ಕಳಸ: ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ಭಗವತಿ ಸಮೀಪ ಚಿರತೆ ಕಾಣಿಸಿಕೊಂಡು ಪ್ರಯಾಣಿಕರನ್ನು ಭಯಭೀತರನ್ನಾಗಿಸಿದೆ. ಕಳಸ-ಕುದುರೆಮುಖ-ಕಾರ್ಕಳ ಮುಖ್ಯ ರಸ್ತೆಯಲ್ಲಿ ವಾಹನಗಳಿಗೆ ಸೆಡ್ಡು ಹೊಡೆದು ನಿಲ್ಲುತ್ತಿದೆ.
ಕೆಲ ದಿನಗಳ ಹಿಂದೆಯಷ್ಟೆ ಸ್ಥಳೀಯರು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಭಗವತಿ ದೇವಸ್ಥಾನದ ಸಮೀಪದಲ್ಲೇ ಕಾಣಿಸಿಕೊಂಡಿದೆ. ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆಯನ್ನು ನೋಡಿ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ಕಾರು ನಿಂತಿರುವುದನ್ನು ನೋಡಿದ ಚಿರತೆ ಕಾರಿನ ಪಕ್ಕ ಬಂದು ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದೇ ರೀತಿ ಹಲವಾರು ಬಾರಿ ಈ ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಕಾಣಿಸಿಕೊಂಡಿದೆ. ಕೆಲವೊಂದು ಸಂದರ್ಭದಲ್ಲಿ ರಸ್ತೆಯಲ್ಲಿ ಕುಳಿತಿರುವುದನ್ನು ನೋಡಿರುವುದಾಗಿ ಪ್ರತ್ಯಕ್ಷ ದರ್ಶಿಗಳು ತಿಳಿಸುತ್ತಾರೆ.
ಈ ರಸ್ತೆಯಲ್ಲಿ ಕಾರ್ಕಳ, ಮಂಗಳೂರು, ಧರ್ಮಸ್ಥಳ, ಶೃಂಗೇರಿ, ಮಣಿಪಾಲ ಮುಂತಾದ ಊರುಗಳಿಗೆ ಪ್ರತಿ ನಿತ್ಯ ನೂರಾರು ವಾಹನಗಳು ಓಡಾಡುತ್ತಿರುತ್ತವೆ. ಚಿರತೆ ಈವರೆಗೂ ಯಾರಿಗೂ ತೊಂದರೆ ಕೊಟ್ಟಿಲ್ಲ. ಆದರೂ ರಾತ್ರಿ ಸಮಯದಲ್ಲಿ ಬೈಕ್ ಸವಾರರು ಎಚ್ಚರಿಕೆಯಿಂದ ಪ್ರಯಾಣಿಸುವುದು ಅಗತ್ಯವಾಗಿದೆ.