ಕಣಿವೆ ರಾಜ್ಯದಲ್ಲಿ ತೀವ್ರಗೊಂಡ ಚಳಿ: ದ್ರಾಸ್​ನಲ್ಲಿ -21 ಡಿಗ್ರಿ ಸೆಲ್ಸಿಯಸ್​ ತಾಪಮಾನ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿ ತೀವ್ರಗೊಂಡಿದ್ದು ರಾಜ್ಯದ ಬಹುತೇಕ ಕಡೆ ಹಿಮಪಾತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಕಡೆ ತಾಪಮಾನ ಸೊನ್ನೆಗಿಂತ ಕೆಳಗಿಳಿದಿದೆ.

ಶುಕ್ರವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ದ್ರಾಸ್​ನಲ್ಲಿ -21 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದ್ದರೆ, ಲೇಹ್​ನಲ್ಲಿ -15-1 ಮತ್ತು ಕಾರ್ಗಿಲ್​ನಲ್ಲಿ -17.5 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ – 7.7 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ದಾಖಲಾಗಿದೆ. ಇದು ಕಳೆದ 3 ದಶಕಗಳಲ್ಲಿ ಡಿಸೆಂಬರ್​ ತಿಂಗಳಿನಲ್ಲಿ ದಾಖಲಾದ ಅತ್ಯಂತ ಕಡಿಮೆ ತಾಪಮಾನ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ -2 ರಿಂದ -3 ಡಿಗ್ರಿ ತಾಪಮಾನ ಇರುತ್ತದೆ. ಆದರೆ, ಈ ವರ್ಷ ಚಳಿ ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರದಲ್ಲಿ ತಾಪಮಾನ ಕುಸಿದಿರುವುದರಿಂದ ನಗರದ ಪ್ರಸಿದ್ಧ ದಾಲ್​ ಸರೋವರದ ನೀರು ಹೆಪ್ಪುಗಟ್ಟಿದೆ. (ಏಜೆನ್ಸೀಸ್​)