ಸಾಕ್ಷಿ ಸಂರಕ್ಷಣಾ ವ್ಯವಸ್ಥೆಯ ಸುತ್ತಮುತ್ತ…

ಸಾಕ್ಷಿಯು ಯಾವ ಭಯವಿಲ್ಲದೆಯೇ ನ್ಯಾಯಾಲಯದಲ್ಲಿ ಸುರಕ್ಷಿತವಾಗಿ ಸಾಕ್ಷಿ ಹೇಳುವಂತಾಗುವುದನ್ನು ಖಾತ್ರಿಪಡಿಸುವುದು ನಾಗರಿಕರ ಸಂರಕ್ಷಕನಾಗಿ ಪ್ರತಿಯೊಂದು ಸರ್ಕಾರದ ಹೆಗಲ ಮೇಲಿನ ಹೊಣೆಯಾಗಿದೆ. ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಗಳಿಂದ ಸಾಕ್ಷಿಗಳು ಹಿಂದಕ್ಕೆ ಸರಿಯುವಂತಾಗುವುದಕ್ಕೆ ಅನೇಕ ಕಾರಣಗಳಿವೆ.

ಸಾಕ್ಷಿ ಸಂರಕ್ಷಣಾ ವ್ಯವಸ್ಥೆಯೊಂದಕ್ಕೆ ನಮ್ಮ ಸವೋಚ್ಚ ನ್ಯಾಯಾಲಯ ಇದೇ ಡಿ. 5ರಂದು ಅನುವುಮಾಡಿಕೊಟ್ಟಿದೆ. ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಬರುವವರಿಗೆ ಸರ್ಕಾರದ ವತಿಯಿಂದ ಸಮರ್ಪಕ ಭದ್ರತೆ ಇಲ್ಲದಿರುವುದು ಅವರು ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದೆಂಬುದನ್ನು ಮನಗಂಡು ನ್ಯಾಯಾಲಯ ಇಂಥ ಹೆಜ್ಜೆಯಿಟ್ಟಿದೆ. ‘ಮಹೇಂದ್ರ ಚಾವ್ಲಾ ವರ್ಸಸ್ ಕೇಂದ್ರ ಸರ್ಕಾರ’ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾ. ಎ.ಕೆ. ಸಿಕ್ರಿ ಮತ್ತು ನ್ಯಾ. ಅಬ್ದುಲ್ ನಜೀರ್ ನೇತೃತ್ವದ ನ್ಯಾಯಪೀಠ, ಸಾಕ್ಷಿ ಸಂರಕ್ಷಣಾ ವ್ಯವಸ್ಥೆ ಕುರಿತಾದ ಕೇಂದ್ರ ಸರ್ಕಾರದ 2018ರ ಕರಡನ್ನು ಅನುಮೋದಿಸಿತು ಹಾಗೂ ಈ ನಿಟ್ಟಿನಲ್ಲಿ ಸಂಸತ್ತು ಶಾಸನವೊಂದನ್ನು ರೂಪಿಸುವ ತನಕ ಈ ಕರಡನ್ನು ಅಕ್ಷರಶಃ ಜಾರಿಗೆ ತರುವಂತೆ ಎಲ್ಲ ರಾಜ್ಯಗಳಿಗೂ ನಿರ್ದೇಶಿಸಿತು.

ಧರ್ಮಬೋಧಕ ಆಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣಗಳಲ್ಲಿ ಸಾಕ್ಷಿಗಳಿಂದ ಸಲ್ಲಿಕೆಯಾಗಿದ್ದ ಮೇಲ್ಮನವಿ ವಿಚಾರಣೆ ನಡೆಸುವಾಗ ಈ ಚರ್ಚಾವಿಷಯ ಸವೋಚ್ಚ ನ್ಯಾಯಾಲಯದ ಸಮ್ಮುಖದಲ್ಲಿ ಬಂತು. ಅತ್ಯಾಚಾರದ ಆರೋಪ ಎದುರಿಸುತ್ತಿರುವ ಆಸಾರಾಂ ವಿರುದ್ಧದ ವಿಚಾರಣಾ ಪ್ರಕ್ರಿಯೆಯ ಸಂದರ್ಭದಲ್ಲಿ, ‘ಆಸಾರಾಂ ವಿರುದ್ಧವಾಗಿ ಸಾಕ್ಷ್ಯ ನುಡಿದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂಬರ್ಥದಲ್ಲಿ ತಮ್ಮನ್ನು ಬೆದರಿಸಲಾಗುತ್ತಿದೆ ಎಂಬುದಾಗಿ ಅರ್ಜಿದಾರರು ಆರೋಪಿಸಿದ್ದರು. ಅಷ್ಟೇ ಅಲ್ಲ, ಈಗಾಗಲೇ ಇಂಥ 10 ಸಾಕ್ಷಿಗಳನ್ನು ಬೆದರಿಸಲಾಗಿದೆ ಮತ್ತು ಮೂವರು ಸಾಕ್ಷಿಗಳನ್ನು ಕೊಲ್ಲಲಾಗಿದೆ ಎಂದೂ ಹೇಳಲಾಗಿತ್ತು. ಹಾಗೆ ನೋಡಿದರೆ, ಯಾವುದೇ ಒತ್ತಡ ಮತ್ತು ಬೆದರಿಕೆ ಇಲ್ಲದೆಯೇ ಮುಕ್ತ ಹಾಗೂ ನ್ಯಾಯಸಮ್ಮತ ವಿಧಾನದಲ್ಲಿ ನ್ಯಾಯಾಲಯಗಳಲ್ಲಿ ಸಾಕ್ಷ್ಯ ಹೇಳುವ ಹಕ್ಕಿಗೆ ಇಂದು ಗಂಭೀರ ಸ್ವರೂಪದ ಧಕ್ಕೆ ಒದಗಿದೆ, ಆ ಹಕ್ಕಿನ ಮೇಲೆಯೇ ದಾಳಿಯಾಗುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ. ಹೀಗಿರುವಾಗ, ನಮ್ಮ ದೇಶದಲ್ಲಿ ಸಾಕ್ಷಿಗಳ ಮನದಲ್ಲಿ ಭಯದ ಭಾವನೆ ದಟ್ಟವಾಗಿರುವ ಹಾಗೂ ತತ್ಪರಿಣಾಮವಾಗಿ, ಕಾನೂನಿನ ರಕ್ಷಣೆಗೆ ಒಳಪಟ್ಟಿರುವ ಮುಕ್ತ ಸಮಾಜವೊಂದರಲ್ಲಿ ವಾಸಿಸುವ ಹಕ್ಕಿನಿಂದ ಜನರು ವಂಚಿಸಲ್ಪಡುವಂತಾಗಿರುವಂಥ ಪರಿಸ್ಥಿತಿಯ ಮೇಲೆ ಈ ಪ್ರಕರಣ ಮತ್ತೊಮ್ಮೆ ಬೆಳಕು ಚೆಲ್ಲಿದೆ ಎನ್ನಬೇಕು. ಅಪರಾಧ-ಭಯಗಳಿಂದ ಮುಕ್ತವಾದ ಸಮಾಜವೊಂದರಲ್ಲಿ ಜೀವಿಸುವುದಕ್ಕಿರುವ ಹಕ್ಕು ಹಾಗೂ ನ್ಯಾಯಾಲಯಗಳಲ್ಲಿ ಯಾವುದೇ ಭಯ ಅಥವಾ ಒತ್ತಡವಿಲ್ಲದೆ ಸಾಕ್ಷ್ಯ ನುಡಿಯುವಂಥ ಹಕ್ಕುಗಳೂ ಈ ದೇಶದ ಜನರಿಗೆ ಖಾತ್ರಿಪಡಿಸಲಾಗಿರುವ ‘ಜೀವಿಸುವ ಹಕ್ಕಿನಲ್ಲಿ’ ಅಂತರ್ಗತವಾಗಿವೆ ಎಂಬುದನ್ನು ಮರೆಯಲಾಗದು.

ಹಾಗೆ ನೋಡಿದರೆ, ಸಾಕ್ಷಿಗಳ ಸಂರಕ್ಷಣೆಯ ಅಗತ್ಯಕ್ಕೆ ಈ ಹಿಂದೆ ಸಾಕಷ್ಟು ಸಂದರ್ಭಗಳಲ್ಲಿ ಒತ್ತುನೀಡಲಾಗಿದೆ. ಇಂಥದೊಂದು ಅಗತ್ಯದ ಕುರಿತಾಗಿ ಕಾನೂನು ಆಯೋಗದ 14ನೇ ವರದಿ 1958ರಲ್ಲೇ ಸೂಚ್ಯವಾಗಿ ಹೇಳಿದ್ದರೆ, ‘ರಾಷ್ಟ್ರೀಯ ಪೊಲೀಸ್ ಆಯೋಗ, 1980ರ’ 4ನೇ ವರದಿ ಕೂಡ ಈ ವಿಷಯದ ಕುರಿತು ರ್ಚಚಿಸಿದ್ದಿದೆ. ಇನ್ನು, ಕಾನೂನು ಆಯೋಗದ 154ನೇ ವರದಿ (1996) ಸಾಕ್ಷಿಗಳು ಎದುರಿಸಬೇಕಾಗಿ ಬರುವ ದುರವಸ್ಥೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿತ್ತು. ಸಾಕ್ಷಿಗಳು ಅನುಭವಿಸುತ್ತಿರುವ ಅನನುಕೂಲತೆ, ಆರೋಪಿಗಳಿಂದ ಅವರಿಗೆ ಒದಗುವ ಬೆದರಿಕೆಯ ಕುರಿತೂ ಈ ವರದಿ ಸ್ಪಷ್ಟವಾಗಿ ಹೇಳಿತ್ತು. ಈ ಬಾಬತ್ತಿಗೆ ಸಂಬಂಧಿಸಿ ಕೂಲಂಕಷ ಅವಲೋಕನ ನಡೆಸಿದ್ದ 172ನೇ ಮತ್ತು 178ನೇ ವರದಿಗಳು ಕೂಡ, ಎಂಥದೇ ಸಂದರ್ಭದಲ್ಲೂ ಆರೋಪಿಗಳ ಕಡುಕ್ರೋಧದಿಂದ ಸಾಕ್ಷಿಗಳನ್ನು ಸಂರಕ್ಷಿಸಬೇಕು ಎಂಬುದಾಗಿ ಶಿಫಾರಸು ಮಾಡಿದ್ದವು. ಅಷ್ಟೇ ಅಲ್ಲ, ಸಾಕ್ಷಿಗಳ ಸಂರಕ್ಷಣೆಗೆ ನೀಡಬೇಕಾದ ಪ್ರಾಮುಖ್ಯದ ಕುರಿತಾಗಿ ಸವೋಚ್ಚ ನ್ಯಾಯಾಲಯವೂ ಮತ್ತೆಮತ್ತೆ ಅಭಿಪ್ರಾಯ ವ್ಯಕ್ತಪಡಿಸಿದೆ.

ತನ್ನ ನಾಗರಿಕರ ಜೀವನ ಮತ್ತು ಕ್ರಿಯಾಸ್ವಾತಂತ್ರ್ಯವನ್ನು ಸಂರಕ್ಷಿಸಬೇಕಾದ್ದು ಪ್ರತಿಯೊಂದು ಸರ್ಕಾರದ ಸಾಂವಿಧಾನಿಕ ಹೊಣೆಗಾರಿಕೆ/ಕಟ್ಟುಪಾಡು ಮತ್ತು ಕರ್ತವ್ಯ. ಹಾಗೇ, ಸಾಕ್ಷಿಗಳ ಸಂರಕ್ಷಣೆ ವಿಷಯದಲ್ಲಿ ಸರ್ಕಾರ ನಿರ್ಣಾಯಕ ಪಾತ್ರ ವಹಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ.

ಸಾಕ್ಷಿಯು ತಾನು ಯಾರ ವಿರುದ್ಧವಾಗಿ ಸಾಕ್ಷ್ಯ ಹೇಳಬೇಕಾಗಿದೆಯೋ ಅಂಥವರ ಕುರಿತಾದ ಯಾವ ಭಯವೂ ಇಲ್ಲದೆಯೇ ವಿಚಾರಣಾ ನ್ಯಾಯಾಲಯದಲ್ಲಿ ಸುರಕ್ಷಿತವಾಗಿ ಸಾಕ್ಷಿ ಹೇಳುವಂತಾಗುವುದನ್ನು ಖಾತ್ರಿಪಡಿಸುವುದು ನಾಗರಿಕರ ಸಂರಕ್ಷಕನಾಗಿ ಪ್ರತಿಯೊಂದು ಸರ್ಕಾರದ ಹೆಗಲ ಮೇಲಿನ ಹೊಣೆಯಾಗಿದೆ. ನ್ಯಾಯಾಲಯದ ಸಮ್ಮುಖದಲ್ಲಿ ತಾವೇ ನೀಡಿದ ಹೇಳಿಕೆಗಳಿಂದ ಸಾಕ್ಷಿಗಳು ಹಿಂದಕ್ಕೆ ಸರಿಯುವಂತಾಗುವುದಕ್ಕೆ ಅನೇಕ ಕಾರಣಗಳಿವೆ; ಹಿಂಸೆಯ ಬೆದರಿಕೆ ಹಾಕುವುದು/ಭಯ ಹುಟ್ಟಿಸುವುದು, ಸಾಕ್ಷಿಗಳ ಇಂಥ ಪ್ರತಿಕೂಲ ವರ್ತನೆಗೆ ಇರುವ ಪ್ರಮುಖ ಕಾರಣಗಳಲ್ಲಿ ಒಂದೆನಿಸಿದೆ. ನ್ಯಾಯಾಲಯದಲ್ಲಿ ಸಾಕ್ಷಿಗಳು ಯುಕ್ತವಾಗಿ ಸಾಕ್ಷ್ಯ ನುಡಿಯಲು ಅಸಮರ್ಥರಾದಾಗ, ಅಂಥ ನಡೆ ಅಪರಾಧ ನಿರ್ಣಯದ ಪ್ರಮಾಣವನ್ನು ತಗ್ಗಿಸುತ್ತದೆ ಮತ್ತು ಅಪರಾಧಿಗಳು ‘ಅಪರಾಧ ನಿರ್ಣಯ’ದಿಂದ ತಪ್ಪಿಸಿಕೊಳ್ಳುವುದಕ್ಕೂ ಅದು ಅನೇಕ ಸಲ ಕಾರಣವಾಗುತ್ತದೆ.

18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಸ್ವೀಕರಿಸಲ್ಪಟ್ಟ ಪೂರಕ ಮಾಹಿತಿಗಳನ್ನು ‘ಸಾಕ್ಷಿ ಸಂರಕ್ಷಣಾ ಯೋಜನೆ/ವ್ಯವಸ್ಥೆ, 2018’ ಆಧರಿಸಿದೆ ಮತ್ತು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (National Legal Services Authority- NALSA) ಹಾಗೂ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ದಳ (Bureau of Police Research and Development- BPRD)02 ಇವುಗಳೊಂದಿಗೆ ಸಮಾಲೋಚಿಸಿದ ನಂತರ ಅದನ್ನು ಅಂತಿಮಗೊಳಿಸಲಾಗಿದೆ. ಹಿಂಸಾತ್ಮಕ ಅಥವಾ ಇತರ ಅಪರಾಧಿಕ ಆರೋಪಗಳಿಂದ ರಕ್ಷಣೆಯಿಲ್ಲದೆ ಸಾಕ್ಷ್ಯ ನುಡಿಯುವುದಕ್ಕೆ ಹೆದರಿಕೊಂಡ ಅಥವಾ ಹಾಗೆ ಸಾಕ್ಷ್ಯ ನುಡಿಯದಂತೆ ಬೆದರಿಕೆಗೊಳಗಾದ ಕಾರಣದಿಂದಾಗಿ, ಕ್ರಿಮಿನಲ್ ಅಪರಾಧಗಳ ತನಿಖೆ, ಕಾನೂನುಕ್ರಮ ಜರುಗಿಸುವಿಕೆ ಮತ್ತು ವಿಚಾರಣಾ ಪ್ರಕ್ರಿಯೆಗಳಿಗೆ ಹಾನಿಯುಂಟಾಗಬಾರದು ಎಂಬುದನ್ನು ಖಾತ್ರಿಪಡಿಸುವುದು ಈ ವ್ಯವಸ್ಥೆ/ಯೋಜನೆಯ ಗುರಿ ಮತ್ತು ಉದ್ದೇಶವಾಗಿದೆ. ಅಪರಾಧಿಕ ಕಾನೂನು ಜಾರಿ ಸಂಸ್ಥೆಗಳಿಗೆ ಮತ್ತು ಒಟ್ಟಾರೆಯಾಗಿ ನ್ಯಾಯದಾನದ ಆಡಳಿತ ವ್ಯವಸ್ಥೆಗೆ ಸಹಾಯ ಒದಗಿಸುವಲ್ಲಿ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ತೊಡಗಿಸಿಕೊಂಡಿರುವ ವ್ಯಕ್ತಿಗಳ ಸಂರಕ್ಷಣೆಗೆ ಅನುವುಮಾಡಿಕೊಡುವ ಮೂಲಕ ಕಾನೂನು ಜಾರಿಯನ್ನು ಪ್ರವರ್ತಿಸುವುದು ಇದರ ಗುರಿ.

ಬೆದರಿಕೆಯ ಗ್ರಹಿಕೆಯನ್ನು ಆಧರಿಸಿ, ಸದರಿ ವ್ಯವಸ್ಥೆ ಸಾಕ್ಷಿಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿದೆ. ಪ್ರಕರಣವೊಂದರ ತನಿಖೆ/ವಿಚಾರಣೆ ವೇಳೆಯಲ್ಲಿ ಅಥವಾ ತರುವಾಯದಲ್ಲಿ, ಸಾಕ್ಷಿಯ ಅಥವಾ ಆತನ ಕುಟುಂಬಸದಸ್ಯರಿಗೆ ಜೀವಬೆದರಿಕೆ ಇರುವಂಥ ನಿದರ್ಶನಗಳು ಮೊದಲ ವರ್ಗಕ್ಕೆ ಸೇರುತ್ತವೆ. ಇನ್ನು, ಪ್ರಕರಣವೊಂದರ ತನಿಖೆ/ವಿಚಾರಣೆ ವೇಳೆಯಲ್ಲಿ ಅಥವಾ ತರುವಾಯದಲ್ಲಿ, ಸಾಕ್ಷಿಯ ಅಥವಾ ಆತನ ಕುಟುಂಬಿಕರ ಸುರಕ್ಷತೆ, ಪ್ರತಿಷ್ಠೆ-ಪ್ರಸಿದ್ಧಿಗೆ ಅಥವಾ ಸ್ವತ್ತುಗಳಿಗೆ ಬೆದರಿಕೆಯಿರುವಂಥ ನಿದರ್ಶನಗಳು ಎರಡನೆಯ ವರ್ಗಕ್ಕೆ ಸೇರುತ್ತವೆ. ಅಂತಿಮವಾಗಿ, ಪ್ರಕರಣವೊಂದರ ತನಿಖೆ/ವಿಚಾರಣೆ ವೇಳೆಯಲ್ಲಿ ಅಥವಾ ತರುವಾಯದಲ್ಲಿ, ಮಧ್ಯಸ್ಥ ಸ್ವರೂಪದಲ್ಲಿ ಬೆದರಿಕೆಯೊಡ್ಡುವ ಹಾಗೂ ಸಾಕ್ಷಿಯ ಅಥವಾ ಆತನ ಕುಟುಂಬಸದಸ್ಯರ ಪ್ರಸಿದ್ಧಿ-ಪ್ರತಿಷ್ಠೆ ಅಥವಾ ಸ್ವತ್ತುಗಳ ವಿಷಯದಲ್ಲಿ ಕಿರುಕುಳ ನೀಡುವ ಅಥವಾ ಭಯಹುಟ್ಟಿಸುವ ನಿದರ್ಶನಗಳು ಮೂರನೆಯ ವರ್ಗಕ್ಕೆ ಸೇರುತ್ತವೆ.

ಇಲ್ಲಿ ಮತ್ತೊಂದು ಅಂಶವನ್ನೂ ಗಮನಿಸಬೇಕು. ಪೊಲೀಸ್ ವರಿಷ್ಠಾಧಿಕಾರಿಯು ಬೆದರಿಕೆಯ ಗ್ರಹಿಕೆಗಳ ವರ್ಗಗಳನ್ನು ಗುರುತಿಸಿ ತಯಾರಿಸಿದ ವಿಶ್ಲೇಷಣಾ ವರದಿಯೊಂದನ್ನು ಒಳಗೊಳ್ಳುವುದು ‘ಸಾಕ್ಷಿ ಸಂರಕ್ಷಣಾ ವ್ಯವಸ್ಥೆ/ಯೋಜನೆ, 2018’ರ ವೈಶಿಷ್ಟ್ಯಗಳಲ್ಲಿ ಒಂದೆನಿಸಿದೆ. ಅಷ್ಟೇ ಅಲ್ಲ, ಸಾಕ್ಷಿಗೆ ಒದಗಿಸಬಹುದಾದ 15 ಸಂರಕ್ಷಣಾ ಮಾಗೋಪಾಯಗಳಿಗೂ ಅದು ಅನುವುಮಾಡಿಕೊಡುತ್ತದೆ; ಅಂದರೆ, ತನಿಖೆ ಸಂದರ್ಭದಲ್ಲಿ ಸಾಕ್ಷಿ ಮತ್ತು ಆಪಾದಿತ ವ್ಯಕ್ತಿಗಳು ಮುಖಾಮುಖಿ ಎದುರಾಗದಂತೆ ಖಾತ್ರಿಪಡಿಸುವಿಕೆ, ಚಹರೆಯನ್ನು ಗೋಪ್ಯವಾಗಿಡುವಿಕೆ, ರಕ್ಷಣೆ, ದೂರವಾಣಿ ಕರೆಗಳ ಮೇಲ್ವಿಚಾರಣೆ, ಚಹರೆಯನ್ನು ಬದಲಿಸುವಿಕೆ, ಸಾಕ್ಷಿಯ ಸ್ಥಳ ಬದಲಾವಣೆ ಮತ್ತು ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಯಂಥವು ಇದರಲ್ಲಿ ಸೇರಿವೆ.

ಇನ್ನು, ಸಾಕ್ಷಿಗೆ ಅಗತ್ಯವಾಗಬಹುದಾದ ಯಾವುದೇ ತೆರನಾದ ರಕ್ಷಣೆಗೆ ಮುಂದಾಗುವುದು ಕೊನೆಯ ಮಾಗೋಪಾಯದಲ್ಲಿ ಸೇರಿದೆ. ಚಹರೆ ಬದಲಾವಣೆ ಮತ್ತು ಸ್ಥಳಬದಲಾವಣೆಗೂ (ಹೊಸ ಜಾಗಕ್ಕೆ ತೆರಳುವಿಕೆ) ಇದು ಅನುವುಮಾಡಿಕೊಡುತ್ತದೆ. ಆದರೆ ಒಂದು ವೇಳೆ ಯಾವುದೇ ವ್ಯಕ್ತಿ ಸುಳ್ಳುದೂರನ್ನು ಸಲ್ಲಿಸಿದಲ್ಲಿ, ಸಾಕ್ಷಿಗೆ ರಕ್ಷಣೆ ಒದಗಿಸಲು ಆದ ಖರ್ಚುವೆಚ್ಚಗಳನ್ನು ಮರುವಸೂಲು ಮಾಡುವುದಕ್ಕೂ ಈ ವ್ಯವಸ್ಥೆಯಲ್ಲಿ ಅವಕಾಶವಿದೆ. ಅಷ್ಟೇ ಅಲ್ಲ, ಸಾಕ್ಷಿಯು ಗುರುತಿಸಲ್ಪಡಬಾರದು ಎಂಬ ಉದ್ದೇಶದೊಂದಿಗೆ, ಸಾಕ್ಷಿ ಮುಖದ ಬಿಂಬವನ್ನು ಮಾರ್ಪಡಿಸುವ ಹಾಗೂ ಸಾಕ್ಷಿ ಧ್ವನಿಯ ಶ್ರವ್ಯಾಂಶ ಭಾಗವನ್ನು ಮಾರ್ಪಡಿಸುವ ಆಯ್ಕೆಯೊಂದಿಗೆ, ಸಾಕ್ಷಿಗಳು ಮತ್ತು ಆರೋಪಿಗಳು ಹಾದುಹೋಗುವುದಕ್ಕೆ ಪ್ರತ್ಯೇಕ ಅಂಕಣ, ಏಕಮುಖಿ ಕನ್ನಡಿ/ಪ್ರತಿಬಿಂಬಕಗಳು ಮತ್ತು ತೆರೆಗಳಂಥ ವಿಶೇಷ ವ್ಯವಸ್ಥೆಗಳನ್ನು ಹೊಂದಿರುವ, ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ನ್ಯಾಯಾಲಯ ಕೊಠಡಿಯ ಬಳಕೆಗೂ ಇದು ಅನುವುಮಾಡಿಕೊಡುತ್ತದೆ. ಸಾಕ್ಷಿಗಳು ನ್ಯಾಯದಾನ ವ್ಯವಸ್ಥೆಯ ಕಣ್ಣುಗಳು ಮತ್ತು ಕಿವಿಗಳಾಗಿರುವುದರಿಂದ, ಅಪರಾಧಿಗಳನ್ನು ಶಿಕ್ಷಿಸುವ ನಿಟ್ಟಿನಲ್ಲಿ ಅವರು ಗಮನಾರ್ಹ ಪಾತ್ರ ವಹಿಸುತ್ತಾರೆ. ಆದ್ದರಿಂದ, ಸಾಕ್ಷಿಗಳ ಸಂರಕ್ಷಣೆಗೆ ಸಮಗ್ರ ದೃಷ್ಟಿಕೋನದಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ, ಸಾಕ್ಷಿ ಸಂರಕ್ಷಣಾ ಯೋಜನೆ/ವ್ಯವಸ್ಥೆಯ ಕ್ಷಿಪ್ರ ಅನುಷ್ಠಾನಕ್ಕಾಗಿನ ನಿರ್ದೇಶನವು ರಾಷ್ಟ್ರೀಯ ಮಟ್ಟದಲ್ಲಿ ಮೊದಲ ಹೆಜ್ಜೆಯಾಗಿದ್ದು, ವ್ಯಕ್ತಿಗಳನ್ನು ಪರೋಕ್ಷವಾಗಿ ಹಿಂಸೆ/ಬೆದರಿಕೆಯ ಬಲಿಪಶುವಾಗಿಸುವ ಪ್ರವೃತ್ತಿಯನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಇದು ಭಾರಿ ಪ್ರಭಾವ ಬೀರುವುದಂತೂ ದಿಟ. ಸಾಕ್ಷಿಗಳಿಗೆ ಸೂಕ್ತ ರೀತಿಯಲ್ಲಿ ರಕ್ಷಣೆಯನ್ನು ಖಾತ್ರಿಪಡಿಸಲು ಇದು ಯತ್ನಿಸುತ್ತದೆ. ಇದು ದೇಶದ ಉಜ್ವಲ ಭವಿಷ್ಯಕ್ಕಾಗಿ ಅಪರಾಧ ಕಾನೂನಿನ ಪ್ರೇರಕಶಕ್ತಿಗಳನ್ನು ಬದಲಿಸಬಲ್ಲ ಸಮಷ್ಟಿ ದೃಷ್ಟಿಕೋನದ ಯೋಜನೆಯಾಗಿದೆಯಾದರೂ, ಇದಕ್ಕೊಂದು ಶಾಸನದ ಸ್ವರೂಪ ನೀಡಿ ಸರಿಯಾಗಿ ಅನುಷ್ಠಾನಗೊಳಿಸುವುದರಲ್ಲೇ ನಿಜವಾದ ಸತ್ವಪರೀಕ್ಷೆ ಅಡಗಿದೆ. ಸದರಿ ಯೋಜನೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳುವುದು ಮುಖ್ಯ. ಈ ಕಾನೂನನ್ನು ಸರಿಯಾಗಿ ಪಾಲಿಸದ್ದು ಕಂಡುಬಂದಲ್ಲಿ ಸಂಬಂಧಪಟ್ಟ ಸರ್ಕಾರಿ ವಿಭಾಗವನ್ನು ಹೊಣೆಗಾರನನ್ನಾಗಿಸುವುದು ಇಂಥ ಖಾತ್ರಿಗೆ ನೆರವಾಗುತ್ತದೆ. ಇನ್ನು, ಈ ಮಹತ್ವಾಕಾಂಕ್ಷಿ ವ್ಯವಸ್ಥೆ/ಯೋಜನೆ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳ್ಳುವಂತಾಗಲು ಹಾಗೂ ಗರಿಷ್ಠಮಟ್ಟದ ಪ್ರಚಾರ ಇದಕ್ಕೆ ಸಿಗುವಂತಾಗಲು, ಸ್ವಯಂಸೇವಾ ಸಂಸ್ಥೆಗಳ ಕಣ್ಗಾವಲು ಕೂಡ ಕಾರಣವಾಗಬಲ್ಲದು ಎಂಬುದನ್ನು ಗಮನಿಸಬೇಕು…

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *