ಕಲಾಪ ಪ್ರಾರಂಭವಾಗುತ್ತಿದ್ದಂತೆ ಮಾಧ್ಯಮ ನಿರ್ಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು; ಚರ್ಚೆಗೆ ಅವಕಾಶ ಕೊಡದ ಸಭಾಪತಿ

ಬೆಂಗಳೂರು: ವಿಧಾನಮಂಡಲ ಉಭಯ ಸದನಗಳ ಕಲಾಪ ಇಂದಿನಿಂದ ಆರಂಭವಾಗಿದೆ. ಆದರೆ ಈ ಬಾರಿಯ ಅಧಿವೇಶನಕ್ಕೆ ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ನಿನ್ನೆಯಿಂದಲೇ ಈ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತಿದ್ದರೂ ಇಂದು ಕಲಾಪ ಶುರುವಾಗುತ್ತಿದ್ದಂತೆ ಕಾಂಗ್ರೆಸ್​ ಅದೇ ವಿಚಾರವನ್ನು ಪ್ರಸ್ತಾಪಿಸಿತು.

ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಐವನ್​ ಡಿಸೋಜಾ, ಅಧಿವೇಶನದ ಕಲಾಪಕ್ಕೆ ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ ಎಂಬ ವರದಿಯನ್ನು ಪತ್ರಿಕೆಗಳಲ್ಲಿ ಓದಿದ್ದೇನೆ. ಆದರೆ ಮೇಲ್ಮನೆಯಲ್ಲಿ ಖಾಸಗಿ ವಾಹಿನಿಗಳ ಕ್ಯಾಮರಾಗಳು ಕಾಣಿಸುತ್ತಿವೆ. ಇದಕ್ಕೆ ಸ್ಪಷ್ಟನೆ ಕೊಡಿ ಎಂದರು.

ಅದಕ್ಕೆ ದನಿಗೂಡಿಸಿದ ವಿಪಕ್ಷ ನಾಯಕ ಸಹಿತ ಕಾಂಗ್ರೆಸ್​ ಸದಸ್ಯರು ಮಾಧ್ಯಮ ನಿರ್ಬಂಧಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮೂರು-ನಾಲ್ಕು ಬಾರಿ ಐವನ್​ ಡಿಸೋಜಾ ಇದೇ ವಿಚಾರ ಪ್ರಸ್ತಾಪಿಸಿದರೂ ಸಭಾಪತಿ ಮಾತ್ರ ಚರ್ಚೆಗೆ ಅವಕಾಶ ಕೊಡದೆ, ಇಲ್ಲಿ ಕಾಣುತ್ತಿರುವ ಕ್ಯಾಮರಾಗಳೇ ನಿಮ್ಮ ಪ್ರಶ್ನೆಗೆ ಉತ್ತರ ಎಂದು ನುಣುಚಿಕೊಂಡರು.

ಅಗಲಿದ ನಾಯಕರಿಗೆ ಸಂತಾಪ

ವಿಧಾನಮಂಡಲ ಉಭಯ ಸದನಗಳ ಕಲಾಪದಲ್ಲಿ ಅಗಲಿದ ಹಿರಿಯ ನಾಯಕರಿಗೆ ಸಂತಾಪ ಸೂಚಿಸಲಾಯಿತು. ವಿಧಾನ ಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿರ್ಣಯ ಮಂಡಿಸಿ, ಕೇಂದ್ರದ ಮಾಜಿ ಸಚಿವರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಮ್ ಜೇಠ್ಮಲಾನಿ, ವಿಧಾನಸಭೆ ಮಾಜಿ ಸದಸ್ಯರಾದ ಉಮೇಶ್ ಭಟ್, ಸಿ.ವೀರಭದ್ರಯ್ಯ, ಅರ್ಜುನ್ ರಾವ್, ಲಕ್ಷ್ಮಣರಾವ್ ಹಿಶೋಬಕರ್, ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ನಿಧನರಾಗಿರುವುದಕ್ಕೆ ಸಂತಾಪ ಸೂಚಿಸಿ, ನಿರ್ಣಯವನ್ನು ಅವರ ಮನೆಗಳಿಗೆ ಕಳಿಸಿಕೊಡಲಾಗುವುದು ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​, ಪುರೋಹಿತಶಾಹಿ ರೀತಿ ಸಂತಾಪ ನಿರ್ಣಯವನ್ನು ಮೃತಪಟ್ಟವರ ಮನೆಗೆ ಕಳಿಸುವುದಲ್ಲ. ಅಂತಹ ಸಂಪ್ರದಾಯ ಬೇಡ. ಮೃತ ಗಣ್ಯರ ಮಾರ್ಗದರ್ಶನದಲ್ಲಿ ನಡೆಯೋಣ ಎಂದು ಹೇಳಿದರು.

ಇನ್ನು ವಿಧಾನ ಪರಿಷತ್​ನಲ್ಲಿ ಪ್ರವಾಹದಲ್ಲಿ ಮಡಿದವರಿಗೆ ಕೂಡ ಸಂತಾಪ ಸೂಚಿಸಲಾಯಿತು. ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‍ನ ಪ್ರಕಾಶ್ ರಾಥೋಡ್, ಪ್ರವಾಹದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಅಗಲಿದವರ ಕುಟುಂಬಕ್ಕೆ ಸ್ಥೈರ್ಯ ತುಂಬುವ ಕೆಲಸ ಆಗಬೇಕು ಎಂದರು.

Leave a Reply

Your email address will not be published. Required fields are marked *