ಅಗಸ್ತಾ ವೆಸ್ಟ್​ಲ್ಯಾಂಡ್​ ಆರೋಪಿ ಮಿಶೆಲ್​ ಪರ ವಕೀಲ ಕಾಂಗ್ರೆಸ್ಸಿಗ: ವಿಚಾರ ತಿಳಿಯುತ್ತಲೇ ಪಕ್ಷದಿಂದ ಉಚ್ಚಾಟನೆ

ದೆಹಲಿ: ಅಗಸ್ತಾ ವೆಸ್ಟ್​ಲ್ಯಾಂಡ್​ ಹಗರಣದ ಆರೋಪಿ ಕ್ರಿಶ್ಚಿಯನ್​ ಮಿಶೆಲ್​ ಪರ ವಾದ ಮಂಡನೆ ಮಾಡುತ್ತಿರುವ ವಕೀಲ ರಾಷ್ಟ್ರೀಯ ಯುವ ಕಾಂಗ್ರೆಸ್​ನ ಕಾನೂನು ವಿಭಾಗದ ಮುಖ್ಯಸ್ಥ ಅಲ್ಜೋ ಕೆ ಜೋಸೆಫ್ ಎಂಬವರಾಗಿದ್ದು, ವಿಚಾರ ಪಕ್ಷದ ಗಮನಕ್ಕೆ ಬರುತ್ತಲೇ ​ ಅವರನ್ನು ಉಚ್ಚಾಟನೆ ಮಾಡಿದೆ.

ಈ ಕುರಿತು ಯುವ ಕಾಂಗ್ರೆಸ್​ನಿಂದ ಅಧಿಕೃತ ಆದೇಶ ಹೊರ ಬಿದ್ದಿದೆ. ಪಕ್ಷದ ನಿರ್ಧಾರದ ಕುರಿತು ಮಾತನಾಡಿರುವ ಯುವ ಕಾಂಗ್ರೆಸ್​ನ ವಕ್ತಾರ ಅಮರೀಶ್​ ರಾಂಜನ್​ ಪಾಂಡೆ, ” ಮಿಶೆಲ್​ ಪರ ವಾದ ಮಂಡಿಸಿರುತ್ತಿರುವುದು ಅಲ್ಜೋ ಜೋಸೆಫ್​ ಅವರ ವೈಯಕ್ತಿಕ ನಿರ್ಧಾರ. ಈ ವಿಚಾರವಾಗಿ ಅವರು ಪಕ್ಷವನ್ನು ಸಂಪರ್ಕಿಸಿಲ್ಲ. ಈ ವಿಚಾರಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವೂ ಇಲ್ಲ. ಅದನ್ನು ಒಪ್ಪುವುದೂ ಇಲ್ಲ. ಈ ಹಿನ್ನೆಲೆಯಲ್ಲಿ ಅಲ್ಜೋ ಜೋಸೆಫ್​ ಅವರನ್ನು ಯುವ ಕಾಂಗ್ರೆಸ್​ನ ಕಾನೂನು ವಿಭಾಗದಿಂದ ತೆಗೆದುಹಾಕಲಾಗಿದೆ. ಅಲ್ಲದೇ ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ಪಕ್ಷದಿಂದ ಉಚ್ಚಾಟಿಸಲಾಗಿದೆ” ಎಂದಿದ್ದಾರೆ.

ಇದಕ್ಕೂ ಮೊದಲು ಮಾತನಾಡಿದ್ದ ವಕೀಲ ಅಲ್ಜೋ ಜೋಸೆಫ್​, ” ನನ್ನ ಸ್ವಂತ ಶಕ್ತಿ ಮತ್ತು ವಿವೇಚನೆ ಮೇರೆಗೆ ನಾನು ಈ ಪ್ರಕರಣದಲ್ಲಿ ವಾದ ಮಂಡಿಸುತ್ತಿದ್ದೇನೆ. ನನ್ನ ಈ ನಿರ್ಧಾರಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ದುಬೈನಲ್ಲಿರುವ ನನ್ನ ಕೆಲ ಸ್ನೇಹಿತರು ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ತಿಳಿಸಿದ್ದರು,” ಎಂದು ಸ್ಪಷ್ಟಪಡಿಸಿದ್ದರು.

ಇನ್ನು ಪಕ್ಷದಲ್ಲಿ ನೀವು ಯಾವ ಹುದ್ದೆ ನಿಭಾಯಿಸುತ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, “ನಾನು ರಾಷ್ಟ್ರೀಯ ಯುವ ಕಾಂಗ್ರೆಸ್​ನ ಕಾನೂನು ವಿಭಾಗದ ಮುಖ್ಯಸ್ಥನಾಗಿದ್ದೇನೆ,” ಎಂದು ತಿಳಿಸಿದ್ದರು.