ಸಚಿವ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯರದ್ದೂ ಲಾಬಿ

ಬೆಂಗಳೂರು: ಪಕ್ಷಕ್ಕೆ ನಾವೂ ದುಡಿದಿದ್ದೇವೆ, ನಮಗೂ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿ ಎಂದು ಕಾಂಗ್ರೆಸ್​ನ ವಿಧಾನಪರಿಷತ್ ಸದಸ್ಯರು ಪಕ್ಷದ ನಾಯಕರ ಮೇಲೆ ಒತ್ತಡ ತರಲಾರಂಭಿಸಿದ್ದಾರೆ.

ಪರಿಷತ್ ಸದಸ್ಯರಿಗೆ ಸಂಪುಟದಲ್ಲಿ ಸ್ಥಾನ ಕೊಡಬಾರದೆಂದು ಹೈಕಮಾಂಡ್ ಹೇಳಿಲ್ಲ. ಯಾರು ಪಕ್ಷಕ್ಕೆ ದುಡಿದು ನಿಷ್ಠರಾಗಿದ್ದಾರೋ ಅವರಿಗೆ ಅವಕಾಶ ಕಲ್ಪಿಸಿ ಎಂಬುದು ಸ್ಪಷ್ಟವಾಗಿದೆ. ಆದರೆ, ರಾಜ್ಯದ ನಾಯಕರು ಪಕ್ಷಕ್ಕೆ ದುಡಿದವರನ್ನು ಪರಿಗಣಿಸುವುದೇ ಇಲ್ಲ ಎಂದು ಪರಿಷತ್ ಸದಸ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯ ಸದಸ್ಯರೊಬ್ಬರು ವಿಜಯವಾಣಿಯೊಂದಿಗೆ ಮಾತನಾಡಿ, ನಮ್ಮ ಪ್ರಯತ್ನ ನಡೆಯುತ್ತದೆ. ರಾಜ್ಯ ಮುಖಂಡರು ನಮ್ಮನ್ನು ಪರಿಗಣಿಸಬೇಕೆಂಬುದು ನಮ್ಮ ಒತ್ತಾಯ ಎಂದಿದ್ದಾರೆ.

ಗಾಂಧಿ ಜಯಂತಿ ಬಳಿಕ ಅನೌಪಚಾರಿಕವಾಗಿ ಅಸಮಾಧಾನ ಹೊರಹಾಕಿದ ಪರಿಷತ್ ಸದಸ್ಯರೊಬ್ಬರು, ನಾವು ಸಚಿವಾಕಾಂಕ್ಷಿಗಳು. ನಮಗೆ ಅರ್ಹತೆ ಇಲ್ಲವೆ ಎಂದು ಪ್ರಶ್ನಿಸಿದರು. ಸಮರ್ಥರಲ್ಲದವರಿಗೆ, ಪಿಎಚ್.ಡಿ ಮಾಡಿದವರಿಗೆ ಸಚಿವ ಸ್ಥಾನ ಕೊಡಿಸಲು ಪ್ರಯತ್ನಿಸುವ ನಮ್ಮ ನಾಯಕರು ಪಕ್ಷ ನಿಷ್ಠರನ್ನು ಕಡೆಗಣಿಸುತ್ತಾರೆ. ಇದನ್ನು ಯಾರ ಬಳಿ ಹೇಳಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದಿನ ಸರ್ಕಾರದಲ್ಲಿ ನಾವು ಯಾರ್ಯಾರ ಪರವೋ ಗಟ್ಟಿಯಾಗಿ ನಿಂತೆವು, ಸಮರ್ಥಿಸಿಕೊಂಡೆವು. ತಲೆಕೊಟ್ಟೆವು. ಆದರೆ, ಈಗ ಏಕೆ ಅಷ್ಟೊಂದು ಸಮರ್ಥನೆಗೆ ನಿಂತೆವೋ ಎಂದೆನಿಸುತ್ತಿದೆ. ರಾಜ್ಯಸಭೆಯ 20 ಸದಸ್ಯರಿಗೆ ಕೇಂದ್ರ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಆಂಧ್ರ, ಮಹಾರಾಷ್ಟ್ರ ಸೇರಿ ಅನೇಕ ರಾಜ್ಯಗಳಲ್ಲಿ ಮೇಲ್ಮನೆ ಸದಸ್ಯರಿಗೆ ಅವಕಾಶ ಸಿಕ್ಕಿದೆ. ಇಲ್ಲೂ ಆ ಮಾದರಿ ಅನುಸರಿಸಲಿ ಎಂಬುದು ನಮ್ಮ ಒತ್ತಾಯ ಎಂದು ಅವರು ಅಭಿಪ್ರಾಯ ನೀಡಿದರು.

4ರಿಂದ ಚಟುವಟಿಕೆ ಚುರುಕು

ಸಂಪುಟ ವಿಸ್ತರಣೆ ಅ.10 ಅಥವಾ 12ರಂದು ನಡೆಯುವುದು ಖಚಿತ ಎಂದಾಗುತ್ತಿದ್ದಂತೆ ಕಾಂಗ್ರೆಸ್​ನಲ್ಲಿ ಬಿರುಸಿನ ಚುಟುವಟಿಕೆ ನಡೆದಿದ್ದು, ಸಚಿವಾಕಾಂಕ್ಷಿಗಳು ಪ್ರಭಾವ ಬೀರಿ ಒತ್ತಡ ತರಲಾರಂಭಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿದೇಶ ಪ್ರವಾಸದಲ್ಲಿದ್ದು, ಬುಧವಾರ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಗುರುವಾರದ ಬಳಿಕ ಸಚಿವಕಾಂಕ್ಷಿಗಳ ಪಟ್ಟಿ ತಯಾರಿ ಬಗ್ಗೆ ಸಭೆ ನಡೆಯುವ ಸಾಧ್ಯತೆ ಇದೆ. ಇರುವ ಆರು ಸ್ಥಾನಕ್ಕೆ 22 ಮಂದಿ ಆಕಾಂಕ್ಷಿಗಳಿದ್ದಾರೆ.

ಮೇಲ್ಮನೆ ಸಭಾನಾಯಕಿ ವಿರುದ್ಧ ಸಮರ

ಹಿರಿಯರನ್ನು ಕಡೆಗಣಿಸಿ ಸಮ್ಮಿಶ್ರ ಸರ್ಕಾರದಲ್ಲಿ ಜಯಮಾಲಾ ಅವರಿಗೆ ಸಂಪುಟದಲ್ಲಿ ಸ್ಥಾನ ಕೊಟ್ಟಿದ್ದಲ್ಲದೆ, ಮೇಲ್ಮನೆಯಲ್ಲಿ ಸಭಾನಾಯಕರನ್ನಾಗಿ ಮಾಡಿದ್ದರ ಬಗ್ಗೆ ಬುಸುಗುಡುತ್ತಲೇ ಇರುವ ಕೈ ನಾಯಕರು, ಸಂಪುಟ ವಿಸ್ತರಣೆ ವೇಳೆ ಈ ಸಂಗತಿಯನ್ನು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನದಲ್ಲಿದ್ದಾರೆ. ಉಪ ಮುಖ್ಯಮಂತ್ರಿ ಗಮನಕ್ಕೂ ಈ ವಿಚಾರ ಬಂದಿದ್ದು, ಜಯಮಾಲಾರನ್ನು ಸಂಪುಟದಿಂದ ಕೈಬಿಟ್ಟರೆ ಸರ್ಕಾರಕ್ಕಾಗಲಿ, ಪಕ್ಷಕ್ಕಾಗಲಿ ನಷ್ಟವಿಲ್ಲ. ಅವರ ಬದಲು ಪರಿಷತ್​ನಲ್ಲಿರುವ ಹಿರಿಯರು, ಹಿಂದುಳಿದ ಅಥವಾ ದಲಿತರಿಗೆ ಅವಕಾಶ ಕೊಟ್ಟರೆ ಸೂಕ್ತವಾದೀತೆಂಬ ಅಭಿಪ್ರಾಯ ಮಂಡಿಸಿದ್ದಾರೆಂದು ತಿಳಿದುಬಂದಿದೆ.

ಸಚಿವಾಕಾಂಕ್ಷಿಗಳಿವರು

ವಿಧಾನಸಭೆಯಿಂದ ಶಾಮನೂರು ಶಿವಶಂಕರಪ್ಪ, ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ರೋಷನ್ ಬೇಗ್, ಬಿ.ಸಿ.ಪಾಟೀಲ್, ಬಿ.ನಾಗೇಂದ್ರ, ಭೀಮಾ ನಾಯ್್ಕ ಪಿ.ಟಿ.ಪರಮೇಶ್ವರ ನಾಯಕ್, ತುಕಾರಾಂ, ರಹೀಂಖಾನ್, ರಘುಮೂರ್ತಿ, ಆನಂದ ಸಿಂಗ್, ಸಂಗಮೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಸಿ.ಎಸ್.ಶಿವಳ್ಳಿ, ಎಂ.ಟಿ.ಬಿ.ನಾಗರಾಜ್, ಎಸ್.ಟಿ. ಸೋಮಶೇಖರ್, ಎನ್.ಎ.ಹ್ಯಾರಿಸ್, ವಿ ಮುನಿಯಪ್ಪ, ರೂಪಾ ಶಶಿಧರ್ ಆಕಾಂಕ್ಷಿಗಳಾಗಿದ್ದರೆ, ಪರಿಷತ್​ನಿಂದ ಐವನ್ ಡಿಸೋಜ, ಎಸ್.ಆರ್. ಪಾಟೀಲ್, ಧರ್ಮಸೇನ, ಉಗ್ರಪ್ಪ, ಎಚ್.ಎಂ.ರೇವಣ್ಣ ರೇಸ್​ನಲ್ಲಿದ್ದಾರೆ.