ಪಾಂಡವಪುರ: ಜಮೀನು ವಿಚಾರವಾಗಿ ಚರ್ಚಿಸಲು ಬಂದ ವಕೀಲನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರ ವರ್ತನೆ ಸರಿಯಲ್ಲ ಎಂದು ಆರೋಪಿಸಿ ವಕೀಲರು ತಾಲೂಕು ಕಚೇರಿ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಮತ್ತು ನಾಗಮಂಗಲ ತಾಲೂಕಿನ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ವಕೀಲರು, ಉಪವಿಭಾಗಾಧಿಕಾರಿ ಶ್ರೀನಿವಾಸ್ ನಡೆ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಕೀಲರ ಸಂಘದ ತಾಲೂಕು ಕಾರ್ಯದರ್ಶಿ ಕನಗನಮರಡಿ ನಾಗರಾಜು ಮಾತನಾಡಿ, ಉಪವಿಭಾಗಾಧಿಕಾರಿ ಪ್ರತಿಯೊಂದು ಕೆಲಸಕ್ಕೂ ಇಂತಿಷ್ಟು ಹಣ ಕೊಡಲೇಬೇಕೆಂಬ ನಿಯಮ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಮೂವರು ದಲ್ಲಾಳಿಗಳನ್ನು ನೇಮಕ ಮಾಡಿಕೊಂಡು ಅವರ ಮೂಲಕ ವಸೂಲಿ ಮಾಡುತ್ತಿದ್ದಾರೆ. ಕಚೇರಿಯಲ್ಲಿ ಮಾಡಬೇಕಾದ ಆದೇಶಗಳನ್ನು ಹೋಟೆಲ್ ಮತ್ತು ದಲ್ಲಾಳಿಗಳ ಮನೆಗಳಲ್ಲಿ ಕುಳಿತು ಮಾಡುತ್ತಾರೆ. ಸಂಜೆ ಮಾಡಿದ ಆದೇಶ ರಾತ್ರಿಯೊಳಗೆ ಬದಲಾಗಿ ದಾಖಲೆಗಳು ಸೃಷ್ಟಿಯಾಗುತ್ತಿವೆ. ವಕೀಲರ ಕರ್ತವ್ಯ ಮತ್ತು ಜ್ಞಾನದ ಬಗ್ಗೆ ಉದಾಸೀನವಾಗಿ ಮಾತನಾಡುತ್ತಾರೆ. ಇದರಿಂದ ವಕೀಲರ ಗೌರವಕ್ಕೆ ಧಕ್ಕೆಯಾಗುತ್ತಿದೆ. ಉಪವಿಭಾಗಾಧಿಕಾರಿಗಳ ಕರ್ತವ್ಯ ನಿಷ್ಠೆ ಬಗ್ಗೆ ಅನುಮಾನವಿದ್ದು. ಇವರು ಅಧಿಕಾರ ವಹಿಸಿಕೊಂಡಾಗಿನಿಂದ ಈವರೆಗೂ ಎಸಿ ನ್ಯಾಯಾಲಯದಲ್ಲಿ ಆಗಿರುವ ಎಲ್ಲ ವ್ಯಾಜ್ಯಗಳಿಗೆ ಸಂಬಂಧಿಸಿದ ಆದೇಶಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಎಸಿ ನ್ಯಾಯಾಲಯದಲ್ಲಿ ಸಾಕಷ್ಟು ಅಕ್ರಮ ಮತ್ತು ಭ್ರಷ್ಟಾಚಾರ ನಡೆಯುತ್ತಿದ್ದು, ಈ ಬಗ್ಗೆ ನಮ್ಮ ಬಳಿ ಸೂಕ್ತ ದಾಖಲೆಗಳಿದೆ. ಭ್ರಷ್ಟಚಾರದಲ್ಲಿ ಮುಳುಗಿರುವ ಉಪವಿಭಾಗಾಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸದಿದ್ದರೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ನಡೆಯುವ ಯಾವುದೇ ಕಲಾಪಗಳಲ್ಲಿ ವಕೀಲರು ಭಾಗವಹಿಸುವುದಿಲ್ಲ. ಅವರು ಏಕಪಕ್ಷೀಯವಾಗಿ ಆದೇಶ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.
ಇದೇ ವೇಳೆ ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿರುವ ಉಪವಿಭಾಗಾಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕಾಳೇಗೌಡ, ಕಾರ್ಯದರ್ಶಿ ನಾಗರಾಜು, ವಕೀಲರಾದ ಜಿ.ಬಿ.ಸುರೇಶ್, ಪುಟ್ಟರಾಜು ಇತರರು ಇದ್ದರು.