ಮಹಾ ಗೊಂದಲ ನಮೋ ಸಂಭ್ರಮ: ಎನ್​ಡಿಎ ನಾಯಕರ ಔತಣಕೂಟ

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಆಡಳಿತಾರೂಢ ಎನ್​ಡಿಎ ವಲಯದಲ್ಲಿ ಸಂಭ್ರಮಾಚರಣೆ ಆರಂಭವಾಗಿದ್ದರೆ, ಪ್ರತಿಪಕ್ಷಗಳ ಮಹಾಮೈತ್ರಿ ಗೊಂದಲದ ಗೂಡಾಗಿದೆ.

ಫಲಿತಾಂಶಕ್ಕೆ ಎರಡು ದಿನ ಮುನ್ನವೇ ಕೇಂದ್ರ ಸರ್ಕಾರದಲ್ಲಿನ ಹಿರಿಯ ಸಚಿವರು ಹಾಗೂ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದರು. ಇದರ ಬೆನ್ನಲ್ಲೇ ಎನ್​ಡಿಎ ನಾಯಕರ ಔತಣಕೂಟ ಏರ್ಪಡಿಸಲಾಗಿತ್ತು. ಆದರೆ ಒಗ್ಗಟ್ಟು ಪ್ರದರ್ಶಿಸಲೂ ವಿಫಲವಾದ ಪ್ರತಿಪಕ್ಷಗಳ ಎರಡನೇ ಹಂತದ ನಾಯಕರು ದಿನವಿಡಿ ವಿದ್ಯುನ್ಮಾನ ಮತಯಂತ್ರದ ನೆಪ ಹೇಳಿಕೊಂಡು ಸರಣಿ ಸಭೆ ನಡೆಸಿದರು. ಎನ್​ಡಿಎ ಹಾಗೂ ಮಹಾಮೈತ್ರಿಯ ಇವೆರಡು ನಡೆಗಳಲ್ಲಿ ವೈರುಧ್ಯದ ಜತೆಗೆ ಮೇ 23ರ ಫಲಿತಾಂಶದ ಉತ್ಸಾಹ ಕೂಡ ಕಾಣಿಸುತ್ತಿತ್ತು. ಎನ್​ಡಿಎ ನಾಯಕರ ಔತಣಕೂಟಕ್ಕೂ ಮುನ್ನ ಕೇಂದ್ರ ಸರ್ಕಾರದಲ್ಲಿನ ಬಿಜೆಪಿ ಸಚಿವರು ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದರು. ಐದು ವರ್ಷಗಳ ಅಭಿವೃದ್ಧಿ ಕಾರ್ಯಕ್ರಮಗಳ ಜತೆಗೆ, ಭವಿಷ್ಯದ ಹಾದಿಗಳ ಬಗೆಗೂ ಸಂಕ್ಷಿಪ್ತವಾಗಿ ಈ ಸಭೆಯಲ್ಲಿ ರ್ಚಚಿಸಲಾಗಿದೆ. ಹಾಗೆಯೇ ಮೋದಿ ನಾಯಕತ್ವ ಹಾಗೂ ಚುನಾವಣೆ ಸಮಯದಲ್ಲಿನ ಪರಿಶ್ರಮವನ್ನು ಈ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ. ಸಚಿವರ ಸಭೆ ಬಳಿಕ ದೆಹಲಿಯ ಪಂಚತಾರಾ ಹೋಟೆಲ್​ನಲ್ಲಿ ಎನ್​ಡಿಎ ನಾಯಕರಿಗೆ ಮೋದಿ-ಷಾ ಔತಣಕೂಟ ಏರ್ಪಡಿಸಿದ್ದರು. ಪ್ರತಿಪಕ್ಷಗಳಲ್ಲಿ ಒಡಕು ಕಾಣಿಸಿಕೊಂಡರೆ, ಎನ್​ಡಿಎ ಶಕ್ತಿ ಪ್ರದರ್ಶನದ ಜತೆಗೆ ಒಗ್ಗಟ್ಟಿನ ಮಂತ್ರ ಪಠಿಸಿತು. ಜೆಡಿಯು, ಅಕಾಲಿದಳ, ಶಿವಸೇನೆ, ಎಐಎಡಿಎಂಕೆ, ಎಲ್​ಜೆಪಿ, ಅಪ್ನಾ ದಳದ ಮುಖ್ಯಸ್ಥರು ಸೇರಿ ಬಹುತೇಕ ಎಲ್ಲ ನಾಯಕರು ಔತಣಕೂಟದಲ್ಲಿ ಹಾಜರಾಗಿದ್ದರು. ಪರಸ್ಪರ ಧನ್ಯವಾದ ಹಾಗೂ ಕೃತಜ್ಞತೆ ಸಲ್ಲಿಸುವ ಸಮಯವಿದು ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಆದರೆ ಪ್ರತಿಪಕ್ಷಗಳು ಕರೆದಿದ್ದ ಸಭೆಯಲ್ಲಿ ಎರಡನೇ ಹಂತದ ನಾಯಕರು ಭಾಗವಹಿಸಿ ಹೋರಾಟದ ಭವಿಷ್ಯ ಏನು ಎಂಬ ಮುನ್ಸೂಚನೆ ನೀಡಿದರು. ಚಂದ್ರಬಾಬು ನಾಯ್ಡು ಹಾಗೂ ಅರವಿಂದ ಕೇಜ್ರಿವಾಲ್ ಹೊರತುಪಡಿಸಿ ಉಳಿದ ಯಾವುದೇ ಪಕ್ಷದ ಮುಂಚೂಣಿ ನಾಯಕರು ಸಭೆಗೆ ಹಾಜರಾಗಲಿಲ್ಲ. ಲೆಕ್ಕಕ್ಕೆ 22 ಪ್ರತಿಪಕ್ಷಗಳ ಪ್ರತಿನಿಧಿಗಳಿದ್ದರೂ, ಪಕ್ಷದ ಅಧ್ಯಕ್ಷರು ಗೈರು ಹಾಜರಾಗಿ ಹೋರಾಟದ ಗಾಂಭೀರ್ಯತೆ ಪ್ರದರ್ಶಿಸಿದ್ದಾರೆ. ಅಂತಿಮ ಕ್ಷಣದಲ್ಲಿ ಎಚ್.ಡಿ.ಕುಮಾರಸ್ವಾಮಿ, ಮಾಯಾವತಿ, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ಸೇರಿ ಇತರ ನಾಯಕರು ದೆಹಲಿ ಭೇಟಿ ಮುಂದೂಡಿದ್ದಾರೆ. ದೆಹಲಿಯಲ್ಲೇ ಇದ್ದ ರಾಹುಲ್ ಗಾಂಧಿ ಕೂಡ ಸಭೆಯಿಂದ ದೂರವಿದ್ದು, ಗುಲಾಂ ನಬಿ ಆಜಾದ್ ಹಾಗೂ ಅಶೋಕ್ ಗೆಹ್ಲೊಟ್ ಅವರನ್ನು ಕಳುಹಿಸಿದ್ದರು. ಏತನ್ಮಧ್ಯೆ ಸಭೆಗೆ ಗೈರು ಹಾಜರಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಲು ಚಂದ್ರಬಾಬು ನಾಯ್ಡು ಬೆಂಗಳೂರಿಗೆ ಆಗಮಿಸಿದ್ದಾರೆ.

ಈ ಬಾರಿಯ ಚುನಾವಣಾ ಪ್ರಚಾರವನ್ನು ಬಿಜೆಪಿ ಮಾತ್ರ ಮಾಡಿಲ್ಲ. ದೇಶದ ಜನರೇ ಬಿಜೆಪಿಗಾಗಿ ಪ್ರಚಾರ ಮಾಡಿದ್ದಾರೆ. ಪಕ್ಷದ ಯಶಸ್ಸಿಗಾಗಿ ಕೆಲಸ ಮಾಡಿವರೆಲ್ಲರಿಗೂ ಧನ್ಯವಾದ. ಒಂದು ರೀತಿಯಲ್ಲಿ ಈ ಬಾರಿಯ ಪ್ರಚಾರ ಜೀವನಯಾತ್ರೆಯಂತಿತ್ತು.

| ನರೇಂದ್ರ ಮೋದಿ ಪ್ರಧಾನಿ

5 ವರ್ಷಗಳಲ್ಲಿ ಟೀಮ್ ಮೋದಿ ಸರ್ಕಾರದ ಕಠಿಣ ಪರಿಶ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದೇ ಉತ್ಸಾಹದೊಂದಿಗೆ ನವ ಭಾರತ ನಿರ್ವ ಣದ ಸಂಕಲ್ಪದಲ್ಲಿ ಮುನ್ನಡೆಯೋಣ.

| ಅಮಿತ್ ಷಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಕರೆ ಸ್ವೀಕರಿಸದ ಜಗನ್

ಎನ್​ಡಿಎ ಪರ ಒಲವು ಹೊಂದಿರುವ ವೈಎಸ್​ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್​ವೋಹನ್ ರೆಡ್ಡಿ, ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ದೂರವಾಣಿ ಕರೆ ಸ್ವೀಕರಿಸದೇ ರಾಜಕೀಯ ನಡೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗುತ್ತಿದೆ. ಎನ್​ಡಿಎಯಿಂದ ಹೊರಗಿರುವ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸಲು ಪವಾರ್ ಯತ್ನಿಸುತ್ತಿದ್ದು, ಜಗನ್​ಗೆ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸದೇ ಕಾಂಗ್ರೆಸ್ ಅಥವಾ ಯುಪಿಎ ಬೆಂಬಲಕ್ಕೆ ನಿಲ್ಲಲು ಹಿಂದೇಟು ಹಾಕಿರುವುದು ಸ್ಪಷ್ಟವಾಗಿದೆ.

ಫಲಿತಾಂಶ ಮುನ್ನವೇ ಇವಿಎಂ ಗಲಾಟೆ

ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಸೋಲಿನ ಬಗ್ಗೆ ಮತದಾನೋತ್ತರ ಸಮೀಕ್ಷೆಯಲ್ಲಿ ವರದಿಗಳು ಬರುತ್ತಿರುವ ಬೆನ್ನಲ್ಲೇ ಸೋಲಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ಹರಕೆ ಕುರಿ ಮಾಡುವ ಪ್ರಯತ್ನ ಎಗ್ಗಿಲ್ಲದೇ ಸಾಗಿದೆ. ಚುನಾವಣಾ ಆಯೋಗದ ಸ್ಪಷ್ಟನೆ ಹೊರತಾಗಿಯೂ ಬಿಜೆಪಿ ಪರವಾಗಿ ಇವಿಎಂಗಳ ಮತ ತಿರುಚಲಾಗಿದೆ ಎಂದು 22 ಪ್ರತಿಪಕ್ಷಗಳು ಆಯೋಗಕ್ಕೆ ದೂರು ನೀಡಿವೆ. ಸುಪ್ರೀಂ ಕೋರ್ಟ್ ತಪರಾಕಿ ನಂತರ 22 ಪಕ್ಷಗಳ ನಾಯಕರು ದೆಹಲಿಯಲ್ಲಿ ಮಂಗಳವಾರ ಸಭೆ ನಡೆಸಿದ್ದಾರೆ. ಉತ್ತರಪ್ರದೇಶದ ನಾಲ್ಕು ಕಡೆ ಇವಿಎಂಗಳನ್ನು ಲಾರಿಯಲ್ಲಿ ಸಾಗಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಭದ್ರತಾ ಕೊಠಡಿಗಳಿಂದ ಇವಿಎಂಗಳನ್ನು ಹೊರಕ್ಕೆ ತರಲಾಗುತ್ತಿದೆ. ಉತ್ತರಪ್ರದೇಶದ ಗಾಜೀಪುರ, ಚಂದೌಲಿ, ದುಮರಿಯಾಗಂಜ್​ನಲ್ಲಿ ಇಂತಹ ಘಟನೆ ಬಗ್ಗೆ ವರದಿಯಾಗಿದೆ. ಬಿಜೆಪಿ ಪ್ರಭಾವ ಇರುವ ಕ್ಷೇತ್ರಗಳಲ್ಲಿ ಬೇರೆ ಇವಿಎಂಗಳನ್ನು ತಂದಿಡುವ ಕೆಲಸವಾಗುತ್ತಿದೆ ಎಂದು ಪ್ರತಿಪಕ್ಷಗಳು ಸಂಘಟಿತವಾಗಿ ಆರೋಪಿಸುತ್ತಿವೆ. ಆದರೆ ಈ ಆರೋಪಗಳನ್ನು ಆಯೋಗ ತಿರಸ್ಕರಿಸಿ, ವಿಸõತ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಪ್ರತಿಪಕ್ಷಗಳ ಅಹವಾಲೇನು?

  • ಇವಿಎಂ ಮತದಾನ ಎಣಿಕೆಗೂ ಮುನ್ನ ಪ್ರತಿ ವಿಧಾನಸಭಾ ಕ್ಷೇತ್ರದ 5 ವಿವಿಪ್ಯಾಟ್​ನೊಳಗಿನ ಮತ ಎಣಿಕೆ ಆಗಬೇಕು.
  • ಒಂದೊಮ್ಮೆ ವ್ಯತ್ಯಾಸವಾದರೆ ಆ ವಿಧಾನಸಭಾ ಕ್ಷೇತ್ರದ ಎಲ್ಲ ವಿವಿಪ್ಯಾಟ್​ಗಳಲ್ಲಿನ ಮತ ಎಣಿಕೆ ಮಾಡಬೇಕು.
  • ವಿವಿಪ್ಯಾಟ್ ಮತ ಎಣಿಕೆ ಪ್ರಮಾಣವನ್ನು ಕನಿಷ್ಠ ಶೇ.25ಕ್ಕೆ ಏರಿಸಬೇಕು.

ಎಕ್ಸಿಟ್ ಪೋಲ್ ಹಿಂದೆ ಗೋಲ್‍ಮಾಲ್ ಗೋಚರಿಸುತ್ತಿದೆ. ರಾಜ್ಯದಲ್ಲಿ ಕನಿಷ್ಠ ಏಳೆಂಟು ಸೀಟು ಬರಲಿವೆ. ಒಂದು ವೇಳೆ ಎರಡ್ಮೂರು ಸೀಟು ಬಂದರೆ ಇವಿಎಂನಲ್ಲಿ ಸಮಸ್ಯೆ ಇದೆ ಎಂದೇ ಅರ್ಥ. ನಮ್ಮ ಮಾಹಿತಿಗೂ ಎಕ್ಸಿಟ್ ಪೋಲ್​ಗೂ ವ್ಯತ್ಯಾಸ ಇದೆ. ಯಾವ ಆಧಾರದ ಮೇಲೆ ಸಮೀಕ್ಷೆ ನಡೆದಿದೆ ಅನ್ನೋದನ್ನು 23ಕ್ಕೆ ನೋಡೊಣ.

| ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಸಂಸದೀಯ ನಾಯಕ

ಸುಳ್ಳೆಂದ ಚುನಾವಣಾ ಆಯೋಗ

  • ಚುನಾವಣೆಯಲ್ಲಿ ಬಳಸದ ಇವಿಎಂಗಳನ್ನು ಲಾರಿಯಲ್ಲಿ ಸಾಗಿಸುತ್ತಿರುವ ವಿಡಿಯೋಗಳನ್ನು ಮಾಧ್ಯಮಗಳು ಪ್ರಸಾರ ಮಾಡಿವೆ.
  • ಚುನಾವಣೆಗೆ ಬಳಕೆಯಾದ ಇವಿಎಂಗಳು ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿವೆ.
  • ಸ್ಥಳೀಯ ಅಭ್ಯರ್ಥಿ, ಏಜೆಂಟ್​ಗಳ ಸಮ್ಮುಖದಲ್ಲಿಯೇ ಎಲ್ಲ ಇವಿಎಂಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು, ಪ್ರತಿ ಕ್ಷಣದ ವಿಡಿಯೋ ಚಿತ್ರೀಕರಣ ನಡೆದಿದೆ.
  • ಚುನಾವಣೆಗೆ ಬಳಸಿದ ಇವಿಎಂ ಹಾಗೂ ವಿವಿಪ್ಯಾಟ್​ಗಳ ಮಾದರಿ ಕ್ರಮ ಸಂಖ್ಯೆಗಳನ್ನು ಅಭ್ಯರ್ಥಿಗಳ ಜತೆ ಹಂಚಿಕೊಳ್ಳಲಾಗಿದ್ದು, ಮತ ಎಣಿಕೆ ಸಂದರ್ಭದಲ್ಲಿ ಮರು ಪರಿಶೀಲನೆ ಮಾಡಬಹುದು. ಬದಲಾವಣೆಯಾಗಿದ್ದಲ್ಲಿ ಕೂಡಲೇ ದೂರು ನೀಡಲು ಅವಕಾಶವಿದೆ.
  • ಇವೆಲ್ಲ ಪ್ರಕ್ರಿಯೆಗಳ ಬಗ್ಗೆ ರಾಜಕೀಯ ಪಕ್ಷಗಳ ಜತೆಗೆ 93 ಸುತ್ತಿನ ಸಭೆ ನಡೆಸಿದ ಬಳಿಕವೂ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ.
  • ಈ ಕುರಿತು ಯಾವುದೇ ಗೊಂದಲ ಅಥವಾ ದೂರುಗಳಿದ್ದಲ್ಲಿ 011-23052123 ಸಂಖ್ಯೆಗೆ ಕರೆ ಮಾಡಬಹುದು.

ಜನಾದೇಶವನ್ನು ಗೌರವಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ. ಜನರ ತೀರ್ಮಾನ ಬದಲಿಸುವ ಪ್ರಯತ್ನ ಸರಿಯಲ್ಲ.

| ಎನ್.ಚಂದ್ರಬಾಬು ನಾಯ್ಡು ಆಂಧ್ರಪ್ರದೇಶ ಮುಖ್ಯಮಂತ್ರಿ

ಸಮೀಕ್ಷೆಗಳಿಂದ ಗೊಂದಲ ಸೃಷ್ಟಿ

ನವದೆಹಲಿ: ಬಹುತೇಕ ಎಲ್ಲ ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳಿಗೆ ಹಿನ್ನಡೆಯನ್ನು ಸೂಚಿಸಿವೆ. ಹೀಗಾಗಿ ಕಾರ್ಯಾಕರ್ತರಲ್ಲಿ ಮೂಡಿರುವ ಗೊಂದಲವನ್ನು ಪರಿಹರಿಸಲು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮುಂದಾಗಿದ್ದಾರೆ. ಕಾಯಕರ್ತರಿಗೆ ಧ್ವನಿಮುದ್ರಿತ ಸಂದೇಶ ಕಳುಹಿಸಿದ್ದಾರೆ. ‘ವದಂತಿಗಳು ಹಾಗೂ ಮತದಾನೋತ್ತರ ಸಮೀಕ್ಷೆಗಳ ವರದಿಯಿಂದ ಧೈರ್ಯ ಕಳೆದುಕೊಳ್ಳಬೇಡಿ. ನಿಮ್ಮ ಎದೆಗುಂದಿಸಲೆಂದೇ ಇವನ್ನು ಹಬ್ಬಿಸಲಾಗುತ್ತಿದೆ. ಇಂಥ ಸಂದರ್ಭದಲ್ಲಿಯೇ ನೀವು ಇನ್ನಷ್ಟು ಎಚ್ಚರಿಕೆಯಿಂದ ಇರಬೇಕಾದದ್ದು ಹೆಚ್ಚು ಮಹತ್ವಪೂರ್ಣವಾಗುತ್ತದೆ. ಸ್ಟ್ರಾಂಗ್​ರೂಮ್ ಹಾಗೂ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡುತ್ತಿರಿ ಹಾಗೂ ಹೆಚ್ಚು ಜಾಗೃತರಾಗಿರಿ. ನಿಮ್ಮ ಕಠಿಣ ಪರಿಶ್ರಮ ಫಲ ನೀಡಲಿದೆ ಎಂದು ಸಂದೇಶ ನೀಡಿದ್ದಾರೆ.

ರಾಗಾ ಲಂಡನ್ ಪ್ರಯಾಣ ರದ್ದು?

ನವದೆಹಲಿ: ಚುನಾವಣಾ ಪ್ರಚಾರ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲಂಡನ್​ಗೆ ಪ್ರಯಾಣ ಬೆಳೆಸಲು ಮುಂದಾಗಿದ್ದರೆ? ಅವರ ಪ್ರಯಾಣದ ಟಿಕೆಟ್​ಗಳು ಮಾಧ್ಯಮಗಳಿಗೆ ಸೋರಿಕೆಯಾಗಿರುವುದು ಅಂಥದ್ದೊಂದು ಅನುಮಾನವನ್ನು ಹುಟ್ಟು ಹಾಕಿವೆ. ಮಿಸ್ಟರ್ ಆರ್.ಗಾಂಧಿ ಹೆಸರಿನಲ್ಲಿ ಮೇ 20ರಂದು ದೆಹಲಿಯಿಂದ ಲಂಡನ್​ಗೆ ಹಾಗೂ ಮೇ 22ರಂದು ಲಂಡನ್​ನಿಂದ ದೆಹಲಿಗೆ ರಿಟರ್ನ್ ಟಿಕೆಟ್​ಗಳನ್ನು ಬುಕ್ ಮಾಡಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದುಗೊಳಿಸಲಾಗಿದೆ. ಮತದಾನೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳಿಗೆ ಭಾರಿ ಹಿನ್ನಡೆ ಉಂಟಾಗಿರುವುದನ್ನು ಕಂಡು ಪ್ರಯಾಣ ರದ್ದುಗೊಳಿಸಲಾಗಿದೆ. ಜತೆಗೆ ಎನ್​ಡಿಎ ಹೊರತಾದ ಪಕ್ಷಗಳ ಜತೆ ಮೇ 23ರ ಸೋನಿಯಾ ಗಾಂಧಿ ಸಭೆ ಕೂಡ ರದ್ದುಗೊಂಡಿರುವುದರಿಂದ ರಾಹುಲ್ ಚಿಂತೆಗೀಡಾಗಿದ್ದಾರೆ ಎಂದೇ ವಿಶ್ಲೇಷಿಸಲಾಗಿದೆ.

ಉಪ್ರ ಚುನಾವಣೆಗೆ ಕೈ ಸಿದ್ಧತೆ

ಲಖನೌ: ಲೋಕಸಭೆ ಚುನಾವಣಾ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಸಿದ್ಧತೆಯಲ್ಲಿ ತೊಡಗಿದೆ. 2022ರಲ್ಲಿ ನಡೆಯಲಿರುವ ಚುನಾವಣೆಗಾಗಿ ರಣತಂತ್ರಗಳನ್ನು ರೂಪಿಸಲು ಎಲ್ಲ ಜಿಲ್ಲಾ ಘಟಕಗಳಿಗೆ ಬೂತ್ ಮಟ್ಟದ ಮಾಹಿತಿಗಳನ್ನು ಕೇಂದ್ರ ಕಚೇರಿಗೆ ಕಳುಹಿಸುವಂತೆ ಸೂಚಿಸಿದೆ. ರಾಜ್ಯದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶವೂ ಇದರ ಹಿಂದಿದೆ. ಈ ನಿಟ್ಟಿನಲ್ಲಿ ಮೇ 24 ಅಥವಾ 25 ರಂದು ಪಕ್ಷದ ಹಿರಿಯ ಮುಖಂಡರ ಮಹತ್ವದ ಸಭೆಯನ್ನು ಕರೆಯಲಾಗಿದೆ.

ಹಿಮಾಚಲ ಪರ್ವತದಲ್ಲಿ ಶೇ.100 ಮತದಾನ

ಧರ್ಮಶಾಲಾ: ಮತಗಟ್ಟೆಯನ್ನು ತಲುಪಲು ಚುನಾವಣಾ ಸಿಬ್ಬಂದಿ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಿದ್ದರು. ಆದರೆ, ಹವಾಮಾನ ವೈಪರೀತ್ಯದಿಂದ ಹಾರಾಟ ಸಾಧ್ಯವಾಗಲಿಲ್ಲ. ಹೀಗಾಗಿ 18 ಜನರು ಮೂರು ದಿನಗಳ ರಸ್ತೆ ಪ್ರಯಾಣ, ಚಾರಣದ ಬಳಿಕ ಚುನಾವಣೆಗೂ ಒಂದು ದಿನ ಮುಂಚಿತವಾಗಿ ಗ್ರಾಮವನ್ನು ತಲುಪಿದ್ದರು. ಈ ಗ್ರಾಮದಲ್ಲಿ ಶೇ.100 ಮತದಾನವಾಗಿದ್ದು, ಶ್ರಮಕ್ಕೆ ಪ್ರತಿಫಲ ದೊರೆತಿದೆ. ಕಾಂಗ್ರಾ ಜಿಲ್ಲಾ ವ್ಯಾಪ್ತಿಯ ಬಡಾ ಬಂಗಾಲ್ ಗ್ರಾಮ ಹಿಮಾಲಯ ಪರ್ವತಶ್ರೇಣಿಯಲ್ಲಿ 2,575 ಮೀಟರ್ ಎತ್ತರ ಪ್ರದೇಶದಲ್ಲಿದೆ. 60 ಮಹಿಳೆಯರು ಸೇರಿ 126 ಮತದಾರರಿದ್ದಾರೆ.

Leave a Reply

Your email address will not be published. Required fields are marked *