣಿಕೆ ಹೀಗೆ ಯುವ ಜನರಿಗೆ ತಪ್ಪು ಸಂದೇಶ ನೀಡುವ ಅಂಶಗಳು ಈ ಪಠ್ಯದಲ್ಲಿದ್ದು, ಲೇಖಕರ ಮನಸ್ಥಿತಿ ಬಗ್ಗೆಯೂ ಪ್ರಶ್ನಾರ್ಹ ಎಂದೂ ಹೇಳಿದರು.
ರಾಜ್ಯ ಸರ್ಕಾರ ಈ ವಿಷಯದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂದಿನ ಕಾರ್ಯತಂತ್ರದ ಬಗ್ಗೆ ಬಿಜೆಪಿ ವೇದಿಕೆಯಲ್ಲಿ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಅರುಣ ಶಹಪುರ ಹಾಗೂ ಗಣೇಶ್ ಕಾರ್ಣಿಕ್ ಪ್ರತಿಕ್ರಿಯಿಸಿದರು.