ಮೋದಿಯೆಡೆಗೆ ಹೆಚ್ಚಿದೆ ಜನರ ಒಲವು

ಅಥಣಿ: 2019ರ ಲೋಕಸಭೆ ಚುನಾವಣೆ ಐತಿಹಾಸಿಕವಾಗಲಿದ್ದು, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಜನರ ಒಲವು ಹೆಚ್ಚಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ.

ಇಲ್ಲಿನ ಸೋಷಿಯಲ್ ಕ್ಲಬ್ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಥಣಿ ಬಿಜೆಪಿ ಮಂಡಳ ಕಾರ್ಯಕರ್ತರ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ 30ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡುವ ಮೂಲಕ ಅಥಣಿಯಿಂದ ವಿಜಯ ಪತಾಕೆ ಹಾರಿಸುವ ನಿಟ್ಟಿನಲ್ಲಿ ಯುಗಾದಿ ಹಬ್ಬದ ದಿನ ಅಭೆ ಆರಂಭಿಸಲಾಗಿದೆ ಎಂದರು.

ಸಮ್ಮಿಶ್ರ ಸರ್ಕಾರ ಸಾಲಮನ್ನಾ ಮಾಡುವಲ್ಲಿ ವಿಫಲವಾಗಿದೆ. ಈಗಲಾದರೂ ರೈತರ ಸಾಲಮನ್ನಾ ಕುರಿತು ಸ್ಪಷ್ಟ ನಿಲುವು ಪ್ರಕಟಿಸಬೇಕೆಂದು ಸಿಎಂ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದರು. ದಿ.ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರ ಕನಸಸಾಗಿರುವ ಗಂಗಾ-ಕೃಷ್ಣಾ ನದಿ ಜೋಡಣೆ ಕಾರ್ಯವನ್ನು ನರೇಂದ್ರ ಮೋದಿ 2019ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕಾರ್ಯರೂಪಕ್ಕೆ ತರಲಿದ್ದಾರೆ ಎಂದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಮುಂದಿನ 20 ವರ್ಷ ದೇಶ ಸುರಕ್ಷಿತವಾಗಿರಲು ಮತ್ತೆ ದೇಶಕ್ಕೆ ಮೋದಿ ಅವಶ್ಯಕ . ಹಿಂದು ಧರ್ಮದ ರಕ್ಷಕರಾಗಿ ಶ್ರಮಿಸುತ್ತಿರುವ ಮೋದಿ ಪ್ರಧಾನಿಯಾಗಬೇಕು ಎಂಬುದು ಎಲ್ಲ ಜನರ ಅಭಿಮತವಾಗಿದೆ. ಚಿಕ್ಕೋಡಿ ಕ್ಷೇತ್ರದಿಂದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಹಿಂದೆ ಆಯ್ಕೆಯಾದ ಸಂಸದರು ಮರಳಿ ಅಥಣಿ ಕ್ಷೇತ್ರಕ್ಕೆ ಬರಲಿಲ್ಲ. ಜನರ ಕಷ್ಟ-ಸುಖಗಳಿಗೆ ಸ್ಪಂದಿಸಲಿಲ್ಲ. ಈಗ ಕೃಷ್ಣಾ ನದಿಗೆ 4 ಟಿಎಂಸಿ ನೀರನ್ನು ನಾವೇ ಬಿಡಿಸಿದ್ದು ಎಂದು ಸುಳ್ಳು ಹೇಳಿಕೆ ನೀಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಕಡಿಮೆ ಮತಗಳಿಂದ ಅಂತರದಿಂದ ಸೋತಿದೆ. ಈ ಬಾರಿ ಅತೀ ಹೆಚ್ಚು ಮತಗಳ ಅಂತರದ ಗೆಲುವು ತಂದುಕೊಡುವ ಕಾರ್ಯವನ್ನು ಕಾರ್ಯಕರ್ತರು ಮಾಡಿದರೆ, ಅವರ ಸೇವೆಗೆ ತಾವು ಸದಾ ಸಿದ್ಧ ಎಂದರು.

ಶಾಸಕರಾದ ಪಿ.ರಾಜೀವ, ದುರ್ಯೋಧನ ಐಹೊಳೆ, ಮಾಜಿ ಸಂಸದ ಅಮರಸಿಂಹ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಮುಖಂಡ ಉಮೇಶರಾವ್ ಬಂಟೋಡ್ಕರ ಮಾತನಾಡಿದರು. ಎಲ್ಲ ಜಿಪಂ, ತಾಪಂ ಸದಸ್ಯರು ಹಾಗೂ ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಮಹಾಘಟಬಂಧನದಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬುದೇ ನಿರ್ಧಾರವಾಗಿಲ್ಲ. ಆದರೆ ಬಿಜೆಪಿಯಿಂದ ಮೋದಿ ಅವರೆ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಗ್ರಾಮೀಣ ರೈತರಿಗೆ ದಿನದ 24ಗಂಟೆ ವಿದ್ಯುತ ಪೂರೈಕೆಗೆ ವಿಶೇಷ ಯೋಜನೆಯನ್ನು ಮೋದಿ ರೂಪಿಸಿದ್ದಾರೆ. ಅಣ್ಣಾಸಾಹೇಬ ಜೊಲ್ಲೆ ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು.

| ಲಕ್ಷ್ಮಣ ಸವದಿ, ಮಾಜಿ ಶಾಸಕ