ಆಧಾರ್ ಜೋಡಣೆ ಕುರಿತು ನ್ಯಾಯಪೀಠ ಹೇಳಿದ್ದಿಷ್ಟು..

ಆಧಾರ್ ಕಾಯ್ದೆ ಮತ್ತು ಅದರಡಿಯಲ್ಲಿ ರೂಪಿಸಲಾಗಿರುವ ಕಟ್ಟುಪಾಡುಗಳ ವ್ಯಾಪ್ತಿಯನ್ನು ಸವೋಚ್ಚ ನ್ಯಾಯಾಲಯದ ನ್ಯಾಯಪೀಠ ವಿಶ್ಲೇಷಿಸಿದೆ. ವ್ಯಕ್ತಿಯೊಬ್ಬನ ಖಾಸಗಿತನ ಮತ್ತು ಘನತೆಯ ಅಗತ್ಯ ಗುರುತಿಸುವುದರ ಜತೆಜತೆಗೆ, ಆಧಾರ್ ಕಾಯ್ದೆಗೆ ಒದಗಿರುವ ಪ್ರಧಾನ ಸವಾಲನ್ನು ನಿರ್ಣಾಯಕವಾಗಿ ತಿರಸ್ಕರಿಸುವುದಕ್ಕೆಂದು ‘ಸಮುದಾಯದ ಘನತೆ’ ಎಂಬ ಪರಿಕಲ್ಪನೆಯನ್ನು ಅದು ವಿಶದೀಕರಿಸಿದೆ.

‘ಅತ್ಯುತ್ತಮ’ ಎನಿಸಿಕೊಳ್ಳುವುದಕ್ಕಿಂತ ‘ಅನನ್ಯ’ ಎನಿಸಿಕೊಳ್ಳುವುದು ಲೇಸು. ‘ಅತ್ಯುತ್ತಮ’ವಾಗಿದ್ದರೆ ನೀವು ‘ನಂಬರ್ 1’ ಆಗುತ್ತೀರಿ; ಆದರೆ ‘ಅನನ್ಯ’ರಾದಲ್ಲಿ ‘ಏಕಮಾತ್ರ’ ಎನಿಸಿಕೊಳ್ಳುತ್ತೀರಿ- ಇದು ನ್ಯಾ. ಕೆ.ಎಸ್. ಪುಟ್ಟಸ್ವಾಮಿ ವರ್ಸಸ್ ಕೇಂದ್ರ ಸರ್ಕಾರ ಪ್ರಕರಣದಲ್ಲಿ ನ್ಯಾ. ಎ.ಕೆ. ಸಿಕ್ರಿ ವ್ಯಕ್ತಪಡಿಸಿದ ಅಭಿಪ್ರಾಯ.

ಭಾರತ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಆಧಾರ್ ಗುರುತಿನ ಚೀಟಿಯ ಸಿಂಧುತ್ವವನ್ನು ಮೊನ್ನಿನ ಸೆಪ್ಟೆಂಬರ್ 26ರಂದು ಸವೋಚ್ಚ ನ್ಯಾಯಾಲಯ 4-1 ಬಹುಮತದ ಮೂಲಕ ಎತ್ತಿಹಿಡಿದದ ಸಂಗತಿ ಈಗಾಗಲೇ ವಿದಿತ. ಆದಾಗ್ಯೂ, ಈ ಸಂಬಂಧದ ಕಾನೂನಿನ ಒಂದಷ್ಟು ವಿವಾದಾಸ್ಪದ ಉಪಬಂಧಗಳನ್ನು ರದ್ದುಮಾಡುವುದರ ಜತೆಜತೆಗೆ, ಸದರಿ ಯೋಜನೆಯ ವ್ಯಾಪ್ತಿಯ ಮೇಲೆ ಕಟ್ಟುನಿಟ್ಟಿನ ಮಿತಿಗಳನ್ನೂ ಹೇರಿತು ಎಂಬುದು ಗಮನಿಸಬೇಕಾದ ಸಂಗತಿ. ಆಧಾರ್ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಕಾರ್ಯತಃ ಹೇಳುವುದೇನನ್ನು ಎಂಬುದನ್ನು ಇಲ್ಲಿ ವಿಶ್ಲೇಷಿಸುವ ಪ್ರಯತ್ನ ಮಾಡಿದ್ದೇನೆ.

2009ರಲ್ಲಿ ಕಾರ್ಯಾರಂಭಗೊಂಡ ಆಧಾರ್ ಯೋಜನೆಯು ‘ಆಧಾರ್ (ಹಣಕಾಸು ಮತ್ತು ಇತರ ಅನುದಾನಗಳು, ಪ್ರಯೋಜನಗಳು ಹಾಗೂ ಸೇವೆಗಳ ಉದ್ದೇಶಿತ ವಿತರಣೆ) ಕಾಯ್ದೆ, 2016’ರ ಮೂಲಕ ಶಾಸನಾತ್ಮಕ ಮಾನ್ಯತೆಯನ್ನು ಪಡೆಯಿತು. ಸದರಿ ಯೋಜನೆಯ ಅನುಸಾರ, ಭಾರತದ ಪ್ರತಿಯೊಬ್ಬ ನಾಗರಿಕನಿಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಪರಿಕಲ್ಪನೆಯು ಖಾಸಗಿತನದ ಹಕ್ಕುಗಳಿಗೆ ಸಂಬಂಧಿಸಿದ ಅನೇಕ ಹೋರಾಟಗಳಿಗೆ ಕಾರಣವಾಯಿತೆನ್ನಬೇಕು. ತೀರ್ಪು ನೀಡಿದ ಐವರು ನ್ಯಾಯಮೂರ್ತಿಗಳ ಪೀಠದ ಪೈಕಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ (ಈಗ ಮಾಜಿ), ನ್ಯಾ. ಎ.ಎಂ. ಖಾನ್ವಿಲ್ಕರ್ ಹಾಗೂ ತೀರ್ಪು ಓದಿದ ನ್ಯಾ. ಎ.ಕೆ. ಸಿಕ್ರಿ ಅಭಿಪ್ರಾಯವು ನ್ಯಾ. ಭೂಷಣ್ ವ್ಯಕ್ತಪಡಿಸಿದ ಏಕಾಭಿಪ್ರಾಯದೊಂದಿಗೆ ಬಹುತೇಕವಾಗಿ ಸಹಮತ ವ್ಯಕ್ತಪಡಿಸುವಂತಿದ್ದರೆ, ನ್ಯಾ. ಡಿ.ವೈ. ಚಂದ್ರಚೂಡ್​ರದ್ದು ಭಿನ್ನಮತದ ತೀರ್ಪಾಗಿತ್ತು.

‘ಆಧಾರ್ ಯೋಜನೆಯು, ಖಾಸಗಿತನದ ಹಕ್ಕು ಮತ್ತು ಜೀವನದ ಹಕ್ಕಿನ ಸಾಂವಿಧಾನಿಕ ಖಾತ್ರಿಯ ಚೌಕಟ್ಟಿನ ವ್ಯಾಪ್ತಿಯೊಳಗೆ ಹೊಂದಿಕೊಳ್ಳುವಂತಿದೆಯೇ?’ ಎಂಬುದು ನ್ಯಾಯಪೀಠದ ಮುಂದೆ ಬಂದಿದ್ದ ಮೂಲಭೂತ ಪ್ರಶ್ನೆಗಳಲ್ಲಿ ಒಂದಾಗಿತ್ತು.

