ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯು ಕಿರುಕುಳ ತಪ್ಪಿಸಿ

ತರೀಕೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯು ಡಾ. ಎಚ್.ಪಿ.ತಬ್ಸಮ್ ನಾಜ್ ದುರ್ವತನೆ ತೋರುತ್ತಿದ್ದಾರೆ ಎಂದು ಆರೋಪಿಸಿ ಅತಿಥಿ ಉಪನ್ಯಾಸಕರು ಕಾಲೇಜು ಎದುರು ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಅತಿಥಿ ಉಪನ್ಯಾಸಕ ರಮೇಶ್ ಬರ್ಗೆ ಮಾತನಾಡಿ, ಡಾ. ಎಚ್.ಪಿ.ತಬ್ಸಮ್ ನಾಜ್ ಅತಿಥಿ ಉಪನ್ಯಾಸಕರ ವಿರುದ್ಧ ಹಗೆ ಸಾಧಿಸುತ್ತಿದ್ದು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಈ ಮೂಲಕ ನಮ್ಮ ಆಸಕ್ತಿ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಲೇಜಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಅತಿಥಿ ಉಪನ್ಯಾಸಕರನ್ನು ಆಹ್ವಾನಿಸದೆ ಕಡೆಗಣಿಸುತ್ತಿದ್ದು ಸಿಬ್ಬಂದಿ ಕೊಠಡಿಗೆ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದಾರೆ. ಪ್ರಾಚಾರ್ಯುಯ ಧೋರಣೆಯಿಂದ ಕನಿಷ್ಠ ಸೌಕರ್ಯ ಪಡೆದುಕೊಳ್ಳಲು ಹರಸಾಹಸ ಪಡುವಂತಾಗಿದೆ. ಇದರಿಂದ ನಮ್ಮನ್ನು ಮುಕ್ತಗೊಳಿಸಬೇಕೆಂದು ಮನವಿ ಮಾಡಿದರು.

ಅತಿಥಿ ಉಪನ್ಯಾಸಕಿ ಎಂ.ಅಂಬಿಕಾ ಮಾತನಾಡಿ, ಡಾ. ಎಚ್.ಪಿ.ತಬ್ಸಮ್ ನಾಜ್ ಉಪಟಳ ಹೆಚ್ಚುತ್ತಿದ್ದು, ಮಹಿಳೆಯರೆನ್ನುವ ಮನೋಭಾವವೂ ಅವರಲ್ಲಿ ಇಲ್ಲದಂತಾಗಿದೆ. ಅತಿಥಿ ಉಪನ್ಯಾಸಕರಿಗೆ ವೈಯಕ್ತಿಕವಾಗಿ ನಿಂದಿಸುವುದಲ್ಲದೆ, ಅವರ ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅವರ ವಿರುದ್ಧ ಶಿವಮೊಗ್ಗದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ದುರ್ವರ್ತನೆ ಹೀಗೇ ಮುಂದವರಿಸಿದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅತಿಥಿ ಉಪನ್ಯಾಸಕರಾದ ಪಿ.ಮೃತ್ಯುಂಜಯ, ಬಿ.ಶಿವಕುಮಾರ್, ಎಚ್.ಮೋಹನ್​ಕುಮಾರ್, ಎಸ್.ರಾಮಚಂದ್ರನಾಯ್ಕ, ಮಂಜುನಾಥ್, ಸಂಪತ್, ಎಚ್.ಬಿ.ನಾಗವೇಣಿ, ಮಾನಸಾ, ಚಂದ್ರಿಕಾ, ಸ್ನೇಹಾ, ಎನ್.ಆಶಾ, ಡಾ. ಎಸ್.ಸವಿತಾ, ಸಿ.ಎಚ್.ಶ್ವೇತಾ, ಡಾ. ಶೋಭನಾ, ಎನ್.ಶ್ವೇತಾ, ಎನ್.ಚಂದ್ರಕಲಾ, ಎನ್.ಇಂದಿರಾ, ಸಿ.ಮಂಜುಳಾ, ಬಿ.ಪಿ.ವಿದ್ಯಾ ಇತರರಿದ್ದರು.

Leave a Reply

Your email address will not be published. Required fields are marked *