ಅಳಿವಿನಂಚಿನ ಕೆರೆಗಳಿಗೆ ಭರವಸೆಯ ಬೆಳಕು

ನಮ್ಮ ಸಂವಿಧಾನದ ಅನುಸಾರ, ಜಲಸಂಪನ್ಮೂಲಗಳ ಸಂರಕ್ಷಣೆ ಪ್ರತಿಯೊಂದು ರಾಜ್ಯಕ್ಕೂ ವಹಿಸಲ್ಪಟ್ಟಿರುವ ಒಂದು ಹೊಣೆಗಾರಿಕೆಯಾಗಿದೆ. ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಸಂರಕ್ಷಣೆ ಮತ್ತು ಘನತ್ಯಾಜ್ಯದ ನಿರ್ವಹಣೆ ಮಾಡಬೇಕಾದ್ದು ಸ್ಥಳೀಯ ಸಂಸ್ಥೆಗಳ ಹೊಣೆಗಾರಿಕೆಯಾಗಿದೆ. ಇಂಥ ಸಾಂವಿಧಾನಿಕ ಮತ್ತು ಶಾಸನಾತ್ಮಕ ಚೌಕಟ್ಟಿನ ಹೊರತಾಗಿಯೂ ಕೆರೆಗಳ ರಕ್ಷಣೆ ಆಗುತ್ತಿಲ್ಲ.

ಬೆಂಗಳೂರಿನ ಬೆಳ್ಳಂದೂರು ಕೆರೆ ಮತ್ತು ವರ್ತರು ಕೆರೆಗಳು ಆಗಾಗ ಸುದ್ದಿಗೆ ಗ್ರಾಸವಾಗುತ್ತಲೇ ಇವೆ. ಅಗಾಧ ಪ್ರಮಾಣದಲ್ಲಿ ರೂಪುಗೊಳ್ಳುವ ನೊರೆ ಮತ್ತು ಬೆಂಕಿ ಇದಕ್ಕೆ ಕಾರಣ. ಈ ಕೆರೆಗಳ ಮಾಲಿನ್ಯವನ್ನು ತಡೆಗಟ್ಟುವುದಕ್ಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು (ಎನ್​ಜಿಟಿ) ಡಿ. 6ರಂದು ಒಂದಷ್ಟು ಮಾರ್ಗದರ್ಶಿ ಸೂತ್ರಗಳನ್ನು ಸೂಚಿಸಿರುವುದರ ಜತೆಗೆ, ಜಲಮಾಲಿನ್ಯವನ್ನು ತಡೆಗಟ್ಟುವಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ಭಾರಿ ಜುಲ್ಮಾನೆಯನ್ನೇ ವಿಧಿಸಿದೆ. ಇದು ಶ್ಲಾಘನೀಯ ಬೆಳವಣಿಗೆಯೇ ಸರಿ.

ಜಲಮಾಲಿನ್ಯವನ್ನು ತಡೆಯುವ, ನಿಯಂತ್ರಿಸುವ ಹಾಗೂ ನೀರಿನ ಆರೋಗ್ಯಕರ ಸ್ಥಿತಿಯನ್ನು ಕಾಪಾಡಿಕೊಂಡು ಹೋಗುವ ಉದ್ದೇಶದೊಂದಿಗೆ ‘ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ, 1947’ನ್ನು ಜಾರಿಮಾಡಲಾಗಿದೆ. ಈ ಕಾಯ್ದೆಯ ಅನುಸಾರ, ಸೂಕ್ತ ಮಾನದಂಡಗಳನ್ನು ರೂಪಿಸುವುದು ಹಾಗೂ ಅವುಗಳ ಅನುಸರಣೆಯಾಗುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ; ಮಾಲಿನ್ಯಕಾರಕ ಪದಾರ್ಥಗಳನ್ನು ನೀರೊಳಗೆ ಹರಿಯಬಿಡುವುದನ್ನು ಈ ಕಾಯ್ದೆ ನಿಷೇಧಿಸಿದ್ದು, ಒಂದೊಮ್ಮೆ ಅಂಥ ಕೃತ್ಯಕ್ಕೆ ಮುಂದಾದಲ್ಲಿ ಅದು ಕ್ರಿಮಿನಲ್ ಅಪರಾಧವೆನಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಹೀಗೆ ಮಾಲಿನ್ಯ ಉಂಟುಮಾಡುವ ಘಟಕಗಳನ್ನು ಮುಚ್ಚಿಸುವುದಕ್ಕೂ ಈ ಕಾಯ್ದೆ ಅನುವುಮಾಡಿಕೊಡುತ್ತದೆ.

