ಪಿರಿಯಾಪಟ್ಟಣ: ರಾಷ್ಟ್ರದ ಏಳಿಗೆಯಲ್ಲಿ ತನ್ನದೇ ಆದ ಪ್ರಭಾವ ಬೀರುವ ವರ್ಗ ಎನಿಸಿಕೊಂಡಿರುವ ವಕೀಲರ ಸಮುದಾಯ ಹಕ್ಕುಗಳನ್ನು ರಕ್ಷಿಸುವ ಕೆಲಸ ಸಹ ಮಾಡಬೇಕಿದೆ ಎಂದು ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ಎಂ.ರಾಜು ತಿಳಿಸಿದರು.
ಪಟ್ಟಣದ ವಕೀಲರ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಾವುದೇ ಆಚರಣೆಯ ಉದ್ದೇಶ ಆ ದಿನದ ಪ್ರಾಮುಖ್ಯತೆ ಮತ್ತು ಪಾವಿತ್ರೃ ತಿಳಿಯುವುದಕ್ಕಾಗಿರುತ್ತದೆ. ಸ್ವಾತಂತ್ರೃ ಚಳವಳಿಯಲ್ಲಿ ವಕೀಲರು ಪ್ರಮುಖ ಪಾತ್ರ ವಹಿಸಿದ್ದರು. ನಂತರದ ದಿನಗಳಲ್ಲಿ ವಕೀಲರು ಪ್ರಜಾಪ್ರಭುತ್ವ ರಕ್ಷಿಸುವ ಕೆಲಸದಲ್ಲಿ ಸದಾ ಮುಂದಿದ್ದಾರೆ ಎಂದು ಶ್ಲಾಘಿಸಿದರು.
ಯಶಸ್ವಿ ವಕೀಲರಾದಲ್ಲಿ ಅವರ ಎಲ್ಲ ಆಸೆಗಳು ಕೈಗೂಡಲಿದೆ. ಆದರೆ ಅದಕ್ಕಾಗಿ ಸತತ ಶ್ರಮ ಪಡಬೇಕಾದ ಅಗತ್ಯವಿದ್ದು, ವೃತ್ತಿಯಲ್ಲಿ ಸ್ಪಷ್ಟತೆ, ಸತತ ಅಧ್ಯಯನ ಮನೋಭಾವ, ಸಮರ್ಪಣೆ ಮತ್ತು ಪರಿಶ್ರಮ ಅಗತ್ಯ ಅಂಶಗಳು ಎಂದರು.
ನ್ಯಾಯಾಲಯ ಮತ್ತು ವಕೀಲರು ಒಂದು ಕುಟುಂಬದ ಸದಸ್ಯರಿದ್ದಂತೆ ಎಂಬುದನ್ನು ಎಂದಿಗೂ ಮರೆಯಬಾರದು. ಕಿರಿಯ ವಕೀಲರು ತಮ್ಮ ವೃತ್ತಿಯ ಪ್ರಾರಂಭದಲ್ಲಿ ನಿರಾಶರಾಗದೆ ಉತ್ತಮ ಭವಿಷ್ಯ ಕಂಡುಕೊಳ್ಳುತ್ತಾ ಮುನ್ನಡೆಯಿರಿ ಎಂದು ಸಲಹೆ ನೀಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೀಶ್ ಮಾತನಾಡಿ, ವಕೀಲರು ಒಗ್ಗಟ್ಟು ಕಾಪಾಡಿಕೊಳ್ಳುವ ಜತೆಗೆ ವೃತ್ತಿ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಆಗ ಮಾತ್ರ ಉತ್ತಮ ವಕೀಲರಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ವೇತಾ ಮಾತನಾಡಿ, ವಕೀಲ ವೃತ್ತಿ ಗಣಿಗಾರಿಕೆ ಇದ್ದಂತೆ. ಬಗೆದಷ್ಟು ಖನಿಜ ಸಿಗುವಂತೆ, ಸತತ ಅಧ್ಯಯನ ಮಾಡಿದಷ್ಟು ಹೆಚ್ಚಿನ ಜ್ಞಾನ ಹೊಂದಲು ಸಾಧ್ಯ ಎಂದರು.
ಹಿರಿಯ ವಕೀಲ ಗೋವಿಂದಗೌಡ ಮತ್ತು ಬಿ.ವಿ.ಜವರೇಗೌಡ, ಬಿ.ಆರ್.ಗಣೇಶ್ ವಕೀಲರ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಹಿರಿಯ ವಕೀಲ ವಿಜಯ್ ಅವರನ್ನು ಸನ್ಮಾನಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಧನಪಾಲ್, ಕಾರ್ಯದರ್ಶಿ ಕೆ.ಶಂಕರ್, ಖಜಾಂಚಿ ಹರೀಶ್, ಉಪಾಧ್ಯಕ್ಷ ಚಂದ್ರೇಗೌಡ, ಶಿವಶಂಕರ್ ಗಾವಂಕರ್ ಹಿರಿಯ, ಕಿರಿಯ ವಕೀಲರು ಇದ್ದರು.