ಆಧಾರ್ ಯೋಜನೆಯನ್ನು ಪ್ರಶ್ನಿಸಿದ ಅಹವಾಲುದಾರರ ವಾದ ಹೀಗಿತ್ತು- ‘ಜನಕಲ್ಯಾಣ ಯೋಜನೆಗಳ ಉದ್ದೇಶಿತ ವಿತರಣೆಯನ್ನು ಖಾತ್ರಿಪಡಿಸುವುದು ಮತ್ತು ಸೋರಿಕೆಯನ್ನು ತಡೆಗಟ್ಟುವುದು ಸದರಿ ಯೋಜನೆಯ ಉದ್ದೇಶವಾಗಿರಬಹುದಾದರೂ, ಪ್ರಜಾಸತ್ತಾತ್ಮಕ ಸಮಾಜವೊಂದಕ್ಕೆ ಹಾನಿಕಾರಕವಾಗಿ ಪರಿಣಮಿಸಬಲ್ಲ ವಿಧಾನವೊಂದರಲ್ಲಿ ಅದರ ರಚನೆ/ವಿನ್ಯಾಸವು ಬಳಕೆಯಾಗಬಹುದು. ಏಕೆಂದರೆ, ಸದರಿ ಯೋಜನೆಯನುಸಾರ ಸಂಗ್ರಹಿಸಿ, ರೂಪಿಸಿ, ಉಳಿಸಿಕೊಳ್ಳಲಾದ ವ್ಯಕ್ತಿಯೊಬ್ಬನ ವೈಯಕ್ತಿಕ ಮಾಹಿತಿಯು ಕಣ್ಗಾವಲು ಮತ್ತು ವ್ಯಕ್ತಿತ್ವದ ವಿವರಗಳ ಸೃಷ್ಟಿಯೂ ಸೇರಿದಂತೆ ಹತ್ತು ಹಲವು ಕಾರಣಗಳಿಗೆ ಸಂಸ್ಕರಣೆಗೆ ಒಳಗಾಗಲು ಸಾಧ್ಯವಿದೆ. ಮಾಹಿತಿ ತಂತ್ರಜ್ಞಾನದ ಉದಯವಾದಾಗಿನಿಂದ, ಗಣಕೀಕರಣ ಪ್ರಕ್ರಿಯೆಯ ಬಲ/ಸಾಮರ್ಥ್ಯ ಅಗಾಧ ಮಟ್ಟಕ್ಕೆ ಬೆಳೆದಿರುವುದು ಗೊತ್ತಿರುವ ಸಂಗತಿಯೇ ಆದ್ದರಿಂದ, ಇಂದಿನ ದಿನಮಾನದಲ್ಲಿ ಇಂಥದೊಂದು ಸಾಧ್ಯತೆಯೇನೂ ಕಾಲ್ಪನಿಕವಲ್ಲ ಅಥವಾ ಅದನ್ನು ಅಲ್ಲಗಳೆಯುವಂತಿಲ್ಲ. ‘ಹಾನಿಕರವೇನಲ್ಲ’ ಎಂದು ತೋರಿದ್ದೇ ಶೋಷಣೆಗೆ ಮತ್ತು ಸಂವಿಧಾನವು ಖಾತ್ರಿಪಡಿಸಿರುವ ಹಕ್ಕುಗಳ ಕಸಿತಕ್ಕೆ ಅದು ಮೂಲವಾಗಬಹುದು. ಉತ್ಪನ್ನ/ಸೇವೆಯ ಪ್ರಚಾರಕ್ಕಾಗಿ ವ್ಯಕ್ತಿಯೊಬ್ಬನನ್ನು ಗುರಿಯಾಗಿಸಿಕೊಳ್ಳುವುದಕ್ಕೆ, ಆತನ ವೈಯಕ್ತಿಕ ಆಯ್ಕೆಗಳನ್ನು ಮಾರ್ಪಡಿಸುವುದಕ್ಕೆ ಮತ್ತು ತನ್ಮೂಲಕ ವ್ಯಕ್ತಿಗಳನ್ನು ಪರೋಕ್ಷವಾಗಿ ಹಿಡಿತದಲ್ಲಿಟ್ಟುಕೊಳ್ಳುವುದಕ್ಕೆ ಹೀಗೆ ಸಂಸ್ಕರಿಸಲ್ಪಟ್ಟ ಮಾಹಿತಿಯನ್ನು ಬಳಸಿಕೊಳ್ಳಬಹುದು’.

ಆಧಾರ್ ಕಾಯ್ದೆ ಮತ್ತು ಅದರಡಿಯಲ್ಲಿ ರೂಪಿಸಲಾಗಿರುವ ಕಟ್ಟುಪಾಡುಗಳ ಒಂದಿಡೀ ವ್ಯಾಪ್ತಿಯನ್ನು ಸದರಿ ಬಹುಮತಾಭಿಪ್ರಾಯದಲ್ಲಿ ನ್ಯಾ. ಸಿಕ್ರಿ ವಿಶ್ಲೇಷಿಸಿದ್ದಾರೆ. ವ್ಯಕ್ತಿಯೊಬ್ಬನ ಖಾಸಗಿತನ ಮತ್ತು ಘನತೆಯನ್ನು ರಕ್ಷಿಸಬೇಕಾದ ಅಗತ್ಯವನ್ನು ಗುರುತಿಸುವುದರ ಜತೆಜತೆಗೇ, ಆಧಾರ್ ಕಾಯ್ದೆಗೆ ಒದಗಿರುವ ಪ್ರಧಾನ ಸವಾಲನ್ನು ನಿರ್ಣಾಯಕವಾಗಿ ತಿರಸ್ಕರಿಸುವುದಕ್ಕೆಂದು ‘ಸಮುದಾಯದ ಘನತೆ’ ಎಂಬ ಪರಿಕಲ್ಪನೆಯನ್ನು ಅವರು ವಿಶದೀಕರಿಸಿದ್ದಾರೆ. ಸಮುದಾಯವೊಂದರ ಘನತೆಗೆ, ತನಗಾಗೇ ರೂಪಿಸಲಾದ ಕಲ್ಯಾಣ ಕಾರ್ಯಕ್ರಮಗಳೆಡೆಗಿನ ಅದರ ಹಕ್ಕಿನೊಂದಿಗೆ ಸಹಜವಾಗಿ ನಂಟಿರುತ್ತದೆ ಎಂದು ಸಮರ್ಥಿಸುವ ಮೂಲಕ ಅವರು ಈ ವಾದವನ್ನು ಪುಷ್ಟೀಕರಿಸಿದ್ದಾರೆ. ಆಧಾರ್ ಯೋಜನೆಯಡಿ ಸಂಗ್ರಹಿಸಲಾದ ದತ್ತಾಂಶವು ವ್ಯಕ್ತಿಯೊಬ್ಬನ ಖಾಸಗಿತನಕ್ಕೆ ಒದಗುವ ಕನಿಷ್ಠತಮ ಅತಿಕ್ರಮಣಕ್ಕೆ ಕಾರಣವಾದರೆ, ಕಲ್ಯಾಣ ಕಾರ್ಯಕ್ರಮಗಳಿಗಾಗಿನ ಆಧಾರ್​ನ ಕಡ್ಡಾಯ ಸ್ವರೂಪವು, ಸೋರಿಕೆ ಮತ್ತು ಭ್ರಷ್ಟಾಚಾರದಂಥ ಪಿಡುಗುಗಳನ್ನು ನಿಭಾಯಿಸುವುದರ ಜತೆಜತೆಗೆ ಜೀವನನಿರ್ವಹಣೆಗೆ ಕಷ್ಟಪಡುತ್ತಿರುವ ಸಮಾಜದ ಕೆಲವೊಂದು ವರ್ಗಗಳ ಜನರಿಗೆ ಮಹತ್ತರ ಪ್ರಯೋಜನಗಳ ಖಾತ್ರಿನೀಡುತ್ತದೆ ಎಂದೂ ಅವರು ಸಮರ್ಥಿಸಿದ್ದಾರೆ. ಹೀಗೆ, ಅವರ ಅಭಿಪ್ರಾಯದಲ್ಲಿ, ವ್ಯಕ್ತಿಯೊಬ್ಬನ ಖಾಸಗಿತನಕ್ಕೆ ಒದಗಿದ ಅತಿಕ್ರಮಣವನ್ನು, ಸಮಾಜವೊಂದರ ಸಾರ್ವತ್ರಿಕ ಘನತೆಯ ವರ್ಧನೆಗಾಗಿ ಮೀಸಲಾದ ಪ್ರಯೋಜನವು ಮೀರಿಸಿಬಿಡುತ್ತದೆ ಮತ್ತು ಆಧಾರ್ ವಿನ್ಯಾಸದಿಂದ ಹೊರಗುಳಿಯಲು ಬಯಸುವವರಿಗೆ, ಒಂದೊಮ್ಮೆ ಕಲ್ಯಾಣ ಕಾರ್ಯಕ್ರಮದ ಪ್ರಯೋಜನದ ಅಗತ್ಯವಿಲ್ಲದಿದ್ದಲ್ಲಿ, ಹಾಗೆ ಹೊರಗುಳಿಯುವಂಥ ಹಕ್ಕಿರುತ್ತದೆ.

ಸರ್ಕಾರಿ ಅನುದಾನಗಳನ್ನು ಪಡೆಯಲು ಆಧಾರ್ ಚೀಟಿ ಅಗತ್ಯವೇ ಎಂಬ ಚರ್ಚಾವಿಷಯವನ್ನಿಟ್ಟುಕೊಂಡು ಬಹುಮತ-ತೀರ್ಪ ನೀಡಿದ ಸ್ಪಷ್ಟೀಕರಣ ಹೀಗಿತ್ತು- ‘ಕೇಂದ್ರ ಸರ್ಕಾರದ್ದೇ ಆಗಿರಲಿ ಅಥವಾ ರಾಜ್ಯ ಸರ್ಕಾರದ್ದೇ ಆಗಿರಲಿ, ಕೆಲವೊಂದು ಸರ್ಕಾರಿ ಪ್ರಯೋಜನಗಳು, ಸೇವೆಗಳು ಅಥವಾ ಅನುದಾನಗಳನ್ನು ಪಡೆಯಲು ಯಾವುದೇ ವ್ಯಕ್ತಿಯು ಒಂದು ಆಧಾರ್ ಸಂಖ್ಯೆ ಅಥವಾ ದಾಖಲಾತಿ ಪುರಾವೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಪ್ರಸಕ್ತ ಸಂದರ್ಭದಲ್ಲಿ, ‘ಪ್ರಯೋಜನಗಳು’ ಮತ್ತು ‘ಸೇವೆಗಳು’ ಎಂಬ ಪರಿಕಲ್ಪನೆಗಳು ಸಮಾಜದ ‘ನಿರ್ದಿಷ್ಟ ಸೌಕರ್ಯವಂಚಿತ ವರ್ಗವೊಂದಕ್ಕೆ’ ಸರ್ಕಾರದಿಂದ ಒದಗುವ ಪ್ರಯೋಜನದ ನೀಡಿಕೆಯನ್ನು ಒಳಗೊಂಡಿರುವಂಥವಾಗಿರುತ್ತವೆ. ಸರಳವಾಗಿ ಹೇಳುವುದಾದರೆ, ಇವು ಅನುದಾನಗಳು ಮತ್ತು ಜನಕಲ್ಯಾಣ ಕಾರ್ಯಕ್ರಮಗಳಾಗಿದ್ದು, ಇವಕ್ಕೆ ತಗುಲುವ ವೆಚ್ಚವು ಭಾರತದ ಸಂಚಿತ ನಿಧಿಯಿಂದ ಒದಗುತ್ತದೆ. ಹೀಗಾಗಿ, ‘ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ’ದ (Unique Identification Authority of India- UIDAI) ವತಿಯಿಂದ ತಮ್ಮ ಗುರುತು/ಚಹರೆಯು ಯಶಸ್ವಿಯಾಗಿ ಪ್ರಮಾಣೀಕರಿಸಲ್ಪಟ್ಟ ನಂತರವಷ್ಟೇ ಜನರು ಪಡಿತರ, ರಸಗೊಬ್ಬರ ಅನುದಾನ, ವೃದ್ಧಾಪ್ಯ/ದೈಹಿಕ ಅಸಾಮರ್ಥ್ಯ ಸಂಬಂಧಿತ ಪಿಂಚಣಿಯಂಥ ಸರ್ಕಾರಿ ಅನುದಾನಗಳು/ಕಲ್ಯಾಣ ಕಾರ್ಯಕ್ರಮದ ಪ್ರಯೋಜನಗಳನ್ನು ಸ್ವೀಕರಿಸಲು ಸಾಧ್ಯವಿರುತ್ತದೆ. ಇಂಥ ಯಾವುದೇ ಪ್ರಯೋಜನ ನೀಡುತ್ತಿರುವ ಸಂಸ್ಥೆಯು, ಉದ್ದೇಶಿತ ವ್ಯಕ್ತಿಯ ಬಯೋಮೆಟ್ರಿಕ್ ಮಾಹಿತಿ ಮತ್ತು ಆಧಾರ್/ನೋಂದಣಿ ಸಂಖ್ಯೆಯನ್ನು ಸಂಗ್ರಹಿಸಿದ ನಂತರ, ಪ್ರಮಾಣೀಕರಣದ ಕೋರಿಕೆಯೊಂದನ್ನು ರೂಪಿಸಬೇಕಾಗುತ್ತದೆ.

ನೀಟ್, ಸಿಬಿಎಸ್​ಇ, ಯುಜಿಸಿ ಪರೀಕ್ಷೆಗಳು, ವಿದ್ಯಾರ್ಥಿ ವೇತನಗಳು, ಶಾಲೆ ಮತ್ತು ಅಂಥ ಮತ್ತಾವುದೇ ಬಾಬತ್ತುಗಳು ‘ಅನುದಾನಗಳು, ಪ್ರಯೋಜನಗಳು ಮತ್ತು ಸೇವೆಗಳು’ ಎಂಬ ಹಣೆಪಟ್ಟಿಗೆ ಅರ್ಹತೆ ಪಡೆಯುವುದಿಲ್ಲ ಎಂದು ಕೂಡ ನ್ಯಾಯಾಲಯ ವಿಶದೀಕರಿಸಿದೆ.

ಆಧಾರ್ ಸಂಖ್ಯೆಯನ್ನು ‘ಕಾಯಂ ಖಾತೆ ಸಂಖ್ಯೆ’ (ಪಾನ್) (Permanent Account Number- PAN) ಜತೆಗೆ ಸಂಯೋಜಿಸುವ ಕುರಿತಾದ ‘ಆದಾಯ ತೆರಿಗೆ ಕಾಯ್ದೆ, 1961’ರ 139ಎಎ ಪರಿಚ್ಛೇದದ ಸಾಂವಿಧಾನಿಕ ಸಿಂಧುತ್ವವನ್ನು ಬಹುಮತ-ತೀರ್ಪ ಎತ್ತಿಹಿಡಿದಿದೆ. ಅಂದರೆ, ‘ಪಾನ್’ಗಾಗಿ ಅರ್ಜಿ ಸಲ್ಲಿಸುವಾಗ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವಾಗ ಆಧಾರ್ ಸಂಖ್ಯೆ/ನೋಂದಣಿ ಸಂಖ್ಯೆ ಒದಗಿಸುವುದು ಕಡ್ಡಾಯ.

ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಕಡ್ಡಾಯ ಜೋಡಣೆಯ ವಿರುದ್ಧ ಅರ್ಜಿದಾರರ ವಾದ ಹೀಗಿತ್ತು- ‘ಇಂಥ ಕಡ್ಡಾಯ ಜೋಡಣೆಯಿಂದಾಗಿ ಭಾರತವು ಒಂದು ನಿರಂಕುಶ ಪ್ರಭುತ್ವವಾಗಿ ಮಾರ್ಪಟ್ಟು, ವ್ಯಕ್ತಿಯೊಬ್ಬನು ಬ್ಯಾಂಕ್ ಖಾತೆಯ ನಿರ್ವಹಣೆ, ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ, ಸರ್ಕಾರಿ ಪಿಂಚಣಿಯ ಸ್ವೀಕಾರ, ಮೊಬೈಲ್ ಫೋನ್ ನಿರ್ವಹಣೆಯಂಥ ವಾಡಿಕೆಯ ಚಟುವಟಿಕೆಗಳನ್ನು, ಸರ್ಕಾರದ ಗಮನಕ್ಕೆ ತಾರದೆಯೇ ನಿರ್ವಹಿಸಲಾಗದಂಥ ಪರಿಸ್ಥಿತಿ ಉದ್ಭವಿಸುತ್ತದೆ’. ಆದರೆ, ಭಯೋತ್ಪಾದನೆ, ಅಪರಾಧ ಚಟುವಟಿಕೆಗಳ ತಡೆ ಹಾಗೂ ರಾಷ್ಟ್ರದ ಭದ್ರತೆಯಂಥ ರಾಷ್ಟ್ರೀಯ ಹಿತಾಸಕ್ತಿ ಈ ಜೋಡಣೆಯ ಹಿನ್ನೆಲೆಯಲ್ಲಿದೆ ಎಂದು ಕೇಂದ್ರ ಸರ್ಕಾರವು ವಾದಿಸಿತು. ಈ ನಿಟ್ಟಿನಲ್ಲಿ ನ್ಯಾಯಪೀಠದ ಬಹುಮತಾಭಿಪ್ರಾಯ ಹೀಗಿತ್ತು- ‘ಅಕ್ರಮ ಹಣ ವರ್ಗಾವಣೆ ತಡೆ (ದಾಖಲೆಗಳ ನಿರ್ವಹಣೆ) ನಿಯಮಗಳು, 2005ರ ನಿಯಮ 9 ಮತ್ತು ಅದರಡಿಯಲ್ಲಿ ನೀಡಲಾಗಿರುವ ಪ್ರಕಟಣೆಗಳು ಹಾಗೂ ವ್ಯಕ್ತಿಯೊಬ್ಬನ ಬ್ಯಾಂಕ್ ಖಾತೆಗೆ ಮತ್ತು ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆಯನ್ನು ಕಡ್ಡಾಯವಾಗಿಸಿರುವ, 2017ರ ಮಾರ್ಚ್ 23ರ ದೂರಸಂಪರ್ಕ ಇಲಾಖೆಯ ಸುತ್ತೋಲೆ- ಈ ಎರಡೂ ಕ್ರಮವಾಗಿ ಪ್ರಮಾಣಾನುಗುಣತೆಯ ಪರೀಕ್ಷೆಯನ್ನು ನೆರವೇರಿಸುವಲ್ಲಿ ವಿಫಲವಾಗಿವೆ ಮತ್ತು ತನ್ಮೂಲಕ ಬ್ಯಾಂಕಿಂಗ್ ವಿವರಗಳವರೆಗೆ ವಿಸ್ತರಣೆಗೊಳ್ಳುವ ವ್ಯಕ್ತಿಯೊಬ್ಬನ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತವೆ; ಆದ್ದರಿಂದ ಇವು ಅಸಾಂವಿಧಾನಿಕವಾಗಿವೆ. ಹೀಗಾಗಿ, ಇನ್ನು ಮುಂದೆ ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಸಂಖ್ಯೆಗಳನ್ನು ಆಧಾರ್ ಸಂಖ್ಯೆಗೆ ಜೋಡಿಸುವಂತೆ ಬ್ಯಾಂಕುಗಳು ಹಾಗೂ ದೂರಸಂಪರ್ಕ ನಿರ್ವಾಹಕರು ಗ್ರಾಹಕರನ್ನು ಒತ್ತಾಯಿಸುವಂತಿಲ್ಲ. ಅದೇ ರೀತಿಯಲ್ಲಿ, ಆಧಾರ್ ಸಂಖ್ಯೆಯನ್ನು ಒದಗಿಸಲು ನಿರಾಕರಿಸುವ ವ್ಯಕ್ತಿಗಳಿಗೆ ಅವು ಸೇವೆಗಳನ್ನು ನಿರಾಕರಿಸುವಂತಿಲ್ಲ. ಆಧಾರ್ ಸಂಖ್ಯೆಯೊಂದಿಗೆ ಜೋಡಣೆಗೊಂಡಿರುವ ಅಸ್ತಿತ್ವದಲ್ಲಿರುವ ಖಾತೆಗಳು ಮತ್ತು ಮೊಬೈಲ್ ಸಂಖ್ಯೆಗಳಿಗೆ ಏನಾಗುತ್ತದೆ ಎಂಬುದು ಸಂದಿಗ್ಧವಾಗಿ ಉಳಿದುಕೊಂಡಿದೆ’.

ಪ್ರಮಾಣೀಕರಣದ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಕುರಿತಾದ ಕಾಲಮಿತಿಗಳ ಬಗ್ಗೆ ನ್ಯಾಯಪೀಠದ ಬಹುಮತಾಭಿಪ್ರಾಯ ಹೀಗಿತ್ತು- ‘ಆಧಾರ್ ವಿನ್ಯಾಸದಡಿ ಸಂಗ್ರಹಿಸಿಟ್ಟುಕೊಳ್ಳಲಾಗಿರುವ ದತ್ತಾಂಶವು 6 ತಿಂಗಳಿಗಿಂತ ಹೆಚ್ಚಿನ ಕಾಲಾವಧಿವರೆಗೆ ಇರಬಾರದು ಮತ್ತು ಐದು ವರ್ಷಗಳ ಕಾಲಾವಧಿವರೆಗೆ ದತ್ತಾಂಶ ಸಂಗ್ರಹಣೆಗೆ ಅನುವುಮಾಡಿಕೊಡುವ ಪ್ರಸಕ್ತ ನಿಯಮವು ಅಸಾಂವಿಧಾನಿಕವಾಗಿದೆ. ಇದಲ್ಲದೆ, ಆಧಾರ್ ಗುರುತಿನ ಚೀಟಿಯಲ್ಲಿನ ವ್ಯಕ್ತಿಯ ಬಯೋಮೆಟ್ರಿಕ್ ವಿವರ ಮಾತ್ರವಲ್ಲದೆ, ಉಳಿದ ವಿವರಗಳನ್ನು ಕೂಡ (Mಛಿಠಿಚಛಚಠಿಚ) ಉಳಿಸಿಟ್ಟುಕೊಳ್ಳುವುದು