ಹೊಸಗುಂದದಲ್ಲಿ ಚಿರತೆಗೆ ಜಾನುವಾರುಗಳು ಬಲಿ?

 ಆನಂದಪುರ: ಹೊಸಗುಂದದ ದೇವರ ಕಾಡಿನ ಅಂಚಿನ ಕೆಲವೆಡೆ ಚಿರತೆ ಓಡಾಟದ ಗುರುತು ಪತ್ತೆಯಾಗಿದೆ. ಕಳೆದ ಐದಾರು ತಿಂಗಳುಗಳಿಂದ ಹಲವು ಜಾನುವಾರುಗಳು ನಾಪತ್ತೆಯಾಗಿದ್ದು, ಇವು ಚಿರತೆಗೆ ಬಲಿಯಾಗಿರುವ ಶಂಕೆ ಮೂಡಿದೆ.

ಶಿವಮೊಗ್ಗಸಾಗರ ಮಾರ್ಗದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಹೊಸಗುಂದ ತಿರುವಿನ ರಸ್ತೆಯಿಂದ ಸುಮಾರು ಅರ್ಧ ಕಿಮೀ ದೂರದಲ್ಲಿರುವ ಗಣಪತಿ ಶೆಟ್ಟಿ ಎಂಬುವರ ಮನೆಯ ಹಿಂಭಾಗದ ಬ್ಯಾಣದಲ್ಲಿ ಗುರುವಾರ ಹಸುವಿನ ಕೊಳೆತ ಶವ ಪತ್ತೆಯಾಗಿದೆ.ಅಲ್ಲದೆ ಈ ಶವದ ಮೇಲಿನ ಗಾಯದ ಗುರುತು, ಸುತ್ತಲಿನ ಸ್ಥಳದಲ್ಲಿ ಚಿರತೆ ಓಡಾಟದ ಹೆಜ್ಜೆ ಗುರುತು, ಚಿರತೆಯ ಲದ್ದಿ ಕಂಡು ಬಂದಿದೆ. ಗುರುವಾರ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರಾದ ಸತ್ಯನಾರಾಯಣ, ಹರೀಶ, ದೇವರಾಜ, ಶಶಿ, ದೇವೇಂದ್ರ, ಕೋವಿ ವಿಶ್ವ, ಮಂಜುನಾಥ ಶೆಟ್ಟಿ, ಸಂದೇಶ, ಮಂಜು, ಅಣ್ಣಪ್ಪ, ಷಣ್ಮುಖಪ್ಪ ಗೌಡ ಇನ್ನಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಹೊಸಗುಂದ, ಐಗಿನಬೈಲು, ನೇದರವಳ್ಳಿ ಗ್ರಾಮದ ಹಲವು ರೈತರ 10ಕ್ಕೂ ಅಧಿಕ ದನ ಕರುಗಳು ಕಳೆದ ಐದಾರು ತಿಂಗಳಿನಿಂದ ನಾಪತ್ತೆಯಾಗಿದ್ದವು. ಇವು ಚಿರತೆಗೆ ಆಹಾರವಾಗಿರುವ ಶಂಕೆ ಮೂಡಿಸಿದೆ. ಹೊಸಗುಂದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಈ ಬಗ್ಗೆ ಮನವಿ ಸಲ್ಲಿಸಿ ಚಿರತೆಯಿಂದ ರಕ್ಷಣೆ ನೀಡುವಂತೆ ಕೋರಿದ್ದಾರೆ.