ಪದೋನ್ನತಿಯಲ್ಲಿ ಸಮಾನ ಅವಕಾಶ

| ಲ.ರಾಘವೇಂದ್ರ

ಸರ್ಕಾರಿ ಹುದ್ದೆಯ ಪದೋನ್ನತಿಯಲ್ಲಿ ಇತಿಹಾಸ ಸೃಷ್ಟಿಸಿದ ‘ಬಿ.ಕೆ. ಪವಿತ್ರಾ’ ಪ್ರಕರಣ.

ಸರ್ಕಾರದ ಆಡಳಿತದಲ್ಲಿ ಎಲ್ಲಾ ಜಾತಿ ವರ್ಗದವರು ಸಮಾನವಾಗಿ ಪಾಲ್ಗೊಳ್ಳಬೇಕು, ಸರ್ಕಾರಿ ಸೇವೆಯ ಪದೋನ್ನತಿಯಲ್ಲಿ ಸಮಾನ ಅವಕಾಶಗಳಿರಬೇಕು, ಯಾವುದೇ ತಾರತಮ್ಯ ಇರಕೂಡದು. ಭಾರತ ಸಂವಿಧಾನದ 335ನೇ ಅನುಚ್ಛೇದದಡಿಯಲ್ಲಿ ಮೀಸಲಾತಿಯಡಿಯಲ್ಲಿ ಕಾರ್ಯಕ್ಷಮತೆ ಕುಂದಬಾರದು. ರಾಜ್ಯ ಸರ್ಕಾರವು ಪದೋನ್ನತಿಯಲ್ಲಿ ಮೀಸಲಾತಿ ಪದ್ಧತಿಯನ್ನು ದಿನಾಂಕ 27.4.1978ರಿಂದ ಒಂದು ಕಾರ್ಯಕಾರಿ ಆದೇಶದ ಮೂಲಕ ಜಾರಿಗೆ ತಂದಿದೆ. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ನಿಯಮಾವಳಿ, ಅಧಿನಿಯಮವಾಗಲೀ ಇರಲಿಲ್ಲ. ಈ ಆದೇಶವು ಸಂವಿಧಾನದ ಮೂಲಭೂತ ಹಕ್ಕುಗಳ ಅನುಚ್ಛೇದ 16 (4), ಹಾಗೂ 16(4ಎ)ದಲ್ಲಿ ಪದೋನ್ನತಿಯಲ್ಲಿ ಮೀಸಲಾತಿ ಕಲ್ಪಿಸಿದೆ. ರಾಜ್ಯ ಸರ್ಕಾರವು ನೇಮಕಾತಿ ಮತ್ತು ಪದೋನ್ನತಿಯಲ್ಲಿ ವಿಭಿನ್ನ ರೋಸ್ಟರ್ ಪದ್ಧತಿ ಅಳವಡಿಸಿ ಪರಿಶಿಷ್ಟ ಜಾತಿಗೆ ಶೇ.15ರಷ್ಟು ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3ರಷ್ಟು ಮೀಸಲಾತಿ ನೀಡಿದೆ.