ನಿಷಿದ್ಧವಾಗಿದೆ ಹಾಗೂ ಹೀಗೆ ಉಳಿಸಿಟ್ಟುಕೊಳ್ಳುವುದಕ್ಕೆ ಅವಕಾಶ ಕಲ್ಪಿಸುವ ನಿಯಮಗಳು ಅಸಾಂವಿಧಾನಿಕ. ಆಧಾರ್ ಕಾರ್ಯಕ್ರಮದಲ್ಲಿ ಮಕ್ಕಳನ್ನು ನೋಂದಾಯಿಸುವಾಗ ಅವರ ಪಾಲಕರ ಅನುಮತಿ ಪಡೆಯಬೇಕಾದ್ದು ಅತ್ಯಗತ್ಯ. ಜತೆಗೆ, ಹಾಗೆ ನೋಂದಾಯಿಸಲ್ಪಟ್ಟ ಮಕ್ಕಳು ಒಂದು ವೇಳೆ ಆಧಾರ್ ಅಗತ್ಯವಿರುವಂಥ ಯಾವುದೇ ಪ್ರಯೋಜನಗಳನ್ನು ಪಡೆಯುವುದಕ್ಕೆ ಬಯಸದಿದ್ದಲ್ಲಿ, ತಾವು ಪ್ರಾಪ್ತ ವಯಸ್ಸಿಗೆ ಬಂದ ನಂತರ (ಅಂದರೆ ಭಾರತದಲ್ಲಿ ಪ್ರಸ್ತುತ ಇದು 18ರ ವಯೋಮಾನವಾಗಿದೆ) ಆಧಾರ್ ಯೋಜನೆಯಿಂದ ಹೊರಬರುವಂಥ ಆಯ್ಕೆಯನ್ನು ಹೊಂದಿರುತ್ತಾರೆ. ಇನ್ನು ಶಾಲಾ ಪ್ರವೇಶಾತಿಗೆ ಆಧಾರ್ ಕಡ್ಡಾಯವಾಗಿರುವುದಿಲ್ಲ, ಏಕೆಂದರೆ ಶಾಲಾ ಪ್ರವೇಶಾತಿ ಎಂಬುದು ಒಂದು ಸೇವೆಯೂ ಅಲ್ಲ ಅನುದಾನವೂ ಅಲ್ಲ. ಅಷ್ಟೇ ಅಲ್ಲ, 6ರಿಂದ 14ರ ವಯೋಮಾನದ ವ್ಯಾಪ್ತಿಯಲ್ಲಿ ಬರುವ ಮಗುವೊಂದು ಸಂವಿಧಾನದ ವಿಧಿ 21ಎ ಅನುಸಾರ ಶಿಕ್ಷಣದ ಮೂಲಭೂತ ಹಕ್ಕನ್ನು ಹೊಂದಿರುವುದರಿಂದ, ಶಾಲಾ ಪ್ರವೇಶಾತಿಯನ್ನು ಒಂದು ಪ್ರಯೋಜನ ಎಂಬುದಾಗಿಯೂ ಪರಿಗಣಿಸಲಾಗದು. ಇದಲ್ಲದೆ, ಒಂದು ವೇಳೆ ಕೆಲವೊಂದು ಕಾರಣದಿಂದಾಗಿ ಆಧಾರ್ ಸಂಖ್ಯೆ ನೀಡಲು ಮಗುವಿಗೆ ಸಾಧ್ಯವಾಗದಿದ್ದಲ್ಲಿ, ಅಂಥ ಮಗುವಿಗೆ ಈ ಯಾವುದೇ ಯೋಜನೆಗಳ ಪ್ರಯೋಜನದ ನೀಡಿಕೆಯನ್ನು ನಿರಾಕರಿಸುವಂತಿಲ್ಲ ಮತ್ತು ಬೇರಾವುದೇ ದಾಖಲೆಪತ್ರಗಳ ಆಧಾರದ ಮೇಲೆ ಮಗುವಿನ ಗುರುತು/ಚಹರೆಯನ್ನು ಪರಿಶೀಲಿಸುವ/ತಾಳೆ ನೋಡುವ ಮೂಲಕ ಮಗುವಿಗೆ ಸಂಬಂಧಿತ ಪ್ರಯೋಜನವನ್ನು ನೀಡಬೇಕು’. ಈ ವಿವರಣೆಯೊಂದಿಗೆ ನಿಮಗೆ ಸುಪ್ರೀಂ ಕೋರ್ಟ್ ತೀರ್ಪಿನ ಒಟ್ಟಾರೆ ಚಿತ್ರಣ ದಕ್ಕಿದೆ ಎಂದುಕೊಳ್ಳುತ್ತೇನೆ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)