ಚನ್ನರಾಯಪಟ್ಟಣ: ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಕತ್ತರಿಘಟ್ಟ ಶ್ರೀ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ ಹೇಳಿದರು.
ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಉದಯಪುರ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಹಾಗೂ ಅಲ್ಫೋನ್ಸ್ ನಗರದ ಸೇಂಟ್ ಮೇರಿಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ 2024-25 ನೇ ಸಾಲಿನ ದಂಡಿಗನಹಳ್ಳಿ ಹೋಬಳಿ ಮಠದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕ್ರೀಡೆ ಬಾಂಧವ್ಯ ವೃದ್ಧಿಸುವುದರ ಜತೆಗೆ ಉಲ್ಲಾಸದ ವಾತಾವರಣ ನೀಡಲಿದೆ. ಪಠ್ಯೇತರ ಚಟುವಟಿಕೆ ವಿದ್ಯಾರ್ಥಿಗಳಲ್ಲಿನ ಬಹು ಪ್ರತಿಭೆಯನ್ನು ಹೊರಹೊಮ್ಮುವಂತೆ ಮಾಡಲಿದೆ. ಜತೆಗೆ ಕ್ರೀಡಾಳುಗಳಿಗೆ ಸೋಲು-ಗೆಲುವಿನ ಪಾಠ ಕಲಿಸುತ್ತದೆ ಎಂದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಎನ್.ಅನಿಲ್ ಪ್ರಾಸ್ತವಿಕವಾಗಿ ಮಾತನಾಡಿ, ದೇಶದ ಜನಸಂಖ್ಯೆಗೆ ತಕ್ಕಂತೆ ಕ್ರೀಡಾ ಕ್ಷೇತ್ರ ಸಾಧನೆಯಾಗಿಲ್ಲ. ಪ್ರಸ್ತುತ ಒಲಿಂಪಿಕ್ಸ್‌ನಲ್ಲಿ ಪದಕ ಗಳಿಕೆಯೇ ಇದಕ್ಕೆ ಸಾಕ್ಷಿ. ಮಕ್ಕಳಿಗೆ ಆರಂಭಿಕ ಹಂತದಲ್ಲೇ ಕ್ರೀಡೆ ಬಗ್ಗೆ ಆಸಕ್ತಿ ಬೆಳೆಸಿ ಸೂಕ್ತ ತರಬೇತಿ ಕೊಡಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ವಿ.ವಿಶ್ವಾಸ್, ನಲ್ಲೂರು ಕ್ಲಸ್ಟರ್ ಸಿಆರ್‌ಪಿ ಆರ್.ಸುಧಾಕರ್, ದಂಡಿಗನಹಳ್ಳಿ ಹೋಬಳಿಯ ಶಿಕ್ಷಣ ಸಂಯೋಜಕ ಎ.ಶಿವಾನಂದ್, ಜಂಟಿ ಕಾರ್ಯದರ್ಶಿ ಆಲ್ಫೋನ್ಸ್, ಸೇಂಟ್ ಮೇರೀಸ್ ಶಾಲೆಯ ಸಿಸ್ಟರ್ ಮಾರ್ಥಾ ಡಿ.ಆಲ್ಮೇಡಾ, ಉಪಾಧ್ಯಕ್ಷ ಮೋಹನ್, ಕಾರ್ಯದರ್ಶಿ ಎಂ.ಎಸ್.ರಮೇಶ್, ಸಹ ಕಾರ್ಯದರ್ಶಿ ಪುಷ್ಪಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಮಂಜಪ್ಪ, ಗೌರವಾಧ್ಯಕ್ಷ ವಿ.ಜಿ.ದ್ಯಾವೇಗೌಡ ಇತರರು ಭಾಗವಹಿಸಿದ್ದರು.