ಪೋಕ್ಸೋಗೆ ಇನ್ನಷ್ಟು ಪವರ್

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ ಕಠಿಣ ನಿಲುವು ಕೈಗೊಂಡಿರುವ ಕೇಂದ್ರ ಸರ್ಕಾರ, ಕಾಮಾಂಧರನ್ನು ಗಲ್ಲುಶಿಕ್ಷೆಗೆ ಗುರಿಪಡಿಸಲು ಅವಕಾಶವಾಗುವಂತೆ ಪೋಕ್ಸೋ ಕಾಯ್ದೆಗೆ ತಿದ್ದುಪಡಿ ತರುವ ಮಹತ್ವದ ತೀರ್ಮಾನ ಕೈಗೊಂಡಿದೆ.

ಶುಕ್ರವಾರ ದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರ ಹೊರಬಿದ್ದಿದೆ. 2012ರಲ್ಲಿ ಜಾರಿಗೆ ಬಂದ ಪೋಕ್ಸೋ ಕಾಯ್ದೆಗೆ ತಿದ್ದು ಪಡಿಯಾದಲ್ಲಿ ಮಕ್ಕಳ ಮೇಲೆ ಮೃಗೀಯ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಗಲ್ಲು ಶಿಕ್ಷೆಯಾಗಲಿದೆ.

ಕಾಯ್ದೆ ಪರಿಷ್ಕರಣೆ ಕುರಿತಂತೆ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸುದ್ದಿಗಾರರಿಗೆ ಮಾಹಿತಿ ನೀಡಿದರು. ‘ಪೋಕ್ಸೋ ಕಾಯ್ದೆಯ ಹಲವು ಸೆಕ್ಷನ್​ಗಳಿಗೆ ತಿದ್ದುಪಡಿ ಮಾಡಲಾಗಿದೆ. ಮಕ್ಕಳ ಲೈಂಗಿಕತೆ ಚಿತ್ರ ಹಾಗೂ ವಿಡಿಯೋಗಳನ್ನು ಹರಡುವುದು, ಲೈಂಗಿಕತೆಗೆ ಬಳಸಿಕೊಳ್ಳುವುದಕ್ಕಾಗಿ ಮಕ್ಕಳಿಗೆ ಹಾಮೋನ್ ನೀಡಿ ಶೀಘ್ರ ಪ್ರಾಯಕ್ಕೆ ತರುವಂತಹ ಕೃತ್ಯಗಳು ನಡೆಯುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕಾಯ್ದೆಯ ಸೆಕ್ಷನ್ 9ರನ್ವಯ ಅಪರಾಧಿಗಳ ವಿರುದ್ಧ ಕಠಿಣಾತಿಕಠಿಣ ಕ್ರಮ ಜರುಗಿಸುವಂತೆ ತಿದ್ದುಪಡಿ ತರಲಾಗಿದೆ’ ಎಂದರು.

ಚಿತ್ರ ಬಳಕೆಗೂ ಜೈಲು

ವರದಿಗಾರಿಕೆ ಮತ್ತು ಕೋರ್ಟ್​ನ ಸಾಕ್ಷ್ಯವಾಗಿ ಬಳಸುವ ಹೊರತಾಗಿ ಮಕ್ಕಳ ಲೈಂಗಿಕ ಚಿತ್ರ ಮತ್ತು ವಿಡಿಯೋಗಳನ್ನು ಯಾವುದೇ ರೀತಿಯ ಮಾಧ್ಯಮಗಳ ಮುಖಾಂತರ ಹರಡಿದಲ್ಲಿ ಅಂಥವರಿಗೆ ದಂಡ ವಿಧಿಸಲು ಪರಿಷ್ಕೃತ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಪರಾಧಿಗಳು ಲೈಂಗಿಕ ದೌರ್ಜನ್ಯಕ್ಕೆ ಮತ್ತೆ ಮುಂದಾದಲ್ಲಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲೂ ಕೂಡ ಕಾನೂನು ಅನ್ವಯ ಅವಕಾಶ ಮಾಡಲಾಗಿದೆ. ಮಕ್ಕಳ ಲೈಂಗಿಕ ಚಿತ್ರ ಅಥವಾ ವಿಡಿಯೋವನ್ನೂ ಇನ್ನು ಸಂಗ್ರಹಿಸುವಂತಿಲ್ಲ. ಒಂದು ವೇಳೆ ಇದ್ದಲ್ಲಿ ಅದನ್ನು ನಾಶಗೊಳಿಸಬೇಕು ಎಂದು ಕಾಯ್ದೆ ಹೇಳುತ್ತದೆ.