ನಮ್ಮ ಸಂವಿಧಾನದ ಅನುಸಾರ, ಜಲಸಂಪನ್ಮೂಲಗಳ ಸಂರಕ್ಷಣೆ ಪ್ರತಿಯೊಂದು ರಾಜ್ಯಕ್ಕೂ ವಹಿಸಲ್ಪಟ್ಟಿರುವ ಹೊಣೆಗಾರಿಕೆ/ಕರ್ತವ್ಯವಾಗಿದೆ ಎಂಬುದನ್ನಿಲ್ಲಿ ಗಮನಿಸಬೇಕು. ಸಂವಿಧಾನದ 12ನೇ ಅನುಸೂಚಿಯೊಂದಿಗೆ ಓದಿಕೊಳ್ಳಬೇಕಾದ 243ಡಬ್ಲ್ಯು ವಿಧಿಯ ಅನುಸಾರ, ಸ್ಥಳೀಯ ಆಡಳಿತದ ಒಂದು ಭಾಗವಾಗಿ ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಸಂರಕ್ಷಣೆ ಮತ್ತು ಘನತ್ಯಾಜ್ಯದ ನಿರ್ವಹಣೆ ಮಾಡಬೇಕಾದ್ದು ಪುರಸಭೆಗಳ ಹೊಣೆಗಾರಿಕೆಯಾಗಿದೆ. ಆದರೆ, ಇಂಥ ಸಾಂವಿಧಾನಿಕ ಮತ್ತು ಶಾಸನಾತ್ಮಕ ಚೌಕಟ್ಟಿನ ಹೊರತಾಗಿಯೂ ಕರ್ನಾಟಕ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳು (ಬಿಬಿಎಂಪಿ), ನಗರದ ಕೆರೆಗಳನ್ನು ಸಂರಕ್ಷಿಸುವಲ್ಲಿ ವಿಫಲವಾಗಿರುವುದು ವಿಷಾದನೀಯ. ಮೇಲೆ ಉಲ್ಲೇಖಿಸಲಾದ ಕೆರೆಗಳಲ್ಲಿ ನೀರು ಮತ್ತು ಜಲಾನಯನ ಪ್ರದೇಶದಲ್ಲಿ ಮಾಲಿನ್ಯ ಏರುಗತಿಯಲ್ಲಿರುವುದನ್ನು ಮನಗಂಡ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು 2014ರ ವರ್ಷದಲ್ಲಿ ಸ್ವಯಂಪ್ರೇರಿತ ದೂರು (ಸುಮೊಟೊ) ದಾಖಲಿಸಿಕೊಂಡು ತನಿಖೆಗೆ ಚಾಲನೆ ನೀಡಿತು. ಸದರಿ ಕೆರೆಗಳಲ್ಲಿ ಅಸಹಜ ನೊರೆ ರೂಪುಗೊಳ್ಳುವಿಕೆ ಮತ್ತು ಬೆಂಕಿ ಹೊತ್ತಿಕೊಳ್ಳುವಿಕೆಯಂಥ ಘಟನೆಗಳು ನಡೆಯದಂತೆ ನೋಡಿಕೊಳ್ಳುವಂತೆ ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಇತರ ಪ್ರಾಧಿಕಾರಗಳಿಗೆ ನ್ಯಾಯಾಧಿಕರಣವು ಕಾಲಾನುಕಾಲಕ್ಕೆ ಹಲವಾರು ಮಾರ್ಗಸೂಚಿಗಳನ್ನು ನೀಡಿತು.

ಆದರೆ, ಚರಂಡಿ ಸಂಸ್ಕರಣಾ ಘಟಕಗಳ (ಎಸ್​ಟಿಪಿಗಳ) ಸ್ಥಾಪನೆ, ಜಲಸಸ್ಯಗಳು ಮತ್ತು ಘನತ್ಯಾಜ್ಯಗಳ ನಿಮೂಲನೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣವು ನೀಡಿದ್ದ ನಿರ್ದೇಶನಗಳ ಅನುಸರಣೆಯಾಗದಿರುವಂಥ, ಕರ್ತವ್ಯಲೋಪಗಳು ಕಣ್ಣಿಗೆ ರಾಚುವಂಥ, ತತ್ಪರಿಣಾಮವಾಗಿ ಸದರಿ ಕೆರೆಗಳಲ್ಲಿನ ಜಲಸಂಗ್ರಹವೇ ಕುಸಿಯುವಂಥ ಪರಿಸ್ಥಿತಿಗೆ ಸರ್ಕಾರಿ ವ್ಯವಸ್ಥೆಗಳು ಕಾರಣವಾಗಿದ್ದು ನಿರಾಶಾದಾಯಕ ಸಂಗತಿ. ಪ್ರಸಕ್ತ ವರ್ಷದ ಏಪ್ರಿಲ್ 11ರಂದು ನ್ಯಾಯಾಧಿಕರಣವು ಕೆರೆಗಳ ಪರಿಶೀಲನೆಗೆಂದು ಸ್ವತಂತ್ರ ಆಯೋಗವೊಂದನ್ನು ನೇಮಕ ಮಾಡುವುದಕ್ಕೆ ಇದು ಕಾರಣವಾಯಿತು; ಹಿರಿಯ ನ್ಯಾಯವಾದಿ ರಾಜ್ ಪಂಜ್ವಾನಿ ನೇತೃತ್ವದ ಈ ಆಯೋಗದಲ್ಲಿ, ಇಂಡಿಯನ್ ಇನ್​ಸ್ಟಿಟ್ಯೂಟ್

ಆಫ್ ಸೈನ್ಸ್​ನ ಪ್ರಾಧ್ಯಾಪಕರು, ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿಯ ವಿಜ್ಞಾನಿಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮುಂತಾದವರಿದ್ದರು. ಜಲಸಸ್ಯಗಳು, ಸೂಕ್ಷ್ಮಸಸ್ಯಗಳು, ನಗರದ ಘನತ್ಯಾಜ್ಯ ಮತ್ತಿತರ ಭಗ್ನಾವಶೇಷಗಳು ಕೆರೆಯನ್ನಾವರಸಿರುವ ಪ್ರಮಾಣ, ಕೆರೆಯಲ್ಲಿ ಪ್ರಸ್ತುತ ಲಭ್ಯವಿರುವ ನೀರಿನ ಪ್ರಮಾಣ, ಪ್ರತಿವಾರ ಕೆರೆಗೆ ಬಂದು ಬೀಳುತ್ತಿರುವ ಘನತ್ಯಾಜ್ಯ ಮತ್ತು ಭಗ್ನಾವಶೇಷಗಳ ಪ್ರಮಾಣ ಹಾಗೂ ಕೆರೆಯನ್ನು ಸೇರುತ್ತಿರುವ ಚರಂಡಿ ನೀರಿನ ಪ್ರಮಾಣ- ಇವೇ ಮೊದಲಾದ ಅಂಶಗಳನ್ನು ಪರಿಶೀಲಿಸುವಂತೆ ಆಯೋಗಕ್ಕೆ ನಿರ್ದೇಶನ ನೀಡಲಾಯಿತು. ಅಷ್ಟೇ ಅಲ್ಲ, ಮುಂಚಿನ ಆದೇಶದ ಅನುಸಾರ ಸಂಬಂಧಿತ ಸರ್ಕಾರಿ ಘಟಕಗಳು ಕೆರೆಯಿಂದ ಜಲಸಸ್ಯಗಳು, ಘನತ್ಯಾಜ್ಯ ಇತ್ಯಾದಿಗಳನ್ನು ದಿನವಹಿ ಆಧಾರದಲ್ಲಿ ತೆಗೆದುಹಾಕುತ್ತಿವೆಯೇ ಮತ್ತು ಕೆರೆಗಳ ಸಂರಕ್ಷಣೆಗೆ ಅವಶ್ಯ ಮಾರ್ಗಸೂಚಿಗಳನ್ನು ಸರ್ಕಾರಿ ಆಡಳಿತ ವ್ಯವಸ್ಥೆಗಳು ಪರಿಪಾಲಿಸುತ್ತಿವೆಯೇ ಎಂಬುದನ್ನೂ ಖಚಿತಪಡಿಸುವಂತೆ ಆಯೋಗಕ್ಕೆ ನಿರ್ದೇಶಿಸಲಾಯಿತು.

ಕೆರೆಗಳ ನಿಜಸ್ಥಿತಿ ಅರಿಯುವ ತನ್ನ ಈ ಪ್ರಾಮಾಣಿಕ ಯತ್ನದಲ್ಲಿ, ಮಲಿನಗೊಂಡ ಕೆರೆಗಳ ಸಮಸ್ಯೆಯನ್ನು ಸರ್ಕಾರಿ ವ್ಯವಸ್ಥೆಯ ಗಮನಕ್ಕೆ ತಂದು ಇದಕ್ಕೊಂದು ರ್ತಾಕ ಅಂತ್ಯಹಾಡುವ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವ ಸ್ಥಳೀಯ ನಿವಾಸಿಗಳು, ನಾಗರಿಕ ಸಮಾಜದ ಸಂಘಟನೆಗಳನ್ನೂ ಆಯೋಗವು ತೊಡಗಿಸಿತ್ತು ಎಂಬುದನ್ನಿಲ್ಲಿ ಗಮನಿಸಬೇಕು; ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಇಂಥದೊಂದು ಸಂಘಟನೆಯಾಗಿದ್ದು, ಬೆಳ್ಳಂದೂರು ಕೆರೆಯನ್ನು ಉಳಿಸಿ ಮತ್ತೊಮ್ಮೆ ಗತವೈಭವ ತಂದುಕೊಡಲೆಂದು ಪರಿಪೂರ್ಣ ಪರಿಹಾರೋಪಾಯಗಳನ್ನು ರೂಪಿಸಲು ಅದು ಶ್ರಮಿಸುತ್ತಿದೆ. ಆದರೆ, ಇಂಥ ಭಾಗೀದಾರರು ತೋರುತ್ತಿರುವ ತೀವ್ರ ಉದಾಸೀನತೆ ಆಯೋಗದ ವರದಿಯಲ್ಲಿ ಬಯಲಾಗಿದ್ದು, ಇದು ನಿರಾಶಾದಾಯಕ ಸಂಗತಿ ಎನ್ನದೆ ವಿಧಿಯಿಲ್ಲ. ಸರ್ಕಾರಿ ವ್ಯವಸ್ಥೆಗಳ ದಿವ್ಯನಿರ್ಲಕ್ಷ್ಯ, ಸಂವೇದನಾರಾಹಿತ್ಯ ಮತ್ತು ತಾಟಸ್ಥ್ಯನೀತಿಯ ಕಾರಣದಿಂದಾಗಿ, ಮಹಾನಗರಿಯ ಅತಿದೊಡ್ಡ ಕೆರೆ ಒಂದು ಬೃಹತ್ ‘ರೊಚ್ಚುತೊಟ್ಟಿ’ಯಾಗಿ ಬದಲಾಗಿರುವುದು ನ್ಯಾಯಾಧಿಕರಣದ ಗಮನಕ್ಕೆ ಬಂದಿದೆ. ನೀರಲ್ಲಿ ತುಂಬಿಕೊಂಡಿರುವ ಚರಂಡಿಯ ರೊಚ್ಚು, ಅಪಾಯಕಾರಿ ಹೊರಸೂಸಿಕೆಗಳು, ಘನತ್ಯಾಜ್ಯ, ಕಟ್ಟಡಗಳ ಭಗ್ನಾವಶೇಷಗಳ ಪ್ರಮಾಣ ಅಗಾಧವಾಗಿದ್ದು, ಬೆಳ್ಳಂದೂರು ಕೆರೆಯಲ್ಲಿ ಒಂದು ಬೊಗಸೆಯಷ್ಟು ಶುದ್ಧನೀರು ಸಿಗುವುದೂ ದುಸ್ತರವಾಗಿರುವುದು ನ್ಯಾಯಾಧಿಕರಣಕ್ಕೆ ಗೊತ್ತಾಗಿದೆ. ಅಷ್ಟೇ ಅಲ್ಲ, ತನ್ನ ಕೆರೆಗಳನ್ನು ಸಂರಕ್ಷಿಸುವ ಮತ್ತು ರಾಜಕಾಲುವೆಗಳ ಅತಿಕ್ರಮಣವಾಗದಂತೆ ನೋಡಿಕೊಳ್ಳುವ ಕರ್ತವ್ಯದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕೂಡ ನ್ಯಾಯಾಧಿಕರಣ ಅಭಿಪ್ರಾಯಪಟ್ಟಿದೆ. ಸಮಾಜದೆಡೆಗಿನ ಹೊಣೆಗಾರಿಕೆಗಳನ್ನು ಮತ್ತು ತಮ್ಮ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ಸಂಬಂಧಿತ ಅಧಿಕಾರಿಗಳು/ವ್ಯವಸ್ಥೆಗಳು ವಿಫಲವಾಗಿವೆ ಎಂಬುದಿಲ್ಲಿ ಸುಸ್ಪಷ್ಟ. ಸರ್ಕಾರಿ ಅಧಿಕಾರಿಗಳ ದಿವ್ಯನಿರ್ಲಕ್ಷ್ಯದಿಂದಾಗಿ ಅಸಂಖ್ಯಾತ ನಾಗರಿಕರಿಗೆ ತೀವ್ರ ತೊಂದರೆಯಾಗಿದ್ದು, ಇದರ ಹೊಡೆತದ ಬಿರುಸಿಗೆ ಮುಂಬರುವ ಪೀಳಿಗೆಗಳೂ ಬಲಿಯಾಗಲಿವೆ ಎಂದು ನ್ಯಾಯಾಧಿಕರಣ ಅಭಿಪ್ರಾಯಪಟ್ಟಿದೆ. ಕೆರೆಗಳ ಸಂರಕ್ಷಣೆ ಹಾಗೂ ರಾಜಕಾಲುವೆ ಒತ್ತುವರಿ ತಡೆಗಟ್ಟುವಲ್ಲಿ ಸರ್ಕಾರದ ನಿರ್ಲಕ್ಷ್ಯವನ್ನು ಮನಗಂಡ ನ್ಯಾಯಾಧಿಕರಣವು, ಜಲರಾಶಿಗಳಿಗೆ ಮತ್ತು ರಾಜಕಾಲುವೆಗಳಿಗೆ ಯಾವುದೇ ಮಾಲಿನ್ಯಕಾರಕವಾಗಲೀ ತ್ಯಾಜ್ಯವಾಗಲೀ ಬಂದು ಸೇರದಂತೆ, ಕೆರೆಗಳಿಗೆ ಘನತ್ಯಾಜ್ಯವನ್ನು ತಂದು ಸುರಿಯದಂತೆ ಖಾತ್ರಿಪಡಿಸಿಕೊಳ್ಳಲು ಮತ್ತು ಜಲಾನಯನ ಪ್ರದೇಶಗಳಲ್ಲಿನ ಅತಿಕ್ರಮಣ/ಒತ್ತುವರಿಗಳನ್ನು ತೆರವುಗೊಳಿಸಲು ಕೆಲ ನಿರ್ದೇಶನಗಳನ್ನು ನೀಡಿತು. ಇಲ್ಲಿ ತಲೆದೋರಿರುವ ವ್ಯತಿರಿಕ್ತ ಪರಿಸ್ಥಿತಿಯ ನಿಭಾವಣೆಗೆಂದು ಒಂದು ತಿಂಗಳೊಳಗಾಗಿ ಕ್ರಿಯಾಯೋಜನೆ ರೂಪಿಸುವಂತೆಯೂ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ. ಇಷ್ಟು ಮಾತ್ರವಲ್ಲದೆ, ಸದರಿ ಕ್ರಿಯಾಯೋಜನೆಯನ್ನು ನಿಗದಿತ ಕಾಲಮಿತಿಯೊಳಗೆ ನೆರವೇರಿಸಲು ಸರ್ಕಾರ ಬದ್ಧವಾಗಿದೆಯೇ ಎಂಬುದರ ಮೇಲ್ವಿಚಾರಣೆಗೆಂದು, ಸವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ. ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ಸಮಿತಿಯೊಂದನ್ನೂ ನ್ಯಾಯಾಧಿಕರಣ ರಚಿಸಿದೆ. ಇದಲ್ಲದೆ, ಜಾಲತಾಣವೊಂದನ್ನು ರೂಪಿಸಿ ಕೆರೆಗಳಿಗೆ ಸಂಬಂಧಿಸಿದ ದೂರುಗಳು ಮತ್ತು ಸಲಹೆ-ಸೂಚನೆಗಳನ್ನು ಆಹ್ವಾನಿಸುವಂತೆಯೂ ಆ ಸಮಿತಿಗೆ ಎನ್​ಜಿಟಿ ಸೂಚಿಸಿದೆ.

ಪರಿಸರಕ್ಕೆ ಉಂಟಾದ ಹಾನಿಗೆ ಕಾರಣರಾದವರು, ತಮ್ಮಿಂದಾದ ಹಾನಿಗೆ ಬೆಲೆ ತೆರುವಂತಾಗುವುದನ್ನು ಕಡ್ಡಾಯವಾಗಿಸುವ ನಿಯಮದ ಅಗತ್ಯವನ್ನು ಮನಗಂಡ ನ್ಯಾಯಾಧಿಕರಣ, ‘ಭರವಸೆ ಹಣದ/ಷರತ್ತು ಹಣದ ಖಾತೆ’ಯೊಂದರಲ್ಲಿ (escrow account) 500 ಕೋಟಿ ರೂ.ಗಳನ್ನು ಠೇವಣಿ ಇಡುವ ಮೂಲಕ, ತನ್ನ ನಿರ್ಲಕ್ಷ್ಯದಿಂದಾದ ನಷ್ಟವನ್ನು ಭರ್ತಿಮಾಡುವಂತೆ ಹಾಗೂ ಕ್ರಿಯಾಯೋಜನೆಯ ಅನುಷ್ಠಾನಕ್ಕೆ ಈ ಹಣವನ್ನು ಬಳಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿತು. ಅಷ್ಟೇ ಅಲ್ಲ, ಪರಿಸರದ ಪುನರುಜ್ಜೀವನಕ್ಕೆಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಗೆ(CPCB)ಪರಿಸರ ಸಂಬಂಧಿತ ನಷ್ಟಭರ್ತಿ/ಜುಲ್ಮಾನೆಯಾಗಿ 50 ಕೋಟಿ ರೂ.ಗಳನ್ನು ಪಾವತಿಸುವಂತೆಯೂ ನ್ಯಾಯಾಧಿಕರಣವು ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿತು. ಅಂತೆಯೇ,CPCB 25 ಕೋಟಿ ರೂ.ಗಳನ್ನು ಪಾವತಿಸುವಂತೆ ಬಿಬಿಎಂಪಿಗೂ ನಿರ್ದೇಶಿಸಲಾಗಿದೆ; ಈ ಮೊತ್ತದಲ್ಲಿ ನ್ಯಾ. ಹೆಗ್ಡೆ ಸಮಿತಿಗೆ ವ್ಯವಸ್ಥಾಪನಾ ಬೆಂಬಲವನ್ನು ಒದಗಿಸುವುದಕ್ಕೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ 10 ಕೋಟಿ ರೂ.ಗಳನ್ನು ವರ್ಗಾಯಿಸಲಾಗುತ್ತದೆ.

ತಾನು ಹೀಗೆ ನೀಡಿರುವ ನಿರ್ದೇಶನಗಳನ್ನು ರಾಜ್ಯ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕೂ ನ್ಯಾಯಾಧಿಕರಣ ಮತ್ತೊಂದು ಕ್ರಮಕ್ಕೆ ಮುಂದಾಗಿದೆ; ನಿಗದಿತ ಕಾಲಮಿತಿಯೊಳಗೆ ಕ್ರಿಯಾಯೋಜನೆಯ ಅನುಷ್ಠಾನವಾಗುವುದನ್ನು ಖಾತ್ರಿಪಡಿಸಲೆಂದು, ಕಾರ್ಯಸಾಧನೆಗೆ ಸಂಬಂಧಿಸಿದಂತೆ 100 ಕೋಟಿ ರೂ. ಮೌಲ್ಯದ ಬ್ಯಾಂಕ್ ಖಾತರಿ ಒದಗಿಸುವಂತೆ ಅದು ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿದೆ.

ಹೀಗೆ ನ್ಯಾಯಾಧಿಕರಣವು ನೀಡಿರುವ ಆದೇಶಗಳು ಸಮಯೋಚಿತವಾಗಿದ್ದು, ಸರಿಯಾದ ದಿಕ್ಕಿನಲ್ಲಿಟ್ಟಿರುವ ಒಂದು ಹೆಜ್ಜೆಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಈ ನಿರ್ದೇಶನಗಳನ್ನು ಅಕ್ಷರಶಃ ಅನುಸರಿಸಬೇಕಾದ್ದು ಸರ್ಕಾರಿ ಅಧಿಕಾರಿಗಳ ಹೊಣೆ. ಅಷ್ಟೇ ಅಲ್ಲ, ಬೆಂಗಳೂರಿನ ಕೆರೆಗಳು ತಮ್ಮ ಗತವೈಭವವನ್ನು ಮರಳಿ ಗಳಿಸಿಕೊಂಡು ದೇಶದ ಮಿಕ್ಕ ಕೆರೆಗಳಿಗೆ ಮಾದರಿಯಾಗಿ ನಿಲ್ಲುವುದಕ್ಕೂ ಕಾಲವೀಗ ಪಕ್ವವಾಗಿದೆ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)