ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ: ಸರ್ಕಾರಿ ಬಸ್​ ಟಿಕೆಟ್​ ದರ ಏರಿಕೆಯ ಸುಳಿವು ನೀಡಿದ ನೂತನ ಸಾರಿಗೆ ಸಚಿವ

ಬೆಂಗಳೂರು: ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಸಾಲು ಸಾಲು ರಜೆ ಇರುವ ಹಿನ್ನೆಲೆಯಲ್ಲಿ ತಮ್ಮೂರಿಗೆ ತೆರಳಲು ಅನೇಕ ಜನರು ಕಾದು ಕುಳಿತಿದ್ದಾರೆ. ಇದರ ನಡುವೆ ಹಬ್ಬಕ್ಕೆ ಬಸ್​ ಟಿಕೆಟ್​ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಕಂಡುಬರುತ್ತಿದೆ.

ಸೆಪ್ಟೆಂಬರ್​ 2ರ ಸೋಮವಾರದಂದು ಗಣೇಶ ಹಬ್ಬದ ಸಂಭ್ರಮ ದೇಶಾದ್ಯಂತ ಮನೆ ಮಾಡಲಿದೆ. ಶನಿವಾರ, ಭಾನುವಾರ ಮತ್ತು ಸೋಮವಾರ ಸಾಲು ಸಾಲು ರಜೆ ಇರುವುದರಿಂದ ಶುಕ್ರವಾರ ಸಂಜೆಯೇ ಅನೇಕರು ತಮ್ಮೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್​ ಟಿಕೆಟ್​ ದರ ಏರಿಸುವ ಮುನ್ಸೂಚನೆಯನ್ನು ನೂತನ ಸಾರಿಗೆ ಸಚಿವರಾದ ಲಕ್ಷಣ ಸವದಿ ಅವರು ನೀಡಿದ್ದಾರೆ.

ಈ ಬಗ್ಗೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರಿ ಬಸ್​ಗಳ ಟಿಕೆಟ್​ ದರವನ್ನು ಬಹಳಷ್ಟು ಹೆಚ್ಚಿಗೆ ಮಾಡಿಲ್ಲ. ಈ ಕುರಿತು ನಾಳೆ ಅಧಿಕಾರಿಗಳ ಸಭೆ ಕರೆದಿದ್ದೇನೆ. ಬಸ್​ಗಳ ಟಿಕೆಟ್ ದರ ಹೆಚ್ಚಳ ಬಗ್ಗೆ ಚರ್ಚಿಸುತ್ತೇನೆ. ಹಬ್ಬಕ್ಕೆ ಹೆಚ್ಚುವರಿ, ವಿಶೇಷ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ಜನರಿಗೆ ಯಾವುದೇ ಸಮಸ್ಯೆ ಆಗದಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)