ಕುಷ್ಟಗಿ: ನರೇಗಾ ಯೋಜನೆಯ ಕಾಮಗಾರಿಗಳಿಗೆ ಬಳಸಿಕೊಂಡ ಟ್ರ್ಯಾಕ್ಟರ್‌ಗಳ ಬಾಡಿಗೆ ಪಾವತಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಪಟ್ಟಣದ ಜಿಪಂ ಉಪವಿಭಾಗ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ವೀರಯೋಧ ಮಲ್ಲಯ್ಯ ವೃತ್ತದಿಂದ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಪಂ ಉಪ ವಿಭಾಗದ ಕಚೇರಿ ಎದುರು ಸಾಮಾವೇಶಗೊಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಕಂದಕೂರು, ಸಂಗನಾಳ ಸೇರಿ ವಿವಿಧ ಗ್ರಾಮಗಳಲ್ಲಿ ಕೈಗೊಂಡ ಕೆರೆ ಹಾಗೂ ನಾಲಾ ಹೂಳೆತ್ತುವ ಕಾಮಗಾರಿಗಳಲ್ಲಿ ಮಣ್ಣು ಹೊತ್ತು ಹಾಕಲು ರೈತರ ಟ್ರ್ಯಾಕ್ಟರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. 2022ರಲ್ಲಿ ಕೈಗೊಂಡ ಕಾಮಗಾರಿಗಳಿಗೆ ಬಳಕೆ ಮಾಡಿಕೊಂಡ ಟ್ರ್ಯಾಕ್ಟರ್‌ಗಳ ಬಾಡಿಗೆಯನ್ನು ಇವರೆಗೂ ಪಾವತಿಸಿಲ್ಲ. ಈ ಕುರಿತು ಜಿಪಂ ಸಿಇಒಗೆ ಮನವಿ ಸಲ್ಲಿಸಿದ ವೇಳೆ ಪಾವತಿಸುವುದಾಗಿ ಭರವಸೆ ನೀಡಿದ್ದರು. ಇವರೆಗೂ ಬೇಡಿಕೆ ಈಡೇರಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್.ಕೆ.ದೇಸಾಯಿ, ಪದಾಧಿಕಾರಿಗಳಾದ ಸಂಗನಗೌಡ ಪಾಟೀಲ್, ಮಲಕಾಜಗೌಡ ಕರಿಯಪ್ಪಗೌಡ್ರ, ಅಕ್ಕಮ್ಮ ಮರೇಗೌಡ್ರ, ಕವಿತಾ ಸಣ್ಣ ಸಿದ್ದಪ್ಪಣ್ಣನವರ್, ಸಂಗಮ್ಮ ನಿಡಶೇಸಿ, ಗಂಗಮ್ಮ ಬಡಿಗೇರ, ಶೇಖರ್ ಬಳೂಟಗಿ ಇತರರಿದ್ದರು.