ಮೀ ಟೂ ಅಭಿಯಾನದ ಸಾಧಕ-ಬಾಧಕ ಸುತ್ತ…

ಗ ಎಲ್ಲಿ ನೋಡಿದರೂ ‘ಮೀ ಟೂ’ ಪದ ಹೆಚ್ಚಾಗಿ ಕೇಳಿಬರುತ್ತಿದೆ. ಪ್ರಸ್ತುತ ಬಿರುಸು ಪಡೆದುಕೊಂಡಿರುವ ‘ಮೀ ಟೂ’ ಆಂದೋಲನ ರಾಷ್ಟ್ರವ್ಯಾಪಿ ಚರ್ಚೆಯೊಂದಕ್ಕೆ ಚಾಲನೆ ನೀಡಿದೆ. ಈ ಆಂದೋಲನ ಶುರುವಾಗುವುದರೊಂದಿಗೆ, ಲೈಂಗಿಕ ಕಿರುಕುಳದ ವಿರುದ್ಧವಾಗಿ ಪ್ರತಿಭಟಿಸುವಂಥ ಒಂದು ಅಸಾಧಾರಣವಾದ ಸಾಂಸ್ಕೃತಿಕ ವಿದ್ಯಮಾನಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ ಮತ್ತು ಇದು ನಿಜಾರ್ಥದಲ್ಲಿ ಬದಲಾವಣೆಗೆ ಪ್ರಚೋದಕ ಶಕ್ತಿಯಾಗಬಹುದು ಎನ್ನಲಡ್ಡಿಯಿಲ್ಲ. ಈಗ ಕೇಳಿಬರುತ್ತಿರುವ ಬಹುತೇಕ ದೂರುಗಳು ಕಾರ್ಯಸ್ಥಳ ಅಥವಾ ವೃತ್ತಿಜೀವನ-ಸಂಬಂಧಿತ ಕಿರುಕುಳದ ಕುರಿತೇ ಆಗಿದೆ. ಮಹಿಳೆಯರು ಕೆಲಸದಲ್ಲಿ ಹಾಗೂ ಕಾರ್ಯಸ್ಥಳದಲ್ಲಿ ಅಸಮಾನತೆಯನ್ನು ಎದುರಿಸುತ್ತಲೇ ಬಂದಿರುವ ಹಿನ್ನೆಲೆಯಲ್ಲಿ ಇದರಲ್ಲೇನೂ ಅಚ್ಚರಿಯಿಲ್ಲ.

‘ವಿಶಾಖಾ ಪ್ರಕರಣ’ಕ್ಕೆ ಸಂಬಂಧಿಸಿ (1997) ನೀಡಿದ ತೀರ್ಪಿನಲ್ಲಿ ಸವೋಚ್ಚ ನ್ಯಾಯಾಲಯವು, ಕಾರ್ಯಕ್ಷೇತ್ರದಲ್ಲಿನ ಲೈಂಗಿಕ ಕಿರುಕುಳದ ವ್ಯಾಪ್ತಿಯನ್ನು ಗುರುತಿಸಿ, ಇಂಥ ಬೇಗುದಿಗಳನ್ನು ನಿವಾರಿಸುವಂಥ ಕಾರ್ಯವಿಧಾನವೊಂದನ್ನು ಪ್ರತಿಯೊಬ್ಬ ಉದ್ಯೋಗದಾತರೂ ಒದಗಿಸುವುದನ್ನು ಕಡ್ಡಾಯವಾಗಿಸುವಂಥ ಕೆಲವೊಂದು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿತು ಹಾಗೂ ಸೂಕ್ತ ಕಾನೂನು ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಕೇಂದ್ರ ಸರ್ಕಾರ ‘ಕಾರ್ಯಸ್ಥಳದಲ್ಲಿನ ಮಹಿಳಾ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ನಿವಾರಣೆ) ಕಾಯ್ದೆ, 2013’ (“POSH ಕಾಯ್ದೆ’) ಹಾಗೂ ಇದಕ್ಕೆ ಅನುಗುಣವಾದ ‘ಕಾರ್ಯಸ್ಥಳದಲ್ಲಿನ ಮಹಿಳಾ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ನಿವಾರಣೆ) ನಿಯಮಗಳು, 2013’ (“POSH ನಿಯಮಗಳು’) ಅನ್ನು ಜಾರಿಮಾಡಿತು. ಈ ಉಪಕ್ರಮಕ್ಕೆ ಚಾಲನೆ ಸಿಕ್ಕಿದ್ದು ‘ವಿಶಾಖಾ ಪ್ರಕರಣ’ ಸಂಬಂಧಿತ ತೀರ್ಪು ಹೊರಬಿದ್ದ 16 ವರ್ಷಗಳ ನಂತರ!

ಸದರಿ ಕಾನೂನು 2013ರಿಂದಲೂ ಜಾರಿಯಲ್ಲಿದೆ. ಆದರೆ ಇಂಥ ಕಿರುಕುಳ ಅನುಭವಿಸಿದವರು ಸಾಮಾಜಿಕ ಮಾಧ್ಯಮಗಳಲ್ಲಿ ನೀಡಿದ ವಿವರಣೆಗಳ ಅಗಾಧತೆ ಗಮನಿಸಿದರೆ, ಪರಿಣಾಮಕಾರಿ ಪರಿಹಾರೋಪಾಯ ಒದಗಿಸಲು ನಮ್ಮ ಕಾನೂನು ಅದೆಷ್ಟು ಅಸಮರ್ಥವಾಗಿದೆ ಎಂಬುದು ಅರಿವಾಗುತ್ತದೆ.

‘ಲೈಂಗಿಕ ಕಿರುಕುಳ’ವನ್ನು POSH ಕಾಯ್ದೆಯಡಿ ಹೇಗೆ ವ್ಯಾಖ್ಯಾನಿಸಲಾಗಿದೆ ಎಂಬುದನ್ನು ಗಮನಿಸಬೇಕಾದ್ದು ಸೂಕ್ತ. ಲೈಂಗಿಕತೆಗೆ ಸಂಬಂಧಿಸಿದಂತಿರುವ ನೇರವಾದ ಅಥವಾ ಸೂಚ್ಯವಾದ ವರ್ತನೆಗಳೆರಡನ್ನೂ ಅಂದರೆ, ಆಂಗಿಕ, ಮೌಖಿಕ ಅಥವಾ ಲಿಖಿತ ರೂಪದಲ್ಲಿರುವ ವರ್ತನೆಗಳನ್ನೂ ಈ ವ್ಯಾಖ್ಯೆ ಒಳಗೊಂಡಿದೆ; ಅಷ್ಟೇ ಅಲ್ಲ, ನೇರವಾಗಿಯೋ ಅಥವಾ ಸೂಚ್ಯವಾಗಿಯೋ ಇರಬಹುದಾದಂಥ, ಲೈಂಗಿಕತೆಯ ಛಾಯೆಯಿರುವಂಥ ವರ್ತನೆಗಳು ಕೂಡ ಈ ವ್ಯಾಖ್ಯೆಯ ವ್ಯಾಪ್ತಿಯಲ್ಲಿ ಬರುತ್ತವೆ. ಇದನ್ನು ಕೊಂಚ ವಿವರಿಸಿ ಹೇಳುವುದಾದರೆ- 1) ಆಂಗಿಕ ಸಂಪರ್ಕ ಮತ್ತು ಪ್ರಣಯಸಂಧಾನಗಳು, 2) ಲೈಂಗಿಕ ಪ್ರಯೋಜನಗಳನ್ನು ಒದಗಿಸುವಂತೆ ಕೋರುವಿಕೆ ಅಥವಾ ಒತ್ತಾಯಿಸುವಿಕೆ, 3) ಲೈಂಗಿಕತೆಯ ಛಾಯೆಯುಳ್ಳ ಮಾತುಗಳ ಅಭಿವ್ಯಕ್ತಿ, 4) ಅಶ್ಲೀಲ ಸಾಹಿತ್ಯ/ದೃಶ್ಯಾವಳಿ ತೋರಿಸುವಿಕೆ, ಅಥವಾ 5) ಲೈಂಗಿಕತೆಯ ಲಕ್ಷಣವಿರುವ ಬೇರಾವುದೇ ಅಹಿತಕರ ಆಂಗಿಕ, ಮೌಖಿಕ ಅಥವಾ ಮೌಖಿಕವಲ್ಲದ ವರ್ತನೆ ಇವೆಲ್ಲವೂ ಲೈಂಗಿಕ ಕಿರುಕುಳದ ವ್ಯಾಪ್ತಿಯಲ್ಲಿ ಬರುತ್ತವೆ. ಇಂಥ ಸಂತ್ರಸ್ತರಿಗೆ ಪರಿಹಾರೋಪಾಯದ ವೇದಿಕೆ ಸ್ಥಾಪಿಸುವುದಕ್ಕೂ ಸದರಿ ಕಾಯ್ದೆ ಒತ್ತುನೀಡಿದೆ. ಮಿಕ್ಕಂತೆ, ಈ ಕಾಯ್ದೆಯ ನಿರ್ದೇಶನಗಳು ಇಂತಿವೆ- ಹತ್ತು ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯ ಉದ್ಯೋಗಿಗಳಿರುವ ಸಂಸ್ಥೆಯೊಂದರ ಪ್ರತಿ ಕಚೇರಿ ಅಥವಾ ಶಾಖೆಯಲ್ಲಿ ‘ಆಂತರಿಕ ದೂರುಗಳ ಸಮಿತಿ’ (Internal Complaints Committee- ICC)ಯನ್ನು ಉದ್ಯೋಗದಾತರು ಕಡ್ಡಾಯವಾಗಿ ರಚಿಸಬೇಕು ಹಾಗೂ ಲೈಂಗಿಕ ಕಿರುಕುಳ ದೂರುಗಳನ್ನು ಈ ಸಮಿತಿ ಆಲಿಸಿ ಪರಿಹಾರ ಒದಗಿಸಬೇಕು. ಜಿಲ್ಲಾ ಮಟ್ಟದಲ್ಲಾದರೆ, ಅಸಂಘಟಿತ ವಲಯದಿಂದ ಅಥವಾ ಹತ್ತಕ್ಕಿಂತಲೂ ಕಡಿಮೆ ಸಂಖ್ಯೆಯ ಉದ್ಯೋಗಿಗಳಿರುವ ಕಾರಣದಿಂದಾಗಿ ICCಯನ್ನು ರೂಪಿಸದಿರುವಂಥ ಸಂಸ್ಥೆಗಳ ನೌಕರರಿಂದ ಬರುವ ದೂರುಗಳನ್ನು ಆಲಿಸಿ, ತನಿಖೆ ನಡೆಸಿ, ಪರಿಹಾರ ಒದಗಿಸಲು ಅಥವಾ ಒಂದು ವೇಳೆ ಉದ್ಯೋಗದಾತರ ವಿರುದ್ಧವೇ ಇಂಥ ದೂರು ಬಂದಿದ್ದಲ್ಲಿ ವಿಚಾರಣೆ ನಡೆಸಲು ‘ಸ್ಥಳೀಯ ದೂರುಗಳ ಸಮಿತಿ’ (Local Complaints Committee- LCC)ಯನ್ನು ಸರ್ಕಾರ ರೂಪಿಸಬೇಕಿರುತ್ತದೆ. ಲೈಂಗಿಕ ಕಿರುಕುಳ ಕುರಿತಾದ ದೂರು ದಾಖಲಿಸುವುದಕ್ಕೆ, ಸದರಿ ಘಟನೆ ಸಂಭವಿಸಿದ ದಿನಾಂಕದಿಂದ ಮೂರು ತಿಂಗಳ ಕಾಲಮಿತಿಯನ್ನು ಕಾಯ್ದೆಯು ಶಿಫಾರಸು ಮಾಡಿದ್ದು, ಈ ಕಾಲಾವಧಿಯನ್ನು ಮತ್ತೆ ಮೂರು ತಿಂಗಳವರೆಗೆ ವಿಸ್ತರಿಸಬಹುದಾಗಿರುತ್ತದೆ.

ಇಂಥ ಕಾನೂನುಗಳಿರುವುದರ ಹೊರತಾಗಿಯೂ, ಕಾರ್ಯಸ್ಥಳದಲ್ಲಿನ ಲೈಂಗಿಕ ಕಿರುಕುಳದ ಘಟನೆಗಳು ವರದಿಯಾಗುವ ಪ್ರಮಾಣ ತೀರಾ ಕಡಿಮೆಯೆನ್ನಬೇಕು. ತಮ್ಮದೇ ಕಾರ್ಯಸ್ಥಳದಲ್ಲಿನ ಆಂತರಿಕ ದೂರು ಸಮಿತಿಯ ಮೊರೆಹೋಗುವುದು ಸುರಕ್ಷಿತವಲ್ಲ ಎಂದು ಮಹಿಳೆಯರು ಭಾವಿಸಿರುವುದನ್ನು ಇದು ಸೂಚಿಸುತ್ತದೆ. ಅಷ್ಟೇ ಅಲ್ಲ, ಒಂದಿಡೀ ವ್ಯವಸ್ಥೆಯಲ್ಲಿ ವ್ಯಾಪಕವಾಗಿರುವ ಸಮಸ್ಯೆಗೂ ಇದು ದ್ಯೋತಕವಾಗಿದೆ; ಇಂಥ ಪರಿಸರದಲ್ಲಿ ‘ಮೌನಸಂಸ್ಕೃತಿ’ ಬೀಡುಬಿಟ್ಟಿದ್ದು, ಮಹಿಳೆಯ ದನಿಗಳನ್ನು ಕೇಳಿಸಿಕೊಳ್ಳುವವರೇ ಇಲ್ಲದಂಥ ಪರಿಸ್ಥಿತಿಯಿರುತ್ತದೆ ಹಾಗೂ ದೂರುಗಳಿಗೆ ಸುರಕ್ಷಿತ ಮತ್ತು ಕ್ಷಿಪ್ರ ಪರಿಹಾರ ದೊರಕಿಸುವುದಕ್ಕಿಂತ, ಪುರುಷ-ಪ್ರತಿಷ್ಠೆ ಹಾಗೂ ಸಾಂಸ್ಥಿಕ ಲಾಭಗಳಿಕೆಗೇ ಹೆಚ್ಚಿನ ಒತ್ತುನೀಡಲಾಗುತ್ತದೆ. ಕಾರ್ಯಸ್ಥಳದಲ್ಲಿ ಮಹಿಳೆಯರು ಎದುರಿಸಬೇಕಾಗಿ ಬರುವಂಥ ಪ್ರತಿಕೂಲ ಪರಿಸ್ಥಿತಿಗಳನ್ನು, ಹಾಗೂ ದಂಡನೆ/ಶಿಕ್ಷೆಯಿಂದ ವಿನಾಯಿತಿ ಪಡೆಯುವ ನಿಟ್ಟಿನಲ್ಲಿ ಪುರುಷರು ಚಲಾಯಿಸುವ ಅಧಿಕಾರ ಮತ್ತು ವಿಶೇಷ ಸವಲತ್ತುಗಳನ್ನು ಪರಿಶೀಲಿಸುವಂಥ ಅವಕಾಶವೇ ಕಣಖಏ ಕಾಯ್ದೆಯ ಕೈತಪ್ಪಿದೆ ಎಂಬುದೊಂದು ವಾದವಿದೆ. ಲೈಂಗಿಕ ಕಿರುಕುಳವನ್ನು ಒಂದು ‘ಪ್ರತ್ಯೇಕಿತ ಘಟನೆಯಾಗಿ’ ಮತ್ತು ಕಾರ್ಯಸ್ಥಳದಲ್ಲೇ ಹಾಗೂ ಅದಕ್ಕೆ ಸಂಬಂಧಿಸಿದವರಿಂದಲೇ ‘ಪರಿಹರಿಸಲ್ಪಡಬೇಕಾದ’ ವಿದ್ಯಮಾನವಾಗಿ ಈ ಕಾಯ್ದೆಯು ಪರಿಗಣಿಸಿದೆ, ತನ್ಮೂಲಕ ಸಂತ್ರಸ್ತರ ಬಾಯಿಮುಚ್ಚಿಸಿದೆ. ಅಶ್ಲೀಲ ಜೋಕುಗಳು, ಅನುಚಿತ ಮಾತುಗಳನ್ನು ‘ಇವೆಲ್ಲ ಮಾಮೂಲು’ ಎನ್ನುವಂತೆ ತಳ್ಳಿಹಾಕಲಾಗುವುದರಿಂದ, ಇಂಥ ವರ್ತನೆಗಳ ಕುರಿತು ಹೇಳಿಕೊಂಡರೂ ನಂಬದಿರಬಹುದು ಅಥವಾ ತಮ್ಮನ್ನೇ ಗೇಲಿಮಾಡಬಹುದು ಎಂಬ ಅಳುಕಿನಿಂದಾಗಿ ಮಹಿಳೆಯರು ದೂರು ನೀಡಲು ಹಿಂಜರಿಯುತ್ತಾರೆ; ಆದ್ದರಿಂದ, ಲೈಂಗಿಕ ಕಿರುಕುಳ ಸಂಬಂಧವಾಗಿ ಅರಿವು ಮೂಡಿಸುವ ಮತ್ತು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಮಾಡುವ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ.

‘ಮೀ ಟೂ’ ಆಂದೋಲನದ ಕುರಿತಾಗಿ ಆಕ್ಷೇಪಗಳೂ ವ್ಯಕ್ತವಾಗಿವೆ. ಈ ಆಂದೋಲನಕ್ಕೆ ಚಿತಾವಣೆ ನೀಡುತ್ತಿರುವುದು ಸಕಲ ವಿಶೇಷ ಸವಲತ್ತುಗಳುಳ್ಳ ನಗರಕೇಂದ್ರಿತ ಮಹಿಳೆಯರು ಎಂಬುದು, ಹಾಗೂ ಅನೇಕ ಪ್ರಕರಣಗಳು ತೀರಾ ಹಿಂದೆ ನಡೆದಿರುವಂಥವು ಎಂಬುದು ಇಂಥ ವಾದಗಳಲ್ಲಿ ಸೇರಿವೆ. ಹೀಗೆ ವಾದಿಸುವವರಿಗೆ ವಾಸ್ತವದ ಅರಿವಿಲ್ಲ ಮತ್ತು ಇತಿಹಾಸಪ್ರಜ್ಞೆಯ ಕೊರತೆಯಿದೆ. ಉದ್ಯೋಗಸ್ಥ ಮಹಿಳೆಯರಲ್ಲಿ ಬಹುತೇಕರಿಗಿರುವುದು ಸಾಧಾರಣ ಮಧ್ಯಮವರ್ಗೀಯ ಹಿನ್ನೆಲೆ, ಸದೃಢವಾದ ಒತ್ತಾಸೆಯೂ ಅವರಿಗಿಲ್ಲ ಎಂಬುದನ್ನು ಅಂಕಿ-ಅಂಶಗಳೇ ಹೇಳುತ್ತವೆ. ಅಷ್ಟೇ ಅಲ್ಲ, ಲೈಂಗಿಕ ಕಿರುಕುಳ ಘಟಿಸಿದ ಅದೇ ಕ್ಷಣ, ಅದೇ ದಿನ ಪ್ರತಿರೋಧಿಸಲು, ಹೋರಾಟ ನಡೆಸಲು ಆಗದಿರುವುದಕ್ಕೆ ಹಲವು ಕಾರಣಗಳಿರಬಹುದು; ಅಂದರೆ, ಕಾರ್ಯಸ್ಥಳದಲ್ಲಿ ದಟ್ಟವಾಗಿರುವ ಲಿಂಗ ಅಸಮಾನತೆಯ ಛಾಯೆ, ‘ಏನೂ ಆಗಿಲ್ಲ, ಎಲ್ಲವೂ ಮಾಮೂಲಿನಂತಿದೆ’ ಎಂಬ ತೋರ್ಪಡಿಕೆಯನ್ನು ಕಾಯ್ದುಕೊಳ್ಳಬೇಕೆಂಬ ನಿರೀಕ್ಷೆ, ಬಾಹ್ಯ ಬೆಂಬಲದ ಕೊರತೆ- ಹೀಗೆ ಬಗೆಬಗೆಯ ಕಾರಣಗಳಿರಬಹುದು. ಕಿರುಕುಳ ಘಟಿಸಿದ ಕಾಲಘಟ್ಟದಲ್ಲೇ ಅದರ ಪರಿಹಾರಯತ್ನಕ್ಕೆ ಮುಂದಾಗದೆ, ಮನಸ್ಸಿನಲ್ಲೇ ನೋವನ್ನು ನುಂಗಿಕೊಂಡರು ಎಂದ ಮಾತ್ರಕ್ಕೆ, ಇಂಥ ದುರಾಚಾರವನ್ನು ಮರೆಯಲಾಗಿದೆ ಅಥವಾ ಕ್ಷಮಿಸಲಾಗಿದೆ ಎಂದೇನಲ್ಲ ಅಥವಾ ಅವರು ಗಟ್ಟಿಯಾಗಿ ಮಾತಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದೇನಲ್ಲ. ಅಷ್ಟೇ ಅಲ್ಲ, ಅನೇಕರು ಗಟ್ಟಿದನಿಯೆತ್ತಿರುವುದರ ಹಿಂದಿರುವುದು ಕಿರುಕುಳ ನೀಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಆಶಯವೇ ಎಂದೇನಲ್ಲ; ಮನಸ್ಸಿನಲ್ಲಿ ಮಡುಗಟ್ಟಿರುವ ನೋವಿಗೊಂದು ಪರಿಹಾರವಾಗಿಯೂ ಹೀಗೆ ಮಾಡಿರುವುದು ಗಮನಕ್ಕೆ ಬಂದಿದೆ. ‘ಹಿಂದೆಯೇ ಏಕೆ ಪ್ರತಿಭಟಿಸಲಿಲ್ಲ’ ಎಂದೆಲ್ಲ ಕೇಳುವ ಮೂಲಕ ಆಕೆಯನ್ನು ಜರಿಯುವ ಬದಲು, ಪ್ರಭಾವಿ ಸ್ಥಾನದಲ್ಲಿದ್ದುಕೊಂಡು ಅಪರಾಧಿಕ ಕೃತ್ಯಗಳನ್ನು ಎಸಗುವುದಕ್ಕೆ ಪುರುಷರಿಗೆ ಅನುವುಮಾಡಿಕೊಡುವಂಥ ‘ಬಾಯಿಹೊಲಿದುಕೊಂಡೇ ಉಳಿದುಬಿಡುವಂಥ’ ಸಂಸ್ಕೃತಿಯ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡುವ ಅಗತ್ಯವಿದೆ.

ಲೈಂಗಿಕ ಕಿರುಕುಳದ ಕುರಿತಾದ ದೂರು ಪ್ರಾಮಾಣಿಕವಾಗಿರುವುದಿಲ್ಲ ಹಾಗೂ ಅದು ಪುರುಷನ ಗೌರವ/ಪ್ರತಿಷ್ಠೆಗಳನ್ನು ಹಾಳುಮಾಡುವಂತಿರುತ್ತದೆ ಎಂಬುದು ಮತ್ತೊಂದು ಸಾರ್ವತ್ರಿಕ ಆಕ್ಷೇಪ. ಪ್ರಾಯಶಃ ಇದರಲ್ಲಿ ಒಂದಷ್ಟು ತಥ್ಯ ಇದ್ದಿರಬಹುದಾದರೂ, ಇಂಥ ಒಂದಿಡೀ ಆಂದೋಲನವನ್ನೇ ಸಾರಾಸಗಟಾಗಿ ನಿರಾಕರಿಸಿ, ತನ್ಮೂಲಕ ಅದನ್ನು ಸಮಾಧಿ ಮಾಡಿಬಿಡುವುದಕ್ಕೆ ಅದಷ್ಟೇ ಸಾಕಾಗುತ್ತದೆಯೇ? ಈ ತರ್ಕವನ್ನೇ ಮುಂದಿಟ್ಟುಕೊಂಡು ಹೊರಟಲ್ಲಿ, ಈ ನೆಲದ ಎಲ್ಲ ಕಾನೂನುಗಳನ್ನೂ ರದ್ದುಗೊಳಿಸಬೇಕಾಗುತ್ತದೆ, ಏಕೆಂದರೆ ಕಾನೂನನ್ನು ರೂಪಿಸುವವರೇ ಅವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಅಷ್ಟೇ ಅಲ್ಲ, ಯಾವ ವ್ಯಕ್ತಿಯ ವಿರುದ್ಧವಾಗಿ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊರಿಸಲಾಗುತ್ತಿದೆಯೋ ಅಂಥ ಪ್ರತಿಯೊಬ್ಬನೂ, ಇಂಥ ದೌರ್ಜನ್ಯಕ್ಕೆ ಒಳಗಾದವರು ಅನುಭವಿಸುವಷ್ಟೇ ತೀವ್ರಯಾತನೆ, ಮಾನಸಿಕ ಆಘಾತ ಮತ್ತು ಸಾಮಾಜಿಕ ತಿರಸ್ಕಾರಕ್ಕೆ ಒಳಗಾಗುತ್ತಾನೆ ಎಂಬ ವಾದದಿಂದ ಸಂತ್ರಸ್ತರನ್ನೂ ಹಾಗೂ ದುಷ್ಕರ್ವಿುಯನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸಮರ್ಥನೀಯವಲ್ಲ.

‘ಮೀ ಟೂ’ ಆಂದೋಲನವು ಪೊಲೀಸ್, ನ್ಯಾಯಾಲಯ ಮತ್ತು ಸೆರೆಮನೆ ವ್ಯವಸ್ಥೆಗಳ ರೀತಿಯಲ್ಲಿ ಸಾಮಾಜಿಕ ಮಾಧ್ಯಮವನ್ನು ಪರಿಗಣಿಸಿದೆ ಎಂಬುದು ಕೂಡ ಕೆಲವರ ಆಕ್ಷೇಪಕ್ಕೆ ಮೂಲ. ಆದರೆ, ನಿಕಟ ಬಂಧುವೊಬ್ಬರ ಕಿವಿಯಲ್ಲಿ ಉಸುರುವುದಕ್ಕಿಂತ ಅಪರಿಚಿತರೆದುರು ಬಹಿರಂಗವಾಗಿ ಗಟ್ಟಿದನಿಯಲ್ಲಿ ಹೇಳಿಕೊಂಡು ಸಮಾಧಾನವನ್ನು ಅನುಭವಿಸುವುದೇ ಕ್ಷೇಮಕರ ಎಂಬಂಥ ಸಮಾಜವೊಂದನ್ನು ನಾವು ಒಟ್ಟಾಗಿ ರೂಪಿಸಿದ್ದೇವೆ ಎಂದರೆ ಅತಿಶಯೋಕ್ತಿ ಆಗಲಾರದು. ಜತೆಗೆ, ಪ್ರಸ್ತುತ ಸಾಮಾಜಿಕ ಮಾಧ್ಯಮ ಅಲ್ಪಕಾಲದಲ್ಲೇ ನಮ್ಮ ದನಿಗಳನ್ನು ದೂರಕ್ಕೆ ಒಯ್ಯಬಲ್ಲ ವೇದಿಕೆಯಾಗಿಬಿಟ್ಟಿದೆ. ಇನ್ನು, ಖ್ಯಾತ ವ್ಯಕ್ತಿಗಳೋ, ಗಣ್ಯಾತಿಗಣ್ಯರೋ ಇಂಥ ಘಟನೆಗಳ ಭಾಗವಾದಾಗ ಮತ್ತು ವಕೀಲರು, ನ್ಯಾಯಾಲಯಗಳಂಥ ಸಾಂಪ್ರದಾಯಿಕ ವಿಧಾನಗಳ ಮೂಲಕ ಆರೋಪಗಳು ಬಂದಾಗ ‘ಮಾಧ್ಯಮಗಳ ವಿಚಾರಣೆ’ ಕಟ್ಟಿಟ್ಟಬುತ್ತಿ. ಇಂಥ ಪ್ರವೃತ್ತಿ ಸರಿಯಲ್ಲ ಎಂಬುದರಲ್ಲಿ ಎರಡುಮಾತಿಲ್ಲ; ಆದರೆ ಇಂಥ ‘ಮಾಧ್ಯಮಗಳ ವಿಚಾರಣೆ’ ಸಾಧ್ಯತೆಯು, ಲೈಂಗಿಕ ದೌರ್ಜನ್ಯದ ದೂರು ನೀಡಲು ಮಹಿಳೆಗಿರುವ ಹಕ್ಕನ್ನು ಕಿತ್ತುಕೊಳ್ಳುವುದಕ್ಕೆ ‘ಸಕಾರಣ ಆಧಾರ’ ಆಗಲಾರದು. ಒಂದು ವೇಳೆ, ಅಂಥ ನಡೆ ಯಾರೋ ಒಬ್ಬಾತನ ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಎಂದಾದಲ್ಲಿ, ಕಾನೂನಿನಲ್ಲಿ ಪರಿಹಾರದ ಮಾಗೋಪಾಯಗಳಿವೆ.

