ಸಿನಿಮಾ

ಲಕ್ಷ್ಮೇಶ್ವರಕ್ಕೆ ಮೂಲಸೌಲಭ್ಯ ಕಲ್ಪಿಸುವ ಸವಾಲು

ಲಕ್ಷ್ಮೇಶ್ವರ: ಪ್ರತ್ಯೇಕ ತಾಲೂಕು ಕೇಂದ್ರವಾಗಿ 6 ವರ್ಷಗಳಾಗಿವೆ. ಪಟ್ಟಣವು ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಆದರೆ, ಪಟ್ಟಣ ಹಾಗೂ ತಾಲೂಕಿನ ಗ್ರಾಮಗಳ ಅಭಿವೃದ್ಧಿಯೇ ಮರೀಚಿಕೆಯಾಗಿದೆ. ನೂತನ ಶಾಸಕ ಡಾ. ಚಂದ್ರು ಲಮಾಣಿ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಕ್ಷೇತ್ರದಲ್ಲಿ ಯಾವ ಪಕ್ಷದ ಶಾಸಕರು ಆಯ್ಕೆ ಆಗುತ್ತಾರೋ ಅದೇ ಪಕ್ಷ ಆಡಳಿತದಲ್ಲಿರುತ್ತಿತ್ತು. ಈ ಬಾರಿ ಫಲಿತಾಂಶ ವಿರುದ್ಧ ಬಂದಿದೆ. ಆಡಳಿತಾರೂಢ ಪಕ್ಷದ ಶಾಸಕರಿದ್ದಾಗಲೇ ಜನರ ನಿರೀಕ್ಷೆಗಳು ಸಂಪೂರ್ಣ ಸಾಕಾರವಾಗಿಲ್ಲ. ಈಗ ವಿರೋಧ ಪಕ್ಷದ ಸ್ಥಾನದಲ್ಲಿರುವ, ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಹೇಗೆ ಅನುದಾನ ತಂದು ಕ್ಷೇತ್ರದ ಸಮಸ್ಯೆ ಬಗೆಹರಿಸುವರು ಎಂಬ ಪ್ರಶ್ನೆಯೂ ಮತದಾರರ ಮನಸಿನಲ್ಲಿದೆ.
ಕುಡಿಯುವ ನೀರಿನ ಸಮಸ್ಯೆ: ಪಟ್ಟಣ ಹಾಗೂ ಮಾರ್ಗದ 7 ಹಳ್ಳಿಗಳಿಗೆ ತುಂಗಭದ್ರಾ ನದಿ ನೀರು ಹರಿಸಲು 20 ವರ್ಷದ ಹಿಂದೆ 40 ಕಿ.ಮೀ ದೂರದ ತುಂಗಭದ್ರಾ ನದಿಯಿಂದ ಪಟ್ಟಣಕ್ಕೆ ತುಂಗಭದ್ರಾ ನದಿ ನೀರಿನ ಯೋಜನೆ ಅನುಷ್ಠಾನಗೊಂಡಿದೆ. ಆದರೆ ಈ ಯೋಜನೆ ಕುಂಟುತ್ತಾ ಸಾಗಿದೆ. ಯೋಜನೆಗಾಗಿ ಅಳವಡಿಸಿದ ಪೈಪ್‌ಲೈನ್, ನೀರೆತ್ತುವ ಪಂಪ್‌ಹೌಸ್, ನೀರು ಶುದ್ಧೀಕರಣ ಘಟಕದ ಯಂತ್ರೋಪಕರಣಗಳು ತುಕ್ಕು ಹಿಡಿದಿವೆ. ನದಿ ನೀರಿನ ಯೋಜನೆ ಸಂಪೂರ್ಣ ಸ್ಥಗಿತಗೊಂಡು ಜನರು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಹೊಸ ಪೈಪ್‌ಲೈನ್ ಹಾಕಬೇಕಿದೆ. ಇದಕ್ಕೆ ಕೋಟಿಗಟ್ಟಲೇ ಅನುದಾನದ ಅಗತ್ಯವಿದೆ.
ತಾಲೂಕು ಕಚೇರಿ: ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಡಳಿತಾವಧಿಯ ಕೊನೇ ದಿನಗಳಲ್ಲಿ ಅಂದರೆ 6 ವರ್ಷದ ಹಿಂದೆ ಘೋಷಣೆ ಮಾಡಿದ್ದ ಲಕ್ಷ್ಮೇಶ್ವರ ತಾಲೂಕು ಕೇಂದ್ರ ತಹಸೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ, ಉಪ ನೋಂದಣಾಧಿಕಾರಿ ಕಚೇರಿ ಹೊರತುಪಡಿಸಿ ಯಾವುದೇ ತಾಲೂಕು ಮಟ್ಟದ ಕಚೇರಿಗಳು ಕಾರ್ಯಾರಂಭ ಮಾಡಿಲ್ಲ.
ಸೂರು, ಕಾಲೇಜ್ ಸಮಸ್ಯೆ: ಪುರಸಭೆ ವ್ಯಾಪ್ತಿಯಲ್ಲಿ ರಾಮಕೃಷ್ಣ ದೊಡ್ಡಮನಿ ಮತ್ತು ರಾಮಣ್ಣ ಲಮಾಣಿ ಅವಧಿಯಲ್ಲಿ ಒಟ್ಟು 56 ಎಕರೆ ಜಮೀನು ಖರೀದಿಯಾಗಿದ್ದರೂ ನಿವೇಶನ ಅಭಿವೃದ್ಧಿ, ಫಲಾನುಭವಿಗಳ ಆಯ್ಕೆ, ಪಟ್ಟಾ ಬುಕ್ ಹಂಚಿಕೆ ನನೆಗುದಿಗೆ ಬಿದ್ದಿದೆ. ಸದ್ಯ 1,400 ಫಲಾನುಭವಿಗಳಿಗೆ ಆಶ್ರಯ ನಿವೇಶನ ಹಂಚಬೇಕಿದೆ.

ಶಿರಹಟ್ಟಿ ವಿಧಾನಸಭಾ ಕ್ಷೇತ್ರ ದೊಡ್ಡದಿದೆ. ಮೂಲಸೌಲಭ್ಯ ಕಲ್ಪಿಸುವ ಸವಾಲು ನನ್ನ ಮೇಲಿವೆ. ಕ್ಷೇತ್ರದಲ್ಲಿ ಎಲ್ಲ ಪಕ್ಷಗಳಿಂದ ಆಯ್ಕೆಯಾಗಿ ಅಧಿಕಾರ ನಡೆಸಿದ ಮಾಜಿ ಶಾಸಕರಿದ್ದಾರೆ. ಮಾಜಿ ಶಾಸಕರ, ನಾಯಕರ, ಅಧಿಕಾರಿಗಳ ಸಲಹೆ, ಮಾರ್ಗದರ್ಶನ ಪಡೆದು ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ.
ಡಾ. ಚಂದ್ರು ಲಮಾಣಿ ಶಾಸಕ

Latest Posts

ಲೈಫ್‌ಸ್ಟೈಲ್