ಜೈಲುಗಳ ಸುಧಾರಣೆಗೆ ಕಾಲ ಸನ್ನಿಹಿತ

ಕೈದಿಗಳು ಯಾವ ಮುಖ್ಯವಾಹಿನಿಯಲ್ಲಿ ಪುನರ್ವಸತಿ ಕಂಡುಕೊಂಡು ಅದರ ಭಾಗವೇ ಆಗಿಬಿಡುತ್ತಾರೋ, ಅಂಥ ಸಮಾಜವು ಅವರನ್ನು ‘ಸುಧಾರಿತ ವ್ಯಕ್ತಿಗಳು’ ಎಂದು ಪರಿಗ್ರಹಿಸಬೇಕಿರುವುದು ನಮ್ಮೆದುರಿನ ಗುರಿ. ಅತ್ಯಂತ ಪರಿಣಾಮಕಾರಿ ವಿಧಾನದಲ್ಲಿ ಈ ‘ಗುರಿ’ಯನ್ನು ತಲುಪಬೇಕೆಂದರೆ, ಅದರ ಸಾಧನೆಗಿರುವ ‘ಮಾರ್ಗೇಪಾಯ’ಗಳಲ್ಲೂ ತೊಡಗಿಸಿಕೊಳ್ಳಬೇಕಾಗುತ್ತದೆ.

ದೇಶದ 1,382 ಸೆರೆಮನೆಗಳಲ್ಲಿ ತಾಂಡವವಾಡುತ್ತಿರುವ ಅಮಾನವೀಯ ಪರಿಸ್ಥಿತಿಗಳಿಗೆ ಸಂಬಂಧಿಸಿದ ವಿಷಯವೊಂದರ ಕುರಿತು ಸವೋಚ್ಚ ನ್ಯಾಯಾಲಯ ಇತ್ತೀಚೆಗಷ್ಟೇ ವಿಚಾರಣೆ ನಡೆಸಿತು; ಈ ವೇಳೆ, ನಮ್ಮ ಸೆರೆಮನೆಗಳಲ್ಲಿ ವ್ಯಾಪಿಸಿರುವ ವ್ಯಾಪಕ ಸಮಸ್ಯೆಗಳನ್ನು ಅವಲೋಕಿಸಿ ಪರಿಹಾರ ಕ್ರಮಗಳನ್ನು ಸೂಚಿಸಲೆಂದು, ಸವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಅಮಿತಾವ ರಾಯ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಭಾರತದ ಸೆರೆಮನೆಗಳು ಹಲವು ಸಮಸ್ಯೆಗಳ ಆಗರವೇ ಆಗಿಬಿಟ್ಟಿವೆ; ಮಿತಿ ಮೀರಿ ಕೈದಿಗಳನ್ನು ಇರಿಸುವುದು, ಸಿಬ್ಬಂದಿ ಕೊರತೆ, ಸಮರ್ಪಕ ವೈದ್ಯಕೀಯ ಸೌಲಭ್ಯಗಳ ಕೊರತೆ, ಸೆರೆವಾಸಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದರಿಂದಾಗಿ ಸಂಭವಿಸುತ್ತಿರುವ ಸಾವುಗಳು, ಮಹಿಳಾ ಮತ್ತು ಬಾಲಕೈದಿಗಳಿಗೆ ಸಂಬಂಧಿಸಿದ ಸೌಕರ್ಯಗಳಲ್ಲಿನ ಅಸಮರ್ಪಕತೆ, ಕಳಪೆ ಆಡಳಿತ ವ್ಯವಸ್ಥೆ, ವಿಚಾರಣೆಗಾಗಿ ಕಾದಿರುವವರನ್ನು ಸುದೀರ್ಘ ಕಾಲಾವಧಿವರೆಗೆ ಹಿಡಿದಿಟ್ಟುಕೊಂಡಿರುವಿಕೆ, ಮತ್ತು ಸಮಾಲೋಚಕರು, ಆಡಳಿತಗಾರರು/ಕಾರ್ಯನಿರ್ವಾಹಕರು ಮತ್ತು ಕುಟುಂಬಿಕರೊಂದಿಗೆ ಸೆರೆವಾಸಿಗಳು ಸಂವಹನ ನಡೆಸಲಾಗದಿರುವುದು- ಹೀಗೆ ಸಮಸ್ಯೆಗಳು ಒಂದೆರಡಲ್ಲ.

ಕೇಂದ್ರ ಗೃಹಖಾತೆಯ ವ್ಯಾಪ್ತಿಯಲ್ಲಿ ಬರುವ ‘ರಾಷ್ಟ್ರೀಯ ಅಪರಾಧ ದಾಖಲೆ ದಳ’ದ 2007ರ ವರದಿ ಸೂಚಿಸುವಂತೆ, ದೇಶದ ಬಹುತೇಕ ಸೆರೆಮನೆಗಳಲ್ಲಿ ಅತಿರೇಕದ ದಟ್ಟಣೆಯೆಂಬುದು ಮಾಮೂಲಾಗಿಬಿಟ್ಟಿದ್ದು, ಕೆಲ ಜೈಲುಗಳಂತೂ ತಮ್ಮ ಸಾಮರ್ಥ್ಯದ ಶೇ. 200ರಷ್ಟು ಹೆಚ್ಚುವರಿ ಹೊರೆ ಹೊರುವಂತಾಗಿದೆ; ಜೈಲುದಟ್ಟಣೆಯ ಮೂರನೇ ಎರಡರಷ್ಟು ಭಾಗವನ್ನು ವಿಚಾರಣಾಧೀನ ಕೈದಿಗಳೇ ತುಂಬಿರುವುದು ಇದಕ್ಕೆ ಕಾರಣ. ಉದಾ: ಅಧಿಕೃತವಾಗಿ 2,100 ಬಂದಿಗಳನ್ನು ಹಿಡಿದಿಟ್ಟುಕೊಳ್ಳುವಷ್ಟು ಸಾಮರ್ಥ್ಯವಿರುವ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಬರೋಬ್ಬರಿ 4,800 ಬಂದಿಗಳಿದ್ದಾರೆ ಎನ್ನಲಾಗಿದೆ.

ಸೆರೆವಾಸಿಗಳಿಗೆ ಒದಗಿಸಬೇಕಾದ ಅಗತ್ಯ ಸೌಲಭ್ಯಗಳ ಪ್ರಮಾಣದಲ್ಲಿ ಹೆಚ್ಚಳವಾಗದ್ದರ ಜತೆಗೆ ಬೆಳೆಯುತ್ತಲೇ ಇರುವ ಜನಸಂಖ್ಯೆಗೆ ತಕ್ಕಂತೆ ಅಪರಾಧ ಮತ್ತು ಅಪರಾಧ ನಿರ್ಣಯದ ಪ್ರಮಾಣವೂ ಏರುತ್ತಲೇ ಇರುವ ಸಮಸ್ಯೆ ಕೂಡ ಜೈಲುಗಳಲ್ಲಿನ ಅತಿದಟ್ಟಣೆಗೆ ಕಾರಣವಾಗಿದೆ ಎನ್ನಬೇಕು. ಇಷ್ಟು ಸಾಲದೆಂಬಂತೆ, ದೀರ್ಘಾವಧಿ ಶಿಕ್ಷೆಗೊಳಗಾದ ಸೆರೆವಾಸಿಗಳಿಗೆ ಸಂಬಂಧಿಸಿದಂತೆ ಸೂಕ್ತವಾದ ‘ನಿರ್ಗಮನ-ನೀತಿ’ ಇಲ್ಲದಿರುವುದೂ ಸಮಸ್ಯೆಯನ್ನು ಮತ್ತಷ್ಟು ತೀವ್ರವಾಗಿಸಿದೆ. ಜೈಲುದಟ್ಟಣೆ ವಿಷಯದಲ್ಲಿ ಜಾರ್ಖಂಡ್ ಮತ್ತು ಛತ್ತೀಸ್​ಗಢ ರಾಜ್ಯಗಳ ನಂತರದ ಸ್ಥಾನದಲ್ಲಿರುವ ಕರ್ನಾಟಕದಲ್ಲಿ, ಸೆರೆಯಾಳುಗಳ ಪೈಕಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವವರು ಅತಿಹೆಚ್ಚು ಸಂಖ್ಯೆಯಲ್ಲಿದ್ದು (ಶೇ. 66ರಷ್ಟು), ಇದು ರಾಷ್ಟ್ರೀಯ ಸರಾಸರಿಗಿಂತ ಶೇ. 10ರಷ್ಟು ಹೆಚ್ಚು ಎನ್ನಲಾಗಿದೆ. ಮಿಕ್ಕ ರಾಜ್ಯಗಳಲ್ಲಿ, ಅದರಲ್ಲೂ ಮುಖ್ಯವಾಗಿ ಕೇರಳದಲ್ಲಿ ಈ ಪ್ರಮಾಣ ಕೇವಲ ಶೇ. 38ರಷ್ಟಿದೆ.

ಮೇಲಾಗಿ, ದೇಶದ ಮತ್ತಿತರ ರಾಜ್ಯಗಳಲ್ಲಿರುವಂತೆ ವಿಚಾರಣಾಧೀನ ಕೈದಿಗಳ ಸಂಖ್ಯೆಯೂ ಕರ್ನಾಟಕದಲ್ಲೂ ಜಾಸ್ತಿ ಇದೆ. ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ವಿಚಾರಣಾಧೀನ ಕೈದಿಗಳ ಸಂಖ್ಯೆಯಿರುವ 11 ರಾಜ್ಯಗಳ ಯಾದಿಯಲ್ಲಿ ಕರ್ನಾಟಕವೂ ಒಂದೆನಿಸಿದೆ. ಇಲ್ಲಿ ಮತ್ತೊಂದು ಅಂಶವನ್ನೂ ಗಮನಿಸಬೇಕು- ನ್ಯಾಯಾಲಯದಲ್ಲಿ ‘ತಪ್ಪಿತಸ್ಥ’ ಎಂದು ಸಾಬೀತಾಗುವವರೆಗೂ ಈ ಕೈದಿಗಳನ್ನು ‘ನಿರಪರಾಧಿ’ ಎಂದೇ ಈ ನೆಲದ ಕಾನೂನು ಪರಿಭಾವಿಸುತ್ತದೆ ಮತ್ತು ಸರ್ಕಾರದ ಖರ್ಚುವೆಚ್ಚದಲ್ಲಿ ಕಾನೂನಾತ್ಮಕ ಅಹವಾಲು ಸಲ್ಲಿಸುವುದಕ್ಕೂ ಇವರು ಅರ್ಹರಾಗಿರುತ್ತಾರೆ. ಈ ಘಟ್ಟದಲ್ಲಿ, ತ್ವರಿತ ವಿಚಾರಣೆ ಎಂಬುದು ಸಂವಿಧಾನದ ವಿಧಿ 21ರಲ್ಲಿ ಅಂತರ್ಗತವಾಗಿರುವ ಒಂದು ಮೂಲಭೂತ ಹಕ್ಕಾಗಿದ್ದು, ಅದು ಜೀವನ ಮತ್ತು ಕ್ರಿಯಾಸ್ವಾತಂತ್ರ್ಯದ ಹಕ್ಕನ್ನು ಖಾತ್ರಿಪಡಿಸುತ್ತದೆ. ಆದರೆ, ಕಾನೂನಾತ್ಮಕ ಅಹವಾಲಿನ ಕೊರತೆ ಹಾಗೂ ಕಾನೂನು ಕ್ರಮ ಜರುಗಿಸುವಲ್ಲಿನ ಅತಿರೇಕದ ವಿಳಂಬದಿಂದಾಗಿ, ಆಪಾದಿತರಿಗೆ ನ್ಯಾಯನೀಡಿಕೆಯನ್ನು ನಿರಾಕರಿಸಿದಂತಾಗುತ್ತದೆ ಮತ್ತು ನ್ಯಾಯಾಂಗ ವ್ಯವಸ್ಥೆಯ ನಿರ್ಲಕ್ಷ್ಯದ ಬಲಿಪಶುವಾಗಿ ಅವರು ಸೆರೆಮನೆಯಲ್ಲಿ ಕೊರಗುತ್ತ ದಿನದೂಡಬೇಕಾಗುತ್ತದೆ.

ಮಚಾಂಗ್ ಲಾಲುಂಗ್ ಎಂಬಾತನ ಪ್ರಕರಣ ಇಂಥ ನಿರ್ಭಾವುಕತೆಗೆ ಒಂದು ಉದಾಹರಣೆಯಾಗಬಲ್ಲದು. ನ್ಯಾಯಾಂಗ ವಿಚಾರಣೆಗೆ ಕಾಯುತ್ತ ಜೈಲುಕಂಬಿಗಳ ಹಿಂದೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕಳೆದ ನಂತರ, ಅಸ್ಸಾಂನ ಜೈಲೊಂದು ಕಾರಾಗೃಹವಾಸದಿಂದ ಮುಕ್ತಿ ನೀಡಿದಾಗ ಈತನಿಗೆ 77 ವರ್ಷ ವಯಸ್ಸಾಗಿತ್ತು. ಜೈಲುಸಿಬ್ಬಂದಿಯ ಕೊರತೆಯಿಂದಾಗಿಯೂ ಈ ಸಮಸ್ಯೆ ಮತ್ತಷ್ಟು ಸಂಕೀರ್ಣಗೊಳ್ಳುತ್ತದೆ ಎನ್ನಬೇಕು. ಮೇಲ್ವಿಚಾರಣೆಯ ಕೊರತೆಯಿಂದಾಗಿ, ಸೆರೆವಾಸಿಗಳು ದೀರ್ಘಕಾಲದವರೆಗೆ ಬಂದೀಖಾನೆಗಳಲ್ಲೇ ನಿರ್ಬಂಧಿಸಲ್ಪಡುವಂತಾಗುತ್ತದೆ, ಮತ್ತು ಇದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿ, ಜೈಲಿನ ಆವರಣದೊಳಗೆ ತಲ್ಲಣಗಳು ಮತ್ತು ಹಿಂಸಾಚಾರಗಳ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಭಾರತೀಯ ಕಾರಾಗೃಹ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಗುರುತಿಸಿರುವ ಸವೋಚ್ಚ ನ್ಯಾಯಾಲಯ, 1894ರ ಕಾರಾಗೃಹ ಕಾಯ್ದೆಯಲ್ಲಿ ಸುಧಾರಣೆ ತರುವಂತೆ, ವಿವಿಧ ರಾಜ್ಯ ಕಾರಾಗೃಹ ಕೈಪಿಡಿಗಳನ್ನು ಸಂಪೂರ್ಣ ಪರಿಷ್ಕರಿಸುವಂತೆ ಮತ್ತು ಸೆರೆವಾಸಿಗಳ ಹಕ್ಕುಗಳಿಗೆ ಸಂಬಂಧಿಸಿದ ‘ಪೂರ್ವನಿರ್ಣಯಾಧಾರಿತ ವಿಧಿಗಳನ್ನು’ ಅಳವಡಿಸಿಕೊಳ್ಳುವಂತೆ ರಾಜ್ಯಗಳಿಗೆ ಹಲವು ಸಂದರ್ಭಗಳಲ್ಲಿ ಆದೇಶಿಸಿದೆ.

ಕಾರಾಗೃಹವಾಸಿಗಳನ್ನು ನಡೆಸಿಕೊಳ್ಳುವ ವಿಷಯದ ಅಧ್ಯಯನಕ್ಕೆಂದು, ನ್ಯಾ. ಎ.ಎನ್. ಮುಲ್ಲಾ ನೇತೃತ್ವದ ‘ಅಖಿಲ ಭಾರತ ಜೈಲು ಸುಧಾರಣಾ ಆಯೋಗ’ವನ್ನು (ಇದು ‘ಮುಲ್ಲಾ’ ಆಯೋಗ ಎಂದೇ ಜನಜನಿತ) 1980ರಲ್ಲಿ ರಚಿಸಲಾಯಿತು. ಬಹುತೇಕ ಜೈಲುಹಕ್ಕಿಗಳಿಗೆ ಗ್ರಾಮೀಣ ಮತ್ತು ಕೃಷಿ ಹಿನ್ನೆಲೆಯಿರುವುದು ಹಾಗೂ ಅವರು ‘ಮೊದಲಸಲದ ತಪ್ಪಿತಸ್ಥ’ರಾಗಿರುವುದು, ಬಹುತೇಕವಾಗಿ ಕಾನೂನಿನ ತಾಂತ್ರಿಕ ಅಥವಾ ಸಣ್ಣ ಉಲ್ಲಂಘನೆಗಳಲ್ಲಿ ಅವರ ಪಾತ್ರವಿದ್ದುದು ಈ ಆಯೋಗದ ಗಮನಕ್ಕೆ ಬಂತು. ಅಷ್ಟೇ ಅಲ್ಲ, ವಿಧಿಸಲಾದ ದಂಡವನ್ನು ಪಾವತಿಸದ ಕಾರಣಕ್ಕೆ ಅಥವಾ ಜಾಮೀನು ಮೊತ್ತವು ಕೇವಲ 500 ರೂ.ನಷ್ಟಿದ್ದರೂ ಅವರಿಗೆ ಜಾಮೀನು ನೀಡಿ ಸೆರೆಯಿಂದ ಮುಕ್ತಿ ದೊರಕಿಸುವಂಥವರು ಯಾರೂ ಇಲ್ಲದ ಕಾರಣಕ್ಕೆ, ಅಥವಾ ಸಮರ್ಥ ಕಾನೂನಾತ್ಮಕ ನೆರವು ಪಡೆಯುವಲ್ಲಿನ ಅಸಾಮರ್ಥ್ಯದಿಂದಾಗಿ ಬಹಳಷ್ಟು ಜನ ಜೈಲುವಾಸಿಗಳಾಗಿರುವುದೂ ತಿಳಿದುಬಂತು. ಈ ಎಲ್ಲದರ ಪರಿಣಾಮವಾಗಿ, ಇಂಥ ವ್ಯಕ್ತಿಗಳು, ಪಳಗಿದ ನಿರ್ದಯಿ ಅಪರಾಧಿಗಳ ಸಹವಾಸದಲ್ಲಿ ವರ್ಷಗಳು, ಅಷ್ಟೇಕೆ ದಶಕಗಳನ್ನೇ ಕಳೆಯಬೇಕಾಗಿ ಬಂತೆಂಬುದೂ ಆಯೋಗದ ಗಮನಕ್ಕೆ ಬಂತು.

1996ರಲ್ಲಿ, ಕಾರಾಗೃಹ ಸುಧಾರಣಾ ಮಸೂದೆ ರೂಪಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸೂಚಿಸಿತು. ಕರಡು ಮಸೂದೆಯನ್ನು 1998ರಲ್ಲಿ ಎಲ್ಲ ರಾಜ್ಯಗಳಿಗೆ ವಿತರಿಸಲಾಯಿತು ಹಾಗೂ ಆ ಪೈಕಿ ಕೆಲ ರಾಜ್ಯಗಳು ಹೊಸ ಕಾನೂನು ರೂಪಿಸಿದವು. ಈ ಪೈಕಿ ರಾಜಸ್ಥಾನವು ‘ರಾಜಸ್ಥಾನ ಕಾರಾಗೃಹ ಕಾಯ್ದೆ 2001’ರಲ್ಲಿ ಸೆರೆವಾಸಿಗಳ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತಾದ ಅಧ್ಯಾಯವೊಂದನ್ನು ಸಂಯೋಜಿಸಿತು. ಮಧ್ಯಪ್ರದೇಶದಲ್ಲಿನ ಆಯ್ದ ಕಾರಾಗೃಹಗಳಲ್ಲಿ ಸೆರೆವಾಸಿಗಳಲ್ಲಿ ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಲು ಯತ್ನಿಸಲಾಯಿತು. 2005ರಲ್ಲಿ, ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ದಳವು, ‘ರಾಷ್ಟ್ರೀಯ ಕಾರಾಗೃಹ ಮಾದರಿ ಕೈಪಿಡಿ’ ಕರಡು ರೂಪಿಸುವ ಕಾರ್ಯದಲ್ಲಿ ಕಾರಾಗೃಹ ಅಧಿಕಾರಿಗಳು, ಶಿಕ್ಷಣತಜ್ಞರು ಮತ್ತು ಕಾರಾಗೃಹ ಪರಿಣತರನ್ನು ತೊಡಗಿಸಿತು. ಈ ಕೈಪಿಡಿಯ ಕೆಲವೊಂದು ಅತ್ಯಂತ ಗಮನಾರ್ಹ ಶಿಫಾರಸುಗಳಲ್ಲಿ ಇವು ಸೇರಿವೆ- ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳ ಇಲಾಖೆ ಮತ್ತು ಕಾರಾಗೃಹಗಳ ಕುರಿತಾದ ಪೂರ್ಣಕಾಲಿಕ ರಾಷ್ಟ್ರೀಯ ಆಯೋಗ ಸೇರಿದಂತೆ ಹೊಸ ಘಟಕಗಳ ಸೃಷ್ಟಿ; ಸೆರೆವಾಸಕ್ಕಿರುವ ಪರ್ಯಾಯ ಮಾಗೋಪಾಯಗಳ ಬಳಕೆ; ಸೆರೆವಾಸಿಗಳ ಪುನರ್ವಸತಿಗೆ ಗಮನ; ಜೈಲುದಟ್ಟಣೆಯನ್ನು ತಗ್ಗಿಸುವಿಕೆ; ಹಾಗೂ ಕಾರಾಗೃಹಗಳ ಆಧುನಿಕೀಕರಣ. ರಾಜ್ಯಗಳ ಜತೆಗಷ್ಟೇ ಅಲ್ಲದೆ, ಸಂಬಂಧಪಟ್ಟ ವಿವಿಧ ಸರ್ಕಾರೇತರ ಸಂಸ್ಥೆ (ಎನ್​ಜಿಒ)ಗಳೊಂದಿಗೆ ಈ ಕೈಪಿಡಿಯನ್ನು ಹಂಚಿಕೊಳ್ಳಲಾಯಿತು.

ಭಾರತದಲ್ಲಿನ ಸೆರೆಮನೆಗಳು ಮತ್ತು ಅವುಗಳ ಆಡಳಿತ ನಿರ್ವಹಣೆಯ ವಿಷಯವು, ಭಾರತದ ಸಂವಿಧಾನದ 7ನೇ ಅನುಸೂಚಿಯಲ್ಲಿನ ರಾಜ್ಯ ಪಟ್ಟಿಯ ಅಡಿಯಲ್ಲಿನ ಬಾಬತ್ತು/ನಮೂದು 4ರ ವ್ಯಾಪ್ತಿಗೆ ಬರುವ ರಾಜ್ಯ ವಿಷಯವಾಗಿರುತ್ತದೆ. ಕಾರಾಗೃಹಗಳ ನಿರ್ವಹಣೆ ಮತ್ತು ಆಡಳಿತವು, ರಾಜ್ಯ ಸರ್ಕಾರಗಳ ಅಧಿಕಾರವ್ಯಾಪ್ತಿಯಲ್ಲಿ ಬರುವಂಥದು ಹಾಗೂ ‘ಕಾರಾಗೃಹ ಕಾಯ್ದೆ, 1894’ ಮತ್ತು ಆಯಾ ರಾಜ್ಯ ಸರ್ಕಾರಗಳ ಕಾರಾಗೃಹ ಕೈಪಿಡಿಗಳ ಕಾರ್ಯವ್ಯಾಪ್ತಿಗೆ ಒಳಪಟ್ಟಿರುವಂಥದ್ದು. ಹೀಗಾಗಿ, ಚಾಲ್ತಿಯಲ್ಲಿರುವ ಕಾರಾಗೃಹ ಕಾನೂನುಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ಬದಲಿಸುವಂಥ ಪ್ರಧಾನ ಪಾತ್ರ, ಹೊಣೆಗಾರಿಕೆ ಮತ್ತು ಅಧಿಕಾರವನ್ನು ರಾಜ್ಯಗಳು ಹೊಂದಿವೆ. ‘ಕರ್ನಾಟಕ ಕಾರಾಗೃಹ ಕಾಯ್ದೆ, 1963’ರ ಪರಿಚ್ಛೇದ 5ರ ಅನುಸಾರ, ವಿಭಿನ್ನ ವರ್ಗಗಳ ಸೆರೆವಾಸಿಗಳನ್ನು ಪ್ರತ್ಯೇಕಿಸುವುದಕ್ಕೆ ಅವಕಾಶವಿದೆ. ಅಷ್ಟೇ ಅಲ್ಲ, ಸೆರೆವಾಸಿಗಳ ವರ್ಗೀಕರಣಕ್ಕೆ ಮತ್ತು ವಿಭಿನ್ನ ಕೈದಿಕೋಣೆಗಳ ನಿರ್ವಣಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವುದಕ್ಕೂ ಸದರಿ ಕಾಯ್ದೆಯ ಪರಿಚ್ಛೇದ 63(ಎಚ್) ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಕರ್ನಾಟಕ ಕಾರಾಗೃಹ ಕೈಪಿಡಿಯ 46ನೇ ಅಧ್ಯಾಯವು, ಪ್ರತಿಯೊಂದು ವರ್ಗದ ಜೈಲುವಾಸಿಗೂ ಒದಗಿಸಬೇಕಾದ ವಸತಿವ್ಯವಸ್ಥೆಯ ಮಾನದಂಡಗಳನ್ನು ವಿವರಿಸಿದರೆ, ಕೈದಿಗಳ ಸಾಲುಮನೆ ಅಥವಾ ಕೋಣೆಯಲ್ಲಿ ಪ್ರತಿ ಕೈದಿಗೂ 50 ಚದರಡಿಯಷ್ಟು ‘ನೆಲಾವಕಾಶ’ ಮತ್ತು 700 ಚದರಡಿಯಷ್ಟು ‘ವಿಶ್ರಾಂತಿ ಸ್ಥಳಾವಕಾಶ’ ಒದಗಿಸುವುದಕ್ಕೆ ಕೈಪಿಡಿಯ 902ನೇ ನಿಯಮ ಅನುವುಮಾಡಿಕೊಡುತ್ತದೆ. ಅಷ್ಟೇ ಅಲ್ಲ, ಪ್ರತಿಯೊಂದು ಕೈದಿಗಳ ಸಾಲುಮನೆ ಅಥವಾ ಕೋಣೆಯ ಮೇಲೂ, ಅದು ಎಷ್ಟು ಚದರಡಿ ಜಾಗವನ್ನು ಹೊಂದಿದೆ ಮತ್ತು ಎಷ್ಟು ಮಂದಿ ಕೈದಿಗಳಿಗೆ ಸ್ಥಳಾವಕಾಶ ಒದಗಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂಬ ವಿವರವನ್ನು ಸೂಚಿಸುವ, ಸ್ಪಷ್ಟವಾಗಿ ಲೇಖಿಸಲ್ಪಟ್ಟ ಹಲಗೆ/ಪ್ಲೇಟ್ ಲಗತ್ತಿಸುವುದು ಕಡ್ಡಾಯವಾಗಿರುತ್ತದೆ. ಆದರೆ, ಇಂಥ ನಿಯಮ ಪರಿಪಾಲನೆ ವಿರಳವೆಂದೇ ಹೇಳಬೇಕು. ಅತಿರೇಕದ ದಟ್ಟಣೆ, ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳ ಕೊರತೆ, ನೈರ್ಮಲ್ಯದ ಸೌಲಭ್ಯಗಳು ಕಳಪೆಯಾಗಿರುವಿಕೆ, ಸಮರ್ಪಕ ಆರೋಗ್ಯ ನಿಗಾವಣೆ ವ್ಯವಸ್ಥೆಯ ಕೊರತೆಗಳು ಕೂಡ ಕಾರಾಗೃಹಗಳಲ್ಲಿ ಆರೋಗ್ಯ ಸಮಸ್ಯೆಗಳ ಸಂಭಾವ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇನ್ನೊಂದೆಡೆ, ಆರೋಗ್ಯ ಸಮಸ್ಯೆಗಳ ಅಥವಾ ಕಾಯಿಲೆಗಳ ಹರಡಿಕೆ ಕುರಿತಾದ ಮಾಹಿತಿ ದೊರೆಯುವುದು ಸಹ ತೀರಾ ಕಡಿಮೆ.

‘ಕಾರಾಗೃಹ’ ಎಂದಾಕ್ಷಣ ನಾಗರಿಕ ಸಮುದಾಯದ ಚಿತ್ತಭಿತ್ತಿಯಲ್ಲಿ ‘ಅಸಡ್ಡೆಯ ವಠಾರ’ದಂಥ ಪರಿಕಲ್ಪನೆ ಮೂಡುವುದು ಮಾಮೂಲು. ಇಂಥ ನಾಗರಿಕರು ಕಾರಾಗೃಹ ಸಂಬಂಧಿತ ಯಾವುದೇ ಚಟುವಟಿಕೆಗಳಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿಲ್ಲ ಎಂಬುದು ಗಮನಾರ್ಹ. ನಾಗರಿಕ ಸಮಾಜ ತೋರುವ ಈ ಅಸಡ್ಡೆಯೇ, ಕಾರಾಗೃಹಗಳ ಪ್ರಗತಿಗೆ ಹಿನ್ನಡೆ ಅಥವಾ ತಡೆಗೋಡೆಯಾಗಿ ಪರಿಣಮಿಸಿಬಿಟ್ಟಿದೆ. ಕಾರಾಗೃಹ ವ್ಯವಸ್ಥೆಯೆಡೆಗಿನ ಗಮನ ಮತ್ತು ಸುಧಾರಣೆಯ ವಿಷಯದಲ್ಲಿ, ಕೈದಿಗಳ ಪುನರ್ವಸತಿ ಹಾಗೂ ಅವರನ್ನು ಮತ್ತೆ ಸಮಾಜದ ಅಂಗವಾಗಿಸುವ ತತ್ತ್ವವು ಅಪರಾಧ ನ್ಯಾಯ ವ್ಯವಸ್ಥೆಯ ಮಾರ್ಗದರ್ಶಿ ಸೂತ್ರವಾಗಿರುವುದರಿಂದ, ಅಂತಿಮವಾಗಿ ಕೈದಿಗಳು ಯಾವ ಮುಖ್ಯವಾಹಿನಿಯಲ್ಲಿ ಪುನರ್ವಸತಿ ಕಂಡುಕೊಳ್ಳುತ್ತಾರೋ ಮತ್ತು ಅದರ ಅಂಗವೇ ಆಗಿಬಿಡುತ್ತಾರೋ, ಅಂಥ ಸಮಾಜವು ಅವರನ್ನು ‘ಸುಧಾರಿತ ವ್ಯಕ್ತಿಗಳು’ ಎಂಬುದಾಗಿ ಪರಿಗ್ರಹಿಸಬೇಕಿರುವುದು ನಮ್ಮೆದುರಿನ ಗುರಿ. ಈ ‘ಗುರಿ’ಯನ್ನು ತಲುಪಬೇಕೆಂದರೆ, ಅದರ ಸಾಧನೆಗಿರುವ ‘ಮಾಗೋಪಾಯ’ಗಳಲ್ಲೂ ತೊಡಗಿಸಿಕೊಳ್ಳಬೇಕಲ್ಲವೇ?

ಒಟ್ಟಿನಲ್ಲಿ, ಸಮಾಜದ ಮುಖ್ಯವಾಹಿನಿಗೆ ಜೈಲುಹಕ್ಕಿಗಳ ಮರುಪ್ರವೇಶ ಮತ್ತು ಮರುಸಂಯೋಜನೆಯಂಥ ವಿಷಯಗಳೆಡೆಗೆ ಕಾರ್ಯನೀತಿ-ನಿರೂಪಕರು, ವಿದ್ವಾಂಸರು, ಕ್ಷೇತ್ರತಜ್ಞರು ಮತ್ತಿತರ ವೃತ್ತಿಪರಿಣತರು ಗಂಭೀರ ಗಮನ ನೀಡಬೇಕಾದ ಕಾಲ ಸನ್ನಿಹಿತವಾಗಿದೆ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)