ಸಾಲಮನ್ನಾ ಮೊತ್ತ 412 ಕೋಟಿ ರೂ.

ಶಿವಮೊಗ್ಗ: ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಜಿಲ್ಲೆಯ ಲಕ್ಷಕ್ಕೂ ಅಧಿಕ ರೈತರು ಸಹಕಾರ ಸಂಸ್ಥೆಗಳ 412 ಕೋಟಿ ರೂ. ಸಾಲಮನ್ನಾ ಪ್ರಯೋಜನ ಪಡೆದಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದ್ದಾರೆ.

ವಾಣಿಜ್ಯ ಬ್ಯಾಂಕ್​ಗಳಲ್ಲಿ 70,460 ರೈತರು 2 ಲಕ್ಷ ರೂ.ವರೆಗೆ ಒಟ್ಟು 938 ಕೋಟಿ ರೂ. ಸಾಲ ಪಡೆದಿದ್ದು, ಡಿಸೆಂಬರ್ ಅಂತ್ಯದೊಳಗೆ 32 ಸಾವಿರ ರೈತರು ನೋಂದಣಿ ಮಾಡಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯಲ್ಲಿ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಸಾಲ ಪಡೆದ ರೈತರು ಒಟ್ಟಾರೆ 1,300 ಕೋಟಿ ರೂ. ಸಾಲ ಮನ್ನಾ ಪ್ರಯೋಜನ ಪಡೆಯಲಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಸಹಕಾರ ಬ್ಯಾಂಕ್​ಗಳಲ್ಲಿನ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಪ್ರಯೋಜನವನ್ನು 70 ಸಾವಿರ ರೈತರು ಪಡೆದಿದ್ದಾರೆ. ಕುಮಾರಸ್ವಾಮಿ ಅವಧಿಯಲ್ಲಿ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಪ್ರಯೋಜನವನ್ನು 34 ಸಾವಿರ ರೈತರು ಪಡೆದಿದ್ದಾರೆ ಎಂದರು.

ಎಪಿಎಂಸಿ ಅಧ್ಯಕ್ಷ ದುಗ್ಗಪ್ಪಗೌಡ, ಶಿಮುಲ್ ಅಧ್ಯಕ್ಷ ವಿದ್ಯಾಧರ್, ಮಾಜಿ ಮೇಯರ್ ನಾಗರಾಜ್ ಕಂಕಾರಿ, ಕೆ.ರಾಮಕೃಷ್ಣ, ತ್ಯಾಗರಾಜ್, ಯೂಸೂಫ್ ಮಹಮ್ಮದ್, ಸಮೀರಾ ಕೌಸರ್, ಆನಂದ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಬಿಜೆಪಿ ವಿರುದ್ಧ ವಾಗ್ದಾಳಿ: ಬಿಜೆಪಿ ಮುಖಂಡರು ಸಮ್ಮಿಶ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಸಾಲ ಮನ್ನಾ ಅಂಕಿ ಅಂಶ ಅವರ ಕಣ್ಣಿಗೆ ಕಾಣಿಸುತ್ತಿಲ್ಲ. ಸರ್ಕಾರವನ್ನು ಟೀಕಿಸುವುದೇ ಅವರ ಕಾಯಕವಾಗಿದೆ. ರೈತರಿಗೆ ಏನು ಮಾಡಿದ್ದೇವೆ ಎಂಬುದನ್ನು ಅವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಕುಮಾರಸ್ವಾಮಿ ಅವರಿಗೆ ಟೀಕೆಗಳ ಮೂಲಕ ಮಾನಸಿಕವಾಗಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಜನರೇ ನಿಮಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಶೀಘ್ರವೇ ಸಿಎಂ ಕುಮಾರಸ್ವಾಮಿ ಅವರನ್ನು ಜಿಲ್ಲೆಗೆ ಆಹ್ವಾನಿಸಿ ರೈತರ ಸಾಲಮನ್ನಾ, ಕಾಯಕ, ಬಡವರಬಂಧು ಮತ್ತಿತರ ಯೋಜನೆ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದರು.

ಸಾಲ ಮನ್ನಾ ಬಗ್ಗೆ ಜಿಲ್ಲಾಧಿಕಾರಿ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ಕರೆದು ಮಾಹಿತಿ ನೀಡಬೇಕು. ಈ ಮೂಲಕ ಸಾಲಮನ್ನಾ ಬಗ್ಗೆ ಪ್ರಸ್ತಾಪಿಸುವವರ ಬಾಯಿ ಮುಚ್ಚಿಸಬೇಕು.

| ಆರ್.ಎಂ.ಮಂಜುನಾಥ್​ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