ರೆಸಾರ್ಟ್ ರಾಜಕೀಯ ನಡೆಯಲಿ ಬಿಡಿ

ಮಲೆಮಹದೇಶ್ವರ ಬೆಟ್ಟ: ರೆಸಾರ್ಟ್‌ಗಳೂ ನಡೆಯಬೇಕಲ್ಲ. ಆದ್ದರಿಂದ ರೆಸಾರ್ಟ್ ರಾಜಕೀಯ ನಡೆಯಲಿ ಬಿಡಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಸುತ್ತೂರು ಮಠದ ವತಿಯಿಂದ ನಿರ್ಮಾಣವಾಗಿರುವ ಅತಿಥಿಗೃಹ ಮತ್ತು ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ನೂತನ ಜೇನು ಮಲೆ ಅತಿಥಿಗೃಹ ಉದ್ಘಾಟಿಸಲು ಶುಕ್ರವಾರ ಬೆಟ್ಟಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ಆರಂಭವಾಗಿದೆಯೆಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ರೆಸಾರ್ಟ್ ರಾಜಕೀಯದ ಬಗ್ಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಜಲ ಸಂಪನ್ಮೂಲ ಸಚಿವ. ಡಿ.ಕೆ.ಶಿವಕುಮಾರ್ ಭೇಟಿಯಾಗಿರುವ ಬಗ್ಗೆ ಅವರಿಬ್ಬರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆ ಕುರಿತು ಹೇಳುವುದು ಏನು ಇಲ್ಲ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ರಚಿಸಿದ್ದರು. ಇದಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಬೆಟ್ಟದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಾಧಿಕಾರದ ಸಭೆ ನಡೆಸಲಾಗುತ್ತದೆ ಎಂದು ಹೇಳಿದರು.

ನಂತರ ಮಹದೇಶ್ವರ ದೇವಸ್ಥಾನಕ್ಕೆ ತೆರಳಿ ಮಹದೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸಮೀಪವೇ ಇದ್ದ ನೂತನ ಅಂಗಡಿ ಮಳಿಗೆಗಳನ್ನು ಉದ್ಘಾಟಿಸಿದರು. ಬಳಿಕ ಸುತ್ತೂರು ಮಠದ ಅತಿಥಿಗೃಹವನ್ನು ಟೇಪ್ ಕತ್ತರಿಸಿ ಉದ್ಘಾಟಿಸಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ, ಸಂಸದ ಆರ್. ಧ್ರುವನಾರಾಯಣ, ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ಸಿ.ಎಸ್.ನಿರಂಜನಕುಮಾರ್, ಜಿಪಂ ಅಧ್ಯಕ್ಷೆ ಶಿವಮ್ಮ, ಸಿಇಒ ಡಾ.ಕೆ.ಹರೀಶಕುಮಾರ್, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ದಕ್ಷಿಣ ವಲಯ ಐಜಿ ಶರತ್‌ಚಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ, ಉಪ ವಿಭಾಗಾಧಿಕಾರಿ ಫೌಜಿಯಾ ತರನ್ನುಮ್ ಇತರರಿದ್ದರು.