ಗೋಣಿಕೊಪ್ಪ: ತಾಯಿಯಿಂದ ಬೇರ್ಪಟ್ಟಿದ್ದ ಚಿರತೆ ಮರಿಯೊಂದು ಕಾಡಿನಿಂದ ನಾಡಿಗೆ ಬಂದು ಜನರ ಜತೆ ಸಾಧು ಪ್ರಾಣಿಯಂತೆ ಬೆರೆತು ಅಚ್ಚರಿ ಮೂಡಿಸಿ ಕೊನೆಗೆ ಕಾಡು ಸೇರಿದೆ.
ಕೆಲ ದಿನಗಳ ಹಿಂದೆ ಕೊಡಗು-ಮೈಸೂರು ಜಿಲ್ಲೆ ಗಡಿಯಲ್ಲಿ ನಿತ್ರಾಣಗೊಂಡಿದ್ದ 3-4ತಿಂಗಳ ವಯಸ್ಸಿನ ಚಿರತೆ ಮರಿ ಅಡ್ಡಾಡುತ್ತಿತ್ತು. ಅರಣ್ಯದಿಂದ ಹೊರಬಂದಿದ್ದ ಇದು ಜನರ ಮೇಲೆರಗದೆ ಸಾಧು ಪ್ರಾಣಿಯಂತೆ ಬೆರೆಯತೊಡಗಿತ್ತು. ವಿಷಯ ತಿಳಿದು ನಾಗರಹೊಳೆ ಉದ್ಯಾನದ ವೈದ್ಯ ಡಾ.ಮುಜಿಬ್‌ರೆಹಮಾನ್ ನೇತೃತ್ವದಲ್ಲಿ ಸಾರ್ವಜನಿಕರ ಸಹಕಾರದಲ್ಲಿ ಅದನ್ನು ಹಿಡಿದು ಆರೈಕೆ ಮಾಡಿ ಅರಣ್ಯಕ್ಕೆ ಬಿಡಲಾಯಿತು.
ದೃಷ್ಟಿ ದೋಷವಿತ್ತು: ಚಿರತೆಮರಿಗೆ ದೃಷ್ಟಿದೋಷವಿದ್ದು ಅಂದಾಜಿನಲ್ಲಿ ಹೆಜ್ಜೆ ಇಡುತ್ತಿತ್ತು. ತಾನು ತೆರಳುವ ದಾರಿಯ ಅರಿವಿರಲಿಲ್ಲ, ಇದರಿಂದ ಅದು ನಾಡಿನತ್ತ ಬಂದಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜ.4ರಂದು ಗೋಣಿಕೊಪ್ಪ-ಹುಣಸೂರು ಹೆದ್ದಾರಿಯ ಹೊಸಲು ಮಾರಿಯಮ್ಮ ದೇವಸ್ಥಾನದ ಸಮೀಪ ಕಾಣಿಸಿಕೊಂಡಿದ್ದ ಚಿರತೆ ಮರಿ ಯಾವ ಭಯ, ಆತಂಕವಿಲ್ಲದೆ ರಸ್ತೆ ಮಧ್ಯದಲ್ಲಿ ವಾಹನ, ಜನರ ನಡುವೆ ನಡೆದು ಅರಣ್ಯ ಸೇರಿಕೊಂಡಿತ್ತು.
ಇನ್ನು ಜ.8ರಂದು ಕೊಡಗಿನ ತೋಟದಲ್ಲಿ ಕಾಣಿಸಿಕೊಂಡಿದ್ದ ಈ ಚಿರತೆ ಮರಿ ಜನರ ನಡುವೆ ಸಾಕು ಪ್ರಾಣಿಯಂತೆ ನಡೆದಾಡಿದೆ. ತೋಟದ ರಸ್ತೆಯಲ್ಲಿ ಸಾಗುತ್ತಿದ್ದ ಅದರ ಹತ್ತಿರ ಜನರು ಹೋದರೂ ಯಾವುದೇ ಪ್ರತಿರೋಧ ತೋರಲಿಲ್ಲ. ಜನರು ನೀಡಿದ ನೀರನ್ನು ಕುಡಿದು ತೋಟ ಸೇರಿಕೊಂಡಿತ್ತು.
ಅರಣ್ಯದಿಂದ ತಪ್ಪಿಸಿಕೊಂಡು ನಾಡಿಗೆ ಬಂದಿದ್ದ ಚಿರತೆ ಮರಿಯನ್ನು ಪುನರ್ವಸತಿ ಕೇಂದ್ರದಲ್ಲಿ ಆರೈಕೆ ಮಾಡಿ ಮತ್ತೆ ಕಾಡಿಗೆ ಬಿಡಲಾಗಿದೆ.
ಹನುಮಂತ್‌ರಾಜ್ ಆರ್‌ಎಫ್‌ಒ, ಹುಣಸೂರು ವನ್ಯಜೀವಿ ವಲಯ