ಮತದಾನಕ್ಕೆ ಆಸಕ್ತಿ ತೋರಿಸದ ಬೈಂದೂರು

ಕುಂದಾಪುರ/ಬೈಂದೂರು: ಶಿವಮೊಗ್ಗ ಲೋಕಸಭಾ ಉಪಚುನಾವಣೆ ಮತದಾನ ಪ್ರಕ್ರಿಯೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಶಾಂತಿಯುತವಾಗಿ ನೆರವೇರಿದೆ. ಆದರೆ ಶೇ.58.97ರಷ್ಟು ಮಾತ್ರ ಮತದಾನ ನಡೆದಿದ್ದು, ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಎಲ್ಲ ಕಡೆ ಭತ್ತ ಕಟಾವು ಕೃಷಿ ಕಾಯಕ ನಡೆಯುತ್ತಿರುವುದು ಮತ್ತು ಉಪ ಚುನಾವಣೆ ಎಂಬ ಹಿನ್ನೆಲೆಯಲ್ಲಿ ಮತದಾರರು ಅಷ್ಟಾಗಿ ಆಸಕ್ತಿ ತೋರಿಸಿಲ್ಲ. ತಲ್ಲೂರು ಹೊರತುಪಡಿಸಿ ಬಹುತೇಕ ಯಾವುದೇ ಮತಗಟ್ಟೆಗಳಲ್ಲೂ ಉದ್ದುದ್ದ ಸರತಿ ಸಾಲು ಕಾಣಲಿಲ್ಲ. ಮತದಾನ ಬಹಿಷ್ಕರಿಸಿದ್ದ ಬಿಜೂರು ಮತದಾರರ ಮನವೊಲಿಸಿದ ಅಧಿಕಾರಿಗಳು ಮತದಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೈಕೊಟ್ಟ ಇವಿಎಂ: ನಾಡಾ ಗ್ರಾಮ ಕೋಣ್ಕಿ ಸರ್ಕಾರಿ ಶಾಲೆ ಹಾಗೂ ಗಂಗೊಳ್ಳಿ ಮತಗಟ್ಟೆ ಸಂಖ್ಯೆ 172ರಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ವಿಳಂಬವಾಗಿ ಮತದಾನ ಆರಂಭವಾಯಿತು. ಹೊಸಾಡು ಗ್ರಾಮ ಕಂಚುಗೋಡು ಮತಗಟ್ಟೆ ಸಂಖ್ಯೆ 158ರಲ್ಲಿ ಎರಡು ಬಾರಿ ಮತಯಂತ್ರ ಕೈಕೊಟ್ಟಿದ್ದು, ಇವಿಎಂ ಬದಲಿಸಲಾಯಿತು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,07,922 ಪುರುಷರು, 1,14,049 ಮಹಿಳೆಯರ ಸಹಿತ 2,21,972 ಮತದಾರರಿದ್ದಾರೆ.

ಬುಡಕಟ್ಟು ಮತಗಟ್ಟೆ ಹೈಲೈಟ್: ಚುನಾವಣಾ ಆಯೋಗ ಮತದಾರರನ್ನು ಸೆಳೆಯಲು ನಡೆಸಿದ ವಿಭಿನ್ನ ಪ್ರಯತ್ನ ಬೈಂದೂರು ವಿಧಾನಸಭಾ ಕ್ಷೇತ್ರದ ಹೈಲೈಟ್. ಬುಡಕಟ್ಟು ಜನರೇ ಹೆಚ್ಚಿರುವ ಕೆರಾಡಿ ಗ್ರಾಮ ಮತಗಟ್ಟೆ 133ರಲ್ಲಿ ಬುಡಕಟ್ಟು ಮತದಾನ ಕೇಂದ್ರ ಮತದಾರರನ್ನು ಸೆಳೆಯಲು ಸಫಲವಾಗಿದ್ದು, ಜನ ಉತ್ಸಾಹದಿಂದ ಮತದಾನ ಮಾಡಿದರು.

ಬುಡಕಟ್ಟು ಜನರ ಜೀವನಾಧಾರವಾಗಿದ್ದ, ಗುಡಿ ಕೈಗಾರಿಕಾ ವಸ್ತುಗಳ ಮೂಲಕ ಮತಕೇಂದ್ರ ಶೃಂಗರಿಸಿ, ತಳಿರು ತೋರಣದಿಂದ ಅಲಂಕರಿಸಿ, ರಂಗೋಲಿ ಬಿಡಿಸಿ ಮತಕೇಂದ್ರ ಸಿದ್ಧಪಡಿಸಲಾಗಿತ್ತು. ಪ್ರವೇಶ ದ್ವಾರದಲ್ಲಿ ಬುಡಕಟ್ಟು ಜನರೇ ನೇಯ್ದ ಬುಟ್ಟಿ, ಮುಟ್ಟಾಳೆ, ಕಲ್ಲಿ, ಶಿಬಿಲು, ಕುಕ್ಕೆ, ಹೆಡಿಗೆ, ಡೋಲು, ಕೊಳಲಿಂದ ಅಲಂಕಾರ ಮಾಡಲಾಗಿತ್ತು. ಹೆಚ್ಚಿನ ಬುಡಕಟ್ಟು ಜನರ ಆವಾಸ ಸ್ಥಾನದ ಜತೆ ನಕ್ಸಲ್ ಪೀಡಿತ ಅತಿ ಸೂಕ್ಷ್ಮ ಮತಗಟ್ಟೆಯಾದರೂ ಮತದಾರರು ನಿರ್ಭಯವಾಗಿ ಮತ ಚಲಾಯಿಸಿದರು.

ಪಿಂಕ್ ಮತಗಟ್ಟೆ: ಮರವಂತೆ ಗ್ರಾಪಂ ಆವರಣದಲ್ಲಿ ತೆರೆಯಲಾಗಿದ್ದ ಪಿಂಕ್ ಮತಗಟ್ಟೆಯಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸಿದರು, ಪಿಂಕ್ ಬಣ್ಣದ ಬಟ್ಟೆ ಮತ್ತು ಬಲೂನ್‌ಗಳಿಂದ ಸಿಂಗರಿಸಿದ್ದ ಈ ಮತಗಟ್ಟೆಗೆ ಮಹಿಳಾ ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸಿದರು, ಮಹಿಳೆಯರೊಂದಿಗೆ ಬರುವ ಮಕ್ಕಳಿಗೆ ಆಟವಾಡಲು ಚಿಣ್ಣರ ಅಂಗಳ ನಿರ್ಮಿಸಿ ವಿವಿಧ ಆಟಿಕೆಗಳನ್ನು ಇಡಲಾಗಿತ್ತು. ಉಪ್ಪಿನಕುದ್ರುವಿನಲ್ಲಿ ತೆರೆಯಲಾಗಿದ್ದ ವಿಧಾನಸಭಾ ಕ್ಷೇತ್ರದ ಏಕೈಕ ಅಂಗವಿಕಲರ ಮತಗಟ್ಟೆಯಲ್ಲಿ, ಅಂಗವಿಕಲ ಸ್ನೇಹಿ ಟಾಯ್ಲೆಟ್, ರ‌್ಯಾಂಪ್, ವೀಲ್ ಚೇರ್, ವಾಕರ್, ವಾಕಿಂಗ್ ಸ್ಟಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು.