ಕೇರಳ ಐಸಿಸ್​ ಘಟಕದ ನಾಯಕ ಆಫ್ಘನ್​ನಲ್ಲಿ ಹತ್ಯೆ: ಅಮೆರಿಕ ಯೋಧರಿಂದ ತಿಂಗಳ ಹಿಂದೆ ಹತನಾಗಿರುವ ಶಂಕೆ

ಕೋಳಿಕ್ಕೋಡ್​: ಕೇರಳದ ಐಸಿಸ್​ ಉಗ್ರ ಸಂಘಟನೆ ಘಟಕದ ನಾಯಕ ರಶೀದ್​ ಅಬ್ದುಲ್ಲಾ ಎಂಬಾತನನ್ನು ಅಮೆರಿಕ ಯೋಧರು ಆಫ್ಘಾನಿಸ್ತಾನದಲ್ಲಿ ಹತ್ಯೆ ಮಾಡಿದ್ದಾರೆ. ಒಂದು ತಿಂಗಳ ಹಿಂದೆಯೇ ಈತನ ಹತ್ಯೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಐಸಿಸ್​ ಉಗ್ರನೊಬ್ಬ ಆಫ್ಘಾನಿಸ್ತಾನದ ಖೋರಾಸಾನ್​ ಪ್ರಾಂತ್ಯದಿಂದ ಟೆಲಿಗ್ರಾಂ ಆ್ಯಪ್​ ಮೂಲಕ ರವಾನಿಸಿರುವ ಸಂದೇಶದ ಪ್ರಕಾರ ಅಮೆರಿಕದ ಯೋಧರು ಮನಸೋಯಿಚ್ಛೆ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತ ಮೂಲದ ಮೂವರು ಸಹೋದರರು, ಇಬ್ಬರು ಭಾರತೀಯ ಮಹಿಳೆಯರು ಮತ್ತು ನಾಲ್ಕು ಮಕ್ಕಳು ಹತರಾಗಿದ್ದಾರೆ ಎಂದು ಹೇಳಲಾಗಿದೆ.

ಐಸಿಸ್​ ಸಂಘಟನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದ್ದ ಅಬ್ದುಲ್ಲಾ ಇದ್ದಕ್ಕಿದ್ದಂತೆ ತಟಸ್ಥನಾಗಿದ್ದ ಹಿನ್ನೆಲೆಯಲ್ಲಿ, ಆತನಿಗೆ ಏನಾಯಿತು ಎಂಬ ಬಗ್ಗೆ ಯಾರೋ ಒಬ್ಬರು ಕೇಳಿದ ಪ್ರಶ್ನೆಗೆ ಖೋರಾಸಾನ್​ ಪ್ರಾಂತ್ಯದ ಉಗ್ರನೊಬ್ಬ ಈ ಉತ್ತರ ನೀಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಅಬ್ದುಲ್ಲಾ ಹತನಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

2016ರ ಮೇನಲ್ಲಿ ಅಬ್ದುಲ್ಲಾ ಮತ್ತಾತನ ಪತ್ನಿ ಆಯೇಷಾ ಅಲಿಯಾಸ್​ ಸೋನಿಯಾ ಹಾಗೂ ಆತನ 21 ಹಿಂಬಾಲಕರು ಯುಎಇ ಮತ್ತು ತೆಹ್ರಾನ್​ ಮೂಲಕ ಐಸಿಸ್​ ಉಗ್ರರ ಸಾಂದ್ರತೆ ಹೆಚ್ಚಾಗಿರುವ ಆಫ್ಘಾನಿಸ್ತಾನದ ಪ್ರದೇಶಕ್ಕೆ ತೆರಳಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *