ಉದ್ಘಾಟನೆಗೂ ಮುನ್ನ ಸೋರುವ ಮೇಲ್ಛಾವಣಿ

ಆರ್.ಬಿ.ಜಗದೀಶ್ ಕಾರ್ಕಳ
ರಾಜ್ಯ ಸರ್ಕಾರದ ರೂ. 6 ಕೋಟಿ ಅನುದಾನದಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಎದುರು ನೋಡುತ್ತಿರುವ ತಾಲೂಕು ಸರ್ಕಾರಿ ಆಸ್ಪತ್ರೆ ಮೇಲ್ಛಾವಣಿ ಸಂಪೂರ್ಣ ಬಿರುಕು ಬಿಟ್ಟು ಮಳೆ ನೀರು ಸೋರಿಕೆಯಾಗುತ್ತಿದೆ.

ಜೂನ್ 21ರಂದು ವಿಜಯವಾಣಿ ಪತ್ರಿಕೆ ರಿಯಾಲಿಟಿ ಚೆಕ್ ನಡೆಸಿದಾಗ ಮೇಲಿನ ಅಂಶ ಬೆಳಕಿಗೆ ಬಂದಿದೆ.
ಪ್ರಸಕ್ತ ಆಸ್ಪತ್ರೆಯ ಕಳಪೆ ಕಾಮಗಾರಿ ಹೊರಜಗತ್ತಿಗೆ ತಿಳಿಯದಂತೆ ಮರೆಮಾಚುವ ಪ್ರಯತ್ನ ನಡೆಯುತ್ತಿದೆ. ಮಳೆ ನೀರು ಸೋರುತ್ತಿರುವ ಮೇಲ್ಛಾವಣಿಯ ಕೆಲ ಭಾಗಗಳಲ್ಲಿ ಹಾಕಲಾಗಿರುವ ಕಾಂಕ್ರೀಟ್‌ನ್ನು ಕೆತ್ತಿ ತೆಗೆಯಲಾಗುತ್ತಿದೆ. ಆ ಭಾಗಕ್ಕೆ ಗಮ್‌ಮಿಶ್ರಿತ ಸಿಮೆಂಟ್ ಗಾರೆ ಹಾಕುವ ಮೂಲಕ ಸೋರುವಿಕೆ ತಡೆಯುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ.

ಮೇಲ್ಛಾವಣಿಯಲ್ಲಿ ಕೆಲವೊಂದು ಕಡೆ ಸಮಸ್ಯೆಯಾಗಿದ್ದು, ಗಮ್ ಮಿಶ್ರಿತ ಸಿಮೆಂಟ್ ಗಾರೆ ಹಾಕುವ ಮೂಲಕ ಸೋರಿಕೆ ಭಾಗವನ್ನು ಮುಚ್ಚಲಾಗುತ್ತಿದೆ ಎಂಬ ಅಂಶವನ್ನು ಕಾರ್ಮಿಕರೇ ವಿಜಯವಾಣಿಗೆ ತಿಳಿಸಿದ್ದಾರೆ.
ಏನೇನು ಸೌಲಭ್ಯಗಳಿವೆ?
ತಳ ಅಂತಸ್ತು ಹಾಗೂ ಮೊದಲ ಅಂತಸ್ತು ಒಳಗೊಂಡಿರುವ ನೂತನ ಕಟ್ಟಡವು 3294.30 ಚದರ ಮೀಟರ್ ಹೊಂದಿದೆ. ತಳ ಅಂತಸ್ತಿನಲ್ಲಿ ಹೆಸರು ನೋಂದಣಿ ವಿಭಾಗ, ಹೊರರೋಗಿ ವಿಭಾಗ, ತುರ್ತು ಚಿಕಿತ್ಸಾ ವಿಭಾಗ, ಔಷಧಾಲಯ, ಸಣ್ಣ ಶಸ್ತ್ರ ಚಿಕಿತ್ಸಾ ವಿಭಾಗ, ಮಕ್ಕಳ ಮತ್ತು ಸ್ತ್ರೀ ರೋಗ ವಿಭಾಗ, ಕ್ಷ-ಕಿರಣ ವಿಭಾಗ, ಆಲ್ಟ್ರಾ ಸೌಂಡ್ಸ್ ವಿಭಾಗ, ಅಟೋಕ್ಲೇವ್, ಪ್ರಯೋಗಾಲಯ, ವಿದ್ಯುತ್ ವಿಭಾಗ, ದಾದಿಯರ ಕೋಣೆ, ಸಿಬ್ಬಂದಿ ಕೋಣೆ, 32 ಹಾಸಿಗೆ ಸಾಮರ್ಥ್ಯದ ಸಾಮಾನ್ಯ ವಿಭಾಗ, ವಿಶೇಷ ವಿಭಾಗ, ತೀವ್ರ ನಿಗಾ ವಿಭಾಗವನ್ನು ಆಸ್ಪತ್ರೆ ಒಳಗೊಂಡಿದೆ.
ಮೊದಲ ಅಂತಸ್ತಿನಲ್ಲಿ ಹೊರ ರೋಗಿಗಳ ತಪಾಸಣಾ ವಿಭಾಗ, ಸಣ್ಣ ಶಸ್ತ್ರ ಚಿಕಿತ್ಸೆ, ಪ್ರಧಾನ ಕಚೇರಿ, ದಾಖಲೆ ವಿಭಾಗ, ಸಭಾಂಗಣ, 32 ಹಾಸಿಗೆಯುಳ್ಳ ಸಾಮಾನ್ಯ ವಿಭಾಗ, 5 ಹಾಸಿಗೆಯುಳ್ಳ ವಿಶೇಷ ವಿಭಾಗ, ದೊಡ್ಡ ಶಸ್ತ್ರ ಚಿಕತ್ಸೆ ವಿಭಾಗವಿದೆ.

ಕರಾವಳಿ ಜಿಲ್ಲೆಗಳಿಗೆ ಅನುಕೂಲ: ಕಳಸ, ಬಾಳೆಹೊನ್ನೂರು, ಎನ್‌ಆರ್ ಪುರ, ಕುದುರೆಮುಖ, ಬೆಳ್ತಂಗಡಿ, ನಾರಾವಿ, ಮೂಡುಬಿದಿರೆ, ಕಾಪು ಸಹಿತ ವಿವಿಧ ಕಡೆಗಳಿಂದ ಇಲ್ಲಿಗೆ ಗಣನೀಯ ಸಂಖ್ಯೆಯಲ್ಲಿ ಚಿಕಿತ್ಸೆಗೆಂದು ರೋಗಿಗಳು ಬರುತ್ತಿದ್ದಾರೆ. ಮಾಸಿಕ ಸರಾಸರಿ 475 ಮಂದಿ ಒಳರೋಗಿಗಳು, 7500 ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಟ್ಟಡ ಉದ್ಘಾಟನೆಗೊಂಡಲ್ಲಿ ಕರಾವಳಿ ಭಾಗದ ಜಿಲ್ಲೆಗಳಿಗೆ ಇದು ಅನುಕೂಲಕರವಾಗಲಿದೆ.

ಆರು ಕೋಟಿ ರೂ. ವೆಚ್ಚ: ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕರ್ನಾಟಕ ಆರೋಗ್ಯ ಪದ್ಧತಿ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆಯಡಿ ನೂತನ ಕಟ್ಟಡ ಕಾಮಗಾರಿ ನಡೆಯುತ್ತಿದೆ. 6 ಕೋಟಿ ರೂ.ವೆಚ್ಚದಲ್ಲಿ ಸ್ಟಾರ್ ಬಿಲ್ಡರ್ ಆ್ಯಂಡ್ ಡೆವಲರ್ಸ್‌ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದೆ. 2016 ನ.25ರಂದು ಕಾಮಗಾರಿ ಆರಂಭಗೊಂಡು 2018 ಫೆ.24ಕ್ಕೆ ಮುಕ್ತಾಯಗೊಳ್ಳಬೇಕಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡರೂ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

ಕಾಮಗಾರಿ ನಿರ್ಲಕ್ಷೃ: ಸಾರ್ವಜನಿಕ ಉದ್ದಿಮೆಗಳ ಸಾಮಾಜಿಕ ಬದ್ಧತೆ ನೆಲೆಯಲ್ಲಿ ಒಎನ್‌ಜಿಸಿ ಕಂಪನಿ ಸಹಯೋಗ ಹಾಗೂ ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಪ್ರಯತ್ನದಿಂದ ಹೆರಿಗೆ ವಿಭಾಗಕ್ಕೆಂದು ನಿರ್ಮಾಣಗೊಂಡಿರುವ ಕಟ್ಟಡ ವರ್ಷ ಕಳೆಯುತ್ತಿದ್ದಂತೆ ದುರಸ್ತಿಗೆ ಒಳಗಾಗಿತ್ತು. ರೂ. 98.10 ಲಕ್ಷ ಅನುದಾನದಲ್ಲಿ ಕಾಮಗಾರಿ ಮಂದಗತಿಯಲ್ಲಿ ಸಾಗಿ ಅಂದಿನ ಜಿಲ್ಲಾಧಿಕಾರಿ ವಿಶಾಲ್ ನಿರ್ದೇಶನದಂತೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಇನ್ನೂ ಉದ್ಘಾಟನೆಗೊಂಡಿಲ್ಲ.

ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣ ಸಂದರ್ಭ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೊರರೋಗಿ ವಿಭಾಗ, ಅಧೀಕ್ಷಕರ ಕಚೇರಿ, ರೋಗಿಗಳ ತಪಾಸಣಾ ಕೇಂದ್ರ, ಔಷಧಾಲಯ ವಿಭಾಗ ಇವೆಲ್ಲವನ್ನು ಇದೇ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.

ನಿರ್ಮಿತಿ ಕೇಂದ್ರವು ಕಟ್ಟಡದ ಕಾಮಗಾರಿ ನಡೆಸಿದೆ. ಜಿಲ್ಲಾಧಿಕಾರಿಯೇ ನಿರ್ಮಿತಿ ಕೇಂದ್ರದ ಅಧ್ಯಕ್ಷರಾಗಿರುವ ಕಾರಣದಿಂದ ಕಾಮಗಾರಿ ಗುಣಮಟ್ಟದ ಬಗ್ಗೆ ಪ್ರಶ್ನಿಸುವುದಕ್ಕೆ ಯಾವುದೇ ಅಧಿಕಾರಿಗಳು ಧೈರ್ಯ ತೋರಿರಲಿಲ್ಲ.

ಅಲ್ಪ ಮಳೆಗೆ ಹೀಗಾದರೆ?: ಪ್ರಸಕ್ತ ಮಳೆಗಾಲ ಆರಂಭಗೊಂಡು ತಿಂಗಳು ಕಳೆದಿಲ್ಲ, ಅದಾಗಲೇ ಮೇಲ್ಛಾವಣಿಯಲ್ಲಿ ಸೋರಿಕೆ ಕಂಡುಬಂದಿದೆ. ಭಾರಿ ಮಳೆ ಬಿದ್ದರೆ ಕಟ್ಟಡದ ಸ್ಥಿತಿಗತಿ ಊಹಿಸಿಕೊಳ್ಳುವುದೂ ಕಷ್ಟಸಾಧ್ಯ.

ನೂತನ ಕಟ್ಟಡ ಸ್ಥಿತಿಗತಿ ಕುರಿತು ಇಲಾಖೆ ಗಮನಕ್ಕೆ ತರುತ್ತೇನೆ. ಮೇಲ್ಛಾವಣಿ ಸೋರುತ್ತಿರುವ ಬಗ್ಗೆ ಮಾಹಿತಿ ನೀಡಲಾಗುವುದು. ಇಲಾಖಾಧಿಕಾರಿಗಳ ನಿರ್ದೇಶನಂತೆ ಮುಂದಿನ ಕ್ರಮ ನಡೆಯಲಿದೆ.
ಡಾ.ಪಿ.ಕೆ.ಮಲ್ಯ, ಪ್ರಭಾರ ಆಡಳಿತ ವೈದ್ಯಾಧಿಕಾರಿ ತಾಲೂಕು ಸರ್ಕಾರಿ ಆಸ್ಪತ್ರೆ

One Reply to “ಉದ್ಘಾಟನೆಗೂ ಮುನ್ನ ಸೋರುವ ಮೇಲ್ಛಾವಣಿ”

  1. ಸರಕಾರದ ಬೇಜವಾಬ್ದಾರಿತನ,ಉಡಾಫೆ,ಭ್ರಷ್ಟಾಚಾರ ಬೆತ್ತಲೆ ಯಾಗಿದೆ. ಕಾಮಗಾರಿ ನಡೆಯುತ್ತಿರುವಾಗ ಮೆಡಿಕಲ್ ಆಪೀಸರ್ ಸ್ವಲ್ಪ ಗಮನ ಹರಿಸಬೇಕಿತ್ತು.

Comments are closed.