ಪದೋನ್ನತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಕಲ್ಪಿಸಿರುವ ಬಗ್ಗೆ ಬಿ.ಕೆ. ಪವಿತ್ರಾ ಅವರ ಪ್ರಕರಣದಲ್ಲಿ ತತ್ಪರಿಣಾಮದ ಜ್ಯೇಷ್ಠತೆಯ ವಿಷಯದೊಂದಿಗೆ ವ್ಯವಹರಿಸುವಲ್ಲಿ ಸಂಬಂಧಿಸಿದ ವಿಷಯಗಳಲ್ಲಿ ಭಾರತದ ಸರ್ವೇಚ್ಛ ನ್ಯಾಯಾಲಯವು ದಿನಾಂಕ 9.2.2017ರಂದು ತನ್ನ ತೀರ್ಪಿನಲ್ಲಿ ಅನುಚ್ಛೇದ 16 (4ಎ) ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವುದಕ್ಕಾಗಿ ಪ್ರಾತಿನಿಧ್ಯದ ಅಭಾವ, ಹಿಂದುಳಿದಿರುವಿಕೆ ಹಾಗೂ ಒಟ್ಟಾರೆ ಕಾರ್ಯಕ್ಷಮತೆ ನಿರ್ಧರಿಸುವುದಕ್ಕಾಗಿ ಕ್ರಮಬದ್ಧ ಅಧ್ಯಯನ ಅವಶ್ಯಕವೆಂದು ತಿಳಿಸಿ, 2002ರ ಕರ್ನಾಟಕ ಅಧಿನಿಯಮ 10ರ ಪ್ರಕರಣ 3 ಮತ್ತು 4ರಲ್ಲಿನ ಉಪಬಂಧಗಳನ್ನು ಅಧಿಕಾರತೀತವೆಂದು ಅಸಿಂಧುಗೊಳಿಸಿದೆ. ಅಲ್ಲದೆ ಜ್ಯೇಷ್ಠತಾ ಪಟ್ಟಿಗಳ ಪರಿಷ್ಕರಣೆ ಕೈಗೊಳ್ಳಬೇಕೆಂದು ಮತ್ತು ಮುಂದಿನ 3 ತಿಂಗಳೊಳಗಾಗಿ ತತ್ಪರಿಣಾಮದ ಮುಂದಿನ ಕ್ರಮ ತೆಗೆದುಕೊಳ್ಳಬೇಕೆಂದು ನ್ಯಾಯಾಲಯ ಸೂಚಿಸಿದೆ. ಹೀಗಾಗಿದ್ದರೂ ರಾಜ್ಯ ಸರ್ಕಾರವು ಕಾನೂನು ತಜ್ಞರ ಮತ್ತು ಕಾನೂನು ಆಯೋಗದ ಅಭಿಪ್ರಾಯಗಳನ್ನು ಪಡೆದು ಸರ್ಕಾರದ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ವರದಿ ಪಡೆದು ಹೊಸ ಅಧಿನಿಯಮವನ್ನು ಸೃಷ್ಟಿಸಿ ಮತ್ತಷ್ಟು ಗೊಂದಲವನ್ನು ಪದೋನ್ನತಿಯ ಮೀಸಲಾತಿಯಲ್ಲಿ ಸೃಷ್ಟಿಸಿದೆ. ಹೀಗಾಗಿರುವುದರಿಂದ ಬಿ.ಕೆ. ಪವಿತ್ರಾ ಪ್ರಕರಣವು ಪದೋನ್ನತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಎಲ್ಲಿಯೂ ನೀಡಬಾರದೆಂದು ತಿಳಿಸಿಲ್ಲ. ಹೀಗಾಗಿ ಕಳೆದ ಹದಿನೈದು ತಿಂಗಳಿನಿಂದ ಜ್ಯೇಷ್ಠತಾ ಪಟ್ಟಿ ನಿರ್ವಹಣೆ ಮತ್ತು ಸುಮಾರು ವಿವಿಧ ಇಲಾಖೆಗಳಲ್ಲಿನ ಸಾವಿರಾರು ಸರ್ಕಾರಿ ನೌಕರರು ಹಿಂಬಡ್ತಿ – ಮುಂಬಡ್ತಿ ಹೊಂದಿರುವುದರಿಂದ ಇದೊಂದು ಇತಿಹಾಸ ಸೃಷ್ಟಿಸಿದ ಪ್ರಕರಣ.

ಸರ್ಕಾರವು ದಿನಾಂಕ 23.6.2018ರಂದು ಕರ್ನಾಟಕ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ನೌಕರರಿಗೆ ತತ್ಪರಿಣಾಮದ ಜ್ಯೇಷ್ಠತೆ ವಿಸ್ತರಿಸುವ ಅಧಿನಿಯಮ 2017ನ್ನು ಹೊರಡಿಸಿದೆ. ಈ ಅಧಿನಿಯಮವು ದಿನಾಂಕ 14.6.2018ರಂದು ರಾಷ್ಟ್ರಪತಿಯವರಿಂದ ಅನುಮತಿ ಪಡೆದಿದ್ದು ಪ್ರಸ್ತುತ ಬಿ.ಕೆ. ಪವಿತ್ರಾ ಡ/ಠ ಭಾರತ ಸರ್ಕಾರ ಪ್ರಕರಣ ಸಂಖ್ಯೆ ಎಂ.ಎ. ನಂ. 1151/2018ರಲ್ಲಿ ಸರ್ವೇಚ್ಛ ನ್ಯಾಯಾಲಯಕ್ಕೆ 2.7.2018ರಂದು ಮೊಕದ್ದಮೆ ಹೂಡಲಾಗಿದೆ. ಇದನ್ನು ಅಂಗೀಕರಿಸಿದ ಸರ್ವೇಚ್ಛ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಬಿ.ಕೆ. ಪವಿತ್ರಾ ಪ್ರಕರಣ ಅನುಷ್ಠಾನದಲ್ಲಿರುವಾಗ ಇಂತಹ ಅಧಿನಿಯಮ ರಚನೆ ಅಗತ್ಯವೇನಿತ್ತು ಎಂದು ನೋಟಿಸ್ ಜಾರಿಮಾಡಿದೆ. ಪ್ರಕರಣವು ಜುಲೈ 2018ರಲ್ಲಿ ಸರ್ವೇಚ್ಛ ನ್ಯಾಯಾಲಯದಲ್ಲಿ ಹಿಂದಿನ ನಿಂದನಾ ಅರ್ಜಿಯೊಂದಿಗೆ(ಸಿಎ 2368/2011) ಬರಲಿದೆ. ಸರ್ವೇಚ್ಛ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ಹಾಗೂ ಅಧಿನಿಯಮದ ಚೌಕಟ್ಟಿನಲ್ಲಿ ಹಿಂಬಡ್ತಿ, ಮುಂಬಡ್ತಿಗಳು ಸರ್ಕಾರಿ ಸೇವೆಯಲ್ಲಿ ತಾತ್ಕಾಲಿಕವಾಗಿ ತಡೆಯೊಡ್ಡಿದೆ. ಈಗಾಗಲೇ ಬಿ.ಕೆ. ಪವಿತ್ರಾ ಪ್ರಕರಣದ ಅನುಷ್ಠಾನಕ್ಕೆ ಸರ್ವೇಚ್ಛ ನ್ಯಾಯಾಲಯಕ್ಕೆ ಶಪಥಪತ್ರ(ಅಪಿಡೆವಿಟ್) ಸಲ್ಲಿಸಿದ್ದು ಲಕ್ಷಾಂತರ ರೂ. ಖರ್ಚಾಗಿದೆ.

ಪ್ರಸ್ತುತ ನೂತನ ಅಧಿನಿಯಮವು 2002ರ ಅಧಿನಿಯಮದ ಕೆಲವೊಂದು ವ್ಯತ್ಯಾಸಗಳೊಂದಿಗೆ ಯಥಾವತ್ತಾಗಿ ನಿರೂಪಣೆಯಾಗಿದೆ. ಈ ಅಧಿನಿಯಮದಲ್ಲಿ ಪ್ರಕರಣ 3 ಮತ್ತು 4ನ್ನು 17ನೇ ಜೂನ್ 1995ರಿಂದ ಜಾರಿಗೆ ಬಂದಿರುವುದಾಗಿ ಹಾಗೂ ತತ್ಪರಿಣಾಮದ ಜ್ಯೇಷ್ಠತೆಯನ್ನು ಸಂರಕ್ಷಿಸುವುದಾಗಿ ತಿಳಿಸಿದೆ. ಅಲ್ಲದೆ ಇದೇ ಅಧಿನಿಯಮದ 2(ಡಿ) ಅಡಿಯಲ್ಲಿ ಹಿಂಬಾಕಿ (ಬ್ಯಾಕ್​ಲಾಗ್) ಹುದ್ದೆಗಳನ್ನು ಪರಿಭಾಷಿಸಲಾಗಿದೆ. ಪ್ರಕರಣ 5ರಲ್ಲಿ ನೇಮಕಾತಿ ಪ್ರಾಧಿಕಾರಗಳು ಬಡ್ತಿ ಕ್ರಮಾನುಸಾರವಾಗಿ ಮಾಡಲಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅಸ್ತಿತ್ವದಲ್ಲಿರುವ ಜ್ಯೇಷ್ಠತಾ ಪಟ್ಟಿಗಳನ್ನು ಪುನರ್ ಅವಲೋಕಿಸಿ, ರಚಿಸಬೇಕು ಎಂದು ತಿಳಿಸಿದೆ. ಅಲ್ಲದೆ ಬಿ.ಕೆ. ಪವಿತ್ರಾ ಪ್ರಕರಣದಿಂದ ಉಂಟಾದ ಸಮಸ್ಯೆಯಿಂದ ಹಿಂಬಡ್ತಿ ಹೊಂದಿದ ಈ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಸಂಖ್ಯಾತಿರಿಕ್ತ (ಸೂಪರ್ ನ್ಯೂಮರರಿ) ಹುದ್ದೆಗಳನ್ನು ಸೃಷ್ಟಿಸಿ ಅವರನ್ನು ಮತ್ತೆ ಪದೋನ್ನತಿಗೊಳಿಸಬೇಕೆಂದು ಸೂಚಿಸಿದೆ. ಅಲ್ಲದೆ ಪ್ರಕರಣ 9ರಲ್ಲಿ ಈ ಅಧಿನಿಯಮದ ಉಪಬಂಧಗಳಿಗೆ ವಿರುದ್ಧವಾಗಿ ಯಾವುದೇ ದಾವೆ ಅಥವಾ ಇತರ ನಡವಳಿಗಳನ್ನು ಪುನರೀಕ್ಷಣೆಗಾಗಿ ಯಾವುದೇ ನ್ಯಾಯಾಲಯದಲ್ಲಿ ನಿರ್ವಹಿಸತಕ್ಕದ್ದಲ್ಲ ಅಥವಾ ಮುಂದುವರಿಸತಕ್ಕದ್ದಲ್ಲ ಎಂದು ತಿಳಿಸಲಾಗಿದೆ.

ಹೀಗಾಗಿ ಈ ಅಧಿನಿಯಮವು ಪದೋನ್ನತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ವರ್ಗದವರ ತತ್ಪರಿಣಾಮವಾದ ಜ್ಯೇಷ್ಠತೆಯನ್ನು ವೋಟ್ ಬ್ಯಾಂಕಿನ ಉದ್ದೇಶಕ್ಕಾಗಿ ಹೊರಡಿಸಿದೆ. ಒಟ್ಟಾರೆಯಾಗಿ ಇದು ಬಿ.ಕೆ. ಪವಿತ್ರಾ ಪ್ರಕರಣದಡಿಯಲ್ಲಿ ಸರ್ವೇಚ್ಛ ನ್ಯಾಯಾಲಯವು ದಿನಾಂಕ 9.2.2017ರಂದು ಹೊರಡಿಸಿದ ತೀರ್ಪಿಗೆ ವ್ಯತಿರಿಕ್ತವಾಗಿದೆ ಹಾಗೂ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಬಾರದು ಎಂಬ ಅಂಶ ಸಂವಿಧಾನದ ವಾಕ್​ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ತಡೆಹಿಡಿದಂತಾಗಿದೆ. ಹೀಗಾಗಿ ಮೀಸಲಾತಿ ವರ್ಗದವರು ಪದೋನ್ನತಿ ಹೊಂದಿದಾಗ ಸಂವಿಧಾನದ ಅನುಚ್ಛೇದ 16ರನ್ವಯ ಒಂದೇ ಒಂದು ಹುದ್ದೆ ಇದ್ದಾಗ ನೇರ ನೇಮಕಾತಿ, ಪದೋನ್ನತಿಗಾಗಲೀ ಮೀಸಲಾತಿ ವರ್ಗದವರಿಗೆ ಅನ್ವಯಿಸತಕ್ಕದ್ದಲ್ಲ ಎಂದು 16.11.1995ರ ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 21, ಸೇಹಿಮ 90ರಲ್ಲಿ ತಿಳಿಸಿದೆ. ಅಲ್ಲದೆ ರಾಷ್ಟ್ರಪತಿಯವರು ಈ ಸಂವಿಧಾನದ ಅನುಚ್ಛೇದಕ್ಕೆ ವಿವಾದಗ್ರಸ್ಥವಾಗಿರುವ ಪ್ರಕರಣವಿರುವಾಗ ಅನುಚ್ಛೇದ 143ರಲ್ಲಿ ಸರ್ವೇಚ್ಛ ನ್ಯಾಯಾಲಯದೊಡನೆ ಸಮಾಲೋಚಿಸಲು ರಾಷ್ಟ್ರಪತಿಗೆ ಅಧಿಕಾರ ನೀಡಲಾಗಿದೆ. ಈ ಅನುಚ್ಛೇದದ ಮೇರೆಗೆ ಸರ್ವೇಚ್ಛ ನ್ಯಾಯಾಲಯದ ಅಭಿಪ್ರಾಯವನ್ನು ಪಡೆದುಕೊಳ್ಳುವುದು ಸೂಕ್ತವೆನಿಸುವಂತಹ ಸ್ವರೂಪದ ಮತ್ತು ಸಾರ್ವಜನಿಕ ಮಹತ್ವವುಳ್ಳಂಥ ಕಾನೂನಿನ ಅಥವಾ ಸಂಗತಿಯ ಪ್ರಶ್ನೆಯೂ ಉದ್ಭವಿಸಿದೆ ಎಂದು ಅಥವಾ ಉದ್ಭವಿಸುವ ಸಂಭವವಿದೆಯೆಂದು ಯಾವುದೇ ಕಾಲದಲ್ಲಿ ರಾಷ್ಟ್ರಪತಿಗೆ ಕಂಡುಬಂದರೆ ಅದನ್ನು ಸರ್ವೇಚ್ಛ ನ್ಯಾಯಾಲಯದ ಪರ್ಯಾಲೋಚನೆಗಾಗಿ ಕಳುಹಿಸಬಹುದು ಮತ್ತು ಆ ನ್ಯಾಯಾಲಯವು ಸೂಕ್ತವೆಂದು ಭಾವಿಸಿದ ನಂತರ ಅದರ ಮೇಲೆ ತನ್ನ ಅಭಿಪ್ರಾಯವನ್ನು ರಾಷ್ಟ್ರಪತಿಗೆ ವರದಿ ಮಾಡಬಹುದು ಎಂದು ಹೇಳಿದೆ. ಸರ್ವೇಚ್ಛ ನ್ಯಾಯಾಲಯವು ಸಂವಿಧಾನದ ಯಾವುದೇ ವಿವಾದಿತ ವಿದಿಯ ಬಗ್ಗೆ ಅಥವಾ ವಿಷಯದ ಬಗ್ಗೆ ಅರ್ಥವಿವರಣೆ ನೀಡುವ ಅಧಿಕಾರವನ್ನು ಸರ್ವೇಚ್ಛ ನ್ಯಾಯಾಲಯ ಹೊಂದಿದೆ ಅಂದರೆ ಭಾರತ ಸರ್ವೇಚ್ಛ ನ್ಯಾಯಾಲಯವು ಮೂಲಭೂತ ಹಕ್ಕುಗಳ ರಕ್ಷಕನಾಗಿ ರಾಷ್ಟ್ರಪತಿ ಮತ್ತು ಭಾರತ ಸರ್ಕಾರಕ್ಕೆ ಮುಖ್ಯ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿರುವುದರಿಂದ ಪ್ರಸ್ತುತ ನೂತನ ಅಧಿನಿಯಮವು ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗಿದ್ದರೆ ಮತ್ತೆ ಪ್ರಶ್ನಾತೀತವಾಗುತ್ತದೆ.

(ಮುಂದುವರಿಯುವುದು)