ಕೃತಕ ಬುದ್ಧಿಮತ್ತೆ, ಮತ್ತೆ ಮತ್ತೆ ಕಾಡುವ ತಲ್ಲಣಗಳು

| ಸಜನ್​ ಪೂವಯ್ಯ

ಮಾನವಜೀವಿಯನ್ನು ಹೋಲುವ ರೋಬಾಟನ್ನು ಹಾಂಕಾಂಗ್ ಮೂಲದ ಕಂಪನಿಯೊಂದು ಅಭಿವೃದ್ಧಿಪಡಿಸಿದೆ ಎಂಬ ಸುದ್ದಿಯನ್ನು ನೀವು ಓದಿರಬಹುದು; ‘ಸೋಫಿಯಾ’ ಎಂಬ ಹೆಸರಿನ ಈ ರೋಬಾಟ್​ಗೆ ಸೌದಿ ಅರೇಬಿಯಾ ಇತ್ತೀಚೆಗಷ್ಟೇ ಪೌರತ್ವವನ್ನು ನೀಡಿದೆ! ಆದರೆ, ಇಲ್ಲಿ ಕೆಲ ಪ್ರಶ್ನೆಗಳೂ ಸಹಜವಾಗಿ ಮೂಡುತ್ತವೆ- ಸೋಫಿಯಾಗೆ ವಾಹನ ಚಾಲನಾ ಪರವಾನಗಿ ನೀಡಬಹುದೇ ಅಥವಾ ಸ್ವತ್ತು ಖರೀದಿಗೆ ಅನುಮತಿಸಬಹುದೇ ಅಥವಾ ಏನಾದರೂ ಅಪರಾಧ ಕೃತ್ಯ ಎಸಗಿದ್ದಕ್ಕಾಗಿ ಶಿಕ್ಷಿಸಬಹುದೇ? ಇತ್ಯಾದಿ. ಅರಿಜೋನಾದಲ್ಲಿ ಹೀಗೇ ಆಯಿತು. ಊಬರ್​ನಿಂದ ಪರೀಕ್ಷಾರ್ಥ ಪ್ರಯೋಗಕ್ಕೆ ಒಳಪಟ್ಟಿದ್ದ ಸ್ವಯಂಚಾಲಿತ ಕಾರೊಂದರಿಂದ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬರು ಮೃತಪಟ್ಟರು. ಈ ಅವಗಢಕ್ಕೆ ಹೊಣೆಗಾರರನ್ನಾಗಿಸಬೇಕಾದ್ದು ಊಬರ್ ಟೆಕ್ನಾಲಜೀಸ್ ಕಂಪನಿಯನ್ನೋ ಅಥವಾ ಸದರಿ ಸ್ವಯಂಚಾಲಿತ ಕಾರನ್ನು ಚಾಲಿಸುತ್ತಿದ್ದ ಕೃತಕ ಬುದ್ಧಿಮತ್ತೆಯನ್ನೋ ಎಂಬ ಪ್ರಶ್ನೆ ಉದ್ಭವಿಸಿತು. ಇದೆಲ್ಲವನ್ನು ನೋಡಿದಾಗ, ‘ಕೃತಕ ಬುದ್ಧಿಮತ್ತೆ’ ವಿಷಯದಲ್ಲಿ ಈ ಮಟ್ಟಿಗಿನ ಅಗಾಧ ಪರಿಶೋಧನೆಗಳು, ಅನ್ವಯಿಕೆಗಳು ಹೊರಹೊಮ್ಮುತ್ತಿರುವುದರಿಂದಾಗಿ ವಿಶ್ವಾದ್ಯಂತದ ಕಾನೂನು ವ್ಯವಸ್ಥೆಗಳು ಈ ವಿಷಯ ಕುರಿತಾದ ಒಂದು ಸಮಗ್ರ ನ್ಯಾಯಶಾಸ್ತ್ರವನ್ನೇ ಹುಟ್ಟುಹಾಕುವಂಥ ಕಸರತ್ತಿನಲ್ಲಿ ತೊಡಗಿಸಿಕೊಳ್ಳಬೇಕಾಗಿ ಬಂದಿದೆ.

1950ರಲ್ಲಿ, ಅಲನ್ ಟ್ಯೂರಿಂಗ್ ಎಂಬ ಇಂಗ್ಲಿಷ್ ಗಣಿತಜ್ಞ, ಯಂತ್ರವೊಂದನ್ನು ‘ಬುದ್ಧಿವಂತ’ ಎಂದು ಕರೆಯಲು ಅನುವುಮಾಡಿಕೊಡುವಂಥ, ‘ಟ್ಯೂರಿಂಗ್ ಟೆಸ್ಟ್’ ಎಂದೇ ಮುಂದೆ ಜನಜನಿತವಾದ ಪರಿಕಲ್ಪನೆಯನ್ನು ಪ್ರತಿಪಾದಿಸಿದ. ನಿರ್ದಿಷ್ಟ ಪರಿಸ್ಥಿತಿಗಳು/ಸಂದರ್ಭಗಳಿಗೆ ಅನುಸಾರವಾಗಿ ಮನುಷ್ಯರಿಂದ ಹೊಮ್ಮುವ ಪ್ರತಿಸ್ಪಂದನೆಗಳನ್ನು ಗಣಕಯಂತ್ರವೊಂದು ಅನುಕರಿಸಲು ಸಾಧ್ಯವಾಗಿದ್ದೇ ಆದಲ್ಲಿ, ಆ ಗಣಕಯಂತ್ರವು ಕೃತಕ ಬುದ್ಧಿಮತ್ತೆಯನ್ನು ಹೊಂದಿದೆ ಎನ್ನಬಹುದು ಎಂಬುದು ಟ್ಯೂರಿಂಗ್ ಟೆಸ್ಟ್​ನ ಪ್ರತಿಪಾದನೆಯಾಗಿತ್ತು.

ಇಂದು, ಕೃತಕ ಬುದ್ಧಿಮತ್ತೆಯ ಪರಿಕಲ್ಪನೆ ಜೀವನದ ಪ್ರತಿಯೊಂದು ಮಗ್ಗುಲನ್ನೂ ಆವರಿಸಿಕೊಂಡುಬಿಟ್ಟಿದೆ ಮತ್ತು ಟ್ಯೂರಿಂಗ್​ನ ಪರಿಕಲ್ಪನೆಯನ್ನೂ ಮೀರಿಸಿ ಬೆಳೆದುಬಿಟ್ಟಿದೆ. ನಾವು ಬಳಸುವ ಫೋನ್​ಗಳಲ್ಲಿ ಅಡಕವಾಗಿರುವ ‘ವಾಯ್್ಸ ಅಸಿಸ್ಟೆಂಟ್’ಗಳಿಂದ ಮೊದಲ್ಗೊಂಡು, ಸ್ವಯಂಚಾಲಿತ ಕಾರುಗಳವರೆಗೆ, ತರುಣರು ಹಗಲಿನಲ್ಲೇ ಕಾಣುವ ಹುಚ್ಚಾಪಟ್ಟೆ ಕನಸುಗಳ ಬಹುತೇಕ ಭಾಗವು ವಾಸ್ತವವಾಗಿ ಪರಿವರ್ತನೆಗೊಳ್ಳುತ್ತಿರುವಂಥ ಕಾಲಘಟ್ಟಕ್ಕೆ ಅಥವಾ ಸಾಧ್ಯತೆಗೆ ನಾವಿಂದು ಸಾಕ್ಷಿಯಾಗುತ್ತಿದ್ದೇವೆ; ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಯೇ ಇದಕ್ಕೆ ಕಾರಣ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಈ ಎಲ್ಲ ಹೊಸ ಬೆಳವಣಿಗೆಗಳು, ‘ಕೃತಕ ಬುದ್ಧಿಮತ್ತೆ’ಯಂಥ ಕ್ಷೇತ್ರದಲ್ಲಾಗುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿಯ ಫಲಿತವಾಗಿವೆ ಎಂಬುದೂ ಅಷ್ಟೇ ಸತ್ಯ. ಸರಳವಾಗಿ ಹೇಳುವುದಾದರೆ, ಕೃತಕ ಬುದ್ಧಿಮತ್ತೆ ಎಂಬುದು ವಿಶಾಲಾರ್ಥ ಧ್ವನಿಸುವ ಒಂದು ಪರಿಭಾಷೆಯಾಗಿದ್ದು, ರ್ತಾಕ ಶಕ್ತಿ, ಕಲಿಕೆ ಮತ್ತು ಸ್ವ-ಸುಧಾರಣೆಯಂಥ ಮಾನವ ಬುದ್ಧಿಮತ್ತೆಯೊಂದಿಗೆ ಸಾಮಾನ್ಯವಾಗಿ ಗುರುತಿಸಲ್ಪಡುವಂಥ ಹತ್ತು ಹಲವು ಕಾರ್ಯಸಾಧ್ಯತೆಗಳನ್ನು ಒಳಗೊಳ್ಳಲು ಯಂತ್ರಗಳನ್ನು ಸಮರ್ಥವಾಗಿಸುವಂಥ ಹಲವಾರು ಚಟುವಟಿಕೆಗಳನ್ನು ವರ್ಣಿಸಲು ಈ ಪರಿಭಾಷೆಯನ್ನು ಬಳಸಲಾಗುತ್ತದೆ. ವಾಹನ ತಂತ್ರಜ್ಞಾನ, ಶಿಕ್ಷಣ, ರಕ್ಷಣೆ ಮತ್ತು ಭದ್ರತೆ, ರೋಬಾಟಿಕ್ಸ್ ಮತ್ತು ಆರೋಗ್ಯ ರಕ್ಷಣೆಯಂಥ ವಿಸ್ತಾರ ಕ್ಷೇತ್ರಗಳಲ್ಲಿ ಬಳಸಲ್ಪಡುವಂತೆ ಕೃತಕ ಬುದ್ಧಿಮತ್ತೆಯನ್ನು ಹದಗೊಳಿಸಲಾಗುತ್ತದೆ.

ಈ ರಂಗದಲ್ಲಿ ಇದುವರೆಗೆ ಆಗಿರುವ ತಾಂತ್ರಿಕ ಪ್ರಗತಿಗಳು ಮತ್ತು ಆರ್ಥಿಕ ಹೂಡಿಕೆಗಳು ಸೂಚ್ಯವಾಗಿ ಹೇಳುವುದೇನೆಂದರೆ, ಈ ತಂತ್ರಜ್ಞಾನದ ಅನ್ವಯಿಕೆ ಮತ್ತು ಅಳವಡಿಕೆ ಶೀಘ್ರ ಸಮಾಜದ ಉದ್ದಗಲಕ್ಕೂ ವ್ಯಾಪಿಸಲಿದೆ. ವಿಶ್ವಾದ್ಯಂತದ ವ್ಯಾಪಕ ಶ್ರೇಣಿಯ ಉದ್ಯಮಗಳು ಮತ್ತು ವಲಯಗಳಲ್ಲಿ ‘ಸ್ವಯಂಚಾಲನಾ-ತಂತ್ರ’ ಅಥವಾ ‘ಯಾಂತ್ರೀಕೃತ ವ್ಯವಸ್ಥೆ’ಗಾಗಿನ ಬೇಡಿಕೆ ಹೆಚ್ಚುತ್ತಲೇ ಇರುವುದು, ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಕಾಣಬರುತ್ತಿರುವ ಬೆಳವಣಿಗೆ ಮತ್ತು ಅಭಿವೃದ್ಧಿಯ ಹಿಂದಿರುವ ಪ್ರಧಾನ ಉದ್ದೇಶವಾಗಿದೆ. ಮಾನವ ಸಂಪನ್ಮೂಲದ ಕಾರ್ಯಾವಧಿಯನ್ನು ತಗ್ಗಿಸಿ, ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಅಂತಿಮ ಉದ್ದೇಶದೊಂದಿಗೆ ವಿಶ್ವದೆಲ್ಲೆಡೆಯ ಹಲವಾರು ಪ್ರಸಿದ್ಧ ಕಂಪನಿಗಳು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವ ಪರಿಪಾಠಕ್ಕೆ ಮುಂದಾಗಿವೆ; ಇದು ಮಾನವ ಕಾರ್ಯಪಡೆಯನ್ನು ಸ್ಥಾನಪಲ್ಲಟಗೊಳಿಸುವ ನಡೆಯೂ ಆಗಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಪ್ರಸಕ್ತ ವರ್ಷದ ಫೆಬ್ರವರಿ 1ರಂದು ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿ, ಸರ್ಕಾರಿ ‘ಚಿಂತಕ-ಚಾವಡಿ’ ಎನಿಸಿರುವ ನೀತಿ ಆಯೋಗವು ಕೃತಕ ಬುದ್ಧಿಮತ್ತೆ ಕುರಿತಾದ ರಾಷ್ಟ್ರೀಯ ಕಾರ್ಯಕ್ರಮದ ನೇತೃತ್ವ ವಹಿಸಲಿದೆ ಎಂದು ಹೇಳಿದರು. ಈ ಉದ್ದೇಶದ ಮುಂದುವರಿಕೆಯೋ ಎಂಬಂತೆ, ಕೃತಕ ಬುದ್ಧಿಮತ್ತೆ ತರಬೇತಿ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಸಂಬಂಧಿಸಿದ ಸ್ಟಾರ್ಟಪ್ ಕಂಪನಿಗಳು ಹಾಗೂ ವಿಶಿಷ್ಟ ಕೇಂದ್ರಗಳಿಗೆ ಒತ್ತಾಸೆಯಾಗಿ ನಿಲ್ಲಲು ಸರ್ಕಾರ ಸನ್ನದ್ಧವಾಗಿದೆ. ಆದ್ದರಿಂದ, ಕೃತಕ ಬುದ್ಧಿಮತ್ತೆಯ ಪರಿಕಲ್ಪನೆ ಮತ್ತು ಅನ್ವಯಿಕೆಗಳು ಸುದೀರ್ಘ ಕಾಲದವರೆಗೆ ನಮ್ಮಲ್ಲಿ ನೆಲೆಯೂರಲಿವೆ ಎಂದು ಧೈರ್ಯವಾಗಿ ಹೇಳಬಹುದು; ಅದು ವಾಕ್ಯ ರಚನೆ ಮತ್ತು ಭಾವನೆಗಳನ್ನು ಸಂಸ್ಕರಿಸುವ “Natural Language Processing (NLP)’ “Alexaದಂಥ ಸ್ಮಾರ್ಟ್ ಸಹಾಯಕರ ರೂಪದಲ್ಲಿರಬಹುದು ಅಥವಾ ಯಂತ್ರಭಾಷಾ ಕಲಿಕೆಯ ವೇದಿಕೆಗಳ ರೂಪದಲ್ಲಿರಬಹುದು, ಮುಂದೆ ನಾವು ಕಾಣಲಿರುವುದು ಕೃತಕ ಬುದ್ಧಿಮತ್ತೆಯ ಜಮಾನವನ್ನೇ!

ಇಷ್ಟೆಲ್ಲ ನಡೆಯುತ್ತಿರುವಾಗ ಇದಕ್ಕೆ ಪ್ರತಿಯಾಗಿ ಮತ್ತೊಂದು ಕಳವಳವೂ ಬೆಳೆಯುತ್ತಿದೆ- ಅದು ನಿರ್ದಿಷ್ಟ ರಾಜ್ಯ/ದೇಶಕ್ಕೆ ಸಂಬಂಧಿಸಿದ ಮತ್ತು ಅಂತಾರಾಷ್ಟ್ರೀಯ ಕಾನೂನಿನ ವ್ಯಾಪ್ತಿಯೊಳಗೆ ಈ ತಂತ್ರಜ್ಞಾನದ ಆಮದು/ಅಳವಡಿಕೆಯಾಗುವುದನ್ನು ನಿಯಂತ್ರಿಸಬೇಕಿರುವುದರ ಅಗತ್ಯಕ್ಕೆ ಸಂಬಂಧಿಸಿದ್ದು. ದತ್ತಾಂಶದ ಸಂರಕ್ಷಣೆಯು ಈ ಕಳವಳಗಳಲ್ಲಿ ಪ್ರಮುಖವಾದುದು. ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಂಡಿರುವ ಪ್ರತಿಯೊಂದು ‘ಇಂಟರ್​ಫೇಸ್’ ವ್ಯವಸ್ಥೆಯೂ, ಆ ವ್ಯವಸ್ಥೆಯೊಳಗೆ ಪೂರಣವಾಗುತ್ತಿರುವ ದತ್ತಾಂಶವನ್ನು ಅವಲಂಬಿಸಿರುತ್ತದೆ. ಮಿಕ್ಕ ತಂತ್ರಾಂಶಗಳಲ್ಲಾದರೆ ಅದನ್ನು ಬಳಸುತ್ತಿರುವ ಮನುಷ್ಯದ ಆದೇಶಗಳು ಅಪೇಕ್ಷಿತ ಫಲಿತಾಂಶಕ್ಕೆ ಕಾರಣವಾಗುತ್ತವೆ; ಆದರೆ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಂಡಿರುವ ಯಂತ್ರವ್ಯವಸ್ಥೆಗಳು, ಕಾಲಾನುಕಾಲಕ್ಕೆ ಬಳಕೆಯಾಗುವ ದತ್ತಾಂಶದ ಗಣಿತಾತ್ಮಕ ಅಥವಾ ಯಥಾರ್ಥ ವಿಶ್ಲೇಷಣೆಯನ್ನು ಆಧರಿಸಿ ನಿರ್ಣಾಯಕ ಫಲಿತಾಂಶವನ್ನು ಅಭಿವೃದ್ಧಿಪಡಿಸಿ ನೀಡುತ್ತವೆ. ಪ್ರಸ್ತುತ ‘ಮಾಹಿತಿ ತಂತ್ರಜ್ಞಾನ ಕಾಯ್ದೆ, 2000’ ಹಾಗೂ ಸಂಬಂಧಿತ ನೀತಿ-ನಿಯಮಗಳು ಮಾತ್ರವೇ ಭಾರತದಲ್ಲಿ ದತ್ತಾಂಶ ಸಂರಕ್ಷಣೆಯ ಹೊಣೆಹೊತ್ತಿವೆ.

ಇಲ್ಲೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳೋಣ. ಚಾಟ್-ಆಧಾರಿತ ಇಂಟರ್​ಫೇಸ್ ವ್ಯವಸ್ಥೆಗಳೆನಿಸಿರುವ ‘ಚಾಟ್​ಬಾಟ್’ (ಜಾಲತಾಣವೊಂದರಲ್ಲಿರುವಾಗ ಪರದೆಯ ಮೇಲ್ಭಾಗದಲ್ಲಿ ಪಾಪ್-ಅಪ್ ಆಗುವ ಮತ್ತು ಬಳಕೆದಾರರೊಂದಿಗಿನ ಪಾರಸ್ಪರಿಕ ಸಂವಹನೆಗೆ ಅನುವುಮಾಡಿಕೊಡುವ ವೈಶಿಷ್ಟ್ಯಗಳೇ ‘ಚಾಟ್​ಬಾಟ್’ಗಳು) ಒಂದರ ಜತೆಯಲ್ಲಿ ಸಂವಹನ ಪ್ರಕ್ರಿಯೆಯಲ್ಲಿ ತೊಡಗಿರುವಾಗ, ವ್ಯಕ್ತಿಯೊಬ್ಬನು ತೀರಾ ಸೂಕ್ಷ್ಮ ಎನಿಸಿದ ವೈಯಕ್ತಿಕ ಮಾಹಿತಿಯನ್ನು ತಿಳಿಸಬೇಕಾಗಿ ಬಂದಾಗ, ಡಿಜಿಟಲ್ ಮಾಧ್ಯಮದಲ್ಲಿ ಇಂಥ ವೈಯಕ್ತಿಕ ದತ್ತಾಂಶದ ಹೊರಗೆಡಹುವಿಕೆಯ ಹೊಣೆ ಹೊರುವವರಾರು? ಪ್ರಾಯಶಃ ಇದಕ್ಕಿರುವ ನಿಸ್ಸಂದಿಗ್ಧ ಉತ್ತರ- ಸದರಿ ವ್ಯವಹಾರ ಘಟಕ ಅಥವಾ ಕಂಪನಿಯೇ ಆಗಿರುತ್ತದೆ; ಏಕೆಂದರೆ ‘ಮಾಹಿತಿ ತಂತ್ರಜ್ಞಾನ (ಸಮಂಜಸ ಭದ್ರತಾ ಪರಿಪಾಠಗಳು ಮತ್ತು ಕಾರ್ಯವಿಧಾನಗಳು ಹಾಗೂ ಸೂಕ್ಷ್ಮ ವೈಯಕ್ತಿಕ ದತ್ತಾಂಶ ಅಥವಾ ಮಾಹಿತಿ) ನಿಯಮಗಳು, 2011’ ವ್ಯಾಖ್ಯಾನಿಸುವಂತೆ, ಸಾಂಸ್ಥಿಕ ಘಟಕ ಅಥವಾ ಸಾಂಸ್ಥಿಕ ಘಟಕವೊಂದರ ಪರವಾಗಿ ಮಾಹಿತಿ ಸಂಗ್ರಹಿಸುವ ಯಾವುದೇ ವ್ಯಕ್ತಿಯು, ಇಂಥ ಹೊರಗೆಡಹುವಿಕೆಗೆ ಹೊಣೆಗಾರನಾಗಿರುತ್ತಾನೆ. ಆದರೆ, ‘ಯಂತ್ರಭಾಷಾ ಕಲಿಕೆಯ ವಿಷಯದಲ್ಲಿ ತನ್ನ ಕೃತಕ ಬುದ್ಧಿಮತ್ತೆಗಿರುವ ಸಾಮರ್ಥ್ಯದಿಂದಾಗಿ ಚಾಟ್​ಬಾಟ್ ಇಂಥ ತೀರಾ ಸೂಕ್ಷ್ಮ ಹಾಗೂ ವೈಯಕ್ತಿಕವೆನಿಸಿದ ಮಾಹಿತಿಯನ್ನು ಸಂಗ್ರಹಿಸಿಬಿಟ್ಟಿದೆ’ ಎಂದು ನೆಪಹೇಳಿ ಸಮರ್ಥಿಸಿಕೊಳ್ಳುವ ಮೂಲಕ ಇಂಥ ಸಾಂಸ್ಥಿಕ ಘಟಕವು ತನ್ನ ಹೊಣೆಗಾರಿಕೆ ಅಥವಾ ಬಾಧ್ಯತೆಯನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆಯೇ? ಎಂಬುದಿಲ್ಲಿ ಪ್ರಶ್ನೆ.

ಹಸ್ತಪ್ರತಿ ಆಧರಿಸಿ ಕಾರ್ಯನಿರ್ವಹಿಸದ ಆಧುನಿಕ ಚಾಟ್​ಬಾಟ್​ಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ನಮ್ಮಲ್ಲಿ ಯಾವುದೇ ಸ್ಪಷ್ಟ ಕಾನೂನು ಉಪಬಂಧಗಳು ಇಲ್ಲ. ಇದರಿಂದಾಗಿ, ‘ಉತ್ತರದಾಯಿತ್ವ’ದ ಕಳವಳ ಉಂಟಾಗಿದೆ. ಕೃತಕ ಬುದ್ಧಿಮತ್ತೆಯ ಅಳವಡಿಕೆಯಾಗಿರುವ ವ್ಯವಸ್ಥೆ ಅಥವಾ ಸಾಧನವೊಂದು ಕೈಗೊಳ್ಳುವ ಯಾವುದೇ ಕ್ರಿಯೆಯ ಹಿಂದೆ ‘ಮನುಷ್ಯ ಮನಸ್ಸಿನ’ ನೇರ ಅನ್ವಯ ಇಲ್ಲವಾಗಿರುವುದರಿಂದ, ಬಳಕೆದಾರರಿಗೆ ಆಗುವ ನಷ್ಟಕ್ಕೆ ಬಾಧ್ಯಸ್ಥರಾರು ಎಂಬ ಪ್ರಶ್ನೆಗೆ ಈಗ ಉತ್ತರ ದೊರಕಬೇಕಿದೆ. ಆದ್ದರಿಂದ, ಕೃತಕ ಬುದ್ಧಿಮತ್ತೆಯ ವಲಯದಲ್ಲಿ ಪ್ರಸ್ತುತ ಕಾಣಬರುತ್ತಿರುವ ಅಂತರ ಅಥವಾ ಲುಪ್ತಭಾಗವನ್ನು ಭರ್ತಿಮಾಡಲೆಂದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ಹಾಗೂ ಕಾರ್ಯವಿಧಾನಗಳಿಗೆ ಸಂಬಂಧಿಸಿದಂತಿರುವ ಕಾನೂನುಗಳನ್ನು ತಿದ್ದುಪಡಿ ಮಾಡುವ ಅಥವಾ ಹೊಸ ಕಾನೂನುಗಳನ್ನೇ ರೂಪಿಸುವ ತುರ್ತು ಅಗತ್ಯವೀಗ ಎದುರಾಗಿದೆ ಎಂಬುದಂತೂ ಸ್ಪಷ್ಟ.

ಭಾರತದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಯಾವ ಕಾನೂನೂ, ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಂಡಿರುವ ಸಂಸ್ಥೆಗಳನ್ನು ಕಾನೂನುಬದ್ಧ ಘಟಕಗಳಾಗಿ ಗುರುತಿಸುವುದಿಲ್ಲ ಅಥವಾ ಮಾನ್ಯಮಾಡುವುದಿಲ್ಲ. ಹೀಗಾಗಿ, ಇಂಥದೊಂದು ಮಾನ್ಯತೆಯ ಅಗತ್ಯವಿದೆಯೇ ಎಂಬ ಪ್ರಶ್ನೆಯೀಗ ಮುನ್ನೆಲೆಗೆ ಬರುವಂತಾಗಿದೆ. ಮನುಷ್ಯರು ತಮ್ಮ ಕಾರ್ಯವ್ಯಾಪ್ತಿಯಲ್ಲಿ, ವಾಡಿಕೆಯ ಚಟುವಟಿಕೆಗಳಲ್ಲಿ ನಿರ್ವಹಿಸುವಂಥ, ವ್ಯಕ್ತಪಡಿಸುವಂಥ ವಿವೇಚನಾಯುಕ್ತ ಕರೆಗಳು ಅಥವಾ ಅಭಿಪ್ರಾಯಗಳನ್ನು ಕೃತಕ ಬುದ್ಧಿಮತ್ತೆಯ ವ್ಯವಸ್ಥೆಯೂ ನಿರ್ವಹಿಸುತ್ತದೆ ಎಂಬ ವಿಶ್ವಾಸವಿರಿಸಲಾಗದು ಎಂಬುದು, ಇಂಥ ಘಟಕಗಳಿಗೆ ಕಾನೂನಾತ್ಮಕ ಮಾನ್ಯತೆ ನೀಡುವುದಕ್ಕೆ ವಿರುದ್ಧವಾಗಿರುವ ಆಕ್ಷೇಪಗಳಲ್ಲಿ ಒಂದಾಗಿದೆ. ಸ್ವಭಾವದಲ್ಲಿ ನೈತಿಕವಾಗಿಯೂ ವ್ಯಕ್ತಿನಿಷ್ಠವೂ ಆಗಿರುವಂಥ ನಿರ್ಣಯಗಳನ್ನು ತಳೆಯುವಂತಾಗುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯ ವ್ಯವಸ್ಥೆ ಅಥವಾ ಘಟಕವನ್ನು ಸಬಲೀಕರಣಗೊಳಿಸುವುದರ ಹಿಂದಿರುವ ನೈತಿಕ ದ್ವಂದ್ವವೇ ಈ ವಾದಕ್ಕೆ ಮೂಲವಾಗಿದೆ ಎನ್ನಬೇಕು.

