More

    ನಾನು ತವರು ಮನೆಗೆ ಬಂದುಬಿಟ್ಟಿದ್ದೇನೆ, ಗಂಡ ಅವರ ತಾಯಿಯನ್ನು ಬಿಟ್ಟು ಬರಲು ಏನು ಮಾಡಬೇಕು?

    ನಾನು ತವರು ಮನೆಗೆ ಬಂದುಬಿಟ್ಟಿದ್ದೇನೆ, ಗಂಡ ಅವರ ತಾಯಿಯನ್ನು ಬಿಟ್ಟು ಬರಲು ಏನು ಮಾಡಬೇಕು?ಪತ್ನಿಯನ್ನು ತ್ಯಜಿಸಿದ ಪತಿಗೂ ಆಸ್ತಿಯಲ್ಲಿ ಪಾಲು ಇದೆಯೇ?

    ಪ್ರಶ್ನೆ: ನಮ್ಮ ತಂದೆಯ ತಂಗಿ ಕರೋನಾದಿಂದ ತೀರಿಕೊಂಡು ಎರಡು ವರ್ಷಗಳಾಗಿವೆ. ಅವರು ಮದುವೆಯಾದ ಎರಡು ವರ್ಷದಲ್ಲೇ ಅವರ ಗಂಡ ಅವರನ್ನು ಬಿಟ್ಟು ಹೊರಟು ಹೋಗಿದ್ದರು. ನಮ್ಮ ಸೋದರತ್ತೆಗೆ ಮಕ್ಕಳಿಲ್ಲ. ಅವರು ಇನ್ನೊಂದು ಮದುವೆಯನ್ನೂ ಆಗಿಬಿಟ್ಟಿದ್ದಾರೆ ಎರಡನೆಯ ಮದುವೆಯಿಂದ ಅವರಿಗೆ ಎರಡು ಮಕ್ಕಳೂ ಇವೆ. ನಮ್ಮ ತಂದೆಯ ತಂಗಿ ವಿಧಿ ಇಲ್ಲದೇ ತವರಿಗೆ ಬಂದು ಸೇರಿಕೊಂಡರು. ನಮ್ಮ ತಂದೆ ಮತ್ತು ನಾನೇ ಅವರನ್ನು ಸಾಕುತ್ತಿದ್ದೆವು. ನಮ್ಮ ತಂದೆಯ ತಂಗಿಯನ್ನು ಅವರ ಗಂಡ ಬಿಟ್ಟ ಮೇಲೆ ನಮ್ಮ ತಂದೆಯೇ ಓದಿಸಿ ಕೆಲಸವನ್ನೂ ಕೊಡಿಸಿದ್ದರು. ಅವರು ತಮ್ಮ ಸಂಪಾದನೆಯಲ್ಲಿ ಎರಡು ಸೈಟುಗಳನ್ನೂ ಒಂದು ಮನೆಯನ್ನೂ ಮಾಡಿದ್ದಾರೆ. ಅವರ ಬ್ಯಾಂಕಿನ ಖಾತೆಯಲ್ಲಿ ಹಣವೂ ಇದೆ. ನಮ್ಮ ಸೋದರತ್ತೆ ವಿಲ್‌ ಮಾಡಿಲ್ಲ. ಈಗ ಅವರ ಗಂಡ ಬಂದು ಅವರ ಹೆಸರಿನಲ್ಲಿದ್ದ ಆಸ್ತಿಯೆಲ್ಲಾ ತಮಗೇ ಬರಬೇಕು ಎನ್ನುತ್ತಿದ್ದಾರೆ. ಇದು ನ್ಯಾಯವೇ? ಹೆಂಡತಿಯನ್ನು ಬಿಟ್ಟು ಇಪ್ಪತ್ತಾರು ವರ್ಷ ಆದ ಮೇಲೆ ಆಸ್ತಿ ಕೇಳಿದರೆ ನ್ಯಾಯಾಲಯ ಅವರಿಗೆ ಆಸ್ತಿ ಕೊಡುತ್ತದೆಯೇ?

