ಸಾವಿರಾರು ಹಣತೆಗಳನ್ನು ಹಚ್ಚಿದ ನಂದಾದೀಪ

| ಡಾ. ನಿರಂಜನ ವಾನಳ್ಳಿ

ಮೈಸೂರಿನಿಂದ ಬಂದ ಸಂದೇಶವೊಂದು ಸ್ವಾಮಿ ಜಗದಾತ್ಮಾನಂದಜೀಯವರು ನಿಧನರಾದ ಸುದ್ದಿ ತಿಳಿಸಿತು. ಅವರ ದೈಹಿಕ ತೊಂದರೆಗಳ ವಿಷಯ ಬಲ್ಲವರಿಗೆ ಇದು ಅನಿರೀಕ್ಷಿತವಾಗಿರಲಿಲ್ಲ. ಅವರದು ಎಂಟು ದಶಕಗಳ ಸಾರ್ಥಕ ಬದುಕು; ಇತರರಿಗೆ ಮಾದರಿಯಾದ, ಪ್ರೇರಣಾದಾಯಿಯಾದ ಬದುಕು.

ನಾನು ಏಳನೇ ತರಗತಿಯ ಬಾಲಕನಾಗಿ ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲೆಯನ್ನು ಪ್ರವೇಶಿಸಿದಾಗ ಸ್ವಾಮಿ ಜಗದಾತ್ಮಾನಂದರನ್ನು ಕಂಡು ಮೊದಲ ನೋಟಕ್ಕೇ ಅಚ್ಚರಿಗೊಂಡಿದ್ದೆ. ಅಷ್ಟು ಎತ್ತರದ, ಕಟ್ಟುಮಸ್ತಾದ ಆಳು ಅವರು. ದೇಹಕ್ಕೆ ತಕ್ಕ ಧ್ವನಿ. ಸಿಂಹಘರ್ಜನೆಯ ಕಂಠ. ಮುಂಡಾಸು ಸುತ್ತಿ ನಿಂತರೆ ವಿವೇಕಾನಂದರನ್ನೇ ಜ್ಞಾಪಿಸುತ್ತಿದ್ದರು. ಅವರನ್ನು ಡಾಕ್ಟರ್ ಸ್ವಾಮೀಜಿಯೆಂದು ಕರೆಯುತ್ತಿದ್ದೆವು. ಯಾಕೆಂದರೆ ಅವರು ವಿದ್ಯಾಶಾಲೆ ಆಸ್ಪತ್ರೆಯ ಉಸ್ತುವಾರಿಯಾಗಿದ್ದರು. ಅಲ್ಲಿ ಮಕ್ಕಳಿಗೆ ನೀಡುವ ಮಾತ್ರೆಗಿಂತ ನೀಡುತ್ತಿದ್ದ ಕೌನ್ಸೆಲಿಂಗ್ ಮುಖ್ಯವಾಗಿತ್ತು ಎಂದು ಈಗ ಅನಿಸುತ್ತದೆ. ಯಾರಾದರೂ ಕೆಮ್ಮು ಜ್ವರವೆಂದು ಬಂದರೆ ‘ಎಲ್ಕೋ ತಗೋ ಮಲ್ಕೊ’ ಎನ್ನುತ್ತಿದ್ದರು! ಹೀಗೆ ಪ್ರಾಸಬದ್ಧವಾಗಿ ಮಾತಾಡುವುದರಲ್ಲಿ ಅವರು ನಿಷ್ಣಾತರು.

