ಕಮತಗಿ: ಪ್ರತಿಯೊಬ್ಬರೂ ಕಾನೂನು ತಿಳಿದುಕೊಳ್ಳುವುದು ಅವಶ್ಯ ಎಂದು ಬಾಗಲಕೋಟೆ ಜಿಲ್ಲಾ ಸತ್ರ ಮತ್ತು ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ದಿಡ್ಡಿ ಹೇಳಿದರು.
ಪಟ್ಟಣದ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಹುಚ್ಚೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ವಿದ್ಯಾರ್ಥಿಗಳಿಗೆ ಸೋಮವಾರ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾನೂನಿನ ಅರಿವು ಇದ್ದರೆ ಯಾವುದೇ ರೀತಿಯ ಮೋಸ, ವಂಚನೆಗೆ ಬಲಿಯಾಗುವುದಿಲ್ಲ ಎಂದರು.
ಸರಳವಾದ ಕನ್ನಡ ಭಾಷೆಯಲ್ಲೇ ಕಾನೂನುಗಳನ್ನು ತಿಳಿದುಕೊಳ್ಳಲು ಅವಕಾಶವಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಕನಿಷ್ಠ ಪ್ರಮಾಣದಲ್ಲಿ ಕಾನೂನು ಬಗ್ಗೆ ಓದಿಕೊಂಡು ಅರಿವು ಹೊಂದುವುದು ಇಂದಿನ ಅಗತ್ಯ. ಸಮಾಜ ಸೇವೆ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮುನ್ನೆಡೆದು ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹುಚ್ಚೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್.ವಿ. ಬಾಗೇವಾಡಿ ಮಾತನಾಡಿ, ಕಾನೂನು ಅರಿವುದು ಹೊಂದುವುದರಿಂದ ಸಮಾಜದಲ್ಲಿ ಆಗುವ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಿದೆ. ನ್ಯಾಯಾಲಯಗಳು ಇಂದಿನ ದಿನಗಳಲ್ಲಿ ಕಾನೂನುಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಕಾನೂನು ಅರಿವು-ನೆರವು ಕಾರ್ಯಕ್ರಮದ ಮೂಲಕ ಕಾನೂನು ತಿಳಿವಳಿಕೆ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ವಕೀಲ ಎಸ್.ಆರ್. ಮಾಲಾಪುರ, ಅಮೀನಗಡ ಪೊಲೀಸ್ ಠಾಣೆ ಎಎಸ್‌ಐ ವಿ.ವೈ.ಪಾಟೀಲ, ಉಪನ್ಯಾಸಕ ಬಿ.ಎಚ್. ಕಂಬಾಳಿಮಠ, ಬಿ.ವಿ. ಬೀರಕಬ್ಬಿ, ಆರ್.ಎಂ. ಗೌಡರ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎಸ್.ಕೆ. ಮುತ್ತಲಗೇರಿ ಇದ್ದರು.