ಶಿವಮೊಗ್ಗ: ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದರಿಂದ ಸಮಾಜದ ಸುಧಾರಣೆಗಿಂತಲೂ ಹೆಚ್ಚಾಗಿ ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡುತ್ತದೆ. ಇದರಿಂದ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಂಜುನಾಥ ನಾಯಕ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತದಿಂದ ಸೋಮವಾರ ಪ್ರೌಢಶಾಲೆ ಮುಖ್ಯ ಶಿಕ್ಷಕರು, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಚಾರ್ಯರಿಗೆ ಏರ್ಪಡಿಸಿದ್ದ ಪೋಕ್ಸೊ ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆಗಳ ಅನುಷ್ಠಾನದ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಗಳು ಜನಹಿತಕ್ಕಾಗಿ ಕಾಲಕಾಲಕ್ಕೆ ರೂಪಿಸಿ ಅನುಷ್ಠಾನಗೊಳಿಸುವ ಕಾಯ್ದೆ, ಕಾನೂನುಗಳ ಸಾಮಾನ್ಯ ಜ್ಞಾನ ಜನಸಾಮಾನ್ಯರಿಗೆ ಇರಬೇಕು. ಹಾಗೆಯೇ ಕಾಯ್ದೆಗಳು ದುರ್ಬಳಕೆ ಆಗದಂತೆ ತಡೆಯುವ ಅವಶ್ಯಕತೆ ಇದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಮಾತನಾಡಿದರು. ಡಿಡಿಪಿಯು ಚಂದ್ರಪ್ಪ ಎಸ್. ಗುಂಡಪಲ್ಲಿ, ಜಿಲ್ಲಾ ವಕೀಲರ ಸಂಘದ ಜಿ.ಆರ್.ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್.ಮಂಜುನಾಥ್, ನಾಗರತ್ನಮ್ಮ ಇದ್ದರು.