ತೀರಾ ಇತ್ತೀಚಿನವರೆಗೆ, ಲೈಂಗಿಕತೆಗೆ ಸಂಬಂಧಿಸಿದ ವಿಷಯಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ರ್ಚಚಿಸುವುದಕ್ಕೆ ಸಂಬಂಧಿಸಿ ಭಾರತ ಅಳುಕುತ್ತಿತ್ತು ಎಂದರೆ ತಪ್ಪಾಗಲಾರದು. ಆದರೆ ‘ಮೀ ಟೂ’ ಆಂದೋಲನ ಈ ಮನಸ್ಥಿತಿಯಲ್ಲಿ ಬದಲಾವಣೆ ತಂದಂತಿದೆ.

ತಮ್ಮ ನೋವಿನ ಕತೆಗಳನ್ನು ಹೇಳಿಕೊಳ್ಳುವುದಕ್ಕೆ ಮುಂದೆಬಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿರುವುದು ಮತ್ತು ಅವರಲ್ಲಿರುವ ಹುಚ್ಚುಧೈರ್ಯ, ಜೀವನದ ವಿವಿಧ ಮಗ್ಗುಲುಗಳಿಗೆ ಸೇರಿದ ಮಹಿಳೆಯರ ನಡುವೆ ರೂಪುಗೊಂಡಿರುವ ಐಕಮತ್ಯಭಾವ, ಲೈಂಗಿಕ ದೌರ್ಜನ್ಯದ ಪ್ರಕರಣದೆಡೆಗೆ ಮಾಧ್ಯಮಗಳು ನೀಡಿರುವ ಗಮನ, ಸಂತ್ರಸ್ತರಿಗೆ ಸಾರ್ವಜನಿಕರ ಬೆಂಬಲ ಹಾಗೂ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬರುತ್ತಿದ್ದಂತೆ ಬಹಳಷ್ಟು ಸಂಸ್ಥೆಗಳು/ಕಂಪನಿಗಳು ಗಂಭೀರ ಕ್ರಮ ಕೈಗೊಳ್ಳುವ ಮೂಲಕ ಅದಕ್ಕೆ ಪ್ರತಿಸ್ಪಂದಿಸಿರುವುದು- ಈ ಎಲ್ಲ ಅಂಶಗಳೂ ಸಂಭಾವ್ಯ ಬದಲಾವಣೆಯ ಆಶಾದಾಯಕ ಸೂಚನೆಗಳಾಗಿವೆ.

ಸಬಲೀಕರಣದೆಡೆಗಿನ ಈ ಪಯಣ ಸುಧಾರಣೆಗಳಿಗೆ ಕಾರಣವಾಗುತ್ತದೆ ಮತ್ತು ಮಹಿಳಾ ಸಮುದಾಯ ಅನುಭವಿಸಿರಬಹುದಾದ ಆಳಗಾಯಗಳು ಮತ್ತು ಮನೋವ್ಯಥೆಗಳು ಈ ಪ್ರಕ್ರಿಯೆಯಲ್ಲಿ ಉಪಶಮನಗೊಳ್ಳುತ್ತವೆ ಎಂದು ಆಶಿಸೋಣ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)