ಅಧಿಕಾರಿಗಳ ವಿರುದ್ಧ ಶಾಸಕ ನಾಗನಗೌಡ ಗರಂ

ಗುರುಮಠಕಲ್: 21ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುಮಠಕಲ್ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಇಲಾಖೆಗಳ ಬೇಡಿಕೆಗಳ ಬಗ್ಗೆ ನನ್ನ ಗಮನಕ್ಕೆ ಯಾವೊಬ್ಬ ಅಧಿಕಾರಿಯೂ ತಂದಿಲ್ಲ ಸಿಡಿಮಿಡಿಗೊಂಡ ಶಾಸಕ ನಾಗನಗೌಡ ಕಂದಕೂರ, ಕೂಡಲೇ ಬೇಡಿಕೆಗಳ ಪಟ್ಟಿ ಸಲ್ಲಿಸಬೇಕು ಎಂದು ಸೂಚಿಸಿದರು.

ಗುರುಮಠಕಲ್ ಪುರಸಭೆಯಲ್ಲಿ ಗುರುವಾರ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿದ ಅವರು, ವಿವಿಧ ಇಲಾಖೆಗಳ 17 ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಲಿದೆ. ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

95 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ 7800 ಹೆಕ್ಟೇರ್ (ಶೇ.9) ಮಾತ್ರ ಬಿತ್ತನೆಯಾಗಿದೆ. ತಾಲೂಕು ವ್ಯಾಪ್ತಿಯ 5 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಅಧಿಕಾರಿ ದೂಳಪ್ಪ ಹೊಸಳ್ಳಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕಂದಕೂರ, ರಸಗೊಬ್ಬರ ಅಂಗಡಿಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಹಣದಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅಂತಹ ವ್ಯಾಪಾರಸ್ಥರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ನಂತರ ಶಿಕ್ಷಣ ಇಲಾಖೆ ಬಗ್ಗೆ ಬಿಇಒ ರುದ್ರಗೌಡ ಪಾಟೀಲ್ ಅವರಿಂದ ಮಾಹಿತಿ ಪಡೆದ ಶಾಸಕರು, ಶಾಲೆಗಳ ಸಮಸ್ಯೆ ಕುರಿತು ಜನರಿಂದ ಮಾಹಿತಿ ಸಿಗುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಯಾವುದೇ ಮಾಹಿತಿ ನೀಡಿಲ್ಲ. ಶಾಲೆಗಳ ಸ್ಥಿತಿಗತಿ ಅರಿಯುವ ಉದ್ದೇಶದಿಂದಲೇ ಮುಖ್ಯಮಂತ್ರಿಗಳು ಗ್ರಾಮೀಣ ಮಟ್ಟದ ಶಾಲೆಯಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಈಗಲಾದರೂ ಶಿಕ್ಷಣ ಇಲಾಖೆ ಬೇಡಿಕೆಗಳ ಪಟ್ಟಿ ಮಾಡಿ ನೀಡಬೇಕು ಎಂದರು.

ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಗೈರು ಹಾಜರಿ ಬಗ್ಗೆ ಕಿಡಿಕಾರಿದ ಶಾಸಕರು, ಪ್ರತಿ ಸಭೆಯಲ್ಲಿ ಗೈರು ಆಗುತ್ತಿರುವವರಿಗೆ ನೋಟಿಸ್ ನೀಡುವಂತೆ ಸೂಚಿಸಿದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಭಯ್ಯ ಸ್ವಾಮಿ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಶ್ರೀಧರಾಚಾರ್ಯ, ಮುಖ್ಯಾಧಿಕಾರಿ ತಿಮ್ಮಪ್ಪ ಜಗಲಿ, ಸಿಪಿಐ ಶ್ರೀನಿವಾಸ ಅಲ್ಲಾಪುರ, ಸಿಡಿಪಿಒ ವನಜಾಕ್ಷಿ ಇತರರಿದ್ದರು.

Leave a Reply

Your email address will not be published. Required fields are marked *