    ಉತ್ತರ: ನಿಮ್ಮ ಸೋದರತ್ತೆ ತಮ್ಮ ಆಸ್ತಿಯನ್ನೆಲ್ಲಾ ನಿಮಗೋ ನಿಮ್ಮ ತಂದೆಗೋ ವಿಲ್‌ ಮಾಡಿದ್ದರೆ ಅವರ ಆಸ್ತಿ ಎಲ್ಲಾ ನಿಮಗೇ ಸೇರುತ್ತಿತ್ತು. ಅಥವಾ ನಿಮ್ಮ ಸೋದರತ್ತೆ ಗಂಡನಿಂದ ವಿಚ್ಛೇದನ ಪಡೆದಿದ್ದರೂ , ಅವರು ತೀರಿಕೊಂಡ ನಂತರ, ಅವರ ಆಸ್ತಿ ಅವರ ವಿಚ್ಛೇದಿತ ಗಂಡನಿಗೆ ಹೋಗುತ್ತಿರಲಿಲ್ಲ. ಈಗ ಏನೂ ಮಾಡಲು ಆಗುವುದಿಲ್ಲ. ಕಾನೂನಿನ ಪ್ರಕಾರ ಅವರ ಆಸ್ತಿ ಎಲ್ಲಾ ನಿಮ್ಮ ಸೋದರತ್ತೆಯ ಗಂಡನಿಗೇ ಸಲ್ಲುತ್ತದೆ. ನೀವು ಕೂತು ರಾಜಿ ಕ್ರಮದಿಂದ ನಿಮಗೂ ಸ್ವಲ್ಪ ಕೊಡುವಂತೆ ಮಾತಾಡಲು ಪ್ರಯತ್ನಿಸುವುದು ಒಳ್ಳೆಯದು.

    ಗಂಡ ಅತ್ತೆಯನ್ನು ಬಿಟ್ಟು ಬರಲು ಏನು ಮಾಡಬೇಕು?

    ಪ್ರಶ್ನೆ: ನನ್ನ ಮತ್ತು ನನ್ನ ಗಂಡನ ಮಧ್ಯೆ ಬಹಳಷ್ಟು ವಿಷಯಗಳಲ್ಲಿ ಮನಸ್ತಾಪವಿದೆ. ಎಲ್ಲ ವಿಷಯಕ್ಕೂ ನಮ್ಮ ಅತ್ತೆ ಮೂಗು ತೂರಿಸುತ್ತಾರೆ. ಇದರಿಂದ ಜಗಳ ಹೆಚ್ಚುತ್ತಿದೆ. ನಾನು ನಮ್ಮ ತವರಿಗೆ ಬಂದುಬಿಟ್ಟಿದ್ದೇನೆ. ನನ್ನ ಗಂಡ ಅವರ ತಾಯಿಯನ್ನು ಬಿಡುವುದಿಲ್ಲ ಎನ್ನುತ್ತಿದ್ದಾರೆ. ನನಗೆ ಅವರ ತಾಯಿಯ ಜೊತೆ ಬದುಕಲು ಸಾಧ್ಯವೇ ಇಲ್ಲ . ನಮಗೆ ಎರಡು ಮಕ್ಕಳಿದೆ. ನನ್ನ ಗಂಡ ಶ್ರೀಮಂತರಾದರೂ ತಾಯಿಯ ಮಾತೇ ಕೇಳಿಕೊಂಡು ನನಗೂ ಮಕ್ಕಳಿಗೂ ಯಾವ ಸ್ವಾತಂತ್ರ್ಯವನ್ನೂ ಕೊಡುವುದಿಲ್ಲ. ಎಲ್ಲಕ್ಕೂ ನಾನು ನಮ್ಮ ಅತ್ತೆಯನ್ನೇ ಕೇಳಬೇಕು. ಈಗ ನಾನು ಅತ್ತೆಯಿಂದ ದೂರವಾಗಬೇಕು ಮತ್ತು ನನ್ನ ಗಂಡನ ಜೊತೆ ಇರಬೇಕು ಎಂದರೆ ಏನು ಮಾಡಬೇಕು? ನಾನು ಡಿ.ವಿ ಕೇಸು ಹಾಕಿದರೆ ಏನಾದರೂ ಪ್ರಯೋಜನ ಆಗುತ್ತದೆಯೇ?

    ಉತ್ತರ: ನಿಮ್ಮ ಅತ್ತೆಯಿಂದ ದೂರವಾಗ ಬೇಕು ಎಂದರೆ ಅದು ನಿಮ್ಮ ವೈಯಕ್ತಿಕ ನಿರ್ಧಾರ. ನೀವು ಬೇರೆ ಉಳಿಯಬಹುದು. ಆದರೆ ನಿಮ್ಮ ಪತಿ ತನ್ನ ತಾಯಿಯನ್ನು ಬಿಟ್ಟು ನಿಮ್ಮ ಜೊತೆಗೇ ಸಂಸಾರ ಮಾಡಬೇಕು ಎಂದು ಕೋರ್ಟಿನಲ್ಲಿ ನೀವು ಆದೇಶ ಪಡೆಯಲು ಆಗುವುದಿಲ್ಲ. ನಿಮ್ಮ ಪತಿ, ತನ್ನ ತಾಯಿಯನ್ನು ಹಾಗೂ ನಿಮ್ಮನ್ನು ಹೇಗೆ ಸಂತೋಷವಾಗಿಡಬೇಕು ಎನ್ನುವ ಬಗ್ಗೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

    ನಿಮ್ಮ ಅತ್ತೆಯಿಂದ ನಿಮಗೆ ಕಿರುಕುಳ ಆಗುತ್ತಿದೆ ಎಂದು ನೀವು ಡಿ.ವಿ. ಕೇಸನ್ನು ಹಾಕಬಹುದು. ಆದರೆ, ಅದರಿಂದ ನಿಮ್ಮ ಪತಿ ನಿಮ್ಮ ಜೊತೆ ಬಂದು ಜೀವನ ನಡೆಸುತ್ತಾರೆ ಎನ್ನುವುದಕ್ಕೆ ಗ್ಯಾರಂಟಿ ಇಲ್ಲ. ಹೀಗಾಗಿ ನೀವು ಏಕಾಏಕಿ ಕೇಸು ಹಾಕುವ ಬದಲು ನಿಮ್ಮ ಊರಿನ , ನ್ಯಾಯಾಲಯದಲ್ಲಿ ಇರುವ ಮಧ್ಯಸ್ಥಿಕೆ ಕೇಂದ್ರಕ್ಕೆ ಒಂದು ಅರ್ಜಿ ಕೊಡಿ. ನಿಮ್ಮ, ನಿಮ್ಮ ಪತಿಯ ಮತ್ತು ನಿಮ್ಮ ಅತ್ತೆಯವರ ನಡುವೆ ಕೆಲವು ಮನಸ್ತಾಪಗಳು ಇವೆ. ಅವನ್ನು ಮಧ್ಯಸ್ಥಿಕೆಯ ಮೂಲಕ ಪರಿಹರಿಸಿಕೊಡಿ ಎಂದು ಮಾತ್ರ ಕೇಳಿಕೊಳ್ಳಿ. ನಿಮ್ಮ ಎಲ್ಲರನ್ನೂ ಮಧ್ಯಸ್ಥಿಕೆ ಕೇಂದ್ರದವರು ಕರೆಸಿ ಮಾತಾಡುತ್ತಾರೆ. ಆಗ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಬಹುದು. ಏನೂ ಪ್ರಯೋಜನ ಆಗದಿದ್ದರೆ ಆ ನಂತರ ಕೇಸು ಹಾಕಲು ಮುಂದಾಗಿ.

    (ಲೇಖಕಿ ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಮತ್ತು ಹಿರಿಯ ಮಧ್ಯಸ್ಥಿಕೆಗಾರರು)

    ನಮ್ಮಲ್ಲೇ ಮೊದಲು: ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ-ತಂತ್ರಜ್ಞಾನ ಬಳಸಿ ಬರೆದ ಸುದ್ದಿ; ಇದು ಸಮಸ್ತ ಹಿರಿಯ ನಾಗರಿಕರಿಗೆ ಅರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts