ಹನಗೋಡು: ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಕಲಿಕಾ ಹಬ್ಬ ಸೂಕ್ತ ವೇದಿಕೆ ಎಂದು ಹುಣಸೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಶಿಕುಮಾರ್ ಅಭಿಪ್ರಾಯಪಟ್ಟರು.
ಹನಗೋಡು ಹೋಬಳಿಯ ಹಿಂಡಗುಡ್ಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ದೊಡ್ಡಹೆಜ್ಜೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಶಿಕ್ಷಣ ಇಲಾಖೆಯ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಶಾಲೆಗಳಲ್ಲಿ ಆಯೋಜಿಸುವ ಕಲಿಕಾ ಹಬ್ಬ ಕಾರ್ಯಕ್ರಮ ಮಕ್ಕಳಲ್ಲಿ ಶೈಕ್ಷಣಿಕ ಬಲವಧರ್ನೆ ಹಾಗೂ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ವೃದ್ಧಿಸುತ್ತದೆ. ಇದಲ್ಲದೆ ಮಕ್ಕಳ ಪ್ರತಿಭೆ ಗುರುತಿಸಲು ಸೂಕ್ತ ವೇದಿಕೆ ಕಲ್ಪಿಸುತ್ತದೆ. ಇಂತಹ ಕಾರ್ಯಕ್ರಮಗಳನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತಿ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿರಂತರವಾಗಿ ಕಲಿಯುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಕಲಿಕಾ ಹಬ್ಬವು ಮಕ್ಕಳಲ್ಲಿ ಹೊಸ ಉತ್ಸಾಹ ಮೂಡಿಸುತ್ತದೆ. ಮಕ್ಕಳಿಗೆ ಪ್ರಶ್ನೆ ಮಾಡುವ ಹಾಗೂ ಶೈಕ್ಷಣಿಕ ಮನೋಭಾವ ವೃದ್ಧಿಸುವ ಜತೆಗೆ ಭಾವೈಕ್ಯ ಮೂಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ದೊಡ್ಡಹೆಜ್ಜೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶ್ರೀನಿವಾಸಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೊಡ್ಡಹೆಜ್ಜೂರು ಗ್ರಾಪಂ ಅಧ್ಯಕ್ಷೆ ಅಂಬಿಕಾ ಲೋಕೇಶ್, ಕಿರಂಗೂರು ಗ್ರಾ.ಪಂ. ಅಧ್ಯಕ್ಷ ದಾಸನಪುರ ಹರೀಶ್, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಚೇತನ್, ದಿನೇಶ್, ಯಜಮಾನ್ ಶಿವಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ನಿರ್ದೇಶಕ ಮಂಜುನಾಥ್ ಸಿಆರ್‌ಪಿಗಳಾದ ಕೇಶವ, ಲಾವಣ್ಯಾ, ಶಿಕ್ಷಕರಾದ ಲಿಂಗರಾಜು, ರವಿರಾಜ್, ಸಿದ್ದರಾಜು, ಗೀತಾ, ಸುಮಾ, ಕುಸುಮಾ, ಮಮತಾ, ನವಾಬಖಾನ್ ಇದ್ದರು.