ಅಡಕೆ ಬೆಳೆಗಾರರಿಗೆ ಜುಜುಬಿ ಪರಿಹಾರ!

ಶ್ರವಣ್‌ಕುಮಾರ್ ನಾಳ, ಪುತ್ತೂರು
ಒಂದು ಕಡೆ ಕೊಳೆರೋಗ ಸಮಸ್ಯೆ, ಮತ್ತೊಂದು ಕಡೆ ಎಡೆಬಿಡದೆ ಸುರಿಯುತ್ತಿರುವ ಮಳೆ. ಈ ಬಾರಿ ಅಡಕೆ ತೋಟಗಳಲ್ಲಿ ಕೊಳೆ ರೋಗದಿಂದ ಅಡಕೆ ಉದುರುವ ಪ್ರಮಾಣ ಹೆಚ್ಚಾಗಿದೆ. ಗಾಳಿ ಮಳೆಗೆ ಮುರಿದು ಬಿದ್ದ ಅಡಕೆ ಮರಗಳಿಗೆ ಸರ್ಕಾರದಿಂದ ಪಡೆಯೋಣವೆಂದು ರೈತ ಅಂದುಕೊಂಡರೆ ಸಿಗುವ ಪರಿಹಾರವೂ ಜುಜುಬಿ!
ಹಳೇ ಅಡಕೆಗೆ ಧಾರಣೆ ಉತ್ತಮವಾಗಿದ್ದರೂ, ದೊಡ್ಡ ರೈತರನ್ನು ಹೊರತುಪಡಿಸಿದರೆ ಮಧ್ಯಮ ಮತ್ತು ಸಣ್ಣ ಬೆಳೆಗಾರರಲ್ಲಿ ಹಳೇ ಅಡಕೆ ದಾಸ್ತಾನಿಲ್ಲ. ಚತುರ್ಥಿ ಕಳೆದ ಬೆನ್ನಲ್ಲಿ ಎಲ್ಲ ಅಡಕೆ ಹಳೇ ಅಡಕೆ ಎಂದು ಪರಿವರ್ತನೆಯಾಗುವ ಪಾರಂಪರಿಕ ವಿಧಾನ ಇತ್ತೀಚಿನ ವರ್ಷಗಳಲ್ಲಿ ಕಣ್ಮರೆಯಾಗಿರುವ ಕಾರಣ ಸಾಮಾನ್ಯ ಅಡಕೆ ಬೆಳೆಗಾರರು ಉತ್ತಮ ಧಾರಣೆ ಫಲ ಪಡೆಯಬೇಕಾದರೆ ಇನ್ನೂ 3 ತಿಂಗಳು ಕಾಯಬೇಕಾದ ಸ್ಥಿತಿ ಇದೆ.
ಕಳೆದ ಕೆಲಸಮಯದಿಂದ ಕರಾವಳಿಯಲ್ಲಿ ಎಡೆಬಿಡದೆ ಮಳೆಯಾಗುತ್ತಿದೆ. ಮಳೆಯ ಜತೆ ನಾನಾ ಕಡೆ ಗಾಳಿ ಬೀಸುತ್ತಿದ್ದು, ಅಡಕೆ ತೋಟಗಳು ಮಕಾಡೆ ಮಲಗುತ್ತಿವೆ. ನೂರಾರು ರೈತರ ಸಾವಿರಾರು ಅಡಕೆ ಮರಗಳು ಮುರಿದು ಬೀಳುತ್ತಿದ್ದು, ಇದಕ್ಕೆ ಪರಿಹಾರ ಗಗನ ಕುಸುಮವಾಗಿದೆ.

 ಕೇವಲ 1.70 ರೂ. ಮಾತ್ರ: ಪ್ರಕೃತಿ ವಿಕೋಪದಿಂದ ನಾಶವಾದ ಬೆಳೆಗಳಿಗೆ ಪರಿಹಾರ ನೀಡಲು ಸರ್ಕಾರ ಮಾನದಂಡ ನಿಗದಿ ಮಾಡಿದೆ. ಅಡಕೆ ಮರಗಳ ವಿಚಾರದಲ್ಲಿ ಈ ಪರಿಹಾರ ನೆಪ ಮಾತ್ರಕ್ಕೆ ಎಂಬಂತಿದೆ. ಒಂದು ಅಡಕೆ ಮರ ನಾಶವಾದರೆ ಅದಕ್ಕೆ ಸರ್ಕಾರ ಕೊಡುವುದು ಕೇವಲ 1.70 ರೂಪಾಯಿ ಮಾತ್ರ. ಒಮ್ಮೆ ಬಲವಾದ ಗಾಳಿ ಬೀಸಿದರೆ ವಿಶಾಲ ತೋಟಗಳಲ್ಲಿ ಕನಿಷ್ಠ ನೂರಕ್ಕಿಂತಲೂ ಅಧಿಕ ಮರ ಮುರಿದು ಬೀಳುವುದುಂಟು. 100 ಅಡಕೆ ಮರ ಧರಾಶಾಹಿಯಾದರೆ ಸರ್ಕಾರದಿಂದ ಸಿಗುವುದು 170 ರೂಪಾಯಿ ಪರಿಹಾರ!
ಈ ಪರಿಹಾರ ಮಾನದಂಡದ ಬಗ್ಗೆ ರೈತ ಸಮುದಾಯದಲ್ಲಿ ಅಸಹನೆ ಇದೆ. ಒಂದು ಅಡಕೆ ಸಸಿ ನೆಟ್ಟು ಅದನ್ನು ಪೋಷಿಸಿ, ನಾನಾ ಪೋಷಕಾಂಶಗಳನ್ನು ಹಾಕಿ ಬೆಳೆಸಬೇಕಾಗುತ್ತದೆ. ಏನಿಲ್ಲವೆಂದರೂ ಐದಾರು ವರ್ಷ ಚೆನ್ನಾಗಿ ಸಾಕಿದ ಬಳಿಕವೇ ಅದು ಉತ್ತಮ ಫಸಲು ನೀಡುತ್ತದೆ.
20, 25 ಅಥವಾ ಅದಕ್ಕಿಂತಲೂ ಹೆಚ್ಚು ವರ್ಷ ದಾಟಿದ ಬೃಹತ್ ಅಡಕೆ ಮರಗಳು ಸಾಮಾನ್ಯವಾಗಿ ಗಾಳಿಗೆ ಉರುಳುತ್ತವೆ. ಅಂಥದೊಂದು ಮರ ಮುರಿದು ಬಿದ್ದರೆ ಅಂಥದೇ ಒಂದು ಮರ ಬೆಳೆಸಬೇಕಾದರೆ ಸಾವಿರಾರು ರೂಪಾಯಿ ಖರ್ಚು ತಗುಲುತ್ತದೆ. ಅದೆಲ್ಲವನ್ನೂ ಸರ್ಕಾರ ಕೊಡಲು ಸಾಧ್ಯವಿಲ್ಲದಿದ್ದರೂ ಕನಿಷ್ಠ ನ್ಯಾಯಸಮ್ಮತ ಮೊತ್ತವಾದರೂ ನಿಗದಿ ಮಾಡಬೇಕು ಎಂಬುದಾಗು ಬೆಳೆಗಾರರ ಬೇಡಿಕೆ.

ಮರವೊಂದಕ್ಕೆ 7 ಸಾವಿರ ರೂ. ಅಗತ್ಯ:  ಅಡಕೆ ತೋಟಕ್ಕೂ ಭತ್ತದ ಗದ್ದೆಗೂ ವ್ಯತ್ಯಾಸವಿದೆ. ಭತ್ತದ ಗದ್ದೆಯಲ್ಲಿ ಪ್ರವಾಹ ಬಂದು ಬೆಳೆ ನಾಶವಾದರೆ ಅದು ಒಂದು ಹಂಗಾಮಿಗೆ ಮಾತ್ರ ನಷ್ಟ ಎಂದರ್ಥ. ಮುಂದಿನ ಹಂಗಾಮಿನಲ್ಲಿ ಮತ್ತೆ ನೇಜಿ ನೆಟ್ಟು ಬೆಳೆ ಪಡೆಯಲು ಸಾಧ್ಯವಾಗುತ್ತದೆ. ಆದರೆ ಅಡಕೆ ಮರ ಎಂಬುದು ಜೀವಮಾನದ ಬೆಳೆ. ಒಂದು ಸಸಿ ನೆಟ್ಟರೆ ಅದು ಬೆಳೆದು ದಶಕಗಳ ಕಾಲ ಬೆಳೆ ಕೊಡುತ್ತದೆ. ಅಂಥ ಮರ ನಾಶವಾದರೆ ಮತ್ತೆ ನೆಟ್ಟು ಬೆಳೆಸಬೇಕು. ಈ ವ್ಯತ್ಯಾಸ ಸರ್ಕಾರ ಅರಿತುಕೊಂಡು ಅಡಕೆ ತೋಟ ನಾಶಕ್ಕೆ ಕನಿಷ್ಠ ಮರವೊಂದಕ್ಕೆ 7 ಸಾವಿರ ರೂ.ಗಳಂತೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಅಭಿಪ್ರಾಯಪಡುತ್ತಾರೆ. ತೆಂಗಿನ ಮರ ನಾಶವಾದರೆ 136 ರೂ. ಪರಿಹಾರ ನಿಗದಿ ಮಾಡಿದ್ದಾರೆ. ಇದನ್ನು 15,000 ರೂ.ಗಳಿಗೆ ಏರಿಸಬೇಕು ಎಂದು ಇನ್ನೊಬ್ಬ ರೈತ ಮುಖಂಡ ಸುರೇಶ್ ಭಟ್ ಹೇಳುತ್ತಾರೆ.

ಪರಿಹಾರ ಮೊತ್ತ ನಿಗದಿ ಮಾಡುವಾಗ ಸರ್ಕಾರಗಳು ಯಾವ ಮಾನದಂಡ ಅನುಸರಿಸಿದ್ದಾರೋ ಗೊತ್ತಿಲ್ಲ. ಇದು ತೀರಾ ಅವೈಜ್ಞಾನಿಕ. ಪರಿಹಾರ ಪಡೆಯಲು ಸಲ್ಲಿಸಬೇಕಾದ ಅರ್ಜಿಯ ವೆಚ್ಚವೂ ಇಲ್ಲಿ ಸಿಗೋದಿಲ್ಲ. ಹಾಗಾದರೆ ಇದಾವ ರೀತಿಯ ಪರಿಹಾರ.
– ರೂಪೇಶ್ ರೈ, ರೈತ ಮುಖಂಡ, ಪುತ್ತೂರು