Friday, 16th November 2018  

Vijayavani

Breaking News

ಹೊಟ್ಟೆಪಾಡಿಗಾಗಿ ಭಿಕ್ಷಾಟನೆಗಿಳಿಯುವುದು ಅಪರಾಧವೇ?

Tuesday, 14.08.2018, 3:05 AM       No Comments

ನಾಗರಿಕರಿಗೆ ಘನತೆಯ ಜೀವನವನ್ನು ಕಟ್ಟಿಕೊಡಬೇಕಾದುದು ಸರ್ಕಾರದ ಕರ್ತವ್ಯ. ಇದರಲ್ಲಿ ಸರ್ಕಾರ ವಿಫಲವಾಗುವಂತಿಲ್ಲ. ಅಷ್ಟೇಕೆ, ಹೊಟ್ಟೆಪಾಡಿಗಾಗಿ ಭಿಕ್ಷಾಟನೆಗಿಳಿಯುವ ವ್ಯಕ್ತಿಗಳನ್ನು ಬಂಧಿಸುವ, ಸೆರೆ ವಾಸಕ್ಕೆ ತಳ್ಳುವ ಮೂಲಕ ಅದು ‘ಗಾಯದ ಮೇಲೆ ಉಪು್ಪ ಸುರಿಯುವಂಥ’ ಕೆಲಸ ಮಾಡುವಂತಿಲ್ಲ. ಕಾರಣ, ಇಂಥ ಸನ್ನಿವೇಶಗಳಲ್ಲಿ ಭಿಕ್ಷೆಗಿಳಿಯಬೇಕಾದ ನಿರ್ಬಂಧಕ್ಕೆ ಸಿಲುಕಿದವನನ್ನು ತಪ್ಪಿತಸ್ಥ ಎನ್ನಲಾಗದು.

‘ಕಾನೂನು ಎಂಬುದು ಭಾಗ್ಯದಾಯಕ ವಸ್ತುವಲ್ಲ, ಬದಲಿಗೆ ಅದೊಂದು ಧರ್ಮಸಂರಕ್ಷಕ. ಕಾನೂನು ಒಂದು ವೇಳೆ ನಿರಂಕುಶವಾಗಿ ವರ್ತಿಸಿದರೆ, ಸಾಮಾಜಿಕ ನ್ಯಾಯವೆಂಬುದು ಕುಚೇಷ್ಟೆಗಾಗಿ ಮಾಡಿದ ಒಂದು ವಂಚನೆಯಾಗುವುದು ನಿಶ್ಚಿತ’

-ನ್ಯಾ. ಕೃಷ್ಣ ಅಯ್ಯರ್

ಇದು, ದೆಹಲಿ ಉಚ್ಚ ನ್ಯಾಯಾಲಯ ಆ. 8ರಂದು ನೀಡಿದ ತೀರ್ಪಿನ ಕುರಿತಾದ ಚರ್ಚೆ. ‘ಬಾಂಬೆ ಭಿಕ್ಷಾಟನೆ ತಡೆ ಕಾಯ್ದೆ, 1959’ರ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯೊಂದರ ವಿಚಾರಣೆ ವೇಳೆ, ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್​ಸಿಆರ್)ದಲ್ಲಿ ಭಿಕ್ಷಾಟನೆಯನ್ನು ಅಪರಾಧವಲ್ಲವೆಂದು ಪರಿಗ್ರಹಿಸುವ ಮಹತ್ತರ ತೀರ್ಪನ್ನು, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾ. ಸಿ. ಹರಿ ಶಂಕರ್ ನೇತೃತ್ವದ ನ್ಯಾಯಪೀಠವು ನೀಡಿತು.

ಒಂದು ಕಾಲದಲ್ಲಿ ಭಾರತವನ್ನು ‘ಭಿಕ್ಷುಕರ ದೇಶ, ಹಾವಾಡಿಗರ ದೇಶ’ ಎಂದೆಲ್ಲ ಮೂದಲಿಸುತ್ತಿದ್ದುದು ನಿಮಗೂ ಗೊತ್ತಿದೆ. ಈಗ ಪರಿಸ್ಥಿತಿ ಹಾಗಿಲ್ಲ. ಆದರೂ, ಭಾರತದಲ್ಲಿ, ಭಿಕ್ಷಾಟನೆ ಮತ್ತು ನಿರ್ಗತಿಕ ಸ್ಥಿತಿಯ ಕುರಿತಾದ ಯಾವುದೇ ಪ್ರಮುಖ ಕಾನೂನಿಲ್ಲ ಎಂಬುದನ್ನಿಲ್ಲಿ ಗಮನಿಸಬೇಕು. ಹಲವು ರಾಜ್ಯಗಳು, ಒಂದೋ ‘ಬಾಂಬೆ ಭಿಕ್ಷಾಟನೆ ತಡೆ ಕಾಯ್ದೆ, 1959’ನ್ನು ಅಳವಡಿಸಿಕೊಂಡಿವೆ ಅಥವಾ ಅದನ್ನು ಆಧಾರವಾಗಿಟ್ಟುಕೊಂಡು ತಮ್ಮ ಕಾನೂನುಗಳನ್ನು ರೂಪಿಸಿಕೊಂಡಿವೆ. ಪ್ರಸಕ್ತ ಕಾಯ್ದೆಯನುಸಾರ, ಜೀವನೋಪಾಯಕ್ಕಾಗಿ ಮೇಲ್ನೋಟಕ್ಕೆ ಕಾಣಿಸುವ ಮಾಗೋಪಾಯಗಳಿಲ್ಲದ ಮತ್ತು ಸಾರ್ವಜನಿಕ ಸ್ಥಳದಲ್ಲಿ ಅಲೆದಾಡುತ್ತಿರುವಂತೆ ಕಂಡುಬರುವ ಯಾವುದೇ ವ್ಯಕ್ತಿಯನ್ನು ‘ಭಿಕ್ಷುಕ’ ಎಂದು ಪರಿಗಣಿಸಬಹುದಾಗಿದೆ. ಹಾಡುವುದು, ನರ್ತಿಸುವುದು, ಭವಿಷ್ಯ ಹೇಳುವುದು ಅಥವಾ ಬೀದಿಯಲ್ಲಿ ಕಲೆಗಾರಿಕೆಯನ್ನು ಪ್ರದರ್ಶಿಸುವುದೂ ಸೇರಿದಂತೆ, ಯಾವುದೇ ಸೋಗಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ದಾನಧರ್ಮಕ್ಕಾಗಿ ಕೋರುವ ಎಲ್ಲರನ್ನೂ ಭಿಕ್ಷಾಟನೆಯಲ್ಲಿ ಭಾಗಿಯಾಗಿರುವವರು ಎಂದೇ ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ನಾಗರಿಕನಿಗೂ ಘನತೆಯೊಂದಿಗೆ ಬದುಕುವ ಹಕ್ಕಿನ ಭರವಸೆ ನೀಡುವ ನಮ್ಮ ಸಂವಿಧಾನದ ವ್ಯಾಪ್ತಿಯೊಳಗೆ, ಸರ್ಕಾರವು ಭಿಕ್ಷಾಟನೆಗೆ ‘ಅಪರಾಧಿಕ ಕೃತ್ಯ’ ಎಂಬ ಹಣೆಪಟ್ಟಿ ಕಟ್ಟಬಹುದೇ ಎಂಬುದು ಮೇಲೆ ಉಲ್ಲೇಖಿಸಿದ ಪ್ರಕರಣದಲ್ಲಿ ನ್ಯಾಯಪೀಠದ ಮುಂದೆ ಬಂದಿದ್ದ ಚರ್ಚಾವಿಷಯವಾಗಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ, ಸಂವಿಧಾನದ 3ನೇ ಭಾಗವನ್ನು ಅವಲೋಕಿಸುವುದು ಸೂಕ್ತ. ಹತ್ತು ಹಲವು ಮೂಲಭೂತ ಹಕ್ಕುಗಳನ್ನು ಒಳಗೊಂಡಿರುವ ಈ ಭಾಗವು, ಜೀವ/ಜೀವನವನ್ನು ಸಂರಕ್ಷಿಸುವುದು ಮಾತ್ರವಲ್ಲದೆ ಅದರ ಮುಂದುವರಿಕೆಗೆ ಸಂಬಂಧಿಸಿದಂತೆಯೂ ಕಾರ್ಯಪ್ರವೃತ್ತವಾಗುವಂತೆ ಸರ್ಕಾರಕ್ಕೆ ನಿರ್ದೇಶಿಸುತ್ತದೆ. ಇಷ್ಟೇ ಅಲ್ಲ, ಸರ್ಕಾರಿ ಕಾರ್ಯನೀತಿಗೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳನ್ನು ಪ್ರತಿಪಾದಿಸುವ ಸಂವಿಧಾನದ 4ನೇ ಭಾಗವು, ಸಾರ್ವಜನಿಕರ ಹಿತರಕ್ಷಣಾ ಕಾರ್ಯಗಳಿಗೆಂದು ಸಂಪನ್ಮೂಲಗಳ ಹಂಚಿಕೆ ಮಾಡುವಂತೆಯೂ ಸರ್ಕಾರಕ್ಕೆ ಆದೇಶಿಸುತ್ತದೆ.

ಈ ಪ್ರಕರಣದಲ್ಲಿ, ‘ಕಾಯ್ದೆಯ ಅನುಸಾರ, ಭಿಕ್ಷಾಟನೆಯನ್ನು ಅಪರಾಧಿಕ ಕೃತ್ಯ ಎಂದು ಪರಿಗಣಿಸಿದರೆ ಜೀವನದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕಿರುವ ಹಕ್ಕನ್ನು ವ್ಯಕ್ತಿಯಿಂದ ಕಿತ್ತುಕೊಂಡಂತಾಗುತ್ತದೆ; ಅಷ್ಟೇ ಅಲ್ಲ, ಸದರಿ ಕಾಯ್ದೆಯ ಅನುಸಾರ, ಪುನರ್ವಸತಿ ಕಂಡುಕೊಳ್ಳಲೆಂದು ಅಪರಾಧ ಎಸಗುವಂತಾಗುವ ಅಥವಾ ಅಪರಾಧ ಎಸಗದೆ ಹೊಟ್ಟೆಗಿಲ್ಲದೆ ಸಾಯುವಂತಾಗುವುದರ ನಡುವಿನ ಆಯ್ಕೆಯನ್ನು ಜನ ಮಾಡುವಂತಾಗಿ ಬರುವುದರಿಂದ, ಅದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರುತ್ತದೆ ಮತ್ತು ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸುತ್ತದೆ’ ಎಂಬುದು ಅಹವಾಲುದಾರರ ವಾದವಾಗಿತ್ತು.

ಬಡತನದ ಕಾರಣದಿಂದಾಗಿ ಭಿಕ್ಷಾಟನೆಯನ್ನು ಕೈಗೊಂಡಿದ್ದಲ್ಲಿ, ಅದನ್ನೊಂದು ಅಪರಾಧವಾಗಿ ಪರಿಗಣಿಸಬಾರದು ಎಂಬುದು ಕೇಂದ್ರ ಸರ್ಕಾರ ಈ ಸಂಬಂಧವಾಗಿ ತಳೆದ ನಿಲುವಾಗಿತ್ತು. ಆದಾಗ್ಯೂ, ವ್ಯಕ್ತಿಯು ಬಡತನದ ಕಾರಣದಿಂದಾಗಿ ಭಿಕ್ಷಾಟನೆಗೆ ಇಳಿದಿದ್ದಾನೋ ಅಥವಾ ಸಾಕಷ್ಟು ಅನುಕೂಲವಿದ್ದರೂ ಸ್ವ-ಇಚ್ಛೆಯಿಂದಲೇ ಅದರಲ್ಲಿ ತೊಡಗಿದ್ದಾನೋ ಅಥವಾ ಭಿಕ್ಷಾಟನೆಯಲ್ಲಿ ತೊಡಗುವಂತೆ ಯಾರಾದರೂ ಅವನನ್ನು ನಿರ್ಬಂಧಿಸಿದ್ದಾರೋ ಎಂಬುದನ್ನು ಖಚಿತಪಡಿಸಿಕೊಳ್ಳಲು, ಆತನನ್ನು ವಶಕ್ಕೆ ತೆಗೆದುಕೊಳ್ಳುವುದು/ಬಂದಿಯಾಗಿಡುವುದು ಅವಶ್ಯವಾಗುತ್ತದೆ. ಇಂಥ ವ್ಯಕ್ತಿಯ ಬಂಧನ ಮತ್ತು ತರುವಾಯದ ವಿಚಾರಣೆಯ ನಂತರವಷ್ಟೇ, ಭಿಕ್ಷಾಟನೆಯ ಹಿಂದಿರುವ ಕಾರಣವನ್ನು ಖಚಿತಪಡಿಸಿಕೊಳ್ಳುವುದು ಸಾಧ್ಯ. ಆದ್ದರಿಂದ, ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿರುವಂತೆ, ಬಂಧನಕ್ಕೆ ಸಂಬಂಧಿಸಿದ ನಿಬಂಧನೆ/ಉಪಬಂಧವು ಸಮರ್ಥಿಸಲ್ಪಟ್ಟಿದೆ.

ಬಡತನದ ಕಾರಣವನ್ನು ಖಚಿತಪಡಿಸಿಕೊಳ್ಳಲು ವ್ಯಕ್ತಿಯೊಬ್ಬನನ್ನು ಬಂಧಿಸುವ ಹಕ್ಕು, ಭಾರತದ ಸಂವಿಧಾನದ 21ನೇ ವಿಧಿಯಡಿ ಇಂಥ ವ್ಯಕ್ತಿಗಳಿಗೆ ನೀಡಲಾಗಿರುವ ಹಕ್ಕಿಗೆ ವಿರುದ್ಧವಾಗಿರುವುದರಿಂದ, ಕೇಂದ್ರ ಸರ್ಕಾರವು ನೀಡಿದ ವಿವರಣೆಯಿಂದ ನ್ಯಾಯಪೀಠವು ಪ್ರಭಾವಿತವಾಗದಿದ್ದುದು ಯುಕ್ತವಾಗೇ ಇತ್ತು. ಹೀಗೆ ಬಂಧಿಸಲ್ಪಟ್ಟ ವ್ಯಕ್ತಿಗಳು ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡವರಾಗಿರಲಿಲ್ಲ ಎಂದು ತರುವಾಯದಲ್ಲಿ ಕಂಡುಬಂದಾಗ, ಯಾವುದೇ ಕಾನೂನು ಪ್ರಕ್ರಿಯೆಯನ್ನು ಅನುಸರಿಸದೆಯೇ ಇಂಥ ವ್ಯಕ್ತಿಗಳ ಕ್ರಿಯಾಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾದಂಥ ಪರಿಸ್ಥಿತಿಗೆ ಕೇಂದ್ರ ಸರ್ಕಾರದ ವಿವರಣೆ ಕಾರಣವಾಗಬಹುದು.

‘ತನ್ನೆಲ್ಲ ನಾಗರಿಕರಿಗೆ, ಅಷ್ಟೇಕೆ ದೆಹಲಿಯಲ್ಲಿ ಕೂಡ, ಬದುಕುವ ಹಕ್ಕಿಗೆ ಅಗತ್ಯವಾಗಿರುವ ಮೂಲಭೂತ ಅವಶ್ಯಕತೆಗಳನ್ನು ಕೂಡ ಖಾತ್ರಿಪಡಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲದಿರುವುದು ಕಠೋರ ವಾಸ್ತವವಾಗಿದೆ; ಜನ ಹೊಟ್ಟೆಗಿಲ್ಲದೆ ಸಾಯುತ್ತಿರುವುದರ ಕುರಿತಾದ ವರದಿಗಳು ಪತ್ರಿಕೆಗಳಲ್ಲಿ ಮತ್ತೆ ಮತ್ತೆ ಪ್ರಕಟಗೊಳ್ಳುತ್ತಲೇ ಇವೆ. ಜನ ಬೀದಿಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆಂದರೆ, ಅವರು ಅದನ್ನು ಬಯಸಿ ಬಯಸಿ ಮಾಡುತ್ತಿದ್ದಾರೆಂದೇನಲ್ಲ, ಆದರೆ ಅವರು ಹಾಗೆ ಮಾಡಲೇಬೇಕಾಗಿ ಬಂದಿದೆ’ ಎಂಬುದಾಗಿ ನ್ಯಾಯಪೀಠ ವಿಷಾದಿಸಿತು. ವ್ಯಕ್ತಿಯು ಸಮಾಜ ಹೆಣೆದ ಬಲೆಯಲ್ಲಿ ಸಿಲುಕಿರುವ ಕಾರಣದಿಂದಾಗಿ ರೋಗಗ್ರಸ್ತ ಸ್ಥಿತಿ ನಿರ್ವಣವಾಗಿದ್ದು, ಭಿಕ್ಷಾಟನೆ ಇಂಥ ರೋಗದ ಒಂದು ಕುರುಹಾಗಿದೆ. ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ, ಪ್ರತಿಯೊಬ್ಬರಿಗೂ ಸಾಮಾಜಿಕ ಭದ್ರತೆ ಒದಗಿಸುವುದು ಸರ್ಕಾರದ ಹೊಣೆಯಾಗಬೇಕು; ಸಮಾಜದಲ್ಲಿ ಭಿಕ್ಷುಕರಿದ್ದಾರೆ ಎಂದಾದಲ್ಲಿ, ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಹೊಣೆಯನ್ನು ಸರ್ಕಾರ ನಿಭಾಯಿಸಿಲ್ಲ ಎಂಬುದರ ಪುರಾವೆಯಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಭಿಕ್ಷಾಟನೆ ಅಪರಾಧಿಕ ಕೃತ್ಯವಲ್ಲ ಎಂದು ಸಮರ್ಥಿಸುತ್ತ ನ್ಯಾಯಪೀಠ ವ್ಯಕ್ತಪಡಿಸಿದ ಅಭಿಪ್ರಾಯ ಹೀಗಿತ್ತು- ‘ಭಿಕ್ಷುಕರ ಮೇಲೆ ಅಪರಾಧಿತ್ವವನ್ನು ಆರೋಪಿಸುವ ಕ್ರಮವು, ಭಿಕ್ಷಾಟನೆಯಂಥ ಸಮಸ್ಯೆಯ ಮೂಲಕಾರಣ ಕಂಡುಕೊಂಡು ಪರಿಹರಿಸುವದಕ್ಕೆ ಆಸ್ಪದ ನಿಡುವುದಿಲ್ಲ. ಇಲ್ಲಿ ಬಡತನವೇ ಮೂಲಭೂತ ಸಮಸ್ಯೆ; ಶಿಕ್ಷಣಕ್ಕೆ ಅವಕಾಶ ಮತ್ತು ಸಾಮಾಜಿಕ ಭದ್ರತೆ ಇಲ್ಲದಿರುವುದು, ಜಾತಿ ಮತ್ತು ಜನಾಂಗೀಯತೆಯನ್ನು ಆಧರಿಸಿದ ಪಕ್ಷಪಾತ, ಜಮೀನು ಇಲ್ಲದಿರುವಿಕೆ, ದೈಹಿಕ ಮತ್ತು ಮಾನಸಿಕ ನ್ಯೂನತೆಗಳು, ಒಂಟಿತನ ಹೀಗೆ ಬಡತನಕ್ಕೆ ಅನೇಕ ಕಾರಣಗಳಿವೆ. ಆದ್ದರಿಂದ, ಈ ಸಮಸ್ಯೆಗೆ ಮೂಲಾಧಾರವಾಗಿರುವ ಕಾರಣಗಳನ್ನು ನಿಭಾಯಿಸಲೆಂದು ಭಿಕ್ಷಾಟನೆಗೆ ಅಪರಾಧಿಕ ಕೃತ್ಯದ ಹಣೆಪಟ್ಟಿ ಕಟ್ಟುವುದು ತಪು್ಪಹೆಜ್ಜೆಯಾಗುತ್ತದೆ. ಹೀಗೆ ಮಾಡಿದಲ್ಲಿ, ಭಿಕ್ಷೆ ಬೇಡುತ್ತಿರುವವರು ಬಡವಾತಿಬಡವರಾಗಿದ್ದು, ಸಮಾಜದಲ್ಲಿ ಅವಗಣಿಸಲ್ಪಟ್ಟಿರುತ್ತಾರೆ ಎಂಬ ಕಹಿವಾಸ್ತವವನ್ನು ನಿರ್ಲಕ್ಷಿಸಿದಂತಾಗುತ್ತದೆ ಹಾಗೂ ಅವರ ಮೂಲಭೂತ ಹಕ್ಕುಗಳನ್ನೇ ಉಲ್ಲಂಘಿಸಿದಂತಾಗುತ್ತದೆ. ಆಹಾರ-ವಸತಿ-ಆರೋಗ್ಯದಂಥ ಮೂಲಭೂತ ಅವಶ್ಯಕತೆಗಳನ್ನು ಇವರು ಕಂಡಿರುವುದೇ ಇಲ್ಲ; ಇಂಥವರಿಗೆ ಅಪರಾಧಿತ್ವವನ್ನು ಆರೋಪಿಸಿಬಿಟ್ಟರೆ ಜೀವನೋಪಾಯವನ್ನು ಕಂಡುಕೊಳ್ಳುವಂಥ ಅವರ ಮೂಲಭೂತ ಹಕ್ಕಿಗೇ ಸಂಚಕಾರ ಒದಗಿದಂತಾಗುತ್ತದೆ’.

ಆದಾಗ್ಯೂ, ವ್ಯಕ್ತಿಗಳನ್ನು ಬಲವಂತವಾಗಿ ಭಿಕ್ಷಾಟನೆಗೆ ತಳ್ಳುತ್ತಿರುವ ಜಾಲವೇನಾದರೂ ಕಂಡುಬಂದಲ್ಲಿ, ಸದರಿ ವಿಷಯದ ಸಮಾಜಶಾಸ್ತ್ರೀಯ ಹಾಗೂ ಆರ್ಥಿಕ ಮಗ್ಗುಲುಗಳನ್ನು ಪ್ರಾಯೋಗಿಕವಾಗಿ ಅವಲೋಕಿಸಿದ ನಂತರ, ಇಂಥ ಜಾಲವನ್ನು ಮಟ್ಟಹಾಕಲೆಂದು ಪಯಾರ್ಯ ಕಾನೂನು ರೂಪಿಸುವ ಸ್ವಾತಂತ್ರ್ಯ/ಅಧಿಕಾರವನ್ನು ಈ ಪ್ರಕರಣದಲ್ಲಿ ನ್ಯಾಯಾಲಯವು ಸರ್ಕಾರಕ್ಕೆ ನೀಡಿತು.

ಇಲ್ಲಿ ಮತ್ತೊಂದು ಅಂಶವನ್ನೂ ಗಮನಿಸಬೇಕು- ‘ಬಾಂಬೆ ಭಿಕ್ಷಾಟನೆ ಕಾಯ್ದೆ, 1959’ರ ರೀತಿಯಲ್ಲೇ ಕರ್ನಾಟಕ ರಾಜ್ಯ ಶಾಸನಸಭೆಯು ‘ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ, 1975’ನ್ನು ಜಾರಿಮಾಡಿತು; ಭಿಕ್ಷಾಟನೆಗೆ ಇಳಿಯದಂತೆ ವ್ಯಕ್ತಿಗಳನ್ನು ತಡೆಯುವ, ಭಿಕ್ಷುಕರ ಬಂಧನ, ತರಬೇತಿ ಮತ್ತು ಉದ್ಯೋಗಾವಕಾಶಕ್ಕೆ ಹಾಗೂ ತಪ್ಪಿತಸ್ಥ ಭಿಕ್ಷುಕರ ಸೆರೆ, ವಿಚಾರಣೆ ಮತ್ತು ಶಿಕ್ಷೆಗೆ ಅನುವುಮಾಡಿಕೊಡುವ, ಹಾಗೂ ಇಂಥ ವ್ಯಕ್ತಿಗಳಿಗೆ ಪರಿಹಾರ-ಪುನರ್ವಸತಿ ಕಲ್ಪಿಸುವ ಆಶಯವನ್ನು ಈ ಕಾಯ್ದೆ ಹೊಂದಿತ್ತು. ಈ ಕಾಯ್ದೆಯನುಸಾರ, ಹಾಡುಗಾರಿಕೆ, ನೃತ್ಯ ಮತ್ತು ಪ್ರದರ್ಶಕ ಕಲೆಗಳ ಮೂಲಕ ದಾನಧರ್ಮ ನೀಡುವಂತೆ ಕೋರುವುದು ‘ಭಿಕ್ಷಾಟನೆ’ಯ ವ್ಯಾಖ್ಯೆಯ ವ್ಯಾಪ್ತಿಗೆ ಬರುತ್ತದೆ ಮತ್ತು ಇಂಥ ಕಸರತ್ತುಗಳು ಅಕ್ರಮವಾಗಿರುತ್ತವೆ. ಆದರೆ, ಧಾರ್ವಿುಕ ಅನಿವಾರ್ಯತೆಗಳನ್ನು ಈಡೇರಿಸಲೆಂದು ದಾನಧರ್ಮವನ್ನು ಅಪೇಕ್ಷಿಸುವ ಅಥವಾ ದೇವಾಲಯಗಳಲ್ಲಿ ಮತ್ತು ಮಸೀದಿಗಳಲ್ಲಿ ಭಿಕ್ಷೆ ಬೇಡುವ ಬೈರಾಗಿಗಳಿಗೆ ಈ ವಿಷಯದಲ್ಲಿ ವಿನಾಯಿತಿ ನೀಡಲಾಗಿದೆ.

ಈ ಸಂದರ್ಭದಲ್ಲಿ, ಬದುಕಿನ ಹಕ್ಕನ್ನು ಖಾತ್ರಿಪಡಿಸುವ, ಭಾರತ ಸಂವಿಧಾನದ 21ನೇ ವಿಧಿಯ ಒಂದಷ್ಟು ಮಹತ್ವಪೂರ್ಣ ಸಹವರ್ತಿ ಅಂಶಗಳು ಮತ್ತು ಎಲ್ಲೆಗೆರೆಗಳನ್ನು, ಭಾರತದ ಸವೋಚ್ಚ ನ್ಯಾಯಾಲಯವು ವಿಶದೀಕರಿಸಿ ವಿವರವಾಗಿ ವ್ಯಾಖ್ಯಾನಿಸಿದೆ ಎಂಬುದನ್ನು ಗಮನಿಸಬೇಕು. ಮಿಕ್ಕ ಸಂಗತಿಗಳ ಜತೆಜತೆಗೆ, ವಸತಿ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಶುದ್ಧ ಪರಿಸರಕ್ಕೆ ಸಂಬಂಧಿಸಿದ ಹಕ್ಕುಗಳು ಇದರಲ್ಲಿ ಸೇರಿವೆ. ನಾಗರಿಕರಿಗೆ ಘನತೆಯ ಜೀವನವನ್ನು ಒದಗಿಸುವ ತನ್ನ ಕರ್ತವ್ಯದಲ್ಲಿ ಸರ್ಕಾರ ವಿಫಲವಾಗುವಂತಿಲ್ಲ ಮತ್ತು ಜೀವನದ ಮೂಲಭೂತ ಅವಶ್ಯಕತೆಗಳ ಹುಡುಕಾಟದಲ್ಲಿ ಭಿಕ್ಷಾಟನೆಗಿಳಿಯುವ ವ್ಯಕ್ತಿಗಳನ್ನು ಬಂಧಿಸುವ, ಸೆರೆವಾಸಕ್ಕೆ ತಳ್ಳುವ ಮೂಲಕ ಅದು ‘ಗಾಯದ ಮೇಲೆ ಉಪು್ಪ ಸುರಿಯುವಂಥ’ ಕೆಲಸ ಮಾಡುವಂತಿಲ್ಲ. ಇಂಥ ಸನ್ನಿವೇಶಗಳಲ್ಲಿ, ಭಿಕ್ಷೆಗಿಳಿಯಬೇಕಾದ ನಿರ್ಬಂಧಕ್ಕೆ ಸಿಲುಕಿದ ವ್ಯಕ್ತಿಯನ್ನು ಅಂಥ ಕಾರ್ಯಗಳಿಗಾಗಿ ತಪ್ಪಿತಸ್ಥ ಎನ್ನಲಾಗದು.

ಭಿಕ್ಷಾಟನೆಗೆ ಸಂಬಂಧಿಸಿದಂತೆ ನಮ್ಮ ರಾಜ್ಯದಲ್ಲಿ ಈಗಿರುವ ಕಾನೂನನ್ನು ಮರುಚಿಂತನೆಗೆ ಒಳಪಡಿಸಬೇಕಾದ ಮತ್ತು ಸಮುದಾಯದೊಂದಿಗಿನ ಸರ್ಕಾರದ ತೊಡಗಿಸಿಕೊಳ್ಳುವಿಕೆಯನ್ನು ಮರುಮೌಲ್ಯಮಾಪನ ಮಾಡಬೇಕಾದ ಅಗತ್ಯವಿದೆ. ರಾಜ್ಯ ಶಾಸನಸಭೆಯು ದೆಹಲಿ ಉಚ್ಚ ನ್ಯಾಯಾಲಯದ ತೀರ್ಪಿನಿಂದ ಪ್ರೇರಣೆ ಪಡೆದು, ಹಾಲಿ ಇರುವ ನಿಯಮ/ಪದ್ಧತಿಯನ್ನು ಮರುಪರಿಗಣಿಸಬೇಕಾಗಿದೆ. ಬಲವಂತದ ಭಿಕ್ಷಾಟನೆಯಂಥ ಕೃತ್ಯಗಳನ್ನು ಅಪರಾಧಿಕ ಕೃತ್ಯಗಳ ವ್ಯಾಪ್ತಿಗೆ ತರಬೇಕೆಂಬುದು ಸರ್ಕಾರದ ಆಶಯವಾಗಿದ್ದಲ್ಲಿ, ಒಂದು ಸ್ಪಷ್ಟ, ನಿರ್ದುಷ್ಟ, ವಾಸ್ತವಿಕ ತಳಹದಿಯ ಮತ್ತು ಅದರಿಂದಾಗುವ ಪರಿಣಾಮದ ಕುರಿತು ಅದು ಮೊದಲು ಆಲೋಚಿಸಬೇಕಾಗುತ್ತದೆ ಹಾಗೂ ನಾಗರಿಕರಿಗೆ ನೀಡಲಾಗಿರುವ ಸಾಂವಿಧಾನಿಕ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ವಿವೇಚನಾಯುಕ್ತವಾಗಿ ಕಾನೂನೊಂದನ್ನು ಅನುಮೋದಿಸಬೇಕಾಗುತ್ತದೆ. ನಮ್ಮ ಶಾಸನಕರ್ತರು ಈ ಸಂಗತಿಗಳತ್ತ ಗಮನಹರಿಸುತ್ತಾರೆಂದು ಅಶಿಸೋಣ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top