ನಾವು ಶಾಲೆಗೆ ಸೇರಿದ ಮೇಲೆ ಅರ್ಥವಾದುದು ಅವರು ಪ್ರಸಿದ್ಧ ವಾಗ್ಮಿಗಳೂ ಆಗಿದ್ದರು ಎಂದು. ಜನರಲ್ಲಿ ರೋಮಾಂಚನವನ್ನುಂಟುಮಾಡುವ ಮಾತುಗಾರಿಕೆ ಅವರದು. ಶ್ರೀರಾಮಕೃಷ್ಣ ಮತ್ತು ವಿವೇಕಾನಂದರ ಜೀವನಗಳಲ್ಲದೇ ಜಗತ್ತಿನ ವಿವಿಧ ಸಾಧಕರ ಬದುಕಿನ ಅನುಭವಗಳಿಂದಾಯ್ದು ಅವರು ನೀಡುತ್ತಿದ್ದ ಉದಾಹರಣೆಗಳು ಜನರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಿದ್ದವು. ಧ್ವನಿಯ ಏರಿಳಿತ, ನಾಟಕೀಯ ಹಾವಭಾವ, ಮುಖ್ಯವಾಗಿ ಸೂಕ್ಷ್ಮ ದೃಷ್ಟಿ ಕೇಳುಗರಲ್ಲಿ ಧನಾತ್ಮಕ ಎನರ್ಜಿ ಬೆಳೆಸುತ್ತಿದ್ದವು. ಡಾಕ್ಟರ್ ಸ್ವಾಮೀಜಿ ಮಕ್ಕಳಲ್ಲಿ ಮರೆಯಲಾರದ ಛಾಪು ಮೂಡಿಸಿದ್ದು ರಾತ್ರಿ ಹೇಳುತ್ತಿದ್ದ ಕತೆಗಳ ಮೂಲಕ. ರಾತ್ರಿ 9.30ಕ್ಕೆ ‘ಕಥೆ ಬೇಕಾ’ ಅಂತ ಇಂಟರ್ ಕಾಮ್ಲ್ಲಿ ಅವರು ಉಸುರಿದಾಗ ಮಲಗಲು ಹೊರಟ ಮಕ್ಕಳು ಎದ್ದು ಕುಳಿತಿರುತ್ತಿದ್ದೆವು. ಅವರ ಕಥೆಗಳಲ್ಲಿ ಎಡ್ಗರ್ ಕೇಸಿ ಬರುತ್ತಿದ್ದ, ಬಮುಡಾ ಟ್ರಯಾಂಗಲ್ ಬರುತ್ತಿತ್ತು. ನಾವೆಲ್ಲ ಕಣ್ಣು ಬಾಯಿ ಬಿಟ್ಟುಕೊಂಡು ಕೇಳಿದರೆ ರಾತ್ರಿ ಕನಸಲ್ಲಿ ಸ್ವಾಮೀಜಿ ಹೇಳಿದ ಕಥೆಯ ದೃಶ್ಯಗಳು ರಿಪೀಟ್ ಆಗುತ್ತಿದ್ದವು.

ಅವರು ಅನೇಕ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಆಸ್ಪತ್ರೆಯಲ್ಲಿ ಡಾಕ್ಟರ್ ಸ್ವಾಮೀಜಿಯಾದರೆ, ಬೆಳಗಿನ ಪ್ರಾರ್ಥನೆಗೆ ಅವರೇ ಸೂತ್ರಧಾರರು. ಹಾಮೋನಿಯಂ ಹಿಡಿದು ‘ಜಯ ವಿವೇಕಾನಂದ ಗುರುವರ’ ಎಂದು ಹಾಡಿದರೆಂದರೆ ಇಡೀ ಯಾದವಗಿರಿ ಮೊಳಗುತ್ತಿತ್ತು. ಪ್ರಾರ್ಥನೆಯ ಬಳಿಕ ಮಕ್ಕಳಿಗೆ ಧ್ಯಾನಮಾಡುವುದನ್ನು ಕಲಿಸುತ್ತಿದ್ದರು. ದೀರ್ಘ ಶ್ವಾಸ ತೆಗೆದುಕೊಳ್ಳಿ ಎಂದು ಆರಂಭಗೊಳ್ಳುವ ಕ್ರಿಯೆಯಲ್ಲಿ ಅವರು ಮಕ್ಕಳನ್ನು ಹಿಪ್ನೊಟೈಸ್ ಮಾಡುತ್ತಿದ್ದರು. ‘ಪ್ರತಿ ಆತ್ಮವೂ ದೈವಿಕ’ ಎಂಬ ವಿವೇಕಾನಂದರ ವಾಣಿಯನ್ನು ಪದೇಪದೆ ಹೇಳುವ ಮೂಲಕ ನಮ್ಮನ್ನು ಅಂತರಾಳದೊಳಗೆ ಕೊಂಡೊಯ್ಯುತ್ತಿದ್ದರು. ರಾಗ ದ್ವೇಷಗಳು ಮನಸ್ಸಿನಿಂದ ಹೊರಹೋಗಲಿ, ಒಳ್ಳೆಯ ಆಲೋಚನೆಗಳು ಒಳಬರಲಿ ಎನ್ನುತ್ತಾ ನಮ್ಮನ್ನ ಸಂಪೂರ್ಣ ಎಳೆದುಕೊಳ್ಳುತ್ತಿದ್ದರು. ಒಳ್ಳೆಯ ಭಾವನೆಗಳನ್ನು ಮನದೊಳಗೆ ಬಿತ್ತುತ್ತಿದ್ದರು. ವಿದ್ಯಾಶಾಲೆಯ ಜೀವನ ಇತರ ಆವಾಸಿ ಶಾಲೆಗಳಿಗಿಂತ ಹೇಗೆ ಭಿನ್ನವೆಂದು ಯೋಚಿಸಿದರೆ ಅದರಲ್ಲಿ ಸ್ವಾಮೀಜಿ ಪಾತ್ರ ಮುಖ್ಯವೆನಿಸುತ್ತದೆ. ಅದರಲ್ಲೂ ಜಗದಾತ್ಮಾನಂದಜೀಯವರು ಹೇಳಿದ ಕಥೆಗಳು, ಕಲಿಸಿದ ಗುಣಗಳು, ಬೇಕಾದಾಗ ಹಿಡಿಯುತ್ತಿದ್ದ ಬೆತ್ತವೂ ನಮ್ಮ ಬದುಕಲ್ಲಿ ಬದಲಾವಣೆಯನ್ನು ತಂದಿದೆ.

ಸ್ವಾಮೀಜಿಯವರ ಭಾಷಣದ ಹಾಗೆ ಅವರ ‘ಬದುಕಲಿ ಕಲಿಯಿರಿ’ ಕೃತಿ ಬಹಳ ಜನಪ್ರಿಯವಾದುದು. ಕನ್ನಡದಲ್ಲಿ ಅತಿಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ಇದೂ ಒಂದು. ಹತ್ತಾರು ಭಾರತೀಯ ಭಾಷೆಗಳಿಗೆ ಭಾಷಾಂತರಗೊಂಡ ಈ ಪುಸ್ತಕ ಇನ್ನೂ ಮಾರಾಟವಾಗುತ್ತಲೇ ಇದೆ. ಇದರ ವಿಶೇಷವೆಂದರೆ ಹಲವು ಜೀವಂತ ಉದಾಹರಣೆಗಳ ಮೂಲಕ ಧನಾತ್ಮಕ ಚಿಂತನೆಯನ್ನು ಬೆಳೆಸುವುದು. ಇಲ್ಲಿ ಅವರು ಉಪದೇಶ ಮಾಡುವುದಿಲ್ಲ. ಉನ್ನತ ಆದರ್ಶಗಳನ್ನು ಓದುಗರೆದುರು ತೆರೆದಿಡುತ್ತಾರೆ. ಇದನ್ನು ಓದಿ ಆತ್ಮಹತ್ಯೆ ಯೋಚನೆ ಕೈಬಿಟ್ಟವರೆಷ್ಟೋ ಜನ. ಸಾವಿರಾರು ಜನರ ಬದುಕಿನಲ್ಲಿ ತಿರುವು ತಂದ ಗ್ರಂಥವಿದು. ಒಂದು ಕೃತಿಯ ಸಾರ್ಥಕತೆ ಇದೇ ಅಲ್ಲವೇ?

ಹಿಂದು ಧರ್ಮ ಅಧಃಪತನಗೊಳ್ಳುತ್ತಿರುವ ಬಗ್ಗೆ, ಹಿಂದುಗಳ ಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಅವರಿಗೆ ಸಂಕಟವಿತ್ತು. ಬುದ್ಧಿಜೀವಿಗಳೆನಿಸಿಕೊಂಡವರು ಹಿಂದು ಧರ್ಮವನ್ನು ಅರ್ಥ ಮಾಡಿಕೊಳ್ಳದೇ, ಓದದೇ, ಟೀಕಿಸುವ ಬಗ್ಗೆ ವಿಷಾದವಿತ್ತು. ಕೆಲವು ವರ್ಷಗಳಿಂದ ಅವರನ್ನು ಕ್ಯಾನ್ಸರ್ ಕಾಡುತ್ತಿತ್ತು. ಇದರಿಂದಾಗಿ ಅವರು ಮೊದಲಿನಂತೆ ಪರಿಣಾಮಕಾರಿಯಾಗಿ ಮಾತನಾಡಲು ಆಗುತ್ತಿರಲಿಲ್ಲ. ಆದರೂ ಅವರ ಚಿಂತನೆಗಳಲ್ಲಿ ಸ್ಪಷ್ಟತೆಯಿತ್ತು, ಪ್ರಖರತೆಯಿತ್ತು. ಮಾನಸಿಕವಾಗಿ ಜೀವನೋತ್ಸಾಹ ಕುಂದಿರಲಿಲ್ಲ. ಪೊನ್ನಂಪೇಟೆಯಂಥ ಮೂಲೆಯಲ್ಲಿದ್ದರೂ ದೂರದೂರದಿಂದ ಜನ ಅವರನ್ನು ನೋಡಲು, ಅವರಿಂದ ಸ್ಪೂರ್ತಿ ಪಡೆಯಲು ಬರುತ್ತಿದ್ದರು. ಜಗದಾತ್ಮಾನಂದಜೀ ಜಗನ್ನಿಯಾಮಕನ ಕರೆಗೆ ಓಗೊಟ್ಟಿದ್ದಾರೆ. ಇನ್ನು ಅವರು ನೆನಪು ಮಾತ್ರ. ಆದರೆ ಅದೊಂದು ಆರದ ಬೆಳಕು. ಸಾವಿರಾರು ಹಣತೆಗಳನ್ನು ಹಚ್ಚಿದ ದೀಪಕ್ಕೆ ನಂದಿಹೋಗುವ ಭಯವೆಲ್ಲಿಯದು?

(ಲೇಖಕರು ತಜಕಿಸ್ತಾನ ದುಶಾಂಬೆಯ ಭಾರತೀಯ ಎಂಬೆಸಿಯ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರು)

ದಾಖಲೆ ಬರೆದ ಕೃತಿ

ಕನ್ನಡ ಪುಸ್ತಕೋದ್ಯಮದಲ್ಲಿ ಸನ್ಯಾಸಿಯೊಬ್ಬರು ಬರೆದ ಕೃತಿ ದಾಖಲೆ ನಿರ್ವಿುಸಿದೆ ಎಂದರೆ ಅದು ‘ಬದುಕಲು ಕಲಿಯಿರಿ’ ಕೃತಿ. ಒಟ್ಟಾರೆ 4 ಲಕ್ಷ ಪ್ರತಿ ಮಾರಾಟವಾಗಿ ದಾಖಲೆ ಬರೆದ ವ್ಯಕ್ತಿತ್ವ ನಿರ್ಮಾಣ ಪುಸ್ತಕವಿದು. ಜಗದಾತ್ಮಾನಂದರು ಈ ಕೃತಿ ಬರೆದು 35 ವರ್ಷ ಕಳೆದ ಸವಿನೆನಪಿಗಾಗಿ ಬೆಂಗಳೂರಿನಲ್ಲಿ ಕಳೆದ ವರ್ಷ ವಾಗ್ದೇವಿ ವಿಲಾಸ ಶಾಲೆ ಸಹಯೋಗದಲ್ಲಿ ಅದ್ದೂರಿ ಸಮಾರಂಭ ನಡೆದಿತ್ತು.

ಅಂತಿಮ ದರ್ಶನಕ್ಕೆ ಅವಕಾಶ

ಸ್ವಾಮಿ ಜಗದಾತ್ಮಾನಂದಜೀ ಅವರ ಅಂತಿಮ ದರ್ಶನಕ್ಕೆ ಮೈಸೂರಿನ ಕೆ.ಆರ್.ಎಸ್ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮದ ರಿಮ್ಸೆಯಲ್ಲಿ ನ.16ರಂದು ಬೆಳಗ್ಗೆ 6ರಿಂದ 10 ಗಂಟೆವರೆಗೆ ಅವಕಾಶ ಮಾಡಿಕೊಡಲಾಗಿದೆ. ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕೊಡಗು ಜಿಲ್ಲೆ ಪೊನ್ನಂಪೇಟೆಯಲ್ಲಿರುವ ಶ್ರೀರಾಮಕೃಷ್ಣ ಶಾರದಾಶ್ರಮದಲ್ಲಿ ವ್ಯವಸ್ಥೆ ಮಾಡಿದ್ದು, ಬಳಿಕ ಅದೇ ಆವರಣದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ.

ಶ್ರೇಷ್ಠ ವಿದ್ವಾಂಸ, ಮಾರ್ಗದರ್ಶಕ ಜಗದಾತ್ಮಾನಂದಜೀ ಇನ್ನಿಲ್ಲ

ವಿದ್ವತ್ಪೂರ್ಣ ಉಪನ್ಯಾಸಗಳು ಮತ್ತು ‘ಬದುಕಲು ಕಲಿಯಿರಿ’ ಕೃತಿ ಮೂಲಕ ನಾಡಿನಾದ್ಯಂತ ಹೆಸರುಮಾಡಿ, ಸಾವಿರಾರು ಜನರಿಗೆ ಮಾರ್ಗದರ್ಶಕರಾಗಿದ್ದ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ವಿಶ್ರಾಂತ ಸ್ವಾಮೀಜಿ ಸ್ವಾಮಿ ಜಗದಾತ್ಮಾನಂದಜೀ ಮಹಾರಾಜ್ (90) ಇನ್ನಿಲ್ಲ. ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ 7.30ಕ್ಕೆ ವಿಧಿವಶರಾದರು. ನ್ಯೂಮೋನಿಯ ಕಾಯಿಲೆಯಿಂದ ಬಳಲುತ್ತಿದ್ದ ಸ್ವಾಮೀಜಿ ಕಳೆದೊಂದು ತಿಂಗಳಿನಿಂದ ತುರ್ತಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಸ್ವಾಮಿ ಜಗದಾತ್ಮಾನಂದಜೀ ಶ್ರೀರಾಮಕೃಷ್ಣ ಮಹಾಸಂಘದ ಹಿರಿಯ ಸನ್ಯಾಸಿಗಳು. ಶ್ರೀರಾಮಕೃಷ್ಣರು, ಶ್ರೀಮಾತೆ ಶಾರದಾದೇವಿ, ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳಿಂದ ಸ್ಪೂರ್ತಿ ಪಡೆದ ಸ್ವಾಮೀಜಿ 1960 ರಲ್ಲಿ ಬೆಂಗಳೂರಿನ ಶಾಖೆಯಲ್ಲಿ ರಾಮಕೃಷ್ಣ ಸಂಘ ಸೇರಿದರು. ಸಂಘದ ಉಪಾಧ್ಯಕ್ಷರೂ, ಬೆಂಗಳೂರು ಕೇಂದ್ರದ ಅಧ್ಯಕ್ಷರೂ ಆದ ಸ್ವಾಮಿ ಯತೀಶ್ವರಾನಂದಜೀ ಮಹಾರಾಜರ ಪ್ರೇಮಪೂರ್ಣ ಆರೈಕೆ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ ಪಡೆದು ಬೆಳೆಯುವ ಸೌಭಾಗ್ಯ ಇವರದಾಗಿತ್ತು. ಮಂತ್ರ ದೀಕ್ಷೆಯನ್ನು ಸ್ವಾಮಿ ಯತೀಶ್ವರಾನಂದರಿಂದಲೂ, ಸನ್ಯಾಸ ದೀಕ್ಷೆಯನ್ನು ರಾಮಕೃಷ್ಣ ಮಹಾಸಂಘದ ಅಂದಿನ ಅಧ್ಯಕ್ಷರಾದ ಸ್ವಾಮಿ ವೀರೇಶ್ವರಾನಂದಜೀ ಮಹಾರಾಜರಿಂದಲೂ ಪಡೆದರು. ನಂತರ ಮಂಗಳೂರು, ಮೈಸೂರು, ಷಿಲ್ಲಾಂಗ್, ಸಿಂಗಪೂರ್, ಪೊನ್ನಂಪೇಟೆ ರಾಮಕೃಷ್ಣಾಶ್ರಮಗಳಲ್ಲಿ ಸೇವೆ ಸಲ್ಲಿಸಿದರು. ಮೈಸೂರಿನಲ್ಲಿರುವಾಗ ಶ್ರೀರಾಮಕೃಷ್ಣ ವಿದ್ಯಾಶಾಲೆಯ ಕ್ಷೇಮಪಾಲಕರಾಗಿ ಮತ್ತು ಶಾಲೆಯ ಆಸ್ಪತ್ರೆಯ ಮೇಲ್ವಿಚಾರಣೆ ಜವಾಬ್ದಾರಿ ನಿರ್ವಹಿಸಿದರು. ಸರಳತೆ ಮತ್ತು ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದ ಸ್ವಾಮೀಜಿ ಸಹಜವಾಗಿಯೇ ವಿದ್ಯಾರ್ಥಿಗಳ ಪ್ರೀತಿ, ಗೌರವಕ್ಕೆ ಭಾಜನರಾದರು.

ಭಗವದ್ಗೀತೆ, ಉಪನಿಷತ್ತುಗಳು, ರಾಮಕೃಷ್ಣ- ವಿವೇಕಾನಂದ ವೇದಾಂತ ಸಾಹಿತ್ಯಗಳನ್ನು, ಭಾರತದ ಆಧ್ಯಾತ್ಮಿಕ ಮಹಾಪುರುಷರು ಮತ್ತು ಸಂತರ ಜೀವನ ಸಂದೇಶಗಳನ್ನು ತಲರ್ಸ³ಯಾಗಿ ಅಧ್ಯಯನ ಮಾಡಿದ್ದರು. ಶಾಸ್ತ್ರ ವಾಕ್ಯಗಳು ಮತ್ತು ಸ್ವಾಮಿ ವಿವೇಕಾನಂದರ ಸುದೀರ್ಘ ಮಾತುಗಳನ್ನು ಯಥಾರ್ಥವಾಗಿ ಉದ್ಧರಿಸುವ ಪ್ರತಿಭೆ ಮತ್ತು ಸ್ಮೃತಿಶಕ್ತಿ ಅವರಲ್ಲಿತ್ತು.

ಸ್ವಾಮಿ ಜಗದಾತ್ಮಾನಂದರು ಶ್ರೇಷ್ಠ ವಾಗ್ಮಿಗಳಾಗಿದ್ದರು. ಅವರ ಉಪನ್ಯಾಸಗಳಿಂದ ಪ್ರೇರಣೆ ಪಡೆದ ಅನೇಕ ಯುವಜನರು ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಮತ್ತು ಮೌಲ್ಯಾಧಾರಿತ ಬದುಕನ್ನು ನಡೆಸುವ ಬಗ್ಗೆ ಅವರೊಡನೆ ಸಮಾಲೋಚಿಸಿ, ಮಾರ್ಗದರ್ಶನ ಪಡೆಯುತ್ತಿದ್ದರು. ಸ್ವಾಮೀಜಿ ಅತ್ಯುತ್ತಮ ಲೇಖಕರೂ ಆಗಿದ್ದರು.

‘ಬದುಕಲು ಕಲಿಯಿರಿ’ ಕೃತಿ ಅನೇಕ ಮರುಮುದ್ರಣಗಳನ್ನು ಕಂಡಿದ್ದು, ತಮಿಳು, ತೆಲುಗು, ಮರಾಠಿ, ಗುಜರಾತಿ, ಇಂಗ್ಲೀಷ್ ಮುಂತಾದ ಹತ್ತು ಭಾಷೆಗಳಿಗೆ ಅನುವಾದಗೊಂಡಿದೆ. ಅವರ ಸಾಹಿತ್ಯ ಸೇವೆ ಪರಿಗಣಿಸಿ 2004ರಲ್ಲಿ ಆರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಲವಾರು ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕಗಳಿಗೆ ಸ್ವಾಮೀಜಿ ಲೇಖನ ಬರೆದಿದ್ದಾರೆ. ಜಗದಾತ್ಮಾನಂದಜೀಯವರ ಸ್ಪೂರ್ತಿದಾಯಕ ಉಪನ್ಯಾಸಗಳ ಪ್ರಭಾವ ವಿದೇಶಗಳಿಗೂ ಹಬ್ಬಿತ್ತು. ಮಲೇಷಿಯಾ, ಇಂಡೋನೇಷಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಿಂದ ಆಮಂತ್ರಿತರಾಗಿ ಅಲ್ಲಿಯೂ ಆಧಾತ್ಮಿಕ ಜ್ಞಾನಪ್ರಸಾರ ಮಾಡಿದರು.

ಸಾಮಾಜಿಕವಾಗಿಯೂ ಕೊಡುಗೆ ನೀಡಿದ ಸ್ವಾಮೀಜಿ, ವಿರಾಜಪೇಟೆ ತಾಲೂಕಿನ ಬುಡಕಟ್ಟು ಜನಾಂಗದ ಜೀವನಮಟ್ಟವನ್ನು ಸುಧಾರಿಸಲು ಹಲವಾರು ಕ್ರಮ ಕೈಗೊಂಡರು. ಆರೋಗ್ಯ, ನೈರ್ಮಲ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಪ್ರಗತಿಪರ ಯೋಜನೆಗಳನ್ನು ಮಾಡಿದರು.

ಸಂತಾಪ

ಜಗದಾತ್ಮಾನಂದಜೀ ನಿಧನಕ್ಕೆ ರಾಮಕೃಷ್ಣ ಮಿಷನ್ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಸ್ಮರಣಾನಂದಜೀ ಮಹರಾಜ್, ಬೆಂಗಳೂರು ರಾಮಕೃಷ್ಣ ಮಠಾಧ್ಯಕ್ಷ ಸ್ವಾಮಿ ಹರ್ಷಾನಂದಜೀ ಮಹರಾಜ್ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಬದುಕಲು ಕಲಿಸಿದ ಸಂತ ಜಗದಾತ್ಮಾನಂದ ಸ್ವಾಮೀಜಿ ಇನ್ನಿಲ್ಲ