ತಾಲೂಕಿನಲ್ಲಿ ಮೇವಿನ ಕೊರತೆ ಇಲ್ಲ

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಜಿಲ್ಲೆಯಲ್ಲಿಯೇ ಹೆಚ್ಚು ಜಾನುವಾರುಗಳನ್ನು ಹೊಂದುವ ಮೂಲಕ ಚನ್ನರಾಯಪಟ್ಟಣ ತಾಲೂಕು ಪ್ರಶಂಸೆಗೆ ಪಾತ್ರವಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ತಾಲೂಕು ಪಶು ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ(ನಿ) ಹಾಗೂ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ 16ನೇ ಸುತ್ತಿನ ಕಾಲುಬಾಯಿ ಜ್ವರದ ಉಚಿತ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ತಾಲೂಕಿನಾದ್ಯಂತ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ಸದ್ಯಕ್ಕೆ ಮೇವಿನ ಕೊರತೆ ಇಲ್ಲ. ರೈತರು ಸಾಕಷ್ಟು ಹಸಿ ಮೇವು ಉತ್ಪಾದನೆಯಲ್ಲಿ ತೊಡಗಿದ್ದಾರೆ. ಆದರೆ, ಕ್ಷೀಣಿಸುತ್ತಿರುವ ನಾಟಿ ದನಗಳ ಸಂತತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ರೈತರು ಮುಂದಾಗಬೇಕು ಎಂದರು.
ನೋಡಲ್ ಅಧಿಕಾರಿ ಬಿ.ಎನ್.ಶಿವರಾಮ್ ಮಾತನಾಡಿ, ಕಾಲು-ಬಾಯಿ ಜ್ವರವು ಮೇವು ಹಾಗೂ ನೀರಿನ ಮೂಲಕ ರಾಸುವಿನಿಂದ ಮತ್ತೊಂದು ರಾಸುವಿಗೆ ಬಹುಬೇಗ ಹರಡುವ ಸಾಂಕ್ರಾಮಿಕ ರೋಗವಾಗಿದೆ ಎಂದು ತಿಳಿಸಿದರು.
ತಾಲೂಕು ವ್ಯಾಪ್ತಿಯಲ್ಲಿ ಸುಮಾರು 1.7 ಲಕ್ಷ ರಾಸುಗಳಿವೆ. ಪಶು ವೈದ್ಯರು ಸೇರಿ ಪರಿವೀಕ್ಷಕರ 9 ತಂಡವು ರಾಸುಗಳಿಗೆ ಲಸಿಕೆ ಹಾಕುವ ಕಾರ್ಯದಲ್ಲಿ ನಿರತವಾಗಿದ್ದು, ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ 22 ದಿನ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ರೋಗದ ಲಕ್ಷಣಗಳು: ಕಾಲುಬಾಯಿ ರೋಗದ ಸೋಂಕು ತಗುಲಿದಲ್ಲಿ ರಾಸುವಿಗೆ ತೀವ್ರಜ್ವರ ಕಾಡುವುದು, ಕಾಲು, ಬಾಯಿ ಹಾಗೂ ನಾಲಿಗೆಯಲ್ಲಿ ಹುಣ್ಣಾಗುವುದು, ಬಾಯಿಂದ ಸದಾ ಜೊಲ್ಲು ಸೋರುವುದು, ಮೇವು-ನೀರು ಬಿಡುವುದು, ಹಾಲು ಉತ್ಪಾದನೆಯಲ್ಲಿ ಏರುಪೇರು, ಗರ್ಭ ಧರಿಸಿದ್ದರೆ ಅಬಾಶನ್ ಆಗುವ ಸಾಧ್ಯತೆ ಹೆಚ್ಚು. ಜಾನುವಾರಿಗೆ ಸಂಪೂರ್ಣ ರೋಗ ಆವರಿಸಿದೊಡನೆ ಮೈಯಲ್ಲಿ ಹೆಚ್ಚು ರೋಮಗಳು ಬೆಳೆಯುತ್ತವೆ ಎಂದು ರೋಗದ ಲಕ್ಷಣದ ಬಗ್ಗೆ ತಿಳಿಸಿ ನಂತರ ರೋಗ ಬಾರದಂತೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಾಲೂಕು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಕೃಷ್ಣಮೂರ್ತಿ ಗ್ರಾಮದ ರೈತರಿಗೆ ಸೂಕ್ತ ಮಾಹಿತಿ ನೀಡಿದರು.
ಪಶು ವೈದ್ಯರಾದ ಡಾ.ಸುಬ್ರಹ್ಮಣ್ಯ, ಡಾ.ಸೋಮಶೇಖರ್, ಡಾ.ಪ್ರವೀಣ್‌ಕುಮಾರ್, ಡಾ.ಕೃಷ್ಣಮೂರ್ತಿ, ಸಿಬ್ಬಂದಿ ವರ್ಗ ಇದ್ದರು. 

Leave a Reply

Your email address will not be published. Required fields are marked *