ಭಾರತದಲ್ಲಿ ಮರಣದಂಡನೆ ಬೇಕೆ? ಬೇಡವೆ?

ಮರಣದಂಡನೆ ವಿಧಿಸಲ್ಪಟ್ಟಿರುವ ಪ್ರಕರಣಗಳು ಮತ್ತು ಜೀವಾವಧಿ ಶಿಕ್ಷೆಯಂಥ ಪರ್ಯಾಯ ಆಯ್ಕೆಯನ್ನು ಅನ್ವಯಿಸಲಾಗಿರುವ ಪ್ರಕರಣಗಳ ನಡುವೆ ಭೇದ ಕಲ್ಪಿಸುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬುದು ಸವೋಚ್ಚ ನ್ಯಾಯಾಲಯದ ಗಮನಕ್ಕೆ ಬಂದಿದೆ.

‘ಪ್ರತಿಯೊಬ್ಬ ಸಂತನಿಗೂ ಗತಕಾಲ ಎನ್ನುವುದಿದೆ ಮತ್ತು ಪ್ರತಿಯೊಬ್ಬ ಪಾಪಿಗೂ ಒಂದು ಭವಿಷ್ಯ ಎನ್ನುವುದಿದೆ; ಆದ್ದರಿಂದ, ನಯವಿನಯದ ಸೋಗುಹಾಕಿರುವ ವ್ಯಕ್ತಿಯ ನಾಶಕ್ಕೆ ಯತ್ನಿಸುವ ಬದಲಿಗೆ ಅವನಲ್ಲಿರುವ ಅಪಾಯಕಾರಿ ಭ್ರಷ್ಟತೆಯನ್ನು ಕಿತ್ತೊಗೆಯಬೇಕು’- ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್

ಮರಣದಂಡನೆ ಬೇಕೇ ಬೇಡವೇ ಎಂಬ ಪ್ರಶ್ನೆ ಬಹುವರ್ಷಗಳಿಂದ ಚರ್ಚೆಯಲ್ಲಿರುವುದು ಗೊತ್ತೇ ಇದೆ. ಗಲ್ಲುಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಇತ್ತೀಚೆಗೆ ಸಲ್ಲಿಕೆಯಾಗಿದ್ದ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ, ಭಾರತದ ಸವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಲ್ಲೊಬ್ಬರಾದ (ಈಗ ನಿವೃತ್ತ) ನ್ಯಾ. ಕುರಿಯನ್ ಜೋಸೆಫ್ ಅವರು, ‘ಸಾಂವಿಧಾನಿಕವಾಗಿ ಸಿಂಧುವೆನಿಸಿದ ದಂಡನಾಶಾಸ್ತ್ರದ ಗುರಿಗಳನ್ನು ಸಾಧಿಸುವಲ್ಲಿ ಮರಣದಂಡನೆ ವಿಫಲವಾಗಿದೆ’ ಎಂದು ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ‘ಛನ್ನುಲಾಲ್ ವರ್ವ ವರ್ಸಸ್ ಛತ್ತೀಸ್​ಗಢ ಸರ್ಕಾರ (2018)’ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಮೇಲ್ಮನವಿಗಾರರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಾಗ, ‘ಒಂದು ಶಿಕ್ಷೆಯಾಗಿ ಮರಣದಂಡನೆಯನ್ನು, ಅದರಲ್ಲೂ ವಿಶೇಷವಾಗಿ ಅದರ ಉದ್ದೇಶ ಮತ್ತು ಆಚರಣೆಯ ವಿಷಯವನ್ನು ಮರುಪರಿಶೀಲಿಸುವ ಸಮಯ ಬಂದಿದೆ’ ಎಂಬುದಾಗಿ ನ್ಯಾ. ಜೋಸೆಫ್ ಅಭಿಪ್ರಾಯಪಟ್ಟರು.

ಈ ಪ್ರಕರಣದ ಸಂಕ್ಷಿಪ್ತ ವಿವರ ಹೇಳುವುದಾದರೆ, 2011ರಲ್ಲಿ ಓರ್ವ ಪುರುಷ ಹಾಗೂ ಆತನ ಮಡದಿಯನ್ನು ಕೊಂದು, ಅವರ ಸೊಸೆಯ ಮೇಲೆ ಅತ್ಯಾಚಾರವೆಸಗಿ ಕೊಲೆಮಾಡಿದ್ದಕ್ಕಾಗಿ ಪ್ರಕರಣದ ಮೇಲ್ಮನವಿದಾರನನ್ನು ಸೆಷನ್ಸ್ ನ್ಯಾಯಾಲಯ ಮತ್ತು ಛತ್ತೀಸ್​ಗಢ ಉಚ್ಚ ನ್ಯಾಯಾಲಯಗಳು ತಪ್ಪಿತಸ್ಥನೆಂದು ನಿರ್ಣಯಿಸಿ ಮರಣದಂಡನೆ ವಿಧಿಸಿದ್ದವು.

ನ್ಯಾಯಪೀಠದ ಮತ್ತಿಬ್ಬರು ನ್ಯಾಯಾಧೀಶರಾದ ನ್ಯಾ. ದೀಪಕ್ ಗುಪ್ತ್ತಾ ಮತ್ತು ಹೇಮಂತ್ ಗುಪ್ತಾ ಅವರು, ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವುದಕ್ಕೆ ಏಕಭಿಪ್ರಾಯದಿಂದ ಸಮ್ಮತಿಸಿದರಾದರೂ, ನ್ಯಾ. ಜೋಸೆಫ್ ಅನಿಸಿಕೆ ಕುರಿತಾಗಿ ವ್ಯತ್ಯಸ್ತ ಅಭಿಪ್ರಾಯವನ್ನು ಹಂಚಿಕೊಂಡರು. ‘ಬಚನ್ ಸಿಂಗ್ ವರ್ಸಸ್ ಪಂಜಾಬ್ ಸರ್ಕಾರ (1980)’ ಪ್ರಕರಣದಲ್ಲಿ ಸಾಂವಿಧಾನಿಕ ಪೀಠ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿದಿರುವುದರಿಂದಾಗಿ, ಈ ಹಂತದಲ್ಲಿ ಮರುಪರಿಶೀಲನೆಯ ಅಗತ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು.

ಬಚನ್ ಸಿಂಗ್ ಪ್ರಕರಣದಲ್ಲಿ, ಭಾರತದಲ್ಲಿನ ಮರಣದಂಡನೆ ಶಿಕ್ಷೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯುವಾಗ, ‘ಜೀವಾವಧಿ ಶಿಕ್ಷೆ ಒಂದು ನಿಯಮವಾಗಿದ್ದು ಮತ್ತು ಮರಣದಂಡನೆ ಒಂದು ಅಪವಾದವಾಗಿದ್ದು, ‘ವಿರಳಾತಿವಿರಳ’ ಎನಿಸಿದ ಪ್ರಕರಣಗಳಲ್ಲಿ ಮಾತ್ರವೇ ಈ ಶಿಕ್ಷೆಯನ್ನು ನೀಡಬೇಕು’ ಎಂಬುದಾಗಿ ಸವೋಚ್ಚ ನ್ಯಾಯಾಲಯವು 1980ರಲ್ಲೇ ಹೇಳಿತ್ತು ಎಂಬುದನ್ನಿಲ್ಲಿ ಗಮನಿಸಬೇಕು. ಅಷ್ಟೇ ಅಲ್ಲ, ನ್ಯಾಯಾಧೀಶರಿಗಿರುವ ವಿವೇಚನಾಧಿಕಾರಗಳಿಗೆ ಸಂಪೂರ್ಣವಾಗಿ ತಡೆಯೊಡ್ಡದೆಯೇ, ತತ್ತ್ವನಿಷ್ಠವಾಗಿ ಶಿಕ್ಷೆ ವಿಧಿಸಬೇಕಾಗಿರುವ ಅಗತ್ಯದ ಕುರಿತೂ ನ್ಯಾಯಾಲಯ ಒತ್ತಿಹೇಳಿತು. ಮರಣದಂಡನೆ ಶಿಕ್ಷೆ ವಿಧಿಸುವಾಗ ದಾಖಲಿಸಲ್ಪಡಬೇಕಾದ ‘ವಿಶೇಷ ಕಾರಣಗಳು’ ಎಂದರೆ, ಅಪರಾಧಕ್ಕೆ ಮಾತ್ರವಲ್ಲದೆ ಅಪರಾಧಿಗೂ ಸಂಬಂಧಿಸಿದಂತಿರುವ ನಿರ್ದಿಷ್ಟ ಪ್ರಕರಣದ ‘ಅಪವಾದಾತ್ಮಕ/ಅಸಾಧಾರಣ ಕಾರಣಗಳು’ ಎಂದರ್ಥ ಎಂದೂ ನ್ಯಾಯಾಲಯ ವಿವರಿಸಿತು.

ಬಚನ್ ಸಿಂಗ್ ಪ್ರಕರಣದಲ್ಲಿ ಮರಣದಂಡನೆ ವಿಧಿಸಿದ್ದರ ಕುರಿತ ಅರ್ಜಿಯಲ್ಲಿ, ಪೂರ್ವಸ್ಥಿತಿಗೆ ತರಲಾಗದಿರುವಿಕೆ, ತಪ್ಪಾಗಿರಬಹುದಾದ ಸಂಭವ, ಮತ್ತು ಕೃತ್ಯವು ಸದರಿ ಶಿಕ್ಷೆಯು ನಿರ್ದಯಿಯೂ, ಅಮಾನವೀಯವೂ ಆಗಿದೆ ಎಂಬ ವಾದ ಮಂಡಿಸಲಾಗಿತ್ತು. ಅಷ್ಟೇ ಅಲ್ಲ, ತಪ್ಪನ್ನು ತಡೆಯುವ (ಅಂದರೆ ತಪ್ಪಿತಸ್ಥನಿಗೆ ಒದಗುವ ಉಗ್ರಶಿಕ್ಷೆಯ ಭಯವನ್ನು ಮನವರಿಕೆ ಮಾಡಿಕೊಟ್ಟು ಅಂಥ ಅಪರಾಧವನ್ನು ತಡೆಯುವಿಕೆ) ಕುರಿತಾದ ದಂಡನೆಶಾಸ್ತ್ರದ ಉದ್ದೇಶವು ಇಲ್ಲಿ ರುಜುವಾತಾಗಿಲ್ಲ. ಸುಧಾರಣೆ ಮತ್ತು ಪುನಃಸ್ಥಾಪನೆ ಇವು ಶಿಕ್ಷೆಯ ಉದ್ದೇಶ ಎಂದು ಕೂಡ ವಾದಿಸಲಾಯಿತು.

ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಐವರು ನ್ಯಾಯಾಧೀಶರ ಪೈಕಿ ನಾಲ್ವರು ‘ಮರಣದಂಡನೆ ಶಿಕ್ಷೆ ಅಸಾಂವಿಧಾನಿಕ’ ಎಂಬ ವಾದವನ್ನು ಒಪ್ಪಲಿಲ್ಲ, ಹಾಗೂ ಸರ್ಕಾರ ಮತ್ತು ಸಮಾಜದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಹಾಗೂ ಜನಸಾಮಾನ್ಯರ ಹಿತಾಸಕ್ತಿಗಳಿಗೆ ಬೆದರಿಕೆ ಒದಗಿರುವಂಥ ಪ್ರಕರಣಗಳಿಗೆ ಮರಣದಂಡನೆ ಶಿಕ್ಷೆಯನ್ನು ಸೀಮಿತಗೊಳಿಸಲಾಗದು ಎಂದೂ ಅವರು ಹೇಳಿದರು. ಆಗಿರಬಹುದಾದ ತಪು್ಪಗಳನ್ನು ಉಚ್ಚ ನ್ಯಾಯಸ್ಥಾನಗಳು ಸರಿಪಡಿಸಬಹುದು, ಮತ್ತು ದಂಡನೆ-ಪೂರ್ವ ವಿಚಾರಣೆ ಹಾಗೂ ಉಚ್ಚ ನ್ಯಾಯಾಲಯದ ದೃಢೀಕರಣದ ಅಗತ್ಯವಿರುವ ಕಾರ್ಯವಿಧಾನಗಳು ಇಂಥ ತಪು್ಪಗಳನ್ನು ಸರಿಪಡಿಸಬಹುದು ಎಂಬುದೂ ಅವರ ವಾದವಾಗಿತ್ತು.

ಇಲ್ಲಿ ಮತ್ತೊಂದು ಅಂಶವನ್ನೂ ಗಮನಿಸಬೇಕು- ‘ಜೀವನವು ಪರಿಪೂರ್ಣವಾಗಿ ಅಂತ್ಯಗೊಳ್ಳುವಿಕೆ’ ಎಂಬ ಘೋಷಣೆ ಅಂತರ್ಗತವಾಗಿರುವ ಒಂದು ಶಿಕ್ಷೆಯಾಗಿ ಮರಣದಂಡನೆ ಪರಿಕಲ್ಪನೆಯನ್ನು ಹೃದಯಭಾಗದಲ್ಲೇ ಒಳಗೊಂಡಿರುವಂಥದು ‘ವಿರಳಾತಿವಿರಳ’ ಎಂಬ ಮಾನದಂಡ. ಮಾನವಜೀವನ ಮತ್ತು ಮಾನವಘನತೆಗೆ ಸಂಬಂಧಿಸಿದಂತೆ ಅದಕ್ಕಿರುವ ಕಾಳಜಿ/ಕಳವಳಗಳು, ಮತ್ತು ಈ ಶಿಕ್ಷೆಗಿರುವ ‘ಸಂಪೂರ್ಣ ಮಾರ್ಪಡಿಸಲಾಗದಿರುವಿಕೆ’ಯನ್ನು ಗುರುತಿಸುವುದರ ಒಂದು ಅಂಗವಾಗಿ ಒಂದು ಮಾನದಂಡವನ್ನು, ಅಪರಾಧ ಕಾನೂನುಗಳ ವಿಷಯದಲ್ಲಿ ನ್ಯಾಯಾಲಯವು ರೂಪಿಸಿದೆ. ‘ಪರ್ಯಾಯ ಆಯ್ಕೆ ಇಲ್ಲವೇ ಇಲ್ಲ’ ಎಂಬುದೇ ಆ ಮಾನದಂಡ. ಅದು ಭಾರತದಲ್ಲಿ ಮರಣದಂಡನೆಯ ಸಾಂವಿಧಾನಿಕ ನಿಯಂತ್ರಣಕ್ಕೆ ಒದಗಿದ ಆರಂಭವಾಗಿತ್ತು.

ಬಚನ್ ಸಿಂಗ್ ಪ್ರಕರಣದಲ್ಲಿನ ತನ್ನ ಮಾರ್ಗಸೂಚಿಗಳು ಮರಣದಂಡನೆ ಶಿಕ್ಷೆಯ ಸ್ವೇಚ್ಛಾನುಸಾರ ಹೇರಿಕೆಯ ಅಪಾಯವನ್ನು ತಗ್ಗಿಸಲಿವೆ ಎಂಬ ನ್ಯಾಯಸ್ಥಾನದ ಆಶಾವಾದದ ಹೊರತಾಗಿಯೂ, ಈ ನಿಟ್ಟಿನಲ್ಲಿ ಸ್ವೇಚ್ಛಾನುಸಾರಿಯಾಗಿ ಶಿಕ್ಷೆ ಘೋಷಿಸುವುದರ ಕುರಿತಾದ ಕಳವಳವನ್ನು ಸವೋಚ್ಚ ನ್ಯಾಯಾಲಯವು ಕಳೆದೊಂದು ದಶಕದಲ್ಲಿ ಹಲವಾರು ಸಂದರ್ಭಗಳಲ್ಲಿ ವ್ಯಕ್ತಪಡಿಸಿದೆ. ಮರಣದಂಡನೆ ವಿಧಿಸಲ್ಪಟ್ಟಿರುವ ಪ್ರಕರಣಗಳು ಮತ್ತು ಜೀವಾವಧಿ ಶಿಕ್ಷೆಯಂಥ ಪರ್ಯಾಯ ಆಯ್ಕೆಯನ್ನು ಅನ್ವಯಿಸಲಾಗಿರುವ ಪ್ರಕರಣಗಳ ನಡುವೆ ಭೇದ ಕಲ್ಪಿಸುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ನ್ಯಾಯಸ್ಥಾನದ ಮಾತುಗಳಲ್ಲೇ ಇದನ್ನು ಹೇಳುವುದಾದರೆ, ‘ಬಚನ್ ಸಿಂಗ್ ಪ್ರಕರಣವನ್ನು ಅತಿರೇಕವೆನ್ನಿಸುವಷ್ಟರ ಮಟ್ಟಿಗೆ ಅಸಮವಾಗಿ ಅನ್ವಯಿಸಿದ್ದರಿಂದಾಗಿ, ಮರಣದಂಡನೆ ವಿಧಿಸುವಿಕೆಯ ಕಾನೂನಿನಲ್ಲಿ ಅನಿಶ್ಚಿತತೆಯ ಪರಿಸ್ಥಿತಿ ಹುಟ್ಟಿಕೊಂಡಿದೆ; ಸದರಿ ಕಾನೂನು, ಸಾಂವಿಧಾನಿಕವಾಗಿ ಯೋಗ್ಯವೆನಿಸಿರುವ ಪ್ರಕ್ರಿಯೆ ಮತ್ತು ಸಮಾನತೆಯ ತತ್ತ್ವಗಳು ಪರಸ್ಪರ ಮುಖಾಮುಖಿಯಾಗುವುದಕ್ಕೆ ಕಾರಣವಾಗಿದೆ’. ಬಚನ್ ಸಿಂಗ್ ಪ್ರಕರಣದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ/ಅತಿಕ್ರಮಿಸಿ ಮರಣದಂಡನೆ ಶಿಕ್ಷೆಯನ್ನು ತಪ್ಪಾದ ರೀತಿಯಲ್ಲಿ ಹೇರಿರುವುದೂ ನ್ಯಾಯಾಲಯದ ಗಮನಕ್ಕೆ ಬಂದಿದೆ. ಮೇಲೆ ಉಲ್ಲೇಖಿಸಲಾಗಿರುವಂತೆ, ಬಚನ್ ಸಿಂಗ್ ಪ್ರಕರಣದಲ್ಲಿ ಯತ್ನಿಸಲಾದ ಮರಣದಂಡನೆ ಶಿಕ್ಷೆಯ ಸಾಂವಿಧಾನಿಕ ನಿಯಂತ್ರಣವು, ‘ಸ್ವೇಚ್ಛಾನುಸಾರಿಯಾಗಿ ಮತ್ತು ಸಂಪ್ರದಾಯಕ್ಕೆ ವಿರುದ್ಧವಾಗಿ’ ಮರಣದಂಡನೆಯನ್ನು ವಿಧಿಸುವುದನ್ನು ತಡೆಯುವಲ್ಲಿ ವಿಫಲವಾದಂತಿದೆ.

ಇಲ್ಲಿ ಮತ್ತೊಂದು ಸ್ವಾರಸ್ಯಕರ ಸಂಗತಿಯನ್ನು ಗಮನಿಸಬೇಕು. ‘ಶಶಿ ನಾಯರ್ ವರ್ಸಸ್ ಕೇಂದ್ರ ಸರ್ಕಾರ (1991)’ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಯ ಕುರಿತಾಗಿ ಮತ್ತೊಮ್ಮೆ ಪ್ರಶ್ನಿಸಲಾಯಿತು. ಆದರೆ, ದೇಶದಲ್ಲಿ ಕಾನೂನು-ಸುವ್ಯವಸ್ಥೆ ಪರಿಸ್ಥಿತಿ ಹದಗೆಡುತ್ತಿರುವುದರಿಂದಾಗಿ ಈ ವಿಷಯದ ಕುರಿತಂತೆ ಕಾನೂನಿನ ಮರುಪರಿಶೀಲನೆಗಿದು ಸೂಕ್ತ ಸಮಯವಲ್ಲ ಎಂಬ ಕಾರಣವನ್ನು ಮುಂದುಮಾಡಿ ನ್ಯಾಯಾಲಯವು ಸದರಿ ಅಹವಾಲನ್ನು ತಿರಸ್ಕರಿಸಿತು. ಅಷ್ಟೇ ಅಲ್ಲ, ‘ನೇಣುಹಾಕುವ ಮೂಲಕ ಮರಣದಂಡನೆ ಶಿಕ್ಷೆಯನ್ನು ಕಾರ್ಯರೂಪಕ್ಕೆ ತರುವುದು ಬರ್ಬರ/ಅನಾಗರಿಕವಾಗಿದೆ ಮತ್ತು ಮಾನವೀಯ ಮೌಲ್ಯಗಳನ್ನು ಕಡೆಗಣಿಸುವ ರೀತಿಯಲ್ಲಿರುವ ಕಾರಣದಿಂದ, ಮತ್ತಾವುದಾದರೂ ಯೋಗ್ಯ ಮತ್ತು ಕಡಿಮೆ ನೋವುಂಟುಮಾಡುವ ವಿಧಾನವನ್ನು ಇದಕ್ಕೆ ಪರ್ಯಾಯವಾಗಿಸಬೇಕು’ ಎಂಬ ಕೋರಿಕೆಯೂ ತಿರಸ್ಕರಿಸಲ್ಪಟ್ಟಿತು. ಈ ಘಟ್ಟದಲ್ಲಿ ನ್ಯಾ. ಜೋಸೆಫ್ ಅವರ ದೃಷ್ಟಿಕೋನವನ್ನು ಗಮನಿಸುವುದು ಸಮಂಜಸವಾದೀತು; ಬಚನ್ ಸಿಂಗ್ ಪ್ರಕರಣದ ಮರುಪರಿಗಣನೆಯನ್ನೇನೂ ಅವರು ಬಯಸಿರಲಿಲ್ಲ; ಮರಣದಂಡನೆ ಶಿಕ್ಷೆಯ ಉದ್ದೇಶ ಮತ್ತು ಪರಿಪಾಠವನ್ನು ಮರುಪರಿಶೀಲಿಸಬೇಕು ಎಂಬುದಷ್ಟೇ ಅವರ ಬಯಕೆಯಾಗಿತ್ತು ಹಾಗೂ ಸಮಾಜದಲ್ಲಿ ಕಾಣಬರುವ ಹೇಯ ಅಪರಾಧಗಳಿಗೆ ಸಂಬಂಧಿಸಿದಂತಿರುವ ಒಂದು ‘ನಿರೋಧಕ ಅಸ್ತ್ರ’ವಾಗಿ ಮರಣದಂಡನೆಯು ಕಾನೂನುಶಾಸ್ತ್ರದ ಉದ್ದೇಶವನ್ನು ಈಡೇರಿಸಿದೆಯೇ ಎಂಬುದು ಅವರ ಪ್ರಶ್ನೆಯಾಗಿತ್ತು. ಇದನ್ನೇ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಬಚನ್ ಸಿಂಗ್ ಪ್ರಕರಣದಲ್ಲಿನ ತೀರ್ಪಿನ ಕಾರಣದಿಂದಾಗಿ ಮರಣದಂಡನೆ ಶಿಕ್ಷೆ ಸಾಂವಿಧಾನಿಕವಾಗಿ ಸಿಂಧುವಾಗಿ ಮುಂದುವರಿಯಲು ಸಾಧ್ಯವಿದೆ, ಆದರೆ ನ್ಯಾಯಾಲಯದ ಸಮ್ಮುಖದಲ್ಲಿ ಬರುವ ‘ಹಕ್ಕುಬಾಧ್ಯತೆಗಳಿಗೆ ಸಂಬಂಧಿಸಿದ ಪ್ರಕರಣ’ಗಳಲ್ಲಿ ಅದರ ಅನ್ವಯಿಕೆಯನ್ನು, ಆ ಪ್ರಕರಣದಲ್ಲಿ ಹೇಳಲಾದ ಮಾನದಂಡಗಳಿಗೆ ಹೊಂದುವಂಥ ಪ್ರಕರಣಗಳಿಗೆ ಮಾತ್ರವೇ ಸೀಮಿತಗೊಳಿಸಬೇಕಾಗಿದೆ.

ಅಪರಾಧಗಳ ಕುರಿತಾದ ಸಾರ್ವಜನಿಕ ಚರ್ಚೆಯು, ಪ್ರಕರಣವೊಂದರ ವಿಚಾರಣೆ, ಅಪರಾಧ ನಿರ್ಣಯ ಮತ್ತು ಶಿಕ್ಷೆಯ ಘೋಷಣೆಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಕುರಿತೂ ನ್ಯಾ. ಕುರಿಯನ್ ಬೇಗುದಿ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ನ್ಯಾಯಾಲಯದ ದೃಷ್ಟಿಕೋನವು ಬಹುಮತ-ವಿರೋಧಿಯಾಗಿರುವಾಗಲೂ ಸಾಂವಿಧಾನಿಕವಾಗಿ ಸರಿಯಾಗಿರಬೇಕಾದ್ದು ನ್ಯಾಯಾಲಯದ ಕರ್ತವ್ಯ. ಜನರ ಸಮಷ್ಟಿಪ್ರಜ್ಞೆ ಅಥವಾ ಜನಾಭಿಪ್ರಾಯದೊಂದಿಗೆ ನ್ಯಾಯಾಲಯಗಳು ವ್ಯವಹರಿಸುವಾಗ ಇಂಥ ವಾಸ್ತವಾಂಶವು ಮಹತ್ವದ್ದೆಂದು ಪರಿಗಣಿಸಲ್ಪಡಬೇಕು.

ನಮ್ಮ ಕಾನೂನುಶಾಸ್ತ್ರದಲ್ಲಿ ಮರಣದಂಡನೆಯ ಉಪಬಂಧವು ಹೇಗೇ ಇರಲಿ, ಯುಕ್ತವಾಗಿರಲಿ ಅಥವಾ ಅನುಚಿತವಾಗಿರಲಿ, ಅದನ್ನು ಮರುಪರಿಷ್ಕರಿಸುವ/ಪುನರವಲೋಕಿಸುವ ತನಕ, ತೀರ್ಪನೀಡುವ/ಶಿಕ್ಷೆಯ ಘೋಷಣೆಗೆ ಮುಂದಾಗುವ ಯಾವುದೇ ನ್ಯಾಯಾಧೀಶರು ಉಪೇಕ್ಷಿಸುವುದಕ್ಕೆ ಕಷ್ಟವಾಗುವಷ್ಟರಮಟ್ಟಿಗಿನ ಒಂದಷ್ಟು ಪ್ರಮುಖ ನೀತಿನಿಯಮಗಳನ್ನು ರೂಪಿಸುವುದಕ್ಕೆ ಸಂಬಂಧಿಸಿದಂತೆ ನ್ಯಾ. ಜೋಸೆಫ್ ಶ್ಲಾಘನೆಗೆ ಅರ್ಹರಾಗುತ್ತಾರೆ.

ಮೊದಲಿಗೆ, ಓರ್ವ ಸೆರೆಯಾಳಿನ ಸದ್ವರ್ತನೆಯನ್ನು ದೃಢೀಕರಿಸುವಂಥ ಪ್ರಮಾಣಪತ್ರವನ್ನು ಜೈಲು ಅಧೀಕ್ಷಕರು ಒದಗಿಸಿದಲ್ಲಿ, ಸದರಿ ಆಪಾದಿತನು ಸ್ವತಃ ಸುಧಾರಿಸಲ್ಪಡುವಂಥ ಸಾಮರ್ಥ್ಯ ಹೊಂದಿದ್ದಾನೆ ಎಂಬುದನ್ನು ಸೂಚಿಸುವುದಕ್ಕೆ ಅದು ಸಮಂಜಸ ಪುರಾವೆಯೆನಿಸಿಕೊಳ್ಳುತ್ತದೆ ಮತ್ತು ತನ್ಮೂಲಕ ನ್ಯಾಯದಾನವು ನಿರ್ಣಾಯಕ ಹಂತವನ್ನು ತಲುಪುವಂತಾಗುವ ಉದ್ದೇಶವನ್ನು ಜೀವಾವಧಿ ಶಿಕ್ಷೆ ಈಡೇರಿಸುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.

ಎರಡನೆಯದಾಗಿ, ಮನೋವೈಜ್ಞಾನಿಕ/ಮನೋವೈದ್ಯಕೀಯ ನೆಲೆಗಟ್ಟಿನ ಯಾವುದೇ ಪ್ರಮಾಣೀಕೃತ ಮೌಲ್ಯಮಾಪನ/ವಿಶ್ಲೇಷಣೆಯಿಲ್ಲದಿದ್ದಲ್ಲಿ, ಸುಧಾರಣೆಯ ಸಾಧ್ಯತೆ ಅಥವಾ ಸಂಭವನೀಯತೆಗೆ ತಡೆಯೊಡ್ಡುವುದು ತಪ್ಪಾಗುತ್ತದೆ. ಕೈದಿಯೊಬ್ಬ ಸುಧಾರಣೆಯ ಅಥವಾ ಸುವ್ಯವಸ್ಥಿತ ಸ್ಥಿತಿಗೆ ಮರಳುವಲ್ಲಿ ಅಸಮರ್ಥನಾಗಿದ್ದಾನೆ ಎಂಬುದಾಗಿ ಪುರಾವೆ ಒದಗಿಸುವ ಸಂದರ್ಭದಲ್ಲಿ ಸಂಬಂಧಪಟ್ಟವರು ಈ ಅಂಶವನ್ನು ಗಮನದಲ್ಲಿರಿಸಿಕೊಂಡಿರಬೇಕು. ಇದನ್ನು ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಅಪರಾಧಿಯಲ್ಲಿ ಸುಧಾರಣಾ ಸಾಮರ್ಥ್ಯದ ಕೊರತೆಯಿದೆ ಎಂಬುದನ್ನು ಪ್ರಮಾಣೀಕರಿಸುವುದು, ಅವನ ಮೇಲೆ ಕಾನೂನುಕ್ರಮ ಜರುಗಿಸುವ ವ್ಯವಸ್ಥೆಯ/ಫಿರ್ಯಾದಿ ಪಕ್ಷದ ಹೊಣೆಯಾಗಿರುತ್ತದೆ.

ಮೂರನೆಯದಾಗಿ, ವಿಚಾರಣೆಯ ಹಂತದಲ್ಲಿನ ಕಾರ್ಯವಿಧಾನಗಳು ನ್ಯಾಯಸಮ್ಮತವಾಗಿ ನಡೆದಿಲ್ಲ ಹಾಗೂ ಯಥೋಚಿತ ಪ್ರಕ್ರಿಯೆಗಳು ನೆರವೇರಿಲ್ಲ ಎಂಬುದನ್ನು ಸಾಬೀತುಮಾಡಲು ಆಪಾದಿತನಿಗೆ ಸಾಧ್ಯವಾದಲ್ಲಿ, ಮರಣದಂಡನೆ ಶಿಕ್ಷೆಯನ್ನು ರದ್ದುಮಾಡಬಹುದಾಗಿದೆ. ಈ ಪ್ರಕರಣದಲ್ಲಿ, ವಿಚಾರಣೆಯ ನಂತರ ಶಿಕ್ಷೆಯ ಘೋಷಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಹಿಯರಿಂಗ್​ಗೆ ಅವಕಾಶವಿಲ್ಲದಿದ್ದುದನ್ನು ಮತ್ತು ಆಪಾದಿತ ತಪ್ಪಿತಸ್ಥನೆಂದು ನಿರ್ಣಯಿಸಲ್ಪಟ್ಟ ದಿನದಂದೇ ಅದನ್ನು ನಡೆಸಿದ್ದನ್ನು, ಶಿಕ್ಷೆಯ ಘೋಷಣೆಗೆ ಮತ್ತು ಅದರ ತಗ್ಗಿಸುವಿಕೆಗೆ ಸಂಬಂಧಿಸಿದ ಪುರಾವೆ ಒದಗಿಸುವುದಕ್ಕೆ ಅವನಿಗೆ ಸಾಕಷ್ಟು ಸಮಯ ಸಿಗಲಿಲ್ಲ ಎನ್ನುವುದಕ್ಕಿರುವ ಒಂದು ಕಾರಣವಾಗಿ ಉಲ್ಲೇಖಿಸಲಾಯಿತು.

ಒಟ್ಟಿನಲ್ಲಿ, ಭಾರತೀಯ ಅಪರಾಧ ನ್ಯಾಯಶಾಸ್ತ್ರದಲ್ಲಿ ಮರಣದಂಡನೆಯ ಫಲಕಾರಿತ್ವದ ಕುರಿತಾಗಿ ಪ್ರಸ್ತುತ ನಡೆಯುತ್ತಿರುವ ಚರ್ಚೆಗೆ, ನ್ಯಾ. ಜೋಸೆಫ್ ವ್ಯಕ್ತಪಡಿಸಿರುವ ಅಭಿಪ್ರಾಯವು ಒಂದು ಮೌಲ್ಯಯುತ ಸೇರ್ಪಡೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)