ಗೋಹತ್ಯೆ ಸಂಪೂರ್ಣವಾಗಿ ನಿಷೇಧವಾಗಲಿ

ಬೇಲೂರು: ಗೋಹತ್ಯೆಯನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್ ಅಗ್ರಹಿಸಿದರು.

ಜಿಲ್ಲಾಯಾದ್ಯಂತ ಗೋ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಕಳ್ಳತನ ಮಾಡಿದ ಗೋವುಗಳನ್ನು ಮಂಗಳೂರಿಗೆ ಸಾಗಿಸುವಾಗ ನಮ್ಮ ಕಾರ್ಯಕರ್ತರು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ. ಈ ವಿಷಯದಲ್ಲಿ ಎಸ್ಪಿ ಮೌನ ವಹಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಹಿಂದುತ್ವದ ಉಳಿವಿಗಾಗಿ ಸಂಘಟನೆಯನ್ನು ಬಲಿಷ್ಠಗೊಳಿಸಲಾಗುತ್ತಿದೆ. ಅಲ್ಲದೆ ತಾಲೂಕಿನಲ್ಲಿ ಮತಾಂತರ ಪ್ರಕರಣ ಹೆಚ್ಚಾಗಿದ್ದು, ಪೊಲೀಸರು ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ. ಜಿಲ್ಲಾದ್ಯಂತ 15 ಹೆಣ್ಣು ಮಕ್ಕಳು ಲವ್‌ಜಿಹಾದ್‌ಗೆ ಬಲಿಯಾಗಿದ್ದು ಅವರನ್ನು ಮತ್ತೆ ಹಿಂದು ಧರ್ಮಕ್ಕೆ ಕರೆತರುವ ಕೆಲಸವನ್ನು ಶ್ರೀರಾಮ ಸೇನೆ ಮಾಡುತ್ತಿದೆ ಎಂದರು.

ಅ.13 ರಂದು ದತ್ತಮಾಲಾ ಅಭಿಯಾನ ಹಮ್ಮಿಕೊಂಡಿದ್ದು, ದತ್ತಮಾಲಾಧಾರಿಗಳಿಗೆ ಕೇಸರಿ ಪಂಚೆ, ಟವಲ್ ಹಾಗೂ ಮಾಲೆಯನ್ನು ಉಚಿತವಾಗಿ ನೀಡಲಾಗುತ್ತದೆ. 12ರಂದು ಸಂಜೆ ಏಳು ಗಂಟೆಗೆ ದತ್ತಮಾಲಾಧಾರಿಗಳಿಂದ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ದತ್ತ ಪೀಠದ ಗುಹಾಂತರ ದೇವಾಲಯಕ್ಕೆ ಹಿಂದು ಅರ್ಚಕರನ್ನು ನೇಮಕ ಮಾಡಬೇಕು. ಪೀಠಕ್ಕೆ ಬರುವ ಹಿಂದು ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಬೇಕು. ಜತೆಗೆ ದತ್ತ ಪೀಠವನ್ನು ಹಿಂದುಗಳು ಪುಣ್ಯಕ್ಷೇತ್ರವೆಂದು ಸರ್ಕಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನುಜಗತ್,ಬೇಲೂರು ತಾಲೂಕು ಅಧ್ಯಕ್ಷ ಮೆಗನ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಸುದರ್ಶನ್, ನಗರಾಧ್ಯಕ್ಷ ಪ್ರಶಾತ್‌ಗೌಡ ಸುದ್ದಿಗೋಷ್ಠಿಯಲ್ಲಿದ್ದರು.

 

Leave a Reply

Your email address will not be published. Required fields are marked *