ಇಲ್ಲಿ ಮತ್ತೊಂದು ಅಂಶವನ್ನೂ ಗಮನಿಸಬೇಕು; ಕಾನೂನಾತ್ಮಕ ಅಸ್ಮಿತೆ/ಅಸ್ತಿತ್ವ ಕುರಿತಾದ ನಮ್ಮ ಪರಿಕಲ್ಪನೆ ಮತ್ತು ಮಾನವೀಯತೆ/ಮನುಷ್ಯ ಸ್ವಭಾವದ ಕುರಿತಾದ ನಮ್ಮ ಪರಿಕಲ್ಪನೆಗಳ ನಡುವಿನ ಬಾಂಧವ್ಯಕ್ಕೆ ಸಂಬಂಧಿಸಿರುವ ಮುಜುಗರವೇ ಕಾನೂನಾತ್ಮಕ ಅಸ್ತಿತ್ವವನ್ನು ವಿಸ್ತರಿಸುವ ಆಶಯಕ್ಕೆ ಪ್ರಾಯಶಃ ಒದಗಿರುವ ಮತ್ತೊಂದು ಅಡಚಣೆಯಾಗಿರಬಹುದು. ಇಂಥ ಪ್ರಶ್ನೆಗಳು ಸುಲಭವೂ ಅಲ್ಲ, ಉಪಯೋಗಾರ್ಹವೂ ಅಲ್ಲ; ಆದರೆ ಸಂವೇದನಾಶಕ್ತಿಯುಳ್ಳ ರೋಬಾಟ್ ಅಥವಾ ಬುದ್ಧಿಪೂರ್ವಕ ಯಂತ್ರವನ್ನು ಅನ್ವೇಷಿಸುವ ತಾಂತ್ರಿಕ ಬೆಳವಣಿಗೆಯು ಕಡುಕಷ್ಟವಾದ ಪ್ರಶ್ನೆಗಳಿಗೂ ಉತ್ತರಗಳ ಭರವಸೆ ನೀಡಲಿದೆ ಎನ್ನಬಹುದು.

ವಿಶ್ವಾದ್ಯಂತದ ವಿವಿಧ ದೇಶಗಳಲ್ಲಿ ಸ್ವಯಂಚಾಲಿತ ಕಾರುಗಳು, ರೋಬಾಟ್​ಗಳು ಮತ್ತು ಸಂಪೂರ್ಣ ಸ್ವಯಂಚಾಲಿತ ಯಂತ್ರಗಳ ಬಳಕೆ ಕಾಲ ಸರಿದಂತೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಂತೂ ಇದ್ದೇ ಇದೆ. ಇದರ ಪರಿಣಾಮವಾಗಿ, ಕೃತಕ ಬುದ್ಧಿಮತ್ತೆಯ ವ್ಯವಸ್ಥೆಗಳ ಮೇಲೆ ವ್ಯಕ್ತಿಗಳು ಮತ್ತು ಸಂಸ್ಥೆಗಳ ಅವಲಂಬನೆಯೂ ಅದಕ್ಕನುಸಾರವಾಗಿಯೇ ಹೆಚ್ಚುವ ನಿರೀಕ್ಷೆಯಿದೆ. ಆದರೆ ಈ ವಿಷಯದ ಕುರಿತಾಗಿ ಕಾನೂನು ವ್ಯಾಪ್ತಿಯ ಕೊರತೆಯಿರುವುದರಿಂದ, ಸದ್ಯೋಭವಿಷ್ಯದಲ್ಲಿ ಕಾನೂನು ನೀತಿಸೂತ್ರಗಳು ರೂಪುಗೊಳ್ಳುತ್ತವೆ ಮತ್ತು ಇಂಥ ಕಾನೂನುಗಳು ಕೃತಕ ಬುದ್ಧಿಮತ್ತೆಯ ಬೆಳವಣಿಗೆಯನ್ನು ಉತ್ತೇಜಿಸುವುದಷ್ಟೇ ಅಲ್ಲದೆ, ಅಗತ್ಯ ರಕ್ಷಣೋಪಾಯಗಳನ್ನೂ ಖಾತ್ರಿಪಡಿಸುತ್ತವೆ ಎಂದು ಆಶಿಸಬಹುದು.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)