ಸೋರುತಿದೆ ನಿರ್ಮಾಣ ಹಂತದ ಕಟ್ಟಡ!

ಯಲ್ಲಾಪುರ: ಬಡ ರೋಗಿಗಳಿಗೆ ಅನುಕೂಲವಾಗಲು ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಆರೋಗ್ಯ ಕೇಂದ್ರ ನಿರ್ವಿುಸಲಾಗುತ್ತಿದೆ. ಆದರೆ, ಕಟ್ಟಡ ಪೂರ್ಣವಾಗುವ ಮೊದಲೇ ಸತತ ಮಳೆಗೆ ಸೋರುತ್ತಿದೆ. ಇದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದ ದುಸ್ಥಿತಿ. ಕಾಮಗಾರಿ ಕೊನೆಯ ಹಂತದಲ್ಲಿರುವಾಗಲೇ ಸೋರಲು ಆರಂಭಿಸಿದೆ. ಹೀಗಾಗಿ ಸಹಜವಾಗಿಯೇ ಕಾಮಗಾರಿ ಗುಣಮಟ್ಟದ ಕುರಿತು ಅನುಮಾನ ಮೂಡುವಂತಾಗಿದೆ. ಪಟ್ಟಣದ ಮಂಜುನಾಥ ನಗರದ ತಾಲೂಕು ಸಮುದಾಯ ಆರೋಗ್ಯ ಕೇಂದ್ರ ಈ ಹಿಂದೆ 30 ಹಾಸಿಗೆಯ ಆಸ್ಪತ್ರೆಯಾಗಿತ್ತು. ಶಾಸಕ ಶಿವರಾಮ ಹೆಬ್ಬಾರ್ ಅವರ ಪ್ರಯತ್ನದಿಂದ 100 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರದ ಅನುಮತಿ ದೊರೆಯಿತು. ಅದರಂತೆ 9 ಕೋಟಿ ರೂ. ಅನುದಾನದಲ್ಲಿ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕಾಮಗಾರಿ ಎರಡು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಸದ್ಯ ಕಾಮಗಾರಿ ಕೊನೆ ಹಂತದಲ್ಲಿದೆ. ಆದರೆ, ಸತತ ಸುರಿಯುತ್ತಿರುವ ಮಳೆಯಿಂದಾಗಿ ಕಾಮಗಾರಿಯ ನೈಜ ಬಣ್ಣ ಬಯಲಾಗಿದೆ. ಮಳೆಗಾಲ ಆರಂಭದಲ್ಲೇ ಕಟ್ಟಡ ಸೋರಲಾರಂಭಿಸಿದ್ದು, ಮುಂದಿನ ಸ್ಥಿತಿ ಇನ್ನೂ ಚಿಂತಾಜನಕವಾಗುವ ಲಕ್ಷಣ ಕಾಣುತ್ತಿದೆ. ಕಳಪೆ ಕಾಮಗಾರಿಯಿಂದ ಕೋಟ್ಯಂತರ ರೂ. ಹಣ ಅಪವ್ಯಯವಾದಂತಾಗಿದೆ. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಹಳೆಯ ಕಟ್ಟಡ ಸೋರಿದರೆ ಅದು ವಿಶೇಷವಲ್ಲ. ಆದರೆ, ಹೊಸ ಕಟ್ಟಡವೇ ಈ ರೀತಿ ಸೋರಿದರೆ, ರೋಗಿಗಳ ಗತಿ ಏನು? ಈಗಲಾದರೂ ಇಲಾಖೆ ಎಚ್ಚೆತ್ತು ಕಾಮಗಾರಿ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಸತತ ಮಳೆಯಿಂದ ನಿರ್ಮಾಣ ಹಂತದಲ್ಲಿರುವಾಗಲೇ ಕಟ್ಟಡ ಸೋರುತ್ತಿದೆ. ಈ ಕುರಿತು ಈಗಾಗಲೇ ಶಾಸಕರಿಗೆ ಮಾಹಿತಿ ನೀಡಲಾಗಿದ್ದು, ಗುತ್ತಿಗೆದಾರರಿಗೆ ಸೂಚಿಸುವ ಭರವಸೆ ನೀಡಿದ್ದಾರೆ.   
ಡಾ. ರಾಮಾ ಹೆಗಡೆ, ಆಡಳಿತ ವೈದ್ಯಾಧಿಕಾರಿ

 

Leave a Reply

Your email address will not be published. Required fields are marked *