ನ್ಯಾಯವಾದಿಗಳ ಹತ್ಯೆಗೆ ತೀವ್ರ ಖಂಡನೆ

ವಿಜಯಪುರ : ದೇಶದ ವಿವಿಧೆಡೆ ನ್ಯಾಯವಾದಿಗಳ ಹತ್ಯೆ ಖಂಡಿಸಿ ಜಿಲ್ಲಾ ನ್ಯಾಯವಾದಿಗಳ ಸಂಘದ ನೇತೃತ್ವದಲ್ಲಿ ನ್ಯಾಯವಾದಿಗಳು ಶನಿವಾರ ನ್ಯಾಯಾಲಯದ ಕಾರ್ಯ ಕಲಾಪಗಳಿಂದ ದೂರ ಉಳಿದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಜಿಲ್ಲಾಧ್ಯಕ್ಷ ಎಂ.ಎಚ್. ಖಾಸನೀಸ್ ಮಾತನಾಡಿ, ನ್ಯಾಯದಾನದ ಪವಿತ್ರ ಕರ್ತವ್ಯದಲ್ಲಿರುವ ನ್ಯಾಯವಾದಿಗಳ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಗಳು ನಡೆಯುತ್ತಿವೆ. ಈ ಎಲ್ಲ ಘಟನೆಗಳಿಂದಾಗಿ ನ್ಯಾಯವಾದಿಗಳು ಭಯದ ವಾತಾವರಣದಲ್ಲಿ ತಮ್ಮ ಕರ್ತವ್ಯ ನಿಭಾಯಿಸಬೇಕಾಗಿದೆ. ಉತ್ತರ ಪ್ರದೇಶದಲ್ಲಿ ಮಹಿಳಾ ನ್ಯಾಯವಾದಿಯೊಬ್ಬರನ್ನು ಹಾಗೂ ಸೊಲ್ಲಾಪೂರದಲ್ಲಿ ನ್ಯಾಯವಾದಿಯೊಬ್ಬರನ್ನು ಹಲ್ಲೆ ಮಾಡಿರುವ ದುಷ್ಕರ್ಮಿಗಳ ಕ್ರಮ ಅತ್ಯಂತ ಖಂಡನೀಯ. ಈ ರೀತಿಯ ಘಟನೆಗೆ ಕಾರಣವಾದ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನ್ಯಾಯವಾದಿಗಳ ಮೇಲೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಲ್ಲೆ, ಅನುಚಿತ ವರ್ತನೆ ಮೊದಲಾದವುಗಳು ನಡೆಯದಂತೆ ಗಂಭೀರವಾದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ನ್ಯಾಯವಾದಿಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಿ ಅವರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸುವ ವಾತಾವರಣವನ್ನು ಸರ್ಕಾರಗಳು ಮಾಡಬೇಕಿದೆ. ವಕೀಲರ ಭದ್ರತೆಗಾಗಿ ವಿಶೇಷ ಕಾಯ್ದೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರಗಳು ಮುಂದಾಗಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

ನ್ಯಾಯವಾದಿಗಳ ಸಂಘದ ಜಿಲ್ಲಾ ಉಪಾಧ್ಯಕ್ಷ ಎ.ಎನ್. ರುಣವಾಲ, ಹಿರಿಯ ನ್ಯಾಯವಾದಿ ಬಿ.ಎ. ಲಾಹೋರಿ, ಎಂ.ಎಸ್. ಗಿರಣಿ, ಆರ್.ಎಸ್. ಹೊಟಕರ, ಡಿ.ಎಸ್. ಚವಾಣ್,ಎಸ್.ಬಿ. ನಂದೂರ, ಎಂ.ಕೆ. ಜತಕರ, ಆರ್.ಜಿ. ದೇಶಪಾಂಡೆ, ಎಂ.ಎಸ್. ಬಗಲಿ ಮೊದಲಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *