ಆನ್​ಲೈನ್ ಮಾನಹಾನಿ ಪ್ರಕರಣ, ನ್ಯಾಯಾಂಗದ ಸಂದಿಗ್ಧ

ಅಭಿವ್ಯಕ್ತಿ ಸ್ವಾತಂತ್ರ್ಯದ ಅಸ್ತಿತ್ವ ಉಳಿಯಬೇಕೆಂದರೆ, ಅದಕ್ಕೆ ಉಸಿರಾಡಿಕೊಂಡಿರುವಂಥ ಅವಕಾಶ ನೀಡಬೇಕಾಗುತ್ತದೆ. ಅಂತರ್ಜಾಲ ಸಂಬಂಧಿ ವಿವಾದಗಳ ವಿಷಯದಲ್ಲಿ, ಸಾಂಪ್ರದಾಯಿಕ ವೇದಿಕೆಯ ನಿಯಮಗಳನ್ನು ಅಳವಡಿಸಿಕೊಳ್ಳಬೇಕೇ ಬೇಡವೇ ಎಂಬ ಚರ್ಚೆಯಲ್ಲಿ ನ್ಯಾಯಾಲಯಗಳು ತೊಡಗಿಸಿಕೊಳ್ಳಬೇಕಾದ ಜರೂರತ್ತು ಈಗ ಎದುರಾಗಿದೆ.

ಅಂತರ್ಜಾಲ ಎಂಬುದು ಇಂದು ಸಕಲ ರಂಗಗಳನ್ನೂ ಆವರಿಸಿದೆ. ಈ ವ್ಯವಸ್ಥೆಯ ಉಗಮವಾಗುವುದರೊಂದಿಗೆ, ಎಲ್ಲೆಗಳನ್ನು ಮೀರಿದ ಮಾಹಿತಿಯ ಪ್ರಸರಣ ಹಾಗೂ ವ್ಯವಹಾರದ ನಿರ್ವಹಣೆಗೂ ಅವಕಾಶ ಸಿಕ್ಕಂತಾಗಿರುವುದು ಗೊತ್ತಿರುವ ವಿಚಾರವೇ. ಇದರಿಂದಾಗಿ ಸಂಬಂಧಿತ ಸಮಸ್ಯೆ/ಚರ್ಚಾವಿಷಯಗಳು ನ್ಯಾಯಾಂಗ ವ್ಯವಸ್ಥೆಯೆದುರು ಹಠಾತ್ತಾಗಿ ಬರುವಂತಾಗುವ ಬೆಳವಣಿಗೆಯೂ ನಡೆದಿದೆ. ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹೆಸರಿನಲ್ಲಿ ಹೊಮ್ಮುವ ಮಾತು/ಗ್ರಹಿಕೆಗಳನ್ನು ಆನ್​ಲೈನ್ ಮಾಧ್ಯಮದಲ್ಲಿ ಹರಿಯಬಿಡುವುದರಿಂದಾಗಿ ಉದ್ಭವಿಸುವ ವಿವಾದಗಳ ವಿಷಯದಲ್ಲಿ, ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯನ್ನು ನಿರ್ಧರಿಸಲು ಭಾರತದ ನ್ಯಾಯಾಲಯಗಳು ಸೆಣಸಾಡುತ್ತಿರುವಂತೆ ತೋರುತ್ತಿರುವುದು ಇಂಥ ಪ್ರಮುಖ ವಿಷಯಗಳಲ್ಲೊಂದು.

ಭಾರತದಲ್ಲಿ, ಭೌಗೋಳಿಕ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ ಸಾಂಪ್ರದಾಯಿಕ ಅವಶ್ಯಕತೆಗಳು ಸಾಮಾನ್ಯವಾಗಿ ಎರಡು ವಿಷಯಕ್ಷೇತ್ರಗಳನ್ನು ಒಳಗೊಂಡಿರುತ್ತದೆ. ಮೊದಲನೆಯದು- ಪ್ರತಿವಾದಿಯು ಸ್ವತಃ ಕೆಲಸ ಮಾಡುತ್ತಿರುವ/ವ್ಯವಹಾರ ನಿರ್ವಹಿಸುತ್ತಿರುವ/ವಾಸಿಸುತ್ತಿರುವ ಸ್ಥಳ; ಅಥವಾ ಎರಡನೆಯದು- ವ್ಯಾಜ್ಯಕಾರಣ/ವ್ಯಾಜ್ಯವಿಷಯವು ಎಲ್ಲಿ ಹುಟ್ಟಿಕೊಳ್ಳುತ್ತದೆ ಎಂಬುದು. ಆದರೆ ‘ಅಂತರ್ಜಾಲ’ ಎಂಬುದು ಗಡಿಗಳನ್ನು ಮೀರಿದ ಅಥವಾ ಗಡಿರಹಿತವಾಗಿರುವ ಕಾರಣ ಈ ವಿಷಯದಲ್ಲಿ ಈ ಎರಡೂ ಅಂಶಗಳನ್ನು ಖಚಿತವಾಗಿ ಪ್ರಮಾಣೀಕರಿಸುವುದು ಕಷ್ಟವೇ ಸರಿ.

ಆನ್​ಲೈನ್ ಮಾದರಿಗೆ ವಿರುದ್ಧವಾದ ಸಾಂಪ್ರದಾಯಿಕ ವ್ಯವಹಾರಗಳಿಗೆ ಸಂಬಂಧಿಸಿದ ಮಾನಹಾನಿಕಾರಕ ಪ್ರಕರಣಗಳಲ್ಲಿ, ಮಾನಹಾನಿಕರ ಹೇಳಿಕೆ ಎಲ್ಲಿ ಮೊದಲು ಹೊಮ್ಮಿ ಪ್ರಕಟಗೊಂಡಿತೋ ಆ ಪ್ರದೇಶದಲ್ಲಿನ ನ್ಯಾಯಾಲಯಗಳಿಗೆ ಮಾತ್ರವಲ್ಲದೆ, ಸದರಿ ಪ್ರಕಟಣೆಯು ತರುವಾಯದಲ್ಲಿ ಎಲ್ಲೆಲ್ಲಿ ಪ್ರಕಟಗೊಂಡು ಪ್ರಸರಣಗೊಂಡು ಓದಲ್ಪಡುವುದೋ ಅಲ್ಲೆಲ್ಲ ಇರುವ ನ್ಯಾಯಾಲಯಗಳಿಗೂ ಭೌಗೋಳಿಕ/ಪ್ರಾದೇಶಿಕ ಅಧಿಕಾರವ್ಯಾಪ್ತಿಯನ್ನು ಭಾರತೀಯ ನ್ಯಾಯಾಲಯಗಳು ವಿಸ್ತರಿಸಿವೆ. ‘ಸುಬ್ರಮಣಿಯಂ ಸ್ವಾಮಿ ವರ್ಸಸ್ ಪ್ರಭಾಕರ್ ಎಸ್. ಪೈ’ ಪ್ರಕರಣದಲ್ಲಿ, ಚಂಡೀಗಢದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯೊಂದರಲ್ಲಿ ನಡೆಯಿತೆನ್ನಲಾದ ಮತ್ತು ತರುವಾಯದಲ್ಲಿ ಬಾಂಬೆಯಲ್ಲಿನ ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆಯಿಂದ ಪ್ರಕಟಿಸಲ್ಪಟ್ಟಿತು ಎನ್ನಲಾದ ಮಾನಹಾನಿಕರ ಪ್ರಕರಣದಲ್ಲಿ ಬಾಂಬೆ ಕೋರ್ಟ್ ಅಧಿಕಾರವ್ಯಾಪ್ತಿ ಹೊಂದಿದೆಯೇ ಎಂಬುದು ಚರ್ಚಾವಿಷಯವಾಗಿತ್ತು. ಈ ಕುರಿತು ಹೌದೆನ್ನುವ ರೀತಿಯಲ್ಲಿ ಉತ್ತರಿಸಿದ ನ್ಯಾಯಾಲಯ, ಚಂಡೀಗಢದಲ್ಲಿ ನೀಡಲ್ಪಟ್ಟ ಹೇಳಿಕೆಯ ಪರಿಣಾಮವು, ಪತ್ರಿಕೆಗಳ ಪ್ರಸರಣದ ಮೂಲಕವಾಗಿ ಸಂಪೂರ್ಣಗೊಂಡಂತಾಗಿದೆ ಎಂದು ಸಮರ್ಥಿಸಿತು.

‘ಪಿ. ಲಂಕೇಶ್ ವರ್ಸಸ್ ಎಚ್. ಶಿವಪ್ಪ’ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವೂ ಹೀಗೇ ನಡೆದುಕೊಂಡಿತು. ಯಾವುದೇ ವರ್ತಮಾನ ಪತ್ರಿಕೆಯಲ್ಲಿನ ಮಾನಹಾನಿ ಆರೋಪವು ಎಲ್ಲಿ ಪ್ರಕಟಣೆಯಾಗಿದೆ ಎಂದು ಹೇಳಬಹುದು ಎಂಬ ಕುರಿತು ನ್ಯಾಯಾಲಯ ಹೀಗೆಂದಿತ್ತು- ‘ವರ್ತಮಾನ ಪತ್ರಿಕೆಯೊಂದರ ಕೇಂದ್ರಕಚೇರಿ/ಮುಖ್ಯ ಕಾರ್ಯಾಲಯವು ನಿರ್ದಿಷ್ಟ ಸ್ಥಳವೊಂದರಲ್ಲಿದೆ ಅಥವಾ ಒಂದು ಸ್ಥಳದಲ್ಲಿ ಅದು ಮುದ್ರಣಗೊಂಡು ಪ್ರಕಟಿಸಲ್ಪಡುತ್ತಿದೆ ಎಂದ ಮಾತ್ರಕ್ಕೆ, ಮತ್ತೊಂದು ಸ್ಥಳದಲ್ಲಿರುವ ಪತ್ರಿಕೆಯಲ್ಲಿ ಅಡಕವಾಗಿರುವ ಮಾನಹಾನಿಕರ ಲೇಖನದ ಪ್ರಕಟಣೆಯಾಗಬಾರದು ಎಂದರ್ಥವಲ್ಲ. ಒಂದು ವೇಳೆ, ಮಾನಹಾನಿಕರ ಆರೋಪಣೆಯು ಹಲವಾರು ಸ್ಥಳಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಿಸಲ್ಪಟ್ಟಲ್ಲಿ, ಅಂಥ ಪ್ರತಿಯೊಂದು ಸ್ಥಳದಲ್ಲೂ ಅಪರಾಧವು ಎಸಗಲ್ಪಟ್ಟಿದೆ ಎಂದರ್ಥ’.

ಆದರೆ ಆನ್​ಲೈನ್ ಮಾಧ್ಯಮಕ್ಕೆ ಸಂಬಂಧಿಸಿ ಕಾರ್ಯವ್ಯಾಪ್ತಿ ನಿರ್ಣಯಿಸುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳು ಇದೇ ಮಾನದಂಡವನ್ನು ಅನ್ವಯಿಸಿದಾಗ ಅಡಚಣೆ ಉದ್ಭವಿಸುತ್ತದೆ. ನ್ಯಾಯಮೂರ್ತಿಗಳಾದ ಎ.ಕೆ. ಗೋಯೆಲ್ ಮತ್ತು ಯು.ಯು. ಲಲಿತ್​ರನ್ನು ಒಳಗೊಂಡಿದ್ದ ಸವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಇತ್ತೀಚೆಗೆ, ‘ಫ್ಯೂಚರ್ ಗೇಮಿಂಗ್ ಆಂಡ್ ಹೋಟೆಲ್ ಸರ್ವೀಸಸ್ ಪ್ರೖೆ. ಲಿ. ವರ್ಸಸ್ ಮಲಯಾಳ ಮನೋರಮಾ’ ಪ್ರಕರಣದಲ್ಲಿ, ಸಿಕ್ಕಿಂ ಉಚ್ಚ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು; ಅರ್ಜಿದಾರರು ಸಲ್ಲಿಸಿದ್ದ ದೂರನ್ನು ಪ್ರಾದೇಶಿಕ/ಸ್ಥಳೀಕ ಕಾರ್ಯವ್ಯಾಪ್ತಿಯ ಕೊರತೆಯಿಂದಾಗಿ ನ್ಯಾಯಾಲಯವು ಊರ್ಜಿತವಲ್ಲವೆಂದು ತಳ್ಳಿಹಾಕಿದ ಸಂದರ್ಭ ಇದಾಗಿತ್ತು. ಈ ಕುರಿತಾದ ಸಂಕ್ಷಿಪ್ತ ವಿವರಗಳು ಹೀಗಿವೆ- ಈ ಪ್ರಕರಣದಲ್ಲಿ ಮಲಯಾಳಂ ಭಾಷಿಕ ವರ್ತಮಾನ ಪತ್ರಿಕೆಯೊಂದು ಪ್ರತಿವಾದಿಯಾಗಿದ್ದು, ಇದು ಪ್ರಕಟಿಸಿದ ಸುದ್ದಿಲೇಖನವೊಂದು ಪತ್ರಿಕೆಯ ಜಾಲತಾಣದಲ್ಲೂ ಪ್ರಕಟವಾಗಿ ಆನ್​ಲೈನ್ ಮಾಧ್ಯಮದಲ್ಲೂ ಲಭ್ಯವಾಗುವಂತಾಗಿತ್ತು. ಹೀಗೆ ಪ್ರಕಟಗೊಂಡ ಸುದ್ದಿಯಿಂದ ತಮಗೆ ಮಾನನಷ್ಟವಾಗಿದೆ ಎಂದು ಅರ್ಜಿದಾರರು ದೂರು ಸಲ್ಲಿಸಿದರು. ಸದರಿ ದೂರನ್ನು ಊರ್ಜಿತವಲ್ಲವೆಂದು ತಳ್ಳಿಹಾಕುವಂತೆ ಹಾಗೂ ಸಮನ್ಸ್ ಆದೇಶವನ್ನು ರದ್ದುಮಾಡುವಂತೆ ಪ್ರತಿವಾದಿ ಕೋರಿದರು. ಪ್ರಾದೇಶಿಕ/ಸ್ಥಳೀಕ ಕಾರ್ಯವ್ಯಾಪ್ತಿಯ ಕೊರತೆಯಿಂದಾಗಿ ದೂರನ್ನು ಅನೂರ್ಜಿತವೆಂದು ತಳ್ಳಿಹಾಕಿದ ಸಿಕ್ಕಿಂ ಉಚ್ಚ ನ್ಯಾಯಾಲಯ, ಮಾನನಷ್ಟದ ಅಪರಾಧವನ್ನು ಸಂಪೂರ್ಣವಾಗಿಸುವ ನಿಟ್ಟಿನಲ್ಲಿ ಯಾವುದೇ ವ್ಯಕ್ತಿಯು ಸದರಿ ಸುದ್ದಿಯ ಆನ್​ಲೈನ್ ಆವೃತ್ತಿಯನ್ನು ಓದಿರುವುದನ್ನಾಗಲೀ ಅಥವಾ ಅದನ್ನು ಡೌನ್​ಲೋಡ್ ಮಾಡಿರುವುದನ್ನಾಗಲೀ ಎತ್ತಿ ತೋರಿಸುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆಂದು ಅಭಿಪ್ರಾಯಪಟ್ಟಿತು. ಈ ನಿರ್ಣಯವನ್ನು ಅರ್ಜಿದಾರರು ಸವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಸಿಕ್ಕಿಂ ಉಚ್ಚನ್ಯಾಯಾಲಯದ ನಿರ್ಣಯವನ್ನು ರದ್ದುಪಡಿಸಿದ ಸವೋಚ್ಚ ನ್ಯಾಯಾಲಯ, ಸಾಕ್ಷಿಗಳ ಪಟ್ಟಿಯು ಸಿಕ್ಕಿಂ ನಿವಾಸಿಗಳನ್ನು ಒಳಗೊಂಡಿದ್ದು, ಅಪರಾಧವೆಂದು ಹೇಳಲ್ಪಟ್ಟಿರುವಂಥದ್ದು ಸಿಕ್ಕಿಂನಲ್ಲಿ ಘಟಿಸಿತ್ತು ಎಂಬ ಇಂಗಿತವಿರುವಂಥ ಸಾಕ್ಷ್ಯವನ್ನು ನೀಡಲು ಈ ಸಾಕ್ಷಿಗಳು ಉದ್ದೇಶಿಸಿರುವುದರಿಂದಾಗಿ ಈ ಹಂತದಲ್ಲಿ ದೂರನ್ನು ಅನೂರ್ಜಿತವೆಂದು ತಳ್ಳಿಹಾಕಲಾಗದು ಎಂದಿತು. ತನ್ಮೂಲಕ, ಆನ್​ಲೈನ್ ಮಾನನಷ್ಟದ ಪ್ರಕರಣಗಳಲ್ಲಿ ಆಕ್ಷೇಪಾರ್ಹ ಮಾಹಿತಿ/ಸಂಗತಿಯ ಲಭ್ಯತೆ ಇರುವಂಥ ಯಾವುದೇ ಸ್ಥಳದಲ್ಲಿ ನ್ಯಾಯಾಲಯಗಳ ಕಾರ್ಯವ್ಯಾಪ್ತಿಯಿರುತ್ತದೆ ಎಂಬುದಾಗಿ ಸವೋಚ್ಚ ನ್ಯಾಯಾಲಯವು ಸೂಚ್ಯವಾಗಿ ದೃಢೀಕರಿಸಿತು.

‘ಫ್ರಾಂಕ್​ಫಿನ್ ಏವಿಯೇಷನ್ ಸರ್ವೀಸಸ್ ಪ್ರೖೆ ಲಿ. ವರ್ಸಸ್ ತಾರಾ ಕೇರ್ಕರ್’ ಪ್ರಕರಣದಲ್ಲಿ ದೆಹಲಿ ಉಚ್ಚ ನ್ಯಾಯಾಲಯ ಕೂಡ ಆನ್​ಲೈನ್ ಮಾನನಷ್ಟದ ಪ್ರಕರಣಕ್ಕೆ ವಿಶಾಲ ಕಾರ್ಯವ್ಯಾಪ್ತಿ ಅನ್ವಯಿಸಿತು. ಈ ಪ್ರಕರಣದಲ್ಲಿ, ಪ್ರತಿವಾದಿಗಳು (ಗೋವಾದ ನಿವಾಸಿಗಳು) ಗೋವಾದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯೊಂದರಲ್ಲಿ ಮೇಲ್ಮನವಿದಾರರ ಕುರಿತಾದ ಮಾನಹಾನಿಕರ ಹೇಳಿಕೆ ನೀಡಿದ್ದರು ಎನ್ನಲಾಗಿತ್ತು. ಸದರಿ ಪತ್ರಿಕಾಗೋಷ್ಠಿಯನ್ನು ಜಾಲತಾಣದಲ್ಲಿ ಪ್ರದರ್ಶಿಸಲಾಗಿತ್ತು ಮತ್ತು ಗೋಷ್ಠಿಯ ಪ್ರಸಾರವು ವಿವಿಧ ಜಾಲತಾಣಗಳ ಮೂಲಕ ವೀಕ್ಷಿಸಲ್ಪಟ್ಟಿತ್ತು. ದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಮೇಲ್ಮನವಿದಾರರಿಗೆ ಸದರಿ ಪತ್ರಿಕಾಗೋಷ್ಠಿಯ ಕುರಿತಾಗಿ ಪ್ರಶ್ನೆಗಳು/ಆಕ್ಷೇಪಗಳ ಮಹಾಪೂರವೇ ಹರಿದುಬಂತು. ಈ ವಿಷಯದಲ್ಲಿ ದೆಹಲಿ ಉಚ್ಚ ನ್ಯಾಯಾಲಯಕ್ಕೆ ಕಾರ್ಯವ್ಯಾಪ್ತಿಯಿದೆ ಎಂದು ಸಮರ್ಥಿಸುತ್ತಲೇ, ಪ್ರಾದೇಶಿಕ/ಸ್ಥಳೀಕ ಕಾರ್ಯವ್ಯಾಪ್ತಿಯು ವಾಸ್ತವಿಕವಾಗಿ ಮಾನಹಾನಿಕರ ವರ್ತನೆ ಘಟಿಸಿರುವ ಸ್ಥಳಕ್ಕೆ ಮಾತ್ರವೇ ಸೀಮಿತವಾಗಿರದೆ ಎರಡೂ ಸ್ಥಳಗಳಿಗೂ, ಅಂದರೆ- ವಾಸ್ತವಿಕವಾಗಿ ಮಾನನಷ್ಟವಾದ ಸ್ಥಳ ಹಾಗೂ ಇಂಥ ಮಾನಹಾನಿಕರ ಮಾಹಿತಿಯು ಜಾಲತಾಣದ ಮೂಲಕ ಪ್ರಸರಣಗೊಂಡ ಸ್ಥಳ ಎರಡಕ್ಕೂ ವಿಸ್ತರಣೆಗೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿತು.

ಮೇಲೆ ಉಲ್ಲೇಖಿಸಲಾಗಿರುವ ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಮನವರಿಕೆಯಾಗುವ ಅಂಶಗಳೆಡೆಗೆ ಗಮನಹರಿಸೋಣ. ಮುಕ್ತವಾಗಿ ವ್ಯಕ್ತಪಡಿಸಿದ ಅಭಿಪ್ರಾಯಗಳ ಆನ್​ಲೈನ್ ಪ್ರಸರಣಕ್ಕೆ ಸಂಬಂಧಿಸಿದ ಕಾರ್ಯವ್ಯಾಪ್ತಿಯ ವಿಷಯಗಳ ಮಟ್ಟಿಗೆ ಹೇಳುವುದಾದರೆ, ಎರಡು ತೊಡಕುಗಳು ಎದುರಾಗುತ್ತವೆ. ಅವೆಂದರೆ, 1) ಭಾರತೀಯ ನ್ಯಾಯಾಲಯಗಳು ಅಳವಡಿಸಿಕೊಂಡಿರುವ ದೃಷ್ಟಿಕೋನವು ಆಫ್​ಲೈನ್ ಮಾನನಷ್ಟ ಪ್ರಕರಣಗಳಿಗೆ ಸಮಾನವಾಗಿದೆ; 2) ಹೀಗೆ ಅಳವಡಿಸಿಕೊಂಡಿರುವ ದೃಷ್ಟಿಕೋನವು ವ್ಯಾಪಕವಾಗಿದೆ. ಸಾಂಪ್ರದಾಯಿಕ ಮಾಧ್ಯಮಗಳು ಮತ್ತು ಹೊಸ ಡಿಜಿಟಲ್ ಮಾಧ್ಯಮಗಳ ನಡುವಿನ ಅಂತರ್ಗತ ವೈಲಕ್ಷಣ್ಯಗಳನ್ನು ಪರಿಗಣಿಸಲು ನ್ಯಾಯಾಲಯಗಳು ವಿಫಲವಾಗಿವೆ ಮತ್ತು ಹೀಗಾಗಿ ಆನ್​ಲೈನ್ ಮಾನನಷ್ಟ ಪ್ರಕರಣಗಳಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ಥಳೀಕ/ಪ್ರಾದೇಶಿಕ ಕಾರ್ಯವ್ಯಾಪ್ತಿಯನ್ನು ಸೃಷ್ಟಿಸುವುದಕ್ಕೆ ಅವು ಅನುಮತಿಸಿವೆ ಎಂಬುದಿಲ್ಲಿ ಸುಸ್ಪಷ್ಟ. ಇದರ ಪರಿಣಾಮವಾಗಿ, ಪತ್ರಕರ್ತರು, ಲೇಖಕರು ಮತ್ತು ಇನ್ನಿತರ ವ್ಯಕ್ತಿಗಳಿಗೆ ಕಿರುಕುಳ ನೀಡುವ ಒಂದು ಮಾಗೋಪಾಯವಾಗಿ ಇದು ಹೊಮ್ಮಿದ್ದು, ಇಂಥವರು ಸ್ವಂತದುಡ್ಡು ಖರ್ಚುಮಾಡಿಕೊಂಡು ದೂರದ ತಾಣಗಳಿಗೆ ಪ್ರಯಾಣ ಬೆಳೆಸುವಂತಾಗಿದೆ.

ಈ ಘಟ್ಟದಲ್ಲಿ, ‘ಸುಬ್ರಮಣಿಯಂ ಸ್ವಾಮಿ ವರ್ಸಸ್ ಕೇಂದ್ರ ಸರ್ಕಾರ ಮತ್ತು ಇತರರು (2016)’ ಪ್ರಕರಣವನ್ನೊಮ್ಮೆ ಪರಾಮಶಿಸುವುದು ಸೂಕ್ತವಾದೀತು. ಕ್ರಿಮಿನಲ್ ಮಾನಹಾನಿಯ ಸಂವಿಧಾನಬದ್ಧತೆಯನ್ನು ನ್ಯಾಯಾಲಯ ಈ ಪ್ರಕರಣದಲ್ಲಿ ಎತ್ತಿಹಿಡಿಯಿತು. ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ, 1) ಯಾವ ಸ್ಥಳದಲ್ಲಿ ಮಾನನಷ್ಟದ ಪ್ರಕರಣವನ್ನು ಹೂಡಲಾಗಿದೆಯೇ ಆ ಸ್ಥಳದಲ್ಲಿ ಪ್ರತಿವಾದಿಯ ಭೌತಿಕ ಹಾಜರಿ ಅಗತ್ಯವಿರುತ್ತದೆ; 2) ಮಾನಹಾನಿಕರ ಹೇಳಿಕೆ ನೀಡಿದ ಎನ್ನಲಾಗಿರುವ ವ್ಯಕ್ತಿಯ ವಿರುದ್ಧ ದಾಖಲಿಸಬಹುದಾದ ಪ್ರಕರಣಗಳ ಸಂಖ್ಯೆಗೆ ಯಾವುದೇ ಮಿತಿಯಿರುವುದಿಲ್ಲ; 3) ಪರಿಚ್ಛೇದ 499 (ಮಾನನಷ್ಟ)ರ ಅನುಸಾರ ಪ್ರತಿವಾದಕ್ಕಿರುವ ಅವಕಾಶವು ವಿಚಾರಣೆಯ ಹಂತದಲ್ಲಿ ಮಾತ್ರ ಲಭ್ಯವಿರುತ್ತದೆ, ಅಂದರೆ ಮೊದಲ ನೋಟಕ್ಕೆ ನ್ಯಾಯಸಮ್ಮತವೆಂದು ತೋರುವ ಆರೋಪ ಸಲ್ಲಿಕೆಯಾದರೂ, ಕ್ರಿಮಿನಲ್ ಮಾನನಷ್ಟ ಪ್ರಕರಣ ಹೂಡುವುದಕ್ಕೆ ಅಷ್ಟು ಸಾಕಾಗುತ್ತದೆ. ಇದರಿಂದಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅಹಿತಕರ ಪ್ರಭಾವ ಉಂಟಾಗುತ್ತದೆ; 4) ಸಂಭಾವ್ಯ ಜೈಲುಶಿಕ್ಷೆ ಕುರಿತಾದ ಭಯವೂ ಇಂಥ ವಾಕ್​ಸ್ವಾತಂತ್ರ್ಯದ ಮೇಲೆ ಅಹಿತಕರ ಪ್ರಭಾವವನ್ನುಂಟುಮಾಡುತ್ತದೆ; 5) ಕ್ಷುಲ್ಲಕ ಪ್ರಕರಣದ ಸಂದರ್ಭದಲ್ಲಿ ಆಗುವ ಖರ್ಚುವೆಚ್ಚಗಳನ್ನು ಮತ್ತೆ ಪಡೆಯುವುದು ಅಸಂಭವವಾದ್ದರಿಂದ, ಅದು ಪತ್ರಕರ್ತರ ಮೇಲೆ ಹೆಚ್ಚುವರಿ ಹಣಕಾಸಿನ ಹೊರೆಯನ್ನು ಹೇರುತ್ತದೆ ಎಂಬುದು ಈ ಪ್ರಕರಣದ ವಿಚಾರಣೆ ವೇಳೆ ಹೊಮ್ಮಿದ ವಿಸõತವಾದವಾಗಿತ್ತು.

ಅದೇನೇ ಇರಲಿ, ‘ವಾಕ್​ಸ್ವಾತಂತ್ರ್ಯದ ಮೇಲೆ ಅಹಿತಕರ ಪ್ರಭಾವವಾಗುತ್ತದೆ’ ಎಂಬ ವಾದವನ್ನು ಸವೋಚ್ಚ ನ್ಯಾಯಾಲಯ ಅಮುಖ್ಯವೆಂದು ತಳ್ಳಿಹಾಕುತ್ತ, ‘ಸದರಿ ಕಾರ್ಯವ್ಯಾಪ್ತಿಯ ದುರುಪಯೋಗವಾಗಿರುವುದು ಕಂಡುಬಂದಲ್ಲಿ, ಸಮನ್ಸ್ ಜಾರಿಯಿಂದಾಗಿ ತೊಂದರೆಗೀಡಾಗಿರುವ ವ್ಯಕ್ತಿ ಕಾನೂನಿಗೆ ಅನುಸಾರವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟಿತು. ಆದರೆ, ‘ಕಾನೂನಿಗೆ ಅನುಸಾರವಾಗಿರುವ ಸೂಕ್ತ ಕ್ರಮಗಳ’ ಕೊರತೆ/ಅಸಮರ್ಪಕತೆಯೇ ‘ಅಹಿತಕರ ಪ್ರಭಾವದ ವಾದ’ಕ್ಕೆ ಆಧಾರವಾಗಿತ್ತು ಎಂಬುದನ್ನು ಅಂಗೀಕರಿಸಲು ಸವೋಚ್ಚ ನ್ಯಾಯಾಲಯ ಸ್ಪಷ್ಟವಾಗಿ ವಿಫಲವಾಯಿತೆನ್ನಬೇಕು.

ಅಭಿವ್ಯಕ್ತಿ ಸ್ವಾತಂತ್ರ್ಯವು ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಬೇಕೆಂದರೆ ಅದಕ್ಕೆ ಉಸಿರಾಡಿಕೊಂಡಿರುವಂಥ ಅವಕಾಶ ನೀಡಬೇಕಾಗುತ್ತದೆ ಎಂದಿದ್ದಾರೆ ಅಮೆರಿಕದ ಖ್ಯಾತ ನ್ಯಾಯಮೂರ್ತಿ ಬ್ರೆನನ್. ಆನ್​ಲೈನ್ ಮಾಧ್ಯಮದಲ್ಲಿ ಪ್ರಸರಣವಾಗುವ ಹೇಳಿಕೆ/ಮಾಹಿತಿಯ ಕಾರಣದಿಂದ ಹುಟ್ಟಿಕೊಳ್ಳುವ ಕಾರ್ಯವ್ಯಾಪ್ತಿಯ ಸಮಸ್ಯೆ/ಚರ್ಚಾವಿಷಯಗಳೆಡೆಗೆ ತಿರೋಗಾಮಿ ದೃಷ್ಟಿಕೋನವು ಮೇಲಿನ ಉದ್ದೇಶಕ್ಕೆ ವ್ಯತಿರಿಕ್ತವಾಗುತ್ತದೆ. ಅಂತರ್ಜಾಲ ಸಂಬಂಧಿ ವಿವಾದಗಳ ವಿಷಯದಲ್ಲಿ, ಸಾಂಪ್ರದಾಯಿಕ ವೇದಿಕೆಯ ನಿಯಮಗಳನ್ನು ಅಳವಡಿಸಿಕೊಳ್ಳಬೇಕೇ ಬೇಡವೇ ಎಂಬುದಕ್ಕೆ ಸಂಬಂಧಿಸಿ ದೇಶದ ಸವೋಚ್ಚ ನ್ಯಾಯಾಲಯವು ಸೂಕ್ತಸಮಯದಲ್ಲಿ ಚಿಂತನೆ ನಡೆಸಿ, ಉಸಿರುಕಟ್ಟುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಅಗತ್ಯ ಕ್ರಮಕ್ಕೆ ಮುಂದಾಗುತ್ತದೆ ಎಂದು ಆಶಿಸೋಣ. ಆನ್​ಲೈನ್ ಚಟುವಟಿಕೆ ಹೆಚ್ಚುತ್ತಲೇ ಇರುವ ಇಂದಿನ ದಿನಮಾನದಲ್ಲಿ ಇಂಥದೊಂದು ಕ್ರಮ ಅನಿವಾರ್ಯ ಅಗತ್ಯ ಎಂದೇ ಹೇಳಬೇಕು.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)