ವಾಜಪೇಯಿ ಅವರಂತೆ ಸಹಿಷ್ಣುತೆಯನ್ನು ಮೋದಿ ಕಲಿಯಬೇಕು: ಫಾರುಕ್‌ ಅಬ್ದುಲ್ಲಾ

ಶ್ರೀನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರಂತೆ ಎಲ್ಲ ಜನರ ಅಭಿಪ್ರಾಯಗಳನ್ನು ಸ್ವೀಕರಿಸಲು ಸಹಿಷ್ಣುವಾಗಿರಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿಯು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ನ ಹಿರಿಯ ನಾಯಕ ದೂರಿದರು.

ಮೊದಲ ಬಾರಿಗೆ ದೆಹಲಿಯ ಕೆಂಪುಕೋಟೆಯಲ್ಲಿ ಜವಾಹರ್‌ಲಾಲ್‌ ನೆಹರು ತ್ರಿವರ್ಣ ಧ್ವಜವನ್ನು ಹಾರಿಸಿದಾಗ ಭವಿಷ್ಯದಲ್ಲಿ ದೇಶವನ್ನು ವಿಭಜಿಸಲು ಪ್ರಯತ್ನಿಸುವ ಒಂದು ಪಕ್ಷವು ಅಧಿಕಾರಕ್ಕೆ ಬರುತ್ತದೆ ಎಂದು ಅವರು ಕೂಡ ಭಾವಿಸಿರಲಿಲ್ಲ. ಬ್ರಿಟೀಷರು ಭಾರತ ಮತ್ತು ಪಾಕಿಸ್ತಾನವನ್ನು ಇಬ್ಭಾಗಿಸಿದರು ಮತ್ತು ಆಡಳಿತ ಪಕ್ಷಗಳು ತಮ್ಮ ವಿಭಜನೆ ನೀತಿಯನ್ನು ಅನುಸರಿಸುತ್ತಾ ಸಾಗಿದರೆ ದೇಶವೂ ಇಬ್ಭಾಗವಾಗಬಹುದು ಎಂದು ಹೇಳಿದರು.

ಬಿಜೆಪಿಯವರು ಹೇಳುತ್ತಾರೆ ಭಗವಾನ್‌ ರಾಮ ಅವರ ದೇವರೆಂದು. ಆದರೆ, ಪವಿತ್ರ ಗ್ರಂಥಗಳ ಪ್ರಕಾರ ರಾಮನು ಇಡೀ ವಿಶ್ವದಲ್ಲಿದ್ದಾನೆ ಹೊರತು ಹಿಂದುಗಳಲ್ಲಿ ಮಾತ್ರವಲ್ಲ. ಮೋದಿಯವರು ವಾಜಪೇಯಿ ಅವರಂತೆ ಸಹಿಷ್ಣುವಾಗಿರಬೇಕೆಂದು ಬಯಸುತ್ತೇನೆ. ಅವರು ಪ್ರಧಾನಿಯಾಗಿರುವುದರಿಂದ ಆ ಮಟ್ಟಕ್ಕೆ ಅವರು ಬರಬೇಕು ಹೊರತು ಸಣ್ಣ ವಿಚಾರಗಳಲ್ಲಿ ತಲ್ಲೀನವಾಗಬಾರದು. ಅವರ ಹೇಳಿಕೆಗಳಿಗಾಗಿ ನಾನು ವಿಷಾದಿಸುತ್ತೇನೆ ಎಂದಿದ್ದಾರೆ.

ಪ್ರಧಾನ ಮಂತ್ರಿ ಸಾಹೀಬ್‌, ನೀವು ದೇಶವನ್ನು ನಡೆಸಬೇಕಾದರೆ ಸಹಿಷ್ಣುಗಳಾಗಬೇಕು ಮತ್ತು ಎಲ್ಲರ ಮಾತುಗಳನ್ನು ಒಪ್ಪಿಕೊಳ್ಳಬೇಕು. ದೇಶವನ್ನು ನಡೆಸಲು ಎಲ್ಲವನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಹಾಗಾಗಿ ವಾಜಪೇಯಿ ಅವರಂತೆ ಸಹಿಷ್ಣುಗಳಾಗಿ. ದೇಶವು ಇಂದಿಗೂ ಒಟ್ಟಾಗಿದೆ ಎಂದರೆ ಅದು ನೆಹರು ಅವರಿಂದ ಎಂದು ಹೇಳಿದರು.

ಸಂಘರ್ಷಗಳಿಗೆ ಯುದ್ಧವೇ ಪರಿಹಾರವಲ್ಲ. ನಾವು ಮನೆಯಲ್ಲಿ ಸುರಕ್ಷಿತವಿರಬೇಕಾದರೆ ಅಲ್ಲಿ ಯೋಧರು ಜೀವ ತೆರಬೇಕಾಗುತ್ತದೆ. ಚೀನಾ ಅಥವಾ ಪಾಕಿಸ್ತಾನದೊಂದಿಗೆ ನಮಗೆ ಯುದ್ಧ ಬೇಕಾಗಿಲ್ಲ. ಆ ದೇಶಗಳು ಸಹ ಪ್ರಗತಿ ಮತ್ತು ಸಂಪತ್ಭರಿತವಾಗಿ ಬೆಳವಣಿಗೆ ಹೊಂದಲು ನಾವು ಬಯಸೋಣ ಎಂದರು. (ಏಜೆನ್ಸೀಸ್)