ಜನರು ಪ್ರಾಣಿ ಹಿಂಸೆ ತೊರೆಯುವುದು ಅಗತ್ಯ

ಹಾಂಗ್​ಕಾಂಗ್ ಬೆಳವಣಿಗೆಗಳಿಂದಾಗಿ ಸುದ್ದಿಯಲ್ಲಿರುವ ಚೀನಾದಲ್ಲಿ ಇತ್ತೀಚೆಗೆ ನಡೆದ ಪ್ರಕರಣವೊಂದು ಹೆಚ್ಚು ಸದ್ದು ಮಾಡಲೇ ಇಲ್ಲ. ಚೀನಾದಲ್ಲಿನ ವಾರ್ಷಿಕ ಯುಲಿನ್ ನಾಯಿಮಾಂಸ ಹಬ್ಬದಲ್ಲಿ ನಡೆದ ಸಾವಿರಾರು ಪ್ರಾಣಿಗಳ ವಧಾಕಾಂಡ ಅತ್ಯಂತ ಮನಕಲಕುವ ಘಟನೆಯಾಗಿದೆ.

2009ರಲ್ಲಿ ಆರಂಭವಾದ ಈ ಹಬ್ಬವನ್ನು ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಆಚರಿಸಲಾಗುತ್ತದೆ. ಈ ಬಾರಿ ಅದು ಜೂನ್ 21ರಂದು ಆರಂಭವಾಗಿ 30ಕ್ಕೆ ಮುಕ್ತಾಯವಾಯಿತು. ಹಬ್ಬದ ಅಂಗವಾಗಿ ಸಾವಿರಾರು ನಾಯಿ ಮತ್ತು ಬೆಕ್ಕುಗಳನ್ನು ತಿನ್ನಲಿಕ್ಕಾಗಿ ಸಾಯಿಸಲಾಯಿತು. ಈ ಹಬ್ಬ ಆರಂಭವಾಗುವುದಕ್ಕೂ ಮುಂಚೆ ಯುಲಿನ್​ನಲ್ಲಿ ಪ್ರಾಣಿಗಳನ್ನು ಸಾಮೂಹಿಕವಾಗಿ ಕೊಲ್ಲುವ ಪದ್ಧತಿ ಇರಲಿಲ್ಲ ಎಂಬುದು ‘ಹ್ಯುಮೇನ್ ಸೊಸೈಟಿ ಇಂಟರ್​ನ್ಯಾಷನಲ್’ ಸಂಘಟನೆಯ ಅಭಿಪ್ರಾಯ.

ಈ ಬಾರಿಯ ನಾಯಿ ಹಬ್ಬದ ಕುರಿತು ಬಹಿರಂಗವಾಗಿರುವ ಒಂದು ವಿಡಿಯೋ ತುಣುಕು, ಹೆಚ್ಚಾಗಿ ಬೀದಿ ನಾಯಿಗಳು ಅಥವಾ ಕದ್ದು ತಂದ ಸಾಕುನಾಯಿಗಳನ್ನು ಸಣ್ಣ ಸಣ್ಣ ಪಂಜರಗಳಲ್ಲಿ ಕೂಡಿ ಹಾಕಿದ್ದನ್ನು ತೋರಿಸಿದೆ. ಆ ಮೂಕಪ್ರಾಣಿಗಳಿಗೆ ಸರಿಯಾಗಿ ನಿಲ್ಲಲಿಕ್ಕೂ ಉಸಿರಾಡಲಿಕ್ಕೂ ಆಗುತ್ತಿರಲಿಲ್ಲ. ನಂತರ ಅವುಗಳನ್ನು ಗುಯಾಂಕ್ಸಿ ಪ್ರಾಂತ್ಯದ ಯುಲಿನ್​ಗೆ ವಧೆಗಾಗಿ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಅವುಗಳನ್ನು ಕತ್ತಲ ಕೋಣೆಯೊಂದರಲ್ಲಿ ಕೂಡಿ ಹಾಕಿ ಸೂಕ್ತ ಆಹಾರ ಮತ್ತು ನೀರನ್ನು ಕೊಡದೆ ಸತಾಯಿಸಲಾಯಿತು. ಜಗತ್ತಿನಾದ್ಯಂತ ನಾಯಿಮಾಂಸ ಸೇವನೆಯ ಖಯಾಲಿ ಕಡಿಮೆಯಾಗುತ್ತಿರುವಾಗ ಈ ಹಬ್ಬ ಮತ್ತು ಅದರ ಕ್ರೌರ್ಯಗಳು ಇನ್ನೂ ಅಸ್ತಿತ್ವದಲ್ಲಿದೆಯೆನ್ನುವುದು ನಿಜಕ್ಕೂ ಖೇದದ ಸಂಗತಿ.

ಭಾರತದಲ್ಲೂ ಹೆಚ್ಚುತ್ತಿರುವ ಪ್ರಾಣಿಹಿಂಸೆ: ಪ್ರಾಣಿಹಿಂಸೆಯ ಪ್ರಮಾಣ ಭಾರತದಲ್ಲಿ ಕೂಡ ಹೆಚ್ಚುತ್ತಿದ್ದು ಈ ವಿಚಾರದಲ್ಲಿ ಜವಾಬ್ದಾರಿ ಹೊರಲು ಯಾರೂ ಸಿದ್ಧರಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯ ಒಂದು ಮೆಟ್ರೊ ಸ್ಟೇಷನ್ ಹೊರಗೆ ಒಬ್ಬ ವ್ಯಕ್ತಿ ನಾಯಿಯೊಂದರ ಮೇಲೆ ದಾಳಿ ಮಾಡಿ ಮರಿಯನ್ನು ಕೊಲ್ಲುವ ಭೀಕರ ಘಟನೆಯ ಸಿಸಿಟಿವಿ ದೃಶ್ಯಗಳ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಕರ್ನಾಟಕದ ಒಂದು ಊರಿನಲ್ಲಿ ಒಬ್ಬ ಮಹಿಳೆ ಎಂಟು ನಾಯಿ ಮರಿಗಳನ್ನು ಕಲ್ಲಿನಿಂದ ಹೊಡೆದು ಸಾಯಿಸಿದ ಪ್ರಕರಣವೂ ವರದಿಯಾಗಿದೆ. ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಆಗ ತಾನೇ ಹುಟ್ಟಿದ ಐದು ನಾಯಿ ಮರಿ ಮತ್ತು ತಾಯಿ ನಾಯಿ ಮೇಲೆ ಆಸಿಡ್ ಸುರಿದ ಅಮಾನವೀಯ ಘಟನೆಯೂ ನಡೆದಿದೆ. ಬೀದಿ ನಾಯಿಯೊಂದನ್ನು ಬರ್ಬರವಾಗಿ ಹೊಡೆದು ಅದರ ಒಂದು ಕಣ್ಣು ದೃಷ್ಟಿ ಕಳೆದುಕೊಳ್ಳಲು ಕಾರಣವಾದ ಟ್ರಾಫಿಕ್ ಪೊಲೀಸ್ ಅಧಿಕಾರಿಯನ್ನು ಬಂಧಿಸಿದ ಪ್ರಕರಣ ವರದಿಯಾಗಿರುವುದು ಮಹಾರಾಷ್ಟ್ರದಿಂದ. ತೆಲಂಗಾಣದ ಹಳ್ಳಿಯೊಂದರಲ್ಲಿ ನಾಯಿಕಾಟ ಜಾಸ್ತಿಯಾಗಿದೆ ಎಂದು ನಿವಾಸಿಗಳು ದೂರಿದ್ದರಿಂದ ಅಲ್ಲಿನ ಸರಪಂಚ ಸುಮಾರು 50 ನಾಯಿಗಳನ್ನು ವಿಷವುಣಿಸಿ ಸಾಯಿಸಿದ ದುರಂತವೂ ನಡೆದಿದೆ.

ಮರೆಯಾಗುತ್ತಿರುವ ಮಾನವೀಯತೆ: ವರದಿಯಾಗಿರುವ ಇಂಥ ಘಟನೆಗಳು ಸೇರಿ ಈ ಎಲ್ಲ ಪ್ರಕರಣಗಳು ಇತರ ಜೀವಿಗಳ ಬಗ್ಗೆ ಮಾನವೀಯತೆ ಮತ್ತು ಗೌರವದ ಕೊರತೆಯನ್ನು ತೋರಿಸುವುದು ಮಾತ್ರವಲ್ಲದೆ ಅಪರಾಧಿಗಳ ಹುಚ್ಚಾಟ ಹಾಗೂ ಹಿಂಸಾರತಿ (ಸ್ಯಾಡಿಸ್ಟಿಕ್) ಮನೋಭಾವಕ್ಕೂ ಕನ್ನಡಿ ಹಿಡಿಯುತ್ತದೆ.

ಮನುಷ್ಯರಿಗೆ ಹಿಂಸೆ ನೀಡುವುದು ಮತ್ತು ಮಾನವ ಹತ್ಯೆಯನ್ನು ಅಪರಾಧವೆಂದು ನಾವು ಪರಿಗಣಿಸುತ್ತೇವೆಯಾದರೂ ನಮ್ಮ ಸುತ್ತಮುತ್ತಲೂ ಪ್ರಾಣಿಗಳ ಮೇಲೆ ನಡೆಯುವ ಹಿಂಸೆಗೆ ನಮ್ಮಲ್ಲಿ ಬಹುತೇಕರು ಮೂಕವೀಕ್ಷಕರಾಗಿರುತ್ತೇವೆ. ಪ್ರಾಣಿಗಳಿಗೆ ಹಿಂಸೆ ನೀಡುವುದರಿಂದ ರಕ್ಷಿಸುವ ಕಾನೂನುಗಳು ನಮ್ಮ ದೇಶದಲ್ಲಿ ಇವೆಯಾದರೂ ಅವುಗಳು ಎಷ್ಟು ಪರಿಣಾಮಕಾರಿಯಾಗಿವೆ ಎನ್ನುವುದು ಪ್ರಶ್ನಾರ್ಹ.

ಎಲ್ಲ ಜೀವಿಗಳನ್ನು ಗೌರವ ಮತ್ತು ಅನುಕಂಪದಿಂದ ಕಾಣುವುದು ಭಾರತೀಯ ಪ್ರಜೆಗಳ ಕರ್ತವ್ಯ ಎಂದು ಹೇಳುವ ಮೂಲಕ ಭಾರತೀಯ ಸಂವಿಧಾನ ಪ್ರಾಣಿಗಳ ಜೀವ ಮತ್ತು ಕಲ್ಯಾಣವನ್ನು ಮಾನ್ಯ ಮಾಡುತ್ತದೆ ಎನ್ನುವುದನ್ನು ಇಲ್ಲಿ ಗಮನಿಸಬೇಕು. ವನ್ಯಪ್ರಾಣಿಗಳನ್ನು ಸಂರಕ್ಷಿಸಬೇಕು ಹಾಗೂ ಎಲ್ಲ ಜೀವಿಗಳಿಗೆ ಅನುಕಂಪ ತೋರಬೇಕು ಎಂದು ಸಂವಿಧಾನದ 51 ಎ (ಜಿ) ವಿಧಿ ಹೇಳುತ್ತದೆ. ಆಧುನಿಕ ಹಾಗೂ ವೈಜ್ಞಾನಿಕ ರಿತಿಯಲ್ಲಿ ಕೃಷಿ ಮತ್ತು ಪಶುಪಾಲನೆ ಮಾಡುವುದು ಸರ್ಕಾರದ ಕರ್ತವ್ಯ. ತಳಿಗಳ ಸಂರಕ್ಷಣೆ ಮತ್ತು ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳುವುದು, ದನ, ಕರುಗಳು ಮತ್ತು ಹಾಲು ನೀಡುವ ಮತ್ತು ಬರಡು ಹಸುಗಳನ್ನು ವಧಿಸುವುದನ್ನು ನಿಷೇಧಿಸುವುದು ಸರ್ಕಾರದ ಕರ್ತವ್ಯ ಎಂಬುದು ಆರ್ಟಿಕಲ್ 48ರ ನಿರ್ದೇಶನವಾಗಿದೆ. ದೇಶದ ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವುದು ಹಾಗೂ ಸುಧಾರಿಸುವುದು ಸರ್ಕಾರದ ಕರ್ತವ್ಯ ಎಂದು 48ಎ ಹೇಳುತ್ತದೆ. ಜಾನುವಾರುಗಳನ್ನು ರೋಗರುಜಿನಗಳಿಂದ ಕಾಪಾಡುವುದು ಮತ್ತು ಪಶುವೈದ್ಯ ತರಬೇತಿ ನೀಡಿಕೆ ಕೂಡ ಸರ್ಕಾರದ ಹೊಣೆ ಎಂದು ಸಂವಿಧಾನದ ಏಳನೇ ಶೆಡ್ಯೂಲ್​ನಲ್ಲಿ ಸೂಚಿಸಲಾಗಿದೆ. ಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ತಡೆಯುವ, ವನ್ಯಜೀವಿಗಳು ಹಾಗೂ ಹಕ್ಕಿಗಳನ್ನು ಸಂರಕ್ಷಿಸುವ ಹಕ್ಕು ಮತ್ತು ಅಧಿಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸಮವರ್ತಿ ಪಟ್ಟಿ ಹೇಳುತ್ತದೆ.

‘ಪ್ರಾಣಿ ಹಿಂಸೆ ತಡೆ ಕಾನೂನು-1960’ ಈ ನಿಟ್ಟಿನಲ್ಲಿ ಒಂದು ಮಹತ್ವದ ಕಾನೂನು ಆಗಿದ್ದು ದೇಶದಾದ್ಯಂತ ಜಾರಿಯಲ್ಲಿದೆ. ಯಾವುದೇ ಪ್ರಾಣಿ ಪಕ್ಷಿಗಳಿಗೆ ಹೊಡೆಯುವುದು, ಒದೆಯುವುದು, ಪ್ರಾಣಿಗಳನ್ನು ಹೆಚ್ಚು ಪ್ರಮಾಣದಲ್ಲಿ ಹೇರುವುದು, ಅಧಿಕ ವೇಗದಲ್ಲಿ ಸಾಗಿಸುವುದು, ನೋವುಂಟು ಮಾಡುವ ಯಾವುದೇ ಕೃತ್ಯ ಎಸಗುವುದು ಈ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.

ಜಲ್ಲಿಕಟ್ಟು ಪ್ರಕರಣ: ಜಲ್ಲಿಕಟ್ಟು ಕ್ರೀಡೆಯಲ್ಲಿ ಪಾಲ್ಗ್ಗೊ್ಳುವ ಹೋರಿಗಳನ್ನು ರೊಚ್ಚಿಗೆಬ್ಬಿಸಲು ಅವುಗಳ ಕಣ್ಣುಗಳಿಗೆ ಉರಿತರುವ ವಸ್ತುಗಳನ್ನು ಹಾಕುವುದು ಹಾಗೂ ಅವುಗಳ ಗಂಟಲಿಗೆ ಮದ್ಯವನ್ನು ಸುರಿಯುವುದು 1960ರ ಈ ಕಾನೂನಿನ್ವಯ ಅಪರಾಧ ಎಂಬುದಾಗಿ 2014ರ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ವರ್ಸಸ್ ಎ. ನಾಗರಾಜ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಹೋರಿಗಳನ್ನು ತೀರಾ ಕಿರಿದಾದ ಜಾಗದಲ್ಲಿ ನಿಲ್ಲಿಸುವುದು, ರಣಬಿಸಿಲಿಗೆ ಒಡ್ಡುವುದು ಇವೇ ಮೊದಲಾದ ಅನನುಕೂಲಕರ ಸ್ಥಿತಿ ನಿರ್ವಿುಸುವುದು ಕೂಡ ಈ ಕಾನೂನಿನ ಉಲ್ಲಂಘನೆ ಎಂದು ಇದೇ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಯಾವುದೇ ಪ್ರಾಣಿಯನ್ನು ತೀರಾ ಚಿಕ್ಕ ಹಗ್ಗದಿಂದ ದೀರ್ಘ ಸಮಯ ಕಟ್ಟಿಹಾಕುವುದು ಕೂಡ ಕಾನೂನು-ವಿರೋಧಿ.

ಕಾನೂನಿನ 11ನೇ ಸೆಕ್ಷನ್​ನಡಿ ಹೇಳಲಾಗಿರುವುದನ್ನು ಉಲ್ಲಂಘಿಸಿ ಪ್ರಾಣಿಗಳಿಗೆ ಹಿಂಸೆ ನೀಡಿದ ಮೊದಲ ಸಂದರ್ಭದಲ್ಲಿ ಆ ಅಪರಾಧಿ ಕನಿಷ್ಠ ಹತ್ತರಿಂದ ಗರಿಷ್ಠ ಐವತ್ತು ರೂಪಾಯಿವರೆಗೆ ದಂಡ ತೆರಬೇಕು. ಮೊದಲ ಅಪರಾಧದ ಮೂರು ವರ್ಷಗಳ ನಂತರ ಎರಡನೇ ಉಲ್ಲಂಘನೆ ಮಾಡಿದಲ್ಲಿ ತೆರಬೇಕಾಗಿರುವ ದಂಡದ ಪ್ರಮಾಣ 25 ರೂ.ನಿಂದ ನೂರು ರೂ.ವರೆಗೆ ಅಥವಾ ಮೂರು ತಿಂಗಳ ಜೈಲು ಶಿಕ್ಷೆ. ಅಥವಾ ಈ ಎರಡನ್ನೂ ಅನುಭವಿಸಬೇಕಾಗುತ್ತದೆ.

1960ರಲ್ಲಿ ರೂಪಿಸಲಾಗಿರುವ ಈ ಕಾನೂನಿನ ಶಿಕ್ಷೆ ಪ್ರಮಾಣವನ್ನು ಇದುವರೆಗೂ ಪರಿಷ್ಕರಿಸದಿರುವುದು ಅಸಮಂಜಸ. ಇಲ್ಲಿ ವಿಧಿಸಲಾಗುವ ದಂಡ ಮತ್ತು ಶಿಕ್ಷೆ ಪ್ರಮಾಣ ತೀರಾ ಕಡಿಮೆಯಾಗಿದ್ದು ಪ್ರಾಣಿಗಳ ಮೇಲೆ ದೌರ್ಜನ್ಯ ಎಸಗುವುದರಿಂದ ಜನರನ್ನು ವಿಮುಖಗೊಳಿಸಲು ಅದು ಏನೇನೂ ಸಾಲದು ಎಂಬ ಅಭಿಪ್ರಾಯ ವ್ಯಾಪಕವಾಗಿದೆ.

ಕಾಡುಪ್ರಾಣಿಗಳು, ಪಕ್ಷಿಗಳು, ಮರಗಿಡಗಳಿಗೆ ರಕ್ಷಣೆ ನೀಡಲು ರೂಪಿಸಲಾಗಿರುವ ಇನ್ನೊಂದು ಕೇಂದ್ರ ಕಾಯಿದೆಯೆಂದರೆ 1972ರ ‘ವನ್ಯಜೀವಿ ಸಂರಕ್ಷಣಾ ಕಾನೂನು’. ಕೊಲ್ಲುವುದು, ಹಿಡಿಯುವುದು, ಬಲೆ ಬೀಸುವುದು, ವಿಷ ಹಾಕುವುದು ಅಥವಾ ಇನ್ನಾವುದೇ ರೀತಿಯಿಂದ ಯಾವುದೇ ವನ್ಯಪ್ರಾಣಿ ಅಥವಾ ಪಕ್ಷಿಗೆ ಹಾನಿ ಮಾಡುವುದನ್ನು ಈ ಕಾಯಿದೆ ನಿಷೇಧಿಸಿದೆ. ಪ್ರತಿ ರಾಜ್ಯದಲ್ಲಿ ವನ್ಯಪ್ರಾಣಿ ಸಲಹಾ ಮಂಡಳಿ ರಚಿಸಬೇಕೆಂದೂ ಈ ಕಾನೂನು ಹೇಳುತ್ತದೆ. ಪ್ರಾಣಿ ಬೇಟೆಯನ್ನು ನಿಷೇಧಿಸಿರುವ ಈ ಕಾನೂನು ಅದರ ಉಲ್ಲಂಘನೆಗೆ ಮೂರು ವರ್ಷ ಜೈಲುವಾಸ ವರೆಗಿನ ಶಿಕ್ಷೆಯನ್ನು ವಿಧಿಸಿದೆ. 25000 ರೂ. ವರೆಗೆ ದಂಡ ವಿಧಿಸಲೂ ಅದರಲ್ಲಿ ಅವಕಾಶವಿದೆ. ಅಥವಾ ದಂಡ ಮತ್ತು ಜೈಲು ಶಿಕ್ಷೆ ಎರಡನ್ನೂ ವಿಧಿಸಬಹುದಾಗಿದೆ.

ಪ್ರಾಣಿಗಳ ವಿರುದ್ಧ ಎಸಗಲಾಗುವ ಕ್ರೌರ್ಯದ ಪ್ರಮಾಣಕ್ಕೆ ಹೋಲಿಸಿದರೆ ವಿಧಿಸಲಾಗುವ ಶಿಕ್ಷೆ ಮತ್ತು ದಂಡ ತುಂಬ ಕಡಿಮೆಯಾಗಿದ್ದು ಅಪರಾಧ ಎಸಗುವುದರಿಂದ ಜನರನ್ನು ದೂರವಿರಿಸಲು ಅದು ನೆರವಾಗುವುದಿಲ್ಲ. ತೀರಾ ಸಾಂಕೇತಿಕ ದಂಡ ಮತ್ತು ಕಡಿಮೆ ಶಿಕ್ಷೆಯಿಂದಾಗಿ ಪ್ರಾಣಿಗಳ ವಿರುದ್ಧ ದೌರ್ಜನ್ಯ ಎಸಗುವವರು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ ಮತ್ತು ಅಂಥ ಅಪರಾಧಗಳು ಪುನರಾವರ್ತನೆಗೊಳ್ಳುತ್ತಲೇ ಇರುತ್ತವೆ. ಇದು ಅಂತಿಮವಾಗಿ ಕಾನೂನುಗಳು ವಿಫಲವಾಗುವಲ್ಲಿ ಪರ್ಯಾವಸಾನಗೊಳ್ಳುತ್ತದೆ.

ಬದಲಾಗಬೇಕಿದೆ ಮನೋಭಾವ: ಕಾನೂನುಗಳನ್ನು ಕಠಿಣಗೊಳಿಸಬೇಕು ಹಾಗೂ ಅದು ಬೀದಿ ಪ್ರಾಣಿಗಳಿಂದ ಹಿಡಿದು ಕಾಡು ಪ್ರಾಣಿವರೆಗೆ, ಎಲ್ಲ ಬಗೆಯ ವಾಸಸ್ಥಾನಗಳಲ್ಲಿ ಇರುವ ಪ್ರಾಣಿಗಳವರೆಗೆ; ಎಲ್ಲ ಬಗೆಯ ಪ್ರಾಣಿಗಳನ್ನು ಕಾಪಾಡುವ ಉದ್ದೇಶ ಹೊಂದಿರಬೇಕು ಎನ್ನುವುದರಲ್ಲಿ ಅನುಮಾನವಿಲ್ಲ. ಏನಿದ್ದರೂ ಇದು ಕೇವಲ ಕಾನೂನಿನ ಪ್ರಶ್ನೆ ಕೂಡ ಅಲ್ಲ. ನಮ್ಮ ಭೂಮಿಯನ್ನು ಹಂಚಿಕೊಳ್ಳುವ ಮೂಕ ಪ್ರಾಣಿಗಳ ಬಗೆಗಿನ ಮನೋಭಾವವನ್ನು ನಮ್ಮ ದೇಶದ ಜನರು ಸರಿಪಡಿಸಿಕೊಳ್ಳುವ ಅಗತ್ಯವಿದೆ. ಪ್ರಾಣಿಗಳಿರುವುದು ಕೇವಲ ಮಾನವನ ಲಾಭಕ್ಕಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಈ ರೀತಿಯಾಗಿ ಅವುಗಳನ್ನು ನಾವು ಕೀಳು ಸ್ಥಾನಕ್ಕೆ ತಳ್ಳುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಅವುಗಳಿಗೆ ಸಾಕಷ್ಟು ರಕ್ಷಣೆ ಮತ್ತು ಹಕ್ಕುಗಳನ್ನು ಒದಗಿಸಬೇಕು.

‘ದಯೆಯಿರಲಿ ಸಕಲ ಜೀವರಾಶಿಗಳಲಿ’ ಎಂದು ಶರಣರು ಹೇಳಿರುವುದನ್ನು ಒಮ್ಮೆ ನೆನಪಿಸಿ ಮನನ ಮಾಡಿಕೊಂಡು ಅನುಷ್ಠಾನಕ್ಕೆ ತಂದರೆ ಲೇಸಲ್ಲವೇ?.

Leave a Reply

Your email address will not be published. Required fields are marked *