ತಿ.ನರಸೀಪುರ: ನಾಡಿನ ನೆಲದ ನೈಜ ಸಂಸ್ಕೃತಿ, ಹಿರಿಯರು ನಡೆದುಬಂದ ಜೀವನ ಶೈಲಿ, ಪರಂಪರೆ ಹಾಗೂ ಪವಾಡ ಪುರುಷರ ಮಹಿಮೆಯನ್ನು ಪ್ರಸ್ತುತಪಡಿಸುವ ಜಾನಪದ ಕಲೆಯನ್ನು ಉಳಿಸಿ, ಮುಂದಿನ ತಲೆಮಾರಿಗೂ ಬೆಳಸಲು ಜಾನಪದ ಸಾಹಿತ್ಯವನ್ನು ಸರ್ಕಾರ ಲಿಖಿತ ರೂಪದಲ್ಲಿರಿಸಲಿ ಎಂದು ಭೂ ವಿಜ್ಞಾನಿ ಕೆ.ಎಂ.ನಂಜುಂಡಸ್ವಾಮಿ ಒತ್ತಾಯಿಸಿದರು.
ತಾಲೂಕಿನ ಕೊಳತ್ತೂರು ಗ್ರಾಮದಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಸಿಂಚನ ಸಾಂಸ್ಕೃತಿಕ ಜಾನಪದ ಕಲಾ ಟ್ರಸ್ಟ್ ಉದ್ಘಾಟನೆ ಸಮಾರಂಭ ಮತ್ತು ನೀಲಗಾರರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಶತಮಾನಗಳಷ್ಟು ಹಿಂದಿನ ಜನಜೀವನ ಸಂಸ್ಕೃತಿಯ ಐತಿಹಾಸಿಕ ಮತ್ತು ಪೌರಾಣಿಕ ವಿಚಾರಗಳು ಜಾನಪದ ಕಲೆಯಲ್ಲಿ ಕೇಳುತ್ತಿದ್ದೇವೆಯಾದರೂ ಅವುಗಳನ್ನ ಲಿಖಿತವಾಗಿ ದಾಖಲಿಸಿಲ್ಲ. ಹಾಗಾಗಿ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಜಾನಪದ ಕಲೆಗೆ ರಕ್ಷಣೆ ಮತ್ತು ಸಾಹಿತ್ಯಕ್ಕೆ ಬರವಣಿಗೆಯ ರೂಪವನ್ನು ನೀಡಲು ಮುಂದಾಗಬೇಕೆಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಪ್ರಸಾದ್ ಮಾತನಾಡಿ, ತಾಂತ್ರಿಕ ಯುಗದಲ್ಲಿ ಜಾಗತೀಕರಣದ ಪ್ರಭಾವದ ನಡುವೆಯೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿರುವ ನೀಲಗಾರರ ಹವ್ಯಾಸ, ಬದುಕಿನಿಂದಾಗಿ ಜಾನಪದ ಉಳಿದುಕೊಂಡಿದೆ. ಡಿಜಿಟಲ್ ಪ್ರಗತಿಯಿಂದ ಪ್ರತಿಯೊಬ್ಬರ ಕೈನಲ್ಲೂ ಅತ್ಯಾಧುನಿಕ ಮೊಬೈಲ್‌ಗಳಿವೆ. ಆದರೂ ಜಾನಪದ ಕಲೆಗಿ ಇರುವ ಮಾನ್ಯತೆ ಕುಗ್ಗಿಲ್ಲ. ಜಾನಪದ ಕಲೆಯನ್ನು ಬದುಕನ್ನಾಗಿಸಿಕೊಂಡಿರುವ ಗ್ರಾಮೀಣ ಭಾಗದ ನೀಲಗಾರರಿಗೆ ಹೆಚ್ಚಿನ ಪ್ರೋತ್ಸಾಹಧನವನ್ನು ನೀಡಲು ಸರ್ಕಾರ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.
ಟ್ರಸ್ಟ್ ಉದ್ಘಾಟನೆ ಜತೆಯಲ್ಲೇ ನೀಲಗಾರರ ಮೇಳವನ್ನು ಆಯೋಜಿಸಿದ್ದರಿಂದ ಜಾನಪದ ಕಲಾವಿದರಾದ ಪೂರಿಗಾಲಿ ಮಹದೇವಣ್ಣ ಸೇರಿದಂತೆ ರಾಮದಾಸ್, ರಾಜೀವ್ ಕಾಲಿಯೂರು, ಚಂಗಚಹಳ್ಳಿ ಕೃಷ್ಣಮೂರ್ತಿ, ಕೈಲಾಸಮೂರ್ತಿ, ಪ್ರಭು ಸತ್ತೇಗಾಲ, ನಂಜುಂಡಸ್ವಾಮಿ, ನಾಗಣ್ಣ, ರಾಜು, ಪ್ರಕಾಶ ಹಾಗೂ ಪ್ರತಾಪ್ ಕೊಳತ್ತೂರು ಅವರು ಭಕ್ತಿ ಭಾವಗೀತೆಗಳನ್ನು ಪ್ರಸ್ತುತ ಪಡಿಸಿದರೆ, ಗ್ರಾಮದ ದೊಡ್ಡಮ್ಮ, ಗೌರಮ್ಮ ಮತ್ತು ಜಯಮ್ಮ ಮಹಿಳೆಯರ ತಂಡ ಸೋಬಾನೆ ಪದಗಳನ್ನು ಹಾಡಿದರು. ಶ್ರೀನಿವಾಸ್, ನಾರಾಯಣಿ ಮದ್ದೂರು, ಪರಶುರಾಮ, ಅಳಗಂಚಿ ಮಹೇಶ್, ಪುರುಷೋತ್ತಮ ಹಾಗೂ ಕುಮಾರ್ ವಾದ್ಯಗೋಷ್ಠಿ ನಡೆಸಿಕೊಟ್ಟರು.
ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಬ್ಲಾಕ್ ಕಾಂಗ್ರೆಸ್‌ನ ಮೀನುಗಾರರ ಘಟಕದ ಅಧ್ಯಕ್ಷ ಕೆ.ಎನ್.ಕುಮಾರ್, ಗ್ರಾಪಂ ಸದಸ್ಯ ಕೆ.ಟಿ.ನಂಜುಂಡಸ್ವಾಮಿ, ಮಾಜಿ ಅಧ್ಯಕ್ಷ ಆರ್.ಸೋಮಣ್ಣ, ಮಾಜಿ ಉಪಾಧ್ಯಕ್ಷ ಕೆ.ಶಂಕರ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮರಿಸ್ವಾಮಿ, ಯಜಮಾನ ರಾಜೇಂದ್ರ, ನಾಗೇಗೌಡ, ದೊಡ್ಡೆಬ್ಬಗಿಲು ಮಹದೇವಯ್ಯ, ಮುಖಂಡ ಸಿದ್ದರಾಜು, ಟ್ರಸ್ಟ್ ಅಧ್ಯಕ್ಷೆ ಪುಷ್ಪಾವತಿ, ಆರ್.ನಾಗೇಶ್, ಖಜಾಂಚಿ ಸಂಜನಾ, ಚನ್ನಪಟ್ಟಣ ಪ್ರಕಾಶ್ ಇತರರಿದ್ದರು.