ಷರೀಫ್​ಜಿ​ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ಕರಾಳ ದಿನ: ರಾಹುಲ್ ಗಾಂಧಿ

ಬೆಂಗಳೂರು: ಕಾಂಗ್ರೆಸ್​ ಪಕ್ಷಕ್ಕೆ ಇದೊಂದು ದುರಂತದ ದಿನ. ಕರ್ನಾಟಕದ ಹಿರಿಯ ಕಾಂಗ್ರೆಸಿಗ, ಎಲ್ಲರ ಪ್ರೀತಿ ಗೌರವಕ್ಕೆ ಪಾತ್ರನಾದ ಜಾಫರ್ ಷರೀಫ್​​ಜಿ ಅವರು ನಿಧನರಾದ ದಿನ. ದುಃಖತಪ್ತ ಕುಟುಂಬ, ಸ್ನೇಹಿತರು ಹಾಗೂ ಬೆಂಬಲಿಗರಿಗೆ ಅವರ ಅಗಲಿಕೆಯ ನೋವು ಭರಿಸುವಂತಾಗಲಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ.

ತೀವ್ರ ದುಃಖವಾಗಿದೆ: ಪರಮೇಶ್ವರ್
ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಅವರು ಇಂದು ದಿಢೀರ್‌ ನಿಧನ ಹೊಂದಿರುವ ಸುದ್ದಿ ತಿಳಿದು ತೀವ್ರ ದುಃಖವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಅಂಬರೀಶ್‌ ಅವರ ಸಾವಿನ ಸುದ್ದಿಯಿಂದ ಹೊರ ಬರುವ ಮುನ್ನವೇ ಮತ್ತೊಂದು ಆಘಾತವಾಗಿದೆ. ಜಾಫರ್‌ ಷರೀಫ್‌ ಅವರು ನಮ್ಮನ್ನು ಅಗಲಿದ ಸುದ್ದಿ ಕೇಳಿ ಆಘಾತವಾಗಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ನ ಹಿರಿಯ ಚೇತನ, ರಾಜಕೀಯದಲ್ಲಿ ಹೆಚ್ಚು ಅನುಭವವಿದ್ದ ಜಾಫರ್‌ ಅವರು ಭಾರತೀಯ ರೈಲ್ವೆಗೆ ಆಧುನಿಕ ಸ್ಪರ್ಶ ನೀಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕರ್ನಾಟಕಕ್ಕೆ ಹಲವು ಹೊಸ ರೈಲ್ವೆ ಯೋಜನೆಗಳನ್ನು ತಂದಿದ್ದರು. ಷರೀಫರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ದೇವರು ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಪ್ರತಿಯೊಬ್ಬರಿಗೂ ಮಾದರಿ

ದೇಶ ಕಂಡ ಮಹತ್ವದ ರಾಜಕಾರಣಿ, ಮಾನವೀಯ ವ್ಯಕ್ತಿತ್ವಕ್ಕೆ ಮಾದರಿಯಾಗಿದ್ದ ಜಾಫರ್ ಷರೀಫ್ ಅವರು ವಿಧಿವಶರಾದದ್ದು ನೋವುಂಟುಮಾಡಿದೆ. ಅವರ ಮುತ್ಸದ್ಧಿತನ ಪ್ರತಿಯೊಬ್ಬರಿಗೂ ಮಾದರಿ ಎಂದು ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಕರ್ನಾಟಕದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದರು. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗದವರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಪಾರ್ಥಿವ ಶರೀರದ ದರ್ಶನ ಪಡೆದರು.

ಕಾಂಗ್ರೆಸ್ ಹಿರಿಯ ನಾಯಕ ಜಾಫರ್ ಷರೀಫ್ ಇನ್ನಿಲ್ಲ

Leave a Reply

Your email address will not be published. Required fields are marked *