
ಶಿವಮೊಗ್ಗ: ಗ್ರಾಹಕರ ಮೇಲೆ ಬ್ಯಾಂಕ್ ಆಡಳಿತ ಮಂಡಳಿ ವಿಶ್ವಾಸ ಇಡಬೇಕು. ಅದೇ ರೀತಿ ಗ್ರಾಹಕರು ಪ್ರಾಮಾಣಿಕವಾಗಿ ವ್ಯವಹಾರ ಮಾಡಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಹೇಳಿದರು.
ಮಿಳಘಟ್ಟದ ಸಾರಸ್ವತ ಸೌಹಾರ್ದ ಪತ್ತಿನ ಸಹಕಾರ ಸಂಘದಿಂದ ನಿರ್ಮಿಸಿರುವ ನೂತನ ಕಟ್ಟಡ ಸಾರಸ್ವತ ಸೌಧ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಿಬ್ಬಂದಿಯು ಬ್ಯಾಂಕ್ ಹಾಗೂ ಗ್ರಾಹಕರ ನಡುವೆ ಕೊಂಡಿಯಂತೆ ಕೆಲಸ ಮಾಡಿದಾಗ ಯಾವುದೇ ಹಣಕಾಸು ಸಂಸ್ಥೆ ಯಶಸ್ವಿಯಾಗಿ ಮುಂದುವರಿಯಲು ಸಾಧ್ಯ ಎಂದು ತಿಳಿಸಿದರು.
ದೇಶದಲ್ಲಿ ಆರ್‌ಬಿಐ ಆರಂಭವಾಗುವ ಮೊದಲೇ ನಮ್ಮ ಸಮಾಜದ ಹಿರಿಯರು 1901ರಿಂದ 1910ರೊಳಗೆ ಹಲವಾರು ಬ್ಯಾಂಕ್‌ಗಳನ್ನು ಸ್ಥಾಪಿಸಿ, ದೇಶಕ್ಕೆ ಮಹೋನ್ನತ ಕೊಡುಗೆ ನೀಡಿದ್ದರು ಎಂದರು.
ಸಾರಸ್ವತ ಮುನಿ ಮತ್ತು ಸರಸ್ವತಿ ನದಿ ತೀರದ ಬಾಂಧವ್ಯವಿರುವ ಸಾರಸ್ವತರು ವಿದ್ಯೆ, ಆರೋಗ್ಯ ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಹಾಗೂ ಅನೇಕ ಕೊಡುಗೆ ನೀಡಿದ್ದಾರೆ. ಇತ್ತೀಚೆಗೆ ಕೆಲ ಬ್ಯಾಂಕ್‌ಗಳಲ್ಲಿ ದೊಡ್ಡಮಟ್ಟದ ವಂಚನೆ ನಡೆದಿರುವುದು ರಾಷ್ಟ್ರಮಟ್ಟದ ಸುದ್ದಿಯಾಗಿತ್ತು. ಬ್ಯಾಂಕ್ ಅಧಿಕಾರಿಯೊಬ್ಬಳು ವೃದ್ಧರ ಕೋಟ್ಯಂತರ ರೂ.ಗಳನ್ನು ನಕಲಿ ದಾಖಲೆ ಸೃಷ್ಟಿಸಿ, ಷೇರು ಮಾರುಕಟ್ಟೆಗೆ ಹಾಕಿ ಎಲ್ಲವನ್ನೂ ಕಳೆದುಕೊಂಡು ಕೊನೆಗೆ ಜೈಲು ಪಾಲಾಗಿದ್ದಾಳೆ ಎಂದು ಹೇಳಿದರು.
ಸಾರಸ್ವತ ಸಹಕಾರ ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್ ದೇವದಾಸ್ ಎನ್. ನಾಯಕ್, ಸಂಸ್ಥಾಪಕ ನಿರ್ದೇಶಕ ನರಸಿಂಹ ಕಿಣಿ, ಇಂಜಿನಿಯರ್ ಎಂ.ಆರ್.ಅರ್ಜುನ್ ಪೈ ಹಾಗೂ ವಿಶೇಷ ಆಹ್ವಾನಿತ ಜಿಎಸ್‌ಬಿ ಸಮಾಜದ ಅಧ್ಯಕ್ಷ ಭಾಸ್ಕರ್ ಜಿ. ಕಾಮತ್ ಅವರನ್ನು ಸನ್ಮಾನಿಸಲಾಯಿತು. ಸಹಕಾರ ಅಧ್ಯಕ್ಷ ಎಂ.ಆರ್.ಗೋಪಾಲಕೃಷ್ಣ ಪಂಡಿತ್, ಉಪಾಧ್ಯಕ್ಷ ಸುಧೀರ್ ನಾಯಕ್, ಸಿಇಒ ನಾಗರಾಜ್ ಮತ್ತಿತರರಿದ್ದರು.