ಸಾಲಿಗ್ರಾಮ: ಸಮಾಜದಲ್ಲಿ ಪ್ರತಿ ಮಗುವಿಗೂ ಶಿಕ್ಷಣ ಸಿಗುವಂತೆ ಗ್ರಾಮಗಳಲ್ಲಿ ಸಂಘ-ಸಂಸ್ಥೆಗಳು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದರು.
ಸಾಲಿಗ್ರಾಮ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕರ ಸಂಘದಿಂದ ವಾಲ್ಮೀಕಿ ಮಠಕ್ಕೆ ನೀಡಿದ ದೇಣಿಗೆಯನ್ನು ಸ್ವೀಕರಿಸಿ ಮಾತನಾಡಿ, ಯಾವುದೇ ಸಮಾಜದ ಶೋಷಿತರು ಮತ್ತು ನಿರ್ಗತಿಕರು, ಅಸಂಘಟಿತರನ್ನು ಮುಖ್ಯವಾಹಿನಿಗೆ ತರುವ ಕೆಲಸ ವಾಲ್ಮೀಕಿ ಸಂಘಗಳಿಂದ ಆಗಬೇಕು ಎಂದರು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ವಾಲ್ಮೀಕಿ ನಾಯಕರ ಸಂಘ ಶ್ರೀಮಠದ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ನಾನು ಎಂದಿಗೂ ಮರೆಯುವುದಿಲ್ಲ. ಸಾಲಿಗ್ರಾಮ ತಾಲೂಕು ವಾಲ್ಮೀಕಿ ನಾಯಕರ ಸಂಘ ಇತ್ತೀಚಿನ ದಿನಗಳಲ್ಲಿ ಸಂಘಟನೆಯಲ್ಲಿ ಮುಂಚೂಣಿಯಲ್ಲಿದೆ.
ಸಿ.ಸಿ.ಮಹದೇವ್ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ವಿಶೇಷ ಜನಪರ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಸಮಾಜದ ಒಳಿತಿಗೆ ಸಂಘ ಸಹಕರಿಸುತ್ತಿದೆ ಎನ್ನುವುದನ್ನು ಕೇಳಿದ್ದೇನೆ. ರಾಜಕೀಯ ಪಕ್ಷಗಳ ಮುಖಂಡರಿಂದ ಸಮಾಜದ ಅಭಿವೃದ್ಧಿ ಮಾಡಿಸಿ. ಸಹಕರಿಸಿದರೆ ಯಾವುದೇ ಗಣ್ಯರನ್ನು ಮರೆಯಬೇಡಿ. ಆದರೆ ಪದಾಧಿಕಾರಿಗಳು ಮತ್ತು ಸದಸ್ಯರು ಸಂಘದಲ್ಲಿ ಯಾರು ರಾಜಕೀಯ ಮಾಡಬೇಡಿ. ಒಂದೇ ವಾಲ್ಮೀಕಿ ಒಂದೇ ನಾಯಕ ಸಮಾಜ ಎಂದು ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸಾಲಿಗ್ರಾಮ ತಾಲೂಕು ನಾಯಕರ ಸಂಘದ ಅಧ್ಯಕ್ಷ ಭೇರ್ಯ ಸಿ.ಸಿ.ಮಹದೇವ್, ಕೆ.ಆರ್.ನಗರ ತಾಲೂಕು ವಾಲ್ಮೀಕಿ ಸಂಘದ ನಿರ್ದೇಶಕ ಹಂಪಾಪುರ ದೇವರಾಜ್, ಸಾಲಿಗ್ರಾಮ ತಾಲೂಕು ಸಂಘದ ಉಪಾಧ್ಯಕ್ಷ ತಂದ್ರೆ ವೆಂಕಟೇಶನಾಯಕ, ಖಜಾಂಚಿ ಹೊಸೂರು ಸಂತೋಷ್, ಸಂಘಟನಾ ಕಾರ್ಯದರ್ಶಿ ಚನ್ನಂಗೆರೆ ಕುಮಾರ್, ಕರ್ಪೂರವಳ್ಳಿ ಶ್ಯಾಮಿಯಾನ ರಮೇಶ್ ಸೇರಿದಂತೆ ಇತರರು ಇದ